ಆತನಿಗಾಗಿ ಮನೆಯಲ್ಲಿ ಯಾವತ್ತೂ ಸ್ವಲ್ಪ ಕಡಲೆಕಾಯಿ ಇಟ್ಟುಕೊಳ್ಳುತ್ತೇನೆ: ರೂಮಾ ಬೇಗಂ

Update: 2017-06-20 06:12 GMT

"ನಮ್ಮದು ಪ್ರೇಮ ವಿವಾಹ. ನಾವು ಮೊದಲ ಬಾರಿ ಭೇಟಿಯಾಗಿದ್ದು ಎಂಟು ವರ್ಷಗಳ ಹಿಂದೆ ಮೃಗಾಲಯದವೊಂದರಲ್ಲಿ. ಮೊದಲ ನೋಟಕ್ಕೆ ಆತ  ಬಹಳ ಉದಾರಿ ವ್ಯಕ್ತಿಯೆಂದು ನಾನಂದುಕೊಂಡಿದ್ದೆ. ನಾನು ಸ್ವಲ್ಪ ಕಡಲೆಕಾಯಿ ಖರೀದಿಸಿ ಕೋತಿಗಳಿಗೆ ನೀಡಲೆಂದು ಆತನಿಗೆ ಕೊಟ್ಟೆ. ಅವುಗಳ ಹತ್ತಿರ ಹೋಗಲು ನನಗೆ ಭಯವಾಗಿತ್ತು.  ಆತ ಅಲ್ಲಿ ಹೋಗಿ, ಕೋತಿಗಳನ್ನು ನೋಡುತ್ತಾ ಎಲ್ಲವನ್ನೂ ತಾನೇ ತಿಂದು ಬಿಟ್ಟ. ನನಗೆ ಸಿಟ್ಟು ಬಂದು ಆತನಲ್ಲಿ ಈ ಬಗ್ಗೆ ಕೇಳಿದೆ. ಆತ ನಾಚಿಕೆಯಿಂದ ತನಗೆ "ಕಡಲೆಯೆಂದರೆ ಇಷ್ಟ" ಎಂದು ಬಿಟ್ಟ.

ನಾನು ಸಿಟ್ಟಿನಿಂದ ಅಲ್ಲಿಂದ ಬೇಗನೇ ಹೋಗಿ ಬಿಟ್ಟೆ. ಆದರೆ ಅವಸರದಲ್ಲಿ  ಹೋಗುವಾಗ ಬಿದ್ದು ನನ್ನ ಚಪ್ಪಲಿ ತುಂಡಾಯಿತು. ಆತ ನನ್ನ ಬಳಿ ಬಂದ. ನಾನು ಚಪ್ಪಲಿ ತೆಗೆದು ಕಾಲಿಗೆ ಏನಾಗಿದೆ ಎಂದು ನೋಡಿದೆ. ನನಗೆ ನಿಲ್ಲಲು ಸಹಾಯ ಮಾಡದೆ ಆತ ಚಪ್ಪಲಿ ತೆಗೆದುಕೊಂಡು ಗೇಟಿನತ್ತ ಓಡಿದ. ಮೃಗಾಲಯದಲ್ಲಿ ನನ್ನನ್ನು ಒಬ್ಬಳನ್ನೇ ಬರಿಗಾಲಲು ಬಿಟ್ಟು ಆತ ಓಡಿದ್ದನ್ನು ನೋಡಿ ನಾನು ಸಿಟ್ಟಾದೆ. ನಾನು ಬೆಂಚ್ ಮೇಲೆ ಕಷ್ಟ ಪಟ್ಟು ಕುಳಿತುಕೊಂಡು ಬರಿಗಾಲಲ್ಲಿ ಮನೆಗೆ ಹೇಗೆ ಹೋಗುವುದು ಎಂದು ಯೋಚಿಸಲಾರಂಭಿಸಿದೆ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಏಳಬೇಕೆನ್ನುವಷ್ಟರಲ್ಲಿ  ಆತಚಪ್ಪಲಿಯನ್ನ ನನ್ನ ಕಾಲ ಬಳಿ ಇಟ್ಟ. ಆತನನ್ನೊಮ್ಮೆ ನೋಡಿದೆ. ಬೆವರಿ ಹೋಗಿದ್ದ ಹಾಗೂ ಏದುಸಿರು ಬಿಡುತ್ತಿದ್ದ. ನನ್ನನ್ನು ನೋಡಿ ನಕ್ಕು ಬಿಟ್ಟ.  ಆ ಕ್ಷಣದಲ್ಲಿ ವಿಚಿತ್ರವಾಗಿ ಆತನ ಮೇಲೆ ಪ್ರೀತಿ ಉಕ್ಕಿ ಬಂತು. ಅಂದಿನಿಂದ ಎಂಟು ವರ್ಷಗಳ ಕಾಲ ಈ ಮನುಷ್ಯನನ್ನು ನಾನು ಪ್ರೇಮಿಸಿದೆ.

ಇಷ್ಟು ವರ್ಷಗಳ ಕಾಲ ಆತ ನನ್ನನ್ನು ಒಂದೋ ನಗಿಸಿದ್ದಾನೆ ಇಲ್ಲವೇ ಸಿಟ್ಟು ಬರಿಸಿದ್ದಾನೆ. ನಾವಿಬ್ಬರೂ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತೇವೆ. ಹಿಂದಿರುಗುವಾಗ  ಕಾಡಿನ ಹೂವೊಂದನ್ನು ಕೀಳುತ್ತಾನೆ ಆದರೆ ನನಗೆ ಯಾವತ್ತೂ ನೀಡುವುದಿಲ್ಲ. ನಮ್ಮ ಮಗಳು ನೀರಿನ  ಮಡಕೆಯಲ್ಲಿ ಒಂದು  ಹೂದಾನಿ ಮಾಡಿದ್ದಳು. ಮನೆಗೆ ಹಿಂದಿರುಗಿದ ನಂತರ ನನ್ನ ಪತಿ ಆ ಹೂವನ್ನು ಅದರಲ್ಲಿಡುತ್ತಿದ್ದ. ಆಗ ನಮ್ಮ ಮಗಳು ಜೋರಾಗಿ ಬೊಬ್ಬೆ ಹೊಡೆದು "ಅಮ್ಮ ಇದು ನಿನಗಾಗಿ'' ಎನ್ನುತ್ತಾಳೆ. ಸಾಮಾನ್ಯವಾಗಿ ನಾನು ಆಕೆಗೆ ಉತ್ತರ ನೀಡುವುದಿಲ್ಲ. ನನಗೆ  ನಾಚಿಕೆಯಾಗುತ್ತದೆ. ಆತನಿಗಾಗಿ ನನಗೆ ಹೆಚ್ಚೇನೂ ಮಾಡಲು ಆಗುವುದಿಲ್ಲ, ಆದರೆ ಸ್ವಲ್ಪ ಕಡಲೆಕಾಯಿಯನ್ನು ಮನೆಯಲ್ಲಿ ಯಾವತ್ತೂ ಇಡುತ್ತೇನೆ".

-ರೂಮಾ ಬೇಗಂ

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News