ಭಾರತ-ಪಾಕ್ ಎರಡೂ ದೇಶಗಳ ತಂಡದಲ್ಲಿ ಆಡಿದ ಮೂವರು ಕ್ರಿಕೆಟಿಗರು

Update: 2017-06-18 04:05 GMT

ಹೊಸದಿಲ್ಲಿ, ಜೂ.17: ಬಹುನಿರೀಕ್ಷಿತ ಭಾರತ-ಪಾಕ್ ನಡುವಿನ ಕ್ರಿಕೆಟ್ ಸರಣಿ ಇದೀಗ ಬಹುತೇಕ ಅಸಾಧ್ಯ ಎಂಬ ಪರಿಸ್ಥಿತಿ ಇದೆ.

ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಕ್ರಿಕೆಟ್ ತಂಡದ ಪರ ಆಡಿದ ಮೂವರು ಆಟಗಾರರ ಅಪರೂಪದ ಸಾಧನೆಯನ್ನು ಇಲ್ಲಿ ಮೆಲುಕು ಹಾಕಬಹುದು.

*ಗುಲ್ ಮುಹಮ್ಮದ್: ದೇಶಕ್ಕೆ ಸ್ವಾತಂತ್ರ ದೊರೆತ ಸಂದರ್ಭ, ಅಂದರೆ 1947ರಲ್ಲಿ ಬರೋಡಾದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಹೋಳ್ಕರ್ ತಂಡ ಮತ್ತು ಬರೋಡಾ ತಂಡದ ಮಧ್ಯೆ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯಾಟ ನಡೆದಿತ್ತು. ಅಂದಿನ ದಿನದಲ್ಲಿ ಪಂದ್ಯಕ್ಕೆ ಇಂತಿಷ್ಟೇ ದಿನ ಎಂದು ಗಡುವು ಇರಲಿಲ್ಲ.

ಸಯ್ಯದ್ ಮುಷ್ತಾಕ್ ಅಲಿ, ಕರ್ನಲ್ ಸಿ.ಕೆ.ನಾಯ್ಡು, ಹೀರಾಲಾಲ್ ಗಾಯಕ್‌ವಾಡ್, ಬಿ.ಬಿ.ನಿಂಬಾಳ್ಕರ್ ಮುಂತಾದ ಘಟಾನುಘಟಿ ಆಟಗಾರರು ಹೋಳ್ಕರ್ ತಂಡದಲ್ಲಿದ್ದರೆ ಬರೋಡಾ ತಂಡದಲ್ಲಿ ವಿಜಯ್ ಹಝಾರೆ, ಹೇಮೂ ಅಧಿಕಾರಿ ಮತ್ತು ಬರೋಡಾದ ಮಹಾರಾಜರು ಕಣಕ್ಕಿಳಿದಿದ್ದರು.

 ಇವರ ಮಧ್ಯೆ ಮತ್ತೋರ್ವ ಆಟಗಾರ ಎಲ್ಲರ ಗಮನ ಸೆಳೆದಿದ್ದರು. ಆತನೇ ಗುಲ್ ಮುಹಮ್ಮದ್. ತನ್ನ ಅದ್ಭುತ ಫೀಲ್ಡಿಂಗ್ ಚಾತುರ್ಯದಿಂದ ಇಡೀ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಮರ್ಥನೀತ. ಬರೋಡಾ ತಂಡದಲ್ಲಿದ್ದ 25ರ ಹರೆಯದ ಮುಹಮ್ಮದ್ ತಂಡ 91ಕ್ಕೆ 3 ವಿಕೆಟ್ ಕಳಕೊಂಡಿದ್ದ ಸಂದರ್ಭ ಕಣಕ್ಕಿಳಿದು ಜೀವನಶ್ರೇಷ್ಠ 319 ರನ್ ಗಳಿಸಿದರೆ, ಇನ್ನೊಂದು ಬದಿಯಲ್ಲಿ ಇವರಿಗೆ ಸಾಥ್ ನೀಡಿದ್ದ ವಿಜಯ್ ಹಝಾರೆ 288 ರನ್ ಗಳಿಸಿದ್ದು ಇವರೀರ್ವರ ಜತೆಯಾಟದಲ್ಲಿ 577 ರನ್ ದಾಖಲಾಗಿತ್ತು. ಫ್ರಾಂಕ್ ವೋರೆಲ್ ಮತ್ತು ಕ್ಲೈಡ್ ವಾಲ್ಕಾಟ್ ಅವರ ಹೆಸರಲ್ಲಿದ್ದ 574 ರನ್ ಜತೆಯಾಟದ ದಾಖಲೆಯನ್ನು ಇವರು ಮುರಿದಿದ್ದರು. ಈ ದಾಖಲೆ ಮುಂದಿನ 59 ವರ್ಷ ಅಬೇಧ್ಯವಾಗಿಯೇ ಇತ್ತು.

1942ರಲ್ಲಿ ಪಶ್ಚಿಮ ಭಾರತ ಮತ್ತು ಶೇಷ ಭಾರತ ನಡುವಿನ ಪಂದ್ಯದಲ್ಲಿ ಮುಹಮ್ಮದ್ ಆಕರ್ಷಕ ಶತಕ ಬಾರಿಸಿದ್ದರು. ಎಡಗೈ ಆಟಗಾರಾನಾಗಿದ್ದ ಮುಹಮ್ಮದ್ ಕವರ್ಸ್ ವಿಭಾಗದಲ್ಲಿ ಓರ್ವ ಅದ್ಭುತ ಫೀಲ್ಡರ್ ಆಗಿದ್ದು ಈ ಕಾರಣದಿಂದಲೇ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಭಾರತ ಪರ ಎಂಟು ಟೆಸ್ಟ್ ಪಂದ್ಯ ಆಡಿದ್ದ ಮುಹಮ್ಮದ್ ಓರ್ವ ನಿಷ್ಣಾತ ಈಜುಪಟು ಮತ್ತು ಕಬಡ್ಡಿ ಆಟಗಾರನಾಗಿಯೂ ಗಮನ ಸೆಳೆದಿದ್ದರು. ಸ್ವಾತಂತ್ರ ದೊರೆತ ಬಳಿಕ ಗುಲ್ ಮುಹಮ್ಮದ್ ಪಾಕಿಸ್ತಾನದಲ್ಲಿ ನೆಲೆಸಿದ್ದು 1956ರಲ್ಲಿ ಕರಾಚಿಯಲ್ಲಿ ನಡೆದ ಭಾರತ-ಪಾಕ್ ಪಂದ್ಯದಲ್ಲಿ ಪಾಕ್ ಪರ ಆಡಿದ್ದರು. ಈ ಮೂಲಕ ಭಾರತ-ಪಾಕ್ ಎರಡೂ ರಾಷ್ಟ್ರಗಳನ್ನು ಪ್ರತಿನಿಧಿಸಿದ ಮೂರನೇ ಕ್ರಿಕೆಟ್ ಆಟಗಾರ ಎನಿಸಿಕೊಂಡರು. ಈ ಪಂದ್ಯದಲ್ಲಿ ಪಾಕ್ 9 ವಿಕೆಟ್ ಗೆಲುವು ಸಾಧಿಸಿತು. ಆ ಬಳಿಕ ಗುಲ್ ಕ್ರಿಕೆಟ್ ಆಡಲಿಲ್ಲ. 1959ರಲ್ಲಿ ನಿವೃತ್ತಿ ಘೋಷಿಸಿದ ಅವರು 118 ಪ್ರಥಮ ದರ್ಜೆ ಪಂದ್ಯವಾಡಿದ್ದರು. ಅಂತಿಮ ದಿನದಲ್ಲಿ ಲಾಹೋರ್‌ನಲ್ಲಿ ಕ್ರಿಕೆಟ್ ಆಡಳಿತಗಾರನಾಗಿ ಕಾರ್ಯ ನಿರ್ವಹಿಸಿದ್ದರು.

* ಅಬ್ದುಲ್ ಕರ್ದಾರ್: ಅವಿಭಜಿತ ಭಾರತ ಕ್ರಿಕೆಟ್ ತಂಡದ ಪರ ಆಡುತ್ತಿದ್ದ ಅಬ್ದುಲ್ ಹಫೀಝ್ ಇಂಗ್ಲೆಂಡಿನಲ್ಲಿ 1946ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಒಂದರಲ್ಲೂ ಶತಕಾರ್ಧ ದಾಖಲಿಸಲೂ ಆಗದಿದ್ದರೂ ಲಾರ್ಡ್ಸ್ ಮೈದಾನದಲ್ಲಿ ಆಡಿದ ತಮ್ಮ ಚೊಚ್ಚಲ ಪಂದ್ಯದಲ್ಲಿ 43 ರನ್ ಗಳಿಸಿದ್ದರು.

ಈ ಪ್ರವಾಸದ ಬಳಿಕ ಇಂಗ್ಲೆಂಡಿನಲ್ಲೇ ಉಳಿದ ಅಬ್ದುಲ್, ಅಲ್ಲಿನ ಆಕ್ಸ್‌ಫರ್ಡ್ ವಿವಿಯಲ್ಲಿ ಪದವಿ ಮುಗಿಸಿದರು. ಸ್ವಾತಂತ್ರೋತ್ತರ ಕಾಲದಲ್ಲಿ ಪಾಕಿಸ್ತಾನಕ್ಕೆ ತೆರಳಿದ ಅವರು ತಮ್ಮ ಹೆಸರಿನ ಎದುರು ಕುಟುಂಬದ ಹೆಸರಾದ ಕರ್ದಾರ್ ಅನ್ನು ಸೇರಿಸಿಕೊಂಡರು.

1952ರಲ್ಲಿ ಪಾಕ್ ಕ್ರಿಕೆಟ್ ತಂಡದ ಪ್ರಪ್ರಥಮ ನಾಯಕನೆಂಬ ಖ್ಯಾತಿಗೆ ಪಾತ್ರರಾದರು. ಕಾಕತಾಳೀಯವಾಗಿ ಇವರ ಕಫ್ತಾನಗಿರಿಯಲ್ಲಿ ಪಾಕ್ ತಂಡ ಆಡಿದ ಪ್ರಥಮ ಸರಣಿ ಭಾರತದೆದುರು ಆಗಿತ್ತು. ಈ ಸರಣಿಯ ವೈಶಿಷ್ಟವೆಂದರೆ ಈ ಸರಣಿಯಲ್ಲಿ ಈ ಹಿಂದೆ ಪಾಕ್ ಎದುರು ಆಡಿದ್ದ ಮೂವರು ಭಾರತೀಯರೂ ಇದ್ದರು. ಅವರಲ್ಲಿ ಅಮೀರ್ ಇಲಾಹಿ ಮತ್ತು ಕರ್ದಾರ್ ಪಾಕ್ ಪರ ಆಡಿದರೆ, ಗುಲ್ ಮುಹಮ್ಮದ್ ಭಾರತದ ಪರ ಆಡಿದ್ದರು.

 23 ಟೆಸ್ಟ್‌ಗಳಲ್ಲಿ ನಾಯಕನಾಗಿ ಆಡಿದ್ದ ಕರ್ದಾರ್ ನಾಯಕತ್ವದಲ್ಲಿ ಟೆಸ್ಟ್ ಆಡುವ ಎಲ್ಲಾ ತಂಡಗಳ ವಿರುದ್ಧವೂ ಪಾಕ್ ತಂಡ ಜಯ ಗಳಿಸಿದ ಸಾಧನೆ ಮಾಡಿತ್ತು(ವರ್ಣಬೇಧ ನೀತಿಯ ಕಾರಣ ದ.ಆಫ್ರಿಕಾ ತಂಡಕ್ಕೆ ನಿಷೇಧ ಹೇರಲಾಗಿತ್ತು)

ನೀತಿಯ ಕಾರಣ ದ.ಆಫ್ರಿಕಾ ತಂಡಕ್ಕೆ ನಿಷೇಧ ಹೇರಲಾಗಿತ್ತು).

1957ರಲ್ಲಿ ವಿಂಡೀಸ್ ಪ್ರವಾಸಕ್ಕೆ ತೆರಳಿದ ಪಾಕ್ ತಂಡದ ನಾಯಕತ್ವ ವಹಿಸಿದ್ದ ಕರ್ದಾರ್, ಅಲ್ಲಿ ತಮ್ಮ ಕೈಯ ಬೆರಳು ಮುರಿದರೂ ಛಲ ಬಿಡದೆ ಆಡಿದ್ದರು. ಈ ಸರಣಿಯ ಬಳಿಕ ಅವರು ನಿವೃತ್ತರಾದರು. ಬಳಿಕ ಕ್ರಿಕೆಟ್ ಆಡಳಿತಗಾರನಾಗಿ ಮುಂದುವರಿದ ಅವರು 1996ರಲ್ಲಿ ಕ್ರಿಕೆಟ್ ವಿಶ್ವಕಪ್‌ನ ಮರುಪ್ರಸಾರದ ಪಂದ್ಯ ವೀಕ್ಷಿಸುತ್ತಿದ್ದಾಗಲೇ ಮೃತಪಟ್ಟರು.

 * ಅಮೀರ್ ಇಲಾಹಿ: ಎರಡೂ ದೇಶದ ಪರ ಆಡಿದ ಕ್ರಿಕೆಟಿಗ ಎಂಬ ಖ್ಯಾತಿಯ ಜೊತೆಗೆ, ಕ್ರಿಕೆಟ್ ಆಡಿದ ಅತ್ಯಂತ ಹಿರಿಯ 20 ಕ್ರಿಕೆಟಿಗರಲ್ಲಿ ಒಬ್ಬರೆನ್ನುವ ಹೆಗ್ಗಳಿಕೆ ಅಮೀರ್ ಇಲಾಹಿ ಅವರದ್ದಾಗಿದೆ.

1947ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಇಲಾಹಿ ತಮ್ಮ ಲೆಗ್-ಬ್ರೇಕ್ ಬೌಲಿಂಗ್‌ಗೆ ಹೆಸರಾಗಿದ್ದರು. 1946-47ರಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದ ಇಲಾಹಿ 109ರನ್‌ಗೆ 9 ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಇದೇ ಪಂದ್ಯದಲ್ಲಿ ಬರೋಡಾದ ಪರ ಗುಲ್ ಮುಹಮ್ಮದ್-ವಿಜಯ್ ಹಝಾರೆ ವಿಶ್ವದಾಖಲೆಯ ಜತೆಯಾಟ ಆಡಿದ್ದು.

ಬಳಿಕ ಪಾಕ್ ಪರ ಐದು ಟೆಸ್ಟ್ ಪಂದ್ಯ ಆಡಿದ್ದರು. ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಇಲಾಹಿ 119 ಪ್ರಥಮ ದರ್ಜೆ ಪಂದ್ಯಗಳಲ್ಲಿ 506 ವಿಕೆಟ್ ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News