ವಿವಿಗಳ ಪದವಿ ಪ್ರದಾನ ಕಾರ್ಯಕ್ರಮಕ್ಕೆ ದೇಶೀಯ ‘ಟಚ್’ ನೀಡಲು ಉತ್ತರಾಖಂಡ ಸರಕಾರದ ಚಿಂತನೆ
ಡೆಹ್ರಾಡೂನ್, ಜೂ.17: ಉದ್ದನೆಯ ಕಪ್ಪು ನಿಲುವಂಗಿ ಮತ್ತು ತಲೆಯ ಮೇಲೆ ಕಪ್ಪು ಬಣ್ಣದ ಹ್ಯಾಟು- ಇದು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಸ್ತ್ರಸಂಹಿತೆ. ಬ್ರಿಟಿಷರ ಕೊಡುಗೆಯಾದ ಈ ವಸ್ತ್ರಸಂಹಿತೆಯನ್ನು ಬದಲಿಸಿ ಇದಕ್ಕೆ ದೇಶೀಯ ‘ಟಚ್’ ನೀಡುವ ಪ್ರಯತ್ನಕ್ಕೆ ಇದೀಗ ಉತ್ತರಾಖಂಡದ ಸರಕಾರ ಮುಂದಾಗಿದೆ. ಇದಕ್ಕಾಗಿ ಪುರಾತನ ಭಾರತೀಯ ಶಿಕ್ಷಣ ಪದ್ದತಿಯಲ್ಲಿ , ಅಂದರೆ ವೇದ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿಯ ದಿರಿಸು ತೊಡುತ್ತಿದ್ದರು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಪುರಾತನ ಭಾರತದ ಪ್ರಸಿದ್ಧ ವಿಶ್ವವಿದ್ಯಾನಿಲಯವಾಗಿದ್ದ ತಕ್ಷಿಲಾದಲ್ಲಿ ಯಾವ ರೀತಿಯ ಬಟ್ಟೆಯನ್ನು ವಿದ್ಯಾರ್ಥಿಗಳು ತೊಡುತ್ತಿದ್ದರು ಎಂಬುದನ್ನು ಕಂಡು ಹಿಡಿಯಬೇಕಿದೆ ಎಂದು ಉತ್ತರಾಖಂಡದ ಉನ್ನತ ಶಿಕ್ಷಣ ಸಚಿವ ಧಾನ್‌ಸಿಂಗ್ ರಾವತ್ ಹೇಳಿದ್ದಾರೆ. ತಕ್ಷಿಲ ಈಗ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿದೆ.
ಅಲ್ಲದೆ ಸ್ಕಂದ ಪುರಾಣದಲ್ಲಿ ‘ಆಚಾರ್ಯಕುಲಂ’ ಎಂಬ ಪಠ್ಯಶಾಲೆಯ ಬಗ್ಗೆ ಉಲ್ಲೇಖವಿದೆ. ಈಗಿನ ಉತ್ತರಾಖಂಡ ಜಿಲ್ಲೆಯಲ್ಲಿದ್ದ ಈ ಶಾಲೆಯಲ್ಲಿ ವೇದ ಶಿಕ್ಷಣ ನೀಡಲಾಗುತ್ತಿತ್ತು. ಅಂದಿನ ದಿನದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ತೊಡುತ್ತಿದ್ದ ಉಡುಗೆಯ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಪದವಿ ಪ್ರದಾನ ಸಮಾರಂಭಕ್ಕೆ ಸೂಕ್ತವಾದ ತೊಡುಗೆಯ ಬಗ್ಗೆ ಸಲಹೆ ನೀಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು ಎಂದವರು ತಿಳಿಸಿದ್ದಾರೆ.
ಡೆಹ್ರಾಡೂನ್‌ನ ‘ಪೆಟ್ರೋಲಿಯಂ ಆ್ಯಂಡ್ ಎನರ್ಜಿ ಸ್ಟಡೀಸ್ ’ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಪದವಿಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ , ಶಿಷ್ಟಾಚಾರದಂತೆ ನೀಡಲಾದ ಕಪ್ಪಗಿನ ನಿಲುವಂಗಿ ಧರಿಸಲು ನಿರಾಕರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಮಹಿಳೆಯರಿಗೆ ಪಿಚೋಡ(ಉತ್ತರಾಖಂಡದ ಸಾಂಪ್ರದಾಯಿಕ ತೊಡುಗೆ) ಮತ್ತು ಪುರುಷರಿಗೆ ಪಾಯ್‌ಜಾಮ ಮತ್ತು ಕುರ್ತಾ-ಜಾಕೆಟ್, ತಲೆ ಮೇಲೊಂದು ಹ್ಯಾಟ್ - ಇದು ಸೂಕ್ತ ಎಂದು ನನಗನಿಸುತ್ತದೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.