ಬೆಂಗಳೂರೇ ಮುಂದೆ...

Update: 2017-06-19 16:56 GMT

ಕರ್ನಾಟಕದಲ್ಲಿ ಅತಿ ಹೆಚ್ಚು ಮಾದಕ ವಸ್ತು ಮಾರಾಟವಾಗುತ್ತಿರುವ ಪ್ರದೇಶಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೊಟ್ಟ ಮೊದಲ ಸ್ಥಾನ ವನ್ನು ಪಡೆದುಕೊಂಡಿದೆ. ಅದೇ ರೀತಿ, ಶೈಕ್ಷಣಿಕ ಹಾಗೂ ಪ್ರವಾಸಿ ತಾಣವಾ ಗಿರುವ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಅನಂತರದ ಸ್ಥಾನ ಪಡೆದಿವೆ ಎಂದು ಕೆಲ ಸಮೀಕ್ಷೆಗಳ ವರದಿಗಳಲ್ಲಿ ಉಲ್ಲೇಖವಾಗಿದೆ.

ಗಾಂಜಾ ಬೆಳೆ: ಕಾನೂನು-ನಿಯಮ ಉಲ್ಲಂಘಿಸಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಹಾಗೂ ಪಶ್ಚಿಮಘಟ್ಟ ವಲಯದಲ್ಲಿ ಕೆಲವರು ಗಾಂಜಾ ಬೆಳೆಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಆ ರಾಜ್ಯಗಳ ಗಡಿಯಿಂದಲೂ ಕರ್ನಾಟಕಕ್ಕೆ ಗಾಂಜಾ ಪ್ರವೇಶಿಸುತ್ತಿದೆ. ಗಾಂಜಾ ಮಾರಾಟ ದಲ್ಲಿ ಸ್ಥಳೀಯರ ಕೈವಾಡವಿದೆ ಎನ್ನುವುದು ಬಿಟ್ಟರೆ, ಬೆಂಗಳೂರು ಸೇರಿ ನಾನಾ ಕಡೆ ಹೆಚ್ಚಾಗಿ ಮಾರಾಟವಾಗುತ್ತಿರುವುದು ಎಲ್‌ಎಸ್‌ಡಿ, ಕೊಕೇನ್ ಹಾಗೂ ಹೆರಾಯಿನ್ ಎನ್ನಲಾಗಿದೆ.

ಗೂಡ್ಸ್ ರೈಲೇ ರಹದಾರಿ: ನಿತ್ಯ ರಾಜ್ಯಕ್ಕೆ ಹಲವು ಗೂಡ್ಸ್ ರೈಲುಗಳು ಬಂದು ಹೋಗುತ್ತವೆ. ಗೂಡ್ಸ್ ರೈಲಿನಲ್ಲಿ ಎಲ್ಲಿಯೂ ಚಕ್ಕಿಂಗ್ ಪಾಯಿಂಟ್ ಇರುವುದಿಲ್ಲ. ಕೇವಲ ವಸ್ತುಗಳನ್ನಷ್ಟೇ ಸಾಗಿಸುವುದರಿಂದ ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ರೈಲ್ವೇ ಪೊಲೀಸರು ವಸ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಇದನ್ನು ಚೆನ್ನಾಗಿ ತಿಳಿದ ಡ್ರಗ್ಸ್ ಮಾಫಿಯಾ, ಈ ಮಾರ್ಗವನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ಕೊಕೇನ್, ಗಾಂಜಾದಂಥ ಮಾದಕ ವಸ್ತುಗಳ ಸರಬರಾಜಿಗೆ ರಹದಾರಿ ನಿರ್ಮಿಸಿಕೊಂಡಿದೆ.

ಡಾರ್ಕ್ ಸೈಟ್ ಮಾರಾಟ: ಆನ್‌ಲೈನ್ ಮೂಲಕವೂ ಈಗ ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್ ಸೃಷ್ಟಿಸಿಕೊಳ್ಳುವ ಆರೋಪಿಗಳು, ಪರಿಚಿತ ವ್ಯಕ್ತಿಗಳನ್ನು ಮಾತ್ರ ಅದರಲ್ಲಿ ಸದಸ್ಯರನ್ನಾಗಿ ಮಾಡಿಕೊಂಡಿರುತ್ತಾರೆ. ತಮಗೆ ಯಾವ ಡ್ರಗ್ಸ್ ಬೇಕು, ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ವ್ಯಸನಿಗಳು ವೆಬ್‌ಸೈಟ್‌ನಲ್ಲೇ ತಿಳಿಸುತ್ತಾರೆ. ಆ ಬೇಡಿಕೆಗೆ ಅನುಗುಣವಾಗಿ ಕೊರಿಯರ್ ಮೂಲಕವೇ ಮಾದಕ ವಸ್ತುವನ್ನು ಮನೆಗೇ ತಲುಪಿಸುತ್ತಿದ್ದಾರೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದಸ್ಯರನ್ನು ಹೊರತುಪಡಿಸಿದರೆ ಬೇರೆ ವ್ಯಕ್ತಿಗಳು ಆ ವೆಬ್‌ಸೈಟ್ ಪ್ರವೇಶಿಸಲು ಸಾಧ್ಯವಿಲ್ಲ. ಇದನ್ನು ಡಾರ್ಕ್ ಸೈಟ್ ವಹಿವಾಟು ಎನ್ನಲಾಗುತ್ತದೆ. ನಗರದಲ್ಲೂ ಇಂಥ ವಹಿವಾಟು ಚಾಲ್ತಿಗೆ ಬಂದಿದ್ದು, ಈ ಆರೋಪಿಗಳನ್ನು ಪತ್ತೆ ಮಾಡುವುದು ಬಹಳ ಕಷ್ಟ ಎಂದು ಮಾಹಿತಿ ನೀಡಿದರು. ಕೆಜಿಗೆ ಕೋಟಿ: ಕೊಕೇನ್ ಒಂದು ಕೆಜಿಗೆ 6 ಕೋಟಿ ರೂ. ಹೆರಾಯಿನ್ 30ರಿಂದ 40 ಲಕ್ಷ ರೂ.ವರೆಗೆ ಬೆಲೆ ಹೊಂದಿದೆ. ಅದೇ ರೀತಿ, ಎಲ್‌ಎಸ್‌ಡಿ ಎಂಬ ಮಾದಕ ದ್ರವ್ಯ ಬೋಲ್ಟ್ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಒಂದು ಗ್ರಾಂನಲ್ಲಿ 60 ಬೋಲ್ಟ್‌ಗಳನ್ನು ತಯಾರಿಸಲಾಗುತ್ತದೆ. ತಲಾ ಒಂದಕ್ಕೆ 2 ಸಾವಿರ ರೂ. ಬೆಲೆ ಇದೆ. ಇನ್ನು ಗಾಂಜಾ 20ರಿಂದ 30 ಸಾವಿರ ರೂ.ಗೆ ಲಭ್ಯವಿದ್ದರೆ, ಮ್ಯಾಜಿಕ್ ಮಶ್ರೂಮ್(ಹುಚ್ಚು ಅಣಬೆ)ಗೂ ಹೆಚ್ಚಿನ ಬೆಲೆ ಇದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಫಿಲ್ಮ್ ಸ್ಟಾರ್ಸ್‌, ಮಾಡೆಲ್‌ಗಳು: ಮಾದಕ ವಸ್ತು ಮಾರಾಟ ಪ್ರಕರಣ ದಲ್ಲಿ ನಟಿಯರು, ಮಾಡೆಲ್‌ಗಳು ಭಾಗಿಯಾಗಿರುವ ಆತಂಕಕಾರಿ ಸಂಗತಿ ಗಳಂಟು. ಸುಮಾರು 2 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತು ಮಾರಾಟ ನಡೆಸುವ ದೇಶದ ಅತಿ ದೊಡ್ಡ ಜಾಲದಲ್ಲಿ ನಟಿ ಮಮತಾ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಮಹಾರಾಷ್ಟ್ರದ ಥಾಣೆ ಪೊಲೀಸರು ಈಕೆಯನ್ನು ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿಸಿದ್ದಾರೆ. ಅದೇ ರೀತಿ, ಬೆಂಗಳೂರಿನಲ್ಲೂ ರೂಪದರ್ಶಿ ದರ್ಶಿತ್ ಮಿತಾ ಗೌಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News