ಫಿಲಿಪ್ಪೀನ್ಸ್: ಶಾಲೆಗೆ ನುಗ್ಗಿದ ಉಗ್ರರು, ಹಲವರ ಒತ್ತೆಸೆರೆ

Update: 2017-06-21 17:26 GMT

ಮರಾವಿ (ಫಿಲಿಪ್ಪೀನ್ಸ್), ಜೂ. 21: ದಕ್ಷಿಣ ಫಿಲಿಪ್ಪೀನ್ಸ್‌ನ ಹಳ್ಳಿಯೊಂದರಲ್ಲಿ ಭಯೋತ್ಪಾದಕರು ಬುಧವಾರ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿ ಮಕ್ಕಳನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ನೂರಾರು ಬಂದೂಕುಧಾರಿ ಉಗ್ರರು ಮುಂಜಾನೆ ಸೇನಾ ಹೊರಠಾಣೆಯೊಂದರ ಮೇಳೆ ದಾಳಿ ನಡೆಸಿದರು. ಬಳಿಕ ಅವರ ಪೈಕಿ ಹೆಚ್ಚಿನವರು ಅಲ್ಲಿಂದ ವಾಪಸಾದರು ಹಾಗೂ ಸುಮಾರು 30 ಭಯೋತ್ಪಾದಕರು ಶಾಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಾಗರಿಕರನ್ನು ಮಾನವ ಗುರಾಣಿಯನ್ನಾಗಿ ಬಳಸಿದರು ಎಂದು ಸೇನೆ ತಿಳಿಸಿದೆ.

 ‘‘ಈಗಿನ ಮಟ್ಟಿಗೆ ಅವರು ಶಾಲೆಯಲ್ಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿರಿಸಿದ್ದಾರೆ. ಉಗ್ರರು ಒತ್ತೆಯಾಳುಗಳನ್ನು ಮಾನವ ಗುರಾಣಿಗಳನ್ನಾಗಿ ಬಳಸುತ್ತಿದ್ದಾರೆ’’ ಎಂದು ಕ್ಯಾಪ್ಟನ್ ಅರ್ವಿನ್ ಎನ್ಸಿನಸ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಫೋನ್ ಮೂಲಕ ತಿಳಿಸಿದರು.

ಭಯೋತ್ಪಾದಕರು ಶಾಲೆಯ ಸುತ್ತ ಬಾಂಬ್‌ಗಳನ್ನು ನೆಟ್ಟಿದ್ದಾರೆ ಎಂದರು.

ಭಯೋತ್ಪಾದಕರು ಎಷ್ಟು ಮಂದಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಹಾಗೂ ಅವರಲ್ಲಿ ಮಕ್ಕಳು ಇರುವರೇ ಎನ್ನುವುದು ತಿಳಿದುಬಂದಿಲ್ಲ ಎಂದು ಸೇನಾಧಿಕಾರಿ ತಿಳಿಸಿದರು.

ಈ ಸ್ಥಳವು ಮರಾವಿ ನಗರದಿಂದ ಸುಮಾರು 160 ಕಿ.ಮೀ. ದೂರದಲ್ಲಿದೆ. ಮರಾವಿ ನಗರದಲ್ಲಿ ಐಸಿಸ್ ಉಗ್ರರು ಮತ್ತು ಸೇನೆಯ ನಡುವೆ ಒಂದು ತಿಂಗಳಿನಿಂದ ಭೀಕರ ಕಾಳಗ ನಡೆಯುತ್ತಿದೆ. ಅಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News