ಜೂನ್ 22ರಂದು ಅಂತಿಮ ನಿರ್ಧಾರ: ಕಾಂಗ್ರೆಸ್
ಹೊಸದಿಲ್ಲಿ, ಜೂ.19: ರಾಷ್ಟ್ರಪತಿ ಹುದ್ದೆಗೆ ದಲಿತ ಮುಖಂಡ ರಾಮ್‌ನಾಥ್ ಕೋವಿಂದ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಗ್ಗೆ ವಿರೋಧ ಪಕ್ಷಗಳು ಎಚ್ಚರದ ಪ್ರತಿಕ್ರಿಯೆ ನೀಡಿವೆ.
*22ರಂದು ಅಂತಿಮ ನಿರ್ಧಾರ- ಕಾಂಗ್ರೆಸ್: ಕೋವಿಂದ್ ಅವರ ಆಯ್ಕೆಯ ಬಗ್ಗೆ ಪಕ್ಷ ತಕ್ಷಣದ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಏಕಪ್ಷಕೀಯ ನಿರ್ಧಾರ ಕೈಗೊಂಡಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಜೂನ್ 22ರಂದು ಪ್ರಮುಖ ವಿಪಕ್ಷ ನಾಯಕರ ಸಭೆ ನಡೆಯಲಿದ್ದು ಆ ಬಳಿಕ ತಮ್ಮ ಅಂತಿಮ ನಿರ್ಧಾರ ತಿಳಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ತಿಳಿಸಿದ್ದಾರೆ.
*ಪ್ರಣವ್, ಸುಷ್ಮಾ, ಅಡ್ವಾಣಿಯಂತಹ ಘನತೆಯವರು ಸೂಕ್ತ- ಟಿಎಂಸಿ: ರಾಷ್ಟ್ರಪತಿ ಹುದ್ದೆಗೆ ಕೋವಿಂದ್ ಅಸಮರ್ಥರು ಎಂದು ತನ್ನ ಭಾವನೆಯಲ್ಲ. ಆದರೆ ಪ್ರಣವ್ ಮುಖರ್ಜಿ, ಸುಷ್ಮಾ ಸ್ವರಾಜ್, ಎಲ್.ಕೆ.ಅಡ್ವಾಣಿ ಅವಂತಹ ಘನತೆಯ ವ್ಯಕ್ತಿಗಳು ಈ ಹುದ್ದೆಗೆ ಸೂಕ್ತರು ಎಂದು ಪ.ಬಂಗಾಲ ಮುಖ್ಯಮಂತ್ರಿ ಮತ್ತು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದಲ್ಲಿ ಬಹಳಷ್ಟು ಉನ್ನತ ದಲಿತ ಮುಖಂಡರಿದ್ದಾರೆ. ಯಾರನ್ನೇ ಆಗಲಿ, ಬೆಂಬಲಿಸುವ ಮೊದಲು ಅವರ ಬಗ್ಗೆ ನಮಗೆ ತಿಳಿದಿರಬೇಕು. ಅದೇನಿದ್ದರೂ ಜೂನ್ 22ರಂದು ವಿಪಕ್ಷಗಳು ಸಭೆ ನಡೆಸಲಿದ್ದು ಆ ಬಳಿಕ ನಮ್ಮ ನಿರ್ಧಾರ ತಿಳಿಸಲಿದ್ದೇವೆ ಎಂದವರು ಹೇಳಿದ್ದಾರೆ.
* ಸಂಪೂರ್ಣ ಬೆಂಬಲ- ಟಿಡಿಪಿ: ಕೋವಿಂದರಿಗೆ ತೆಲುಗು ದೇಶಂನ ಸಂಪೂರ್ಣ ಬೆಂಬಲವಿದೆ. ಭಾರತದ ರಾಷ್ಟ್ರಪತಿ ಹುದ್ದೆಗೆ ಅವರೋರ್ವ ಸೂಕ್ತ ವ್ಯಕ್ತಿ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
* ಕೆಲ ದಿನಗಳಲ್ಲಿ ನಿರ್ಧಾರ- ಶಿವಸೇನೆ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆಯವರಿಗೆ ದೂರವಾಣಿ ಕರೆ ಮಾಡಿ ಕೋವಿಂದ್ ಅವರನ್ನು ಬೆಂಬಲಿಸುವಂತೆ ಕೋರಿದ್ದಾರೆ. ಶೀಘ್ರ ಪಕ್ಷದ ಸಭೆ ನಡೆಸಿ ನಿರ್ಧಾರ ತಿಳಿಸಲಾಗುವುದು ಎಂದು ಶಿವಸೇನೆ ತಿಳಿಸಿದೆ.
* ವಿಪಕ್ಷಗಳು ದಲಿತ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಬೆಂಬಲ- ಬಿಎಸ್ಪಿ: ಕೋವಿಂದ್ ದಲಿತ ಸಮುದಾಯದವರಾದ ಕಾರಣ ಅವರ ಬಗ್ಗೆ ನಮ್ಮ ಪ್ರತಿಕ್ರಿಯೆ ಧನಾತ್ಮಕವಾಗಿದೆ. ವಿಪಕ್ಷಗಳೂ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ನಾವು ಅವರನ್ನು ಬೆಂಬಲಿಸಲಿದ್ದೇವೆ. ಆದರೆ ರಾಜಕೀಯ ಹಿನ್ನೆಲೆ ಇರದ ದಲಿತ ಮುಖಂಡರನ್ನು ಈ ಹುದ್ದೆಗೆ ಆಯ್ಕೆ ಮಾಡಬೇಕಿತ್ತು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ.
* ಸಿಪಿಐ(ಎಂ) ವಿರೋಧ: ಜೂನ್ 22ರಂದು ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ. ಇದೊಂದು ರಾಜಕೀಯ ಸಂಘರ್ಷವಾಗಿದೆ. ಮೂವರು ಸದಸ್ಯರ ಬಿಜೆಪಿ ಸಮಿತಿ ನಮ್ಮನ್ನು ಭೇಟಿ ಮಾಡಿ ಚರ್ಚಿಸಿದಾಗ ಯಾವುದೇ ಅಭ್ಯರ್ಥಿಯ ಹೆಸರನ್ನು ಸೂಚಿಸಿರಲಿಲ್ಲ. ಆದರೆ ಇದೀಗ ಏಕಾಏಕಿ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದವರು ತಿಳಿಸಿದ್ದಾರೆ.
ವೈಯಕ್ತಿಕವಾಗಿ ಹರ್ಷವಾಗಿದೆ- ನಿತೀಶ್ ಕುಮಾರ್: ಕೋವಿಂದ್ ಅವರನ್ನು ಬೆಂಬಲಿಸುವ ಬಗ್ಗೆ ಜೂನ್ 22ರಂದು ನಡೆಯುವ ವಿಪಕ್ಷಗಳ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಜೆಡಿ(ಯು) ತಿಳಿಸಿದೆ.
ಅದಾಗ್ಯೂ, ಕೋವಿಂದ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ವೈಯಕ್ತಿಕವಾಗಿ ತನಗೆ ಖುಷಿಯಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದ ರಾಜ್ಯಪಾಲರಾಗಿ ಅವರು ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷಪಾತವಿಲ್ಲದೆ, ರಾಜ್ಯ ಸರಕಾರದೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದವರು ಹೇಳಿದ್ದಾರೆ. ಆದರೆ ಬೆಂಬಲಿಸುವ ಬಗ್ಗೆ ಈಗೇನೂ ಹೇಳಲಾಗದು ಎಂದಿದ್ದಾರೆ.