ಬಲಿಷ್ಠ ವ್ಯಕ್ತಿಯ ಕಾಲಿನಡಿ ಸಿಲುಕಿದ ‘ಇರುವೆ’ಯ ರಕ್ಷಣೆಗೆ ವಿಧೇಯಕ: ಕೆ.ಆರ್.ರಮೇಶ್ ಕುಮಾರ್
‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ-2017’ನ್ನು ವಿರೋಧಿಸಿ ವೈದ್ಯರು ಸೇರಿದಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳು ಬೀದಿಗೆ ಬಂದಿದ್ದಾರೆ. ಆದರೆ, ಜೀವನವನ್ನೆಲ್ಲ ಬೀದಿಯಲ್ಲೇ ಕಳೆಯುತ್ತಿರುವ ನನ್ನ ಜನರಿದ್ದಾರೆ, ಅವರಿಗೆ ನಾನೇನು ಮಾಡಬೇಕು.
ತಾನು ಸಚಿವನಾಗಿರುವುದು ಖಾಸಗಿ ವೈದ್ಯಕೀಯ ಸಂಸ್ಥೆಗಳ ಋಣ ತೀರಿಸಲೋ ಅಥವಾ ನನ್ನನ್ನು ಆಯ್ಕೆ ಮಾಡಿದ ಮತದಾರ ವರ್ಗದವರ ಋಣ ತೀರಿಸಲೋ? ಖಾಸಗಿಯವರು ಹೇಳಿದಂಗೆ ಕಾಯ್ದೆ-ಕಟ್ಟಳೆ ಮಾಡುವುದಾದರೆ ಈ ಸರಕಾರ-ಸದನ ಏಕಿರಬೇಕು. ಹೀಗೆಂದು ಭಾವುಕರಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ಅನ್ನು ತಂದು ಹತ್ತು ವರ್ಷ ಕಳೆದಿದೆ. ನಾವು ನಿರೀಕ್ಷಿಸಿದ ನೆಮ್ಮದಿ ಜನಸಾಮಾ ನ್ಯರಿಗೆ ಸಿಕ್ಕಿಲ್ಲ. ಜನರ ಅಳಲು ಸರಕಾರದ ಗಮನಕ್ಕೆ ಬಂದಾಗ ಅದಕ್ಕೆ ಗಮನ ಕೊಡುವುದು ನಮ್ಮ ಕರ್ತವ್ಯ. ಕೆಲ ಮಸೂದೆ ಜಾರಿಗೆ ಬಂದಾಗ ಪರ-ವಿರೋಧ ಚರ್ಚೆ ನಡೆಯುವುದು ಸಹಜ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಮಹಾ ತಾಯಿ. ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಅತ್ಯಂತ ಕಠಿಣ ಕಾನೂನು ಜಾರಿ ಮಾಡಿದ್ದಾರೆ. ಅವರ ಹಾದಿಯಲ್ಲೇ ರಾಜ್ಯ ಸರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಣಕ್ಕೆ ವಿಧೇಯಕ ತಂದಿದೆ.
ಸಂಘಟಿತ ವರ್ಗ ಬಹಳ ಬೇಗ ತಮ್ಮ ಅಭಿಪ್ರಾ ಯಗಳನ್ನು ಹೇಳಿಕೊಳ್ಳಬಹುದು. ಆದರೆ, ಅಸಂಘಟಿತ ವರ್ಗ ತಮ್ಮ ನೋವು, ಕಷ್ಟ-ಕಾರ್ಪಣ್ಯ ಗಳನ್ನು ಹೇಳಿಕೊಳ್ಳುವುದು ಅಸಾಧ್ಯ. ಹೀಗೆಂದು ಸಂಘಟಿತರು ವಿರೋಧಿಸಬಾರದೆಂದು ಹೇಳು ವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರವಿದೆ.
ಆದರೆ, ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಹಿತ ಕಾಪಾಡಿಕೊಳ್ಳಲು ವೈದ್ಯರಿಗೆ ‘ಸುಳ್ಳು’ ಮಾಹಿತಿ ನೀಡಿ ರಾಜ್ಯ ಸರಕಾರ, ತನ್ನ ವಿರುದ್ಧ ಪ್ರತಿಭಟನೆ ನಡೆಸಿ ದ್ದಾರೆ. ಅವರ ಎಲ್ಲ ಅಭಿಪ್ರಾಯಗಳನ್ನು ಆಲಿಸಿದ್ದೇನೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂ ಜೀತ್‌ಸೇನ್ ನೇತೃತ್ವದ ಸಮಿತಿಯ ವರದಿಯ ಆಧರಿಸಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಣಕ್ಕೆ ವಿಧೇಯಕ ತರಲಾಗಿದೆ. ಯಾವುದೇ ತರಾ ತುರಿ, ಏಕಾಏಕಿ ವಿಧೇಯಕ ತಂದಿಲ್ಲ. ವಿಧೇಯಕರ ಮೂಲಕ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಮೇಲೆ ದ್ವೇಷ ಸಾಧಿಸುವ ಉದ್ದೇಶ ಖಂಡಿತ ಇಲ್ಲ.
ಸರಕಾರಿ ಆಸ್ಪತ್ರೆಗಳಿಗೆ ಮತ್ತು ಅಲ್ಲಿನ ವೈದ್ಯರು- ಸಿಬ್ಬಂದಿಯ ನಿಯಂತ್ರಣಕ್ಕೆ ಈಗಾಗಲೇ ಸರಕಾರದ ಮಟ್ಟದಲ್ಲಿ ವ್ಯವಸ್ಥೆ ಇದೆ. ಅವರೇನಾದರೂ ತಪ್ಪು ಮಾಡಿದರೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿನ ಮನಸೂ ಇಚ್ಛೆ ಶುಲ್ಕ ವಸೂಲಿಯಿಂದ ಬಡ ರೋಗಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಅರಿತು ವಿಧೇಯಕವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಮಧ್ಯರಾತ್ರಿ ನಿದ್ದೆಯಿಂದ ಎದ್ದು ಏಕಾಏಕಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ತಂದಿಲ್ಲ. ಈ ಕಾಯ್ದೆ ವ್ಯಾಪ್ತಿಗೆ ಸರಕಾರಿ ಆಸ್ಪತ್ರೆಗಳನ್ನು ಸೇರಿಸುವ ಅಗತ್ಯವಿಲ್ಲ. ಸಾರ್ವಜನಿಕರು ಮತ್ತು ಬಡ ರೋಗಿಗಳ ರಕ್ಷಣೆ ಮಾಡುವ ಉದ್ದೇಶದ ಈ ವಿಧೇಯಕವನ್ನು ತರಲಾಗಿದೆ. ವೈದ್ಯರು ಮತ್ತು ಶುಶ್ರೂಷಕರು ಪದವಿ ಪಡೆಯುವ ವೇಳೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಸಾವಿರಾರು ಉದಾಹರಣೆಗಳಿವೆ. ಅವರು ಕನಿಷ್ಠ ನೈತಿಕತೆ, ವೃತ್ತಿ ಧರ್ಮ ಪಾಲಿಸುವುದು ಬೇಡವೇ?
ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ ಜಾರಿಗೆ ಬಂದರೆ ನಾಳೆನೆ ಎಲ್ಲರನ್ನೂ ಕಾರಾಗೃಹಕ್ಕೆ ಹಾಕುತ್ತಾರೆಂಬ ಸಂಶಯವನ್ನು ಎಲ್ಲ ವೈದ್ಯರಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮೂಡಿ ಸಿದ್ದಾರೆ. ಅದು ಸಾಧ್ಯವೇ?. ಇದು ಸರಿಯಲ್ಲ. 1976ರಲ್ಲೇ ಈ ರೀತಿಯ ಕಾಯ್ದೆ ಜಾರಿಗೆ ಬಂದಿದೆ.2007ರಲ್ಲೂ ಕಾಯ್ದೆ ರೂಪಿಸಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಬೇರೆ, ವೃತ್ತಿಪರ ವೈದ್ಯರು ಬೇರೆ. ಯಾವುದೇ ಸಂದರ್ಭದಲ್ಲಿಯೂ ಒಂದಕ್ಕೊಂದು ಸಂಬಂಧವಿಲ್ಲ. ನಾವು ಖಾಸಗಿ ವೈದ್ಯಕೀಯಸಂಸ್ಥೆಗಳ ಮೇಲಷ್ಟೇ ನಿಯಂತ್ರಣ ಹೇರಲು ಹೊರಟಿರುವುದು, ವೃತ್ತಿಪರ ವೈದ್ಯರ ಮೇಲಲ್ಲ.
ಹೆಣ ಕೊಡುವುದಿಲ್ಲ: ಖಾಸಗಿ ಆಸ್ಪತ್ರೆಯಲ್ಲಿ ಏನಾ ದರೂ ಹೆಚ್ಚು-ಕಮ್ಮಿಯಾಗಿ ರೋಗಿ ಮೃತಪಟ್ಟರೆ ಬಾಕಿ ಮೊತ್ತ ಪಾವತಿಸುವವರೆಗೂ ಮೃತದೇಹ ನೀಡುವು ದಿಲ್ಲ ಎಂದು ಜನರು ನಮ್ಮ ಬಳಿಗೆ ಬಂದು ಗೋಳಾ ಡ್ತಾರೆ.. ಹೀಗೆ ಆಳುವವರು ನಮ್ಮ ಬಳಿಗೆ ಬರುವ ಬದಲು ಅವರ(ಖಾಸಗಿ)ಬಳಿಗೆ ಹೋಗಿದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತೋ ಏನೋ?
ದರ ಸನ್ನದು: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಚಿಕಿತ್ಸೆಗೆ ಸೇರುವ ರೋಗಿಗೆ ತನ್ನ ಕಾಯಿಲೆ ಏನು, ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ತಿಳಿದುಕೊ ಳ್ಳುವ ಅವಕಾಶವಿಲ್ಲವೇ. ಇದುವರೆಗೂ ಆ ರೀತಿ ವ್ಯವಸ್ಥೆ ಇರಲಿಲ್ಲ. ಇದೀಗ ವಿಧೇಯಕದ ಮೂಲಕ ಯಾವ ಚಿಕಿತ್ಸೆಗೆ ಎಷ್ಟು ಖರ್ಚು ಎಂಬ ದರಗಳ ಸನ್ನದನ್ನು ಪ್ರತಿಯೊಂದು ಖಾಸಗಿ ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿಹಾಕಬೇಕೆಂಬ ಷರತ್ತನ್ನು ವಿಧಿಸಲು ಉದ್ದೇಶಿಸಿದ್ದೇವೆ. ಇದರಲ್ಲಿ ತಪ್ಪೇನಿದೆ.
ಯಾವುದೇ ಕಾಯಿಲೆಗೆ ಇಷ್ಟು ದರ ಎಂದು ನಾನು ನಿಗದಿ ಮಾಡುವುದಿಲ್ಲ. ನಾನು ಓದಿರುವುದು ಕೇವಲ ಬಿಎಸ್ಸಿ. ಅದೂ ಶೇ.39ರಷ್ಟು ಅಂಕಪಡೆದಿದ್ದೇನೆ. ತಾನು ಅಂತಹ ಬುದ್ಧಿವಂತನೇನೂ ಅಲ್ಲ. ದರ ನಿಗದಿಗೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಸೇರಿದಂತೆ ತಜ್ಞರ ಸಮಿತಿ ರಚಿಸಲಾಗುತ್ತದೆ. ಹೃದ್ರೋಗಿಗಳಿಗೆ ಅಳವಡಿಸುವ ‘ಸ್ಟಂಟ್’ ಸರಕಾರಿ ಸ್ವಾಮ್ಯದ ನಗರದ ಜಯದೇವ ಆಸ್ಪತ್ರೆಯಲ್ಲಿ 55ರಿಂದ 65 ಸಾವಿರ ರೂ.ನಿಗದಿ ಮಾಡಲಾಗಿದೆ. ಆದರೆ, ಅದೇ ‘ಸ್ಟಂಟ್’ ಅಳವಡಿಕೆಗೆ ಖಾಸಗಿ ಆಸ್ಪತ್ರೆಯಲ್ಲಿ 2ಲಕ್ಷ ರೂ.ವರೆಗೂ ವಸೂಲಿ ಮಾಡುತ್ತಿದ್ದು, ಇದನ್ನು ನಿಯಂತ್ರಣ ಮಾಡುವುದು ಬೇಡವೇ?.
ಗರ್ಭಿಣಿ ಮಹಿಳೆಗೆ ಅಗತ್ಯವಾಗಿ ಸ್ಕಾನಿಂಗ್ ಮಾಡಲಾಗುತ್ತಿದೆ. ಭ್ರೂಣ ಲಿಂಗ ಪತ್ತೆ ಘೋರ ಅಪರಾಧ, ಕಠಿಣ ಶಿಕ್ಷೆಯೂ ವಿಧಿಸಲಾಗುತ್ತದೆ. ಆದರೂ, ಸ್ಕಾನಿಂಗ್ ಮಾಡುತ್ತಿದೆ. ‘ಕರ್ನಾಟಕಕ್ಯಾನ್ಸರ್ ಸೆಂಟರ್’ ಸತ್ತವರ ಹೆಸರಿನಲ್ಲಿ ರಸೀದಿ ನೀಡಿ ಸರಕಾರದ ಅಧೀನದ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ಹಣ ಪಡೆದಿರುವ 10 ಪ್ರಕರಣಗಳು ಸಾಬೀತಾಗಿವೆ. ಆದರೂ, ಅವರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಇಂತಹ ಪ್ರಕರಣಗಳನ್ನು ನೋಡಿದರೆ ಇದು ಭಾರತೀಯ ವೈದ್ಯಕೀಯ ಕೌನ್ಸಿಲ್ ನೋಂದಣಿಗೆ ವಿರುದ್ಧವಾಗಿದ್ದು, ಇಂತಹ ವ್ಯಕ್ತಿಗಳ ವೈದ್ಯ ವೃತ್ತಿ ನೋಂದಣಿ ರದ್ದುಪಡಿಸುವುದು ಬೇಡವೇ. ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ-ತಪ್ಪು ನಿರ್ಧಾರಗಳಿಂದ ಆರೇಳು ಮಕ್ಕಳು ಸಾವನ್ನಪ್ಪಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದ್ದು, 200 ಮಳಿಗೆ ಪ್ರಾರಂಭಿಸಲು ಕೇಂದ್ರ ಸಚಿವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಬಡ ರೋಗಿಗಳಿಗೆ ಅಗ್ಗದ ದರದಲ್ಲಿ ಔಷಧಿಗಳು ಸಿಗುತ್ತವೆ. 25ಪೈಸೆಗೆ ಸಿಗುವ ಮಾತ್ರೆಯನ್ನು 80ಪೈಸೆಯಿಂದ 1ರೂ.ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಶೇ.70ರಿಂದ 75ರಷ್ಟು ಕಡಿಮೆ ದರದಲ್ಲಿ ಔಷಧಿಗಳು ದೊರೆಯಲಿವೆ. ಹೀಗೆ ಮಾಡುವುದರಿಂದ ಔಷಧ ಉದ್ಯಮಕ್ಕೆ ತೊಂದರೆ ಯಾಗಲಿದೆ. ಹೀಗಾಗಿ ವಿರೋಧ ಮಾಡುತ್ತಿದ್ದಾರೆ.
ಶೇ.80ರಷ್ಟು ನಮ್ಮದೇ ಹಣ:
ಯಶಸ್ವಿನಿ ಯೋಜನೆಗೆ ಸರಕಾರ ವಾರ್ಷಿಕ 1,022 ಕೋಟಿ ರೂ.ಯನ್ನು ವೆಚ್ಚ ಮಾಡುತ್ತಿದ್ದು, ಆ ಪೈಕಿ ಶೇ.80ರಷ್ಟು ಹಣವನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಪಾವತಿಸಿದೆ. ಅದೇ ರೀತಿ ಉಳಿದ ಚಿಕಿತ್ಸೆಗೂ ಸರಕಾರ ನೀಡುವ ಹಣದ ಪೈಕಿ ಶೇ.80ರಷ್ಟು ಹಣ ಖಾಸಗಿಯವರಿಗೆ ಹೋಗುತ್ತದೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ಸಿದ್ಧತೆಯಲ್ಲಿರುವ ವೇಳೆಯೇ ಸರಕಾರಕ್ಕೆ ಕನಿಷ್ಠ ಗಮನಕ್ಕೂ ತರದೆ, ನೋಟಿಸ್ ನೀಡದೇ ಖಾಸಗಿ ಆಸ್ಪತ್ರೆಗಳು ಹಣ ಬಾಕಿ ನೆಪದಲ್ಲಿ ತಮ್ಮ ಸೇವೆ ಸ್ಥಗಿತಗೊಳಿಸಿದ್ದವು. ವ್ಯಾಪಾರ ಆದ್ರೆ ನಿಲ್ಲಿಸಿ, ಸೇವೆಯಾದರೆ ಉಳಿಸಿಕೊಳ್ಳಿ ಎಂದು ಅವರಿಗೆ ಸಲಹೆ ನೀಡಿದ್ದೆ. ರಾಜ್ಯದಲ್ಲಿನ ಬಿಪಿಎಲ್-ಎಪಿಎಲ್ ಸೇರಿದಂತೆ 1.30 ಕೋಟಿ ಕುಟುಂಬಗಳಿಗೆ ಯೂನಿ ವರ್ಸಲ್ ಹೆಲ್ತ್ ಕವರೇಜ್ ಯೋಜನೆ ಜಾರಿಗೆ ತರುತ್ತಿದ್ದೇವೆ. ‘ಬಲಿಷ್ಠ ವ್ಯಕ್ತಿ ಕಾಲಿನ ಕೆಳಗೆ ಇರುವೆಯೊಂದು ಸಿಕ್ಕಿ ನಲುಗುತ್ತಿದೆ. ಆ ಇರುವೆಯ ರಕ್ಷಣೆ ದೃಷ್ಟಿಯಿಂದ ನಾನು ಇರುವೆಯ ಪ್ರತಿನಿಧಿಯಾಗಿ ವಿಧೇಯಕವನ್ನು ತಂದಿದ್ದೇನೆ.
ವೃತ್ತಿಪರ ವೈದ್ಯರು ಮತ್ತು ಉದ್ಯೋಗ ನೀಡಿದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಧ್ಯೆ ವ್ಯತ್ಯಾಸವಿದೆ. ಖಾಸಗಿ ವೈದ್ಯರು ಪ್ರತಿಭಟನೆ ನಡೆಸುವ ವೇಳೆ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಅಲ್ಲಿ ಏಕೆ ಪ್ರತ್ಯಕ್ಷರಾದರೋ ನನಗೆ ಗೊತ್ತಿಲ್ಲ. ಇದರ ಹಿಂದೆ ಯಾವ ವರ್ಗದ ಹಿತವಿದೆಯೋ’
‘ವಿಧೇಯಕ ಜಾರಿಗೆ ಮುಂದಾಗಿದ್ದರಿಂದ ನನ್ನ ವಿರುದ್ಧ ಹಲವರು ಸಂದರ್ಶನ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಿರುದು ನೀಡಿ ನನಗೆ ಖುಷಿಯಾಗುವಷ್ಟು ಜರಿದಿದ್ದಾರೆ. ಸಚಿವ ಸ್ಥಾನ, ಕೆಲ ಜವಾಬ್ದಾರಿ ಒಪ್ಪಿಕೊಂಡಾಗ ಇದೆಲ್ಲಾ ಸಹಜ’
ಕೆ.ಆರ್.ರಮೇಶ್ ಕುಮಾರ್