×
Ad

‘ಭಂಗಿ’ಯ ಅಮಲಿಗೆ ಇನ್ನೆಷ್ಟು ಬಲಿ?

Update: 2017-06-19 23:48 IST

ಆಕೆಯ ಹೆಸರು ಶಾಲಿನಿ(ಹೆಸರು ಬದಲಿಸಲಾಗಿದೆ). ಚಿಕ್ಕ ವಯಸ್ಸಿನಲ್ಲೆ ಅಪ್ಪ-ಅಮ್ಮ ಇಬ್ಬರನ್ನು ಕಳೆದುಕೊಂಡ ಅನಾಥೆ. ಆಕೆ ಬೆಳೆದಿದ್ದೆಲ್ಲ ಅಜ್ಜ-ಅಜ್ಜಿಯ ಆಸರೆಯಲ್ಲಿ. ಆದರೆ, ಆಕೆ ಅದೊಂದು ದಿನ ತನ್ನ ಅಜ್ಜ-ಅಜ್ಜಿಯರನ್ನೆ ಹತ್ಯೆಗೈಯಲು ಯತ್ನಿಸಿದ್ದು ಮಾತ್ರ ಭಯಂಕರ. ಅಷ್ಟೇ ಅಲ್ಲ, ಆತಂಕಕಾರಿ ಕೂಡ ಹೌದು.

ಇದು ಯಾವುದೋ ಕಾಲ್ಪನಿಕ ಕಥೆಯಲ್ಲ. ಬದಲಿಗೆ ವಾಸ್ತವ ಸತ್ಯ. ಮೈಸೂರಿನ ವಿಜಯನಗರ ಎಂಬ ಪ್ರತಿಷ್ಠಿತ ಕಾಲನಿಯ ನಿವಾಸಿ ಶಾಲಿನಿ ಸ್ನೇಹಿತರ ಸಹವಾಸದಿಂದ ಮಾದಕ ವ್ಯಸನಕ್ಕೆ ಒಳಗಾಗಿದ್ದಳು. ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಆಕೆ ಅದೊಂದು ದಿನ ಮಧ್ಯಾಹ್ನ ಮಾದಕ ದ್ರವ್ಯವನ್ನು ಕೊಳ್ಳಲು ಹಣ ನೀಡಲಿಲ್ಲ ಎಂದು ತನ್ನನ್ನು ಪ್ರೀತಿಯಿಂದ ಸಾಕಿ-ಬೆಳೆಸಿದ ಅಜ್ಜ-ಅಜ್ಜಿಯರ ಕುತಿಗೆಗೆ ಕೈಹಾಕಿದ್ದು ಮಾತ್ರ ಭಯಾನಕ.

ಗಾಂಜಾ, ಬ್ರೌನ್ ಶುಗರ್, ಹೆರಾಯಿನ್, ಕೊಕೇನ್, ಮದ್ಯ, ಅಫೀಮುಗಳ ಅಕ್ಟೋಪಸ್ ಹಿಡಿತದಲ್ಲಿ ಸಿಲುಕಿ ಹದಿಹರೆಯದ ಯುವಕ-ಯುವತಿಯರು ದೊಡ್ಡ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.

ಸುಮಾರು 15ರಿಂದ 30ವರ್ಷ ವಯಸ್ಸಿನ ಶಾಲಾ-ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗಿದ್ದು, ಶೇ.35ರಿಂದ 40ರಷ್ಟು ಮಂದಿ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆಂಬ ಆಘಾತಕಾರಿ ಅಂಶವೂ ಸಮೀಕ್ಷೆಯಿಂದ ಬಯಲಾಗಿದೆ.

ಮಾದಕ ವಸ್ತುಗಳ ಅಂತಾರಾಷ್ಟ್ರೀಯ ಕಳ್ಳ ಸಾಗಾಣೆ ವ್ಯವಹಾರದಲ್ಲಿ ಭಾರತ ದೇಶ ಕೇಂದ್ರ ಬಿಂದುವಾಗಿ ಬೆಳೆಯುತ್ತಿದ್ದು, ಹೊಸದಿಲ್ಲಿ, ಮುಂಬೈ, ಕೋಲ್ಕತ್ತಾ ನಂತರ ಜಗತ್ತಿನ ಅತ್ಯಂತ ‘ಕ್ರಿಯಾಶೀಲ ನಗರ’ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗುತ್ತಿದೆ. ಮಾದಕ ವ್ಯಸನಿಗಳ ಸಂಖ್ಯೆ ವಾರ್ಷಿಕ ಶೇ.10ರಿಂದ 15ರಷ್ಟು ಹೆಚ್ಚಾಗುತ್ತಿದ್ದು, ಮುಗ್ಧ ಮಕ್ಕಳು ಅರಿಯದ ವಯಸ್ಸಿನಲ್ಲಿ ಅಫೀಮಿನ ಅಮಲಿನಲ್ಲಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಮಾರಕ. ಆದರೆ, ಇಂತಹ ‘ನೀಚ ದಂಧೆ’ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನುಗಳಿದ್ದರೂ ಅವುಗಳ ಅನುಷ್ಠಾನ ಆಗುತ್ತಿಲ್ಲ.

ಅಫೀಮಿನ ಆಕ್ಟೋಪಸ್:

‘ಪಪ್ಸಿ ಗಿಡ ಭಾರತ, ಚೀನಾ ಹಾಗೂ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತದೆ. ಕೆಲವೆಡೆ ಅನುಮತಿ ಪಡೆದೇ ಈ ಗಿಡಗಳನ್ನು ಬೆಳೆಯುತ್ತಾರೆ. ಅತ್ಯಂತ ಸಮರ್ಥಶಾಲಿ ನೋವು ನಿವಾರಕ ಮಾರ್ಫಿನ್ ಸೂಜಿಮದ್ದನ್ನು ಈ ಗಿಡದಿಂದ ತಯಾರಿಸಲಾಗುತ್ತದೆ.

ಈ ಗಿಡದ ಬಲಿಯದ ಬೀಜಗಳಿಂದ ಒಸರುವ ಹಾಲಿನಂತಹ ವಸ್ತು ಅಫೀಮು, ಕಳ್ಳ ಮಾರ್ಗಗಳ ಮೂಲಕ ಇಡೀ ವಿಶ್ವದ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಈ ಹಾಲಿನ ಕಚ್ಚಾ ವಸ್ತುವಿನಿಂದ ನೋವು ನಿವಾರಕ ಹಾಗೂ ಮತ್ತು ಬರಿಸುವ ವಸ್ತುವನ್ನು ಬೇರ್ಪಡಿಸಿ ಶುದ್ಧ ರೂಪದಲ್ಲಿ ಪರಿಷ್ಕರಿಸಿದಾಗ ‘ಹೆರಾಯಿನ್’ ಆಗುತ್ತದೆ.

ಹೆರಾಯಿನ್ ಬಹಳ ತುಟ್ಟಿ. ಹೀಗಾಗಿ ಅದಕ್ಕೆ ಬೇರೆ ವಸ್ತುಗಳನ್ನು ಬೆರೆಸಿ ಅದನ್ನು ಹಿಗ್ಗಿಸಿದಾಗ ಅದು ಕಂದು ಬಣ್ಣದ ಮರಳಿನಂತಹ ‘ಬ್ರೌನ್‌ಶುಗರ್’ ರೂಪ ತಾಳುತ್ತದೆ. ಈ ಅಫೀಮು, ಹೆರಾಯಿನ್ ಮತ್ತು ಬ್ರೌನ್‌ಶುಗರ್ ವ್ಯವಹಾರವಿಂದು ಚಿನ್ನಕ್ಕಿಂತ ದುಬಾರಿ.

ಹೆರಾಯಿನ್ ಅನ್ನು ಸೂಜಿ ಮದ್ದಿನ ರೂಪದಲ್ಲಿ, ಬ್ರೌನ್‌ಶುಗರ್ ಅನ್ನು ಹೊಗೆ ರೂಪದಲ್ಲಿ ಸೇವಿಸಿದಾಗ ಅಫೀಮು ವಸ್ತು ಮಿದುಳಿನ ನರಮಂಡಲ ಸೇರಿ ಪ್ರಭಾವಿಸುತ್ತದೆ. ಮಾತ್ರವಲ್ಲ ನೋವಿನ ಸಂವೇದನೆ ನಿವಾರಿಸಿ ಜೋಂಪು, ಮೈಗೆ ಹಿತವೆನ್ನುವ ಭ್ರಮೆ ಮೂಡಿಸುತ್ತದೆ.

ಭಗವಂತನ ಭಂಗಿ: ‘ಭಗವಂತನ ಭಂಗಿ’ ಎಂಬ ಅಪವಾದಕ್ಕೆ ಗುರಿ ಆಗಿರುವ ಗಾಂಜಾ, ಕೆನಾಬಿಸ್ ಸಟ್ಟವ ಎಂಬ ಗಿಡದ ಮೂಲದಿಂದ ಬರುತ್ತದೆ. ಈ ಗಿಡದ ಎಲೆ-ಹೂವುಗಳಿಂದ ಬರುವ ಅಂಟಿನಿಂದ ‘ಚರಸ್-ಹಶೀಸ್’ ಸಿದ್ಧಪಡಿಸಲಾಗುತ್ತದೆ. ಭಂಗಿ ಸೊಪ್ಪು ಕಡಿಮೆ ಬೆಲೆ, ಆದರೆ ಚರಸ್-ಹಶೀಸ್ ದುಬಾರಿ. ಹೊಗೆ ಬತ್ತಿ ಮೂಲಕ ಇದನ್ನು ಸೇದುತ್ತಾರೆ. ಚರಸ್ ಮತ್ತು ಹಶೀಸ್ ಊಟ ಮತ್ತು ತಿಂಡಿಯೊಂದಿಗೆ ಕೆಲವು ಸಲ ಸೇವಿಸುತ್ತಾರೆ.

ಮದ್ಯದ ಮರಣ ಮೃದಂಗ: ಸಂತೋಷ, ಸಂಭ್ರಮಾಚರಣೆಗೆ ಆರಂಭಗೊಳ್ಳುವ ಮದ್ಯ ಸೇವನೆ ಅಂತಿಮವಾಗಿ ವ್ಯಕ್ತಿಯ ಮರಣ ಶಾಸನ ಆಗುತ್ತಿದೆ ಎಂಬುದು ಸತ್ಯ. ಮದ್ಯದ ಅಮಲು ಕೂಡ ಇತ್ತೀಚಿನ ದಿನಗಳಲ್ಲಿ ಆತಂಕಕಾರಿಯಾಗಿ ಬೆಳೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಮದ್ಯದ ದಾಸರಾಗುತ್ತಿರವುದು, ಅದೊಂದು ರೀತಿಯ ಫ್ಯಾಷನ್ ಆಗಿದೆ.

ಕೊಲೆ, ಸುಲಿಗೆ, ಅತ್ಯಾಚಾರ ಮತ್ತು ದೊಡ್ಡ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳಿಗೆ ಮದ್ಯದ ಅಮಲು ಕೂಡ ಕಾರಣ ಆಗುತ್ತಿದೆ. ‘ಅಮಲಿನಲ್ಲಿರುವ ವ್ಯಕ್ತಿ’ಯ ಅಕ್ಟೋಪಸ್ ಸುಳಿಗೆ ಸಿಲುಕಿ ಅಮಾಯಕ ಜನತೆ ಬಲಿ ಪೀಠಕ್ಕೆ ತಲೆ ಕೊಡಬೇಕಾದ ದುಸ್ಥಿತಿ, ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಉಳ್ಳವರ ಮೋಜಿಗಾಗಿ ಆರಂಭಗೊಂಡ ಗಾಂಜಾ, ಬ್ರೌನ್ ಶುಗರ್, ಹೆರಾಯಿನ್, ಕೊಕೇನ್, ಮದ್ಯ ಮುಂತಾದ ಮಾದಕ ವ್ಯಸನಗಳ ಅಕ್ಟೋಪಸ್ ಹಿಡಿತದಿಂದ ಹದಿಹರೆಯದ ಯುವಕ-ಯುವತಿಯರನ್ನು ತಪ್ಪಿಸಬೇಕು. ಈ ದಂಧೆಗೆ ಕಡಿವಾಣ ಹಾಕಲು ಕಾನೂನಿನ ಕಟ್ಟುನಿಟ್ಟಿನ ಜಾರಿ ಅಗತ್ಯ. ಆ ನಿಟ್ಟಿನಲ್ಲಿ ಸಮಾಜದ ಒತ್ತಾಯವೂ ಅನಿವಾರ್ಯ.

Writer - ಪ್ರಕಾಶ ರಾಮಜೋಗಿಹಳ್ಳಿ

contributor

Editor - ಪ್ರಕಾಶ ರಾಮಜೋಗಿಹಳ್ಳಿ

contributor

Similar News

ಜಗದಗಲ

ಜಗ ದಗಲ