ಐತಿಹಾಸಿಕ ಅಲ್-ನೂರಿ ಮಸೀದಿಯನ್ನು ಸ್ಫೋಟಿಸಿದ ಐಸಿಸ್ ಉಗ್ರರು

Update: 2017-06-22 06:42 GMT

ಮೋಸುಲ್, ಜೂ.22: ಇರಾಕ್ ದೇಶದ ಮೋಸುಲ್ ನಗರದಲ್ಲಿರುವ ಐತಿಹಾಸಿಕ ಅಲ್-ನೂರಿ ಮಸೀದಿ ಹಾಗೂ ಅದರ ಪಕ್ಕದಲ್ಲಿರುವ ಲೀನಿಂಗ್ ಮಿನಾರೆಟ್ ಅನ್ನು ಐಸಿಸ್ ಉಗ್ರರು ಸ್ಫೋಟಗೊಳಿಸಿ ಧ್ವಂಸಗೊಳಿಸಿದ್ದಾರೆ. ಇದೇ ಮಸೀದಿಯಲ್ಲಿ ಪ್ರಥಮವಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ಐಸಿಸ್ ನಾಯಕ ಅಬು ಬಕರ್-ಅಲ್ ಬಾಗ್ದಾದಿ 2014ರಲ್ಲಿ ತನ್ನನ್ನು ಖಲೀಫ್ ಎಂದು  ಘೋಷಿಸಿಕೊಂಡಿದ್ದ.

ಈ ಮಸೀದಿಯ ಧ್ವಂಸಕ್ಕೆ  ಅಮೆರಿಕಾ ದಾಳಿ ಕಾರಣವೆಂದು ಉಗ್ರ ಸಂಘಟನೆ ತನ್ನ ಅಮಖ್ ಪ್ರಚಾರ ಏಜೆನ್ಸಿ ಮುಖಾಂತರ ಹೇಳಿಕೊಂಡರೂ ಅಮೆರಿಕಾ ನೇತೃತ್ವದ ಮೈತ್ರಿ ಪಡೆಗಳು ಈ ದಾಳಿಯನ್ನು ಖಂಡಿಸಿ ಅದು ಮೋಸುಲ್ ಹಾಗೂ ಇಡೀ ಇರಾಕ್ ಜನತೆಯ ವಿರುದ್ಧ ನಡೆಸಿದ ಅಪರಾಧ ಎಂದು ಹೇಳಿಕೊಂಡಿದೆ.

ಈ ಮಸೀದಿಯ ಧ್ವಂಸಗೊಳಿಸುವ ಮೂಲಕ ಉಗ್ರರು ಮೋಸುಲ್ ವಶಪಡಿಸಿಕೊಳ್ಳಲು ಎಂಟು ತಿಂಗಳಿನಿಮದ ನಡೆಸುತ್ತಿರುವ ಹೋರಾಟದಲ್ಲಿ  ಸೋಲು ಒಪ್ಪಿಕೊಂಡಂತೆ ಎಂದು ಇರಾಕ್ ಪ್ರಧಾನಿ ಹೈದರ್-ಅಲ್-ಅಬಾದಿ ಹೇಳಿದ್ದಾರೆ. ಮೋಸುಲ್ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಹಾಗೂ ಕಮಾಂಡರ್ ಆಗಿರುವ ಲೆಪ್ಟಿನೆಂಟ್ ಜನರಲ್ ಅಬ್ದುಲಾಮಿರ್ ಯಾರಲ್ಲಾಹ್ ಅವರು ಹೇಳುವಂತೆ ಅವರ ಪಡೆಗಳು ನಗರದೊಳಗೆ ಸಾಗಿ ನೂರಿ ಮಸೀದಿಗಿಂತ ಕೇವಲ 50 ಮೀಟರ್ ದೂರ ಇರುವಾಗ ಇಸ್ಲಾಮಿಕ್ ಸ್ಟೇಟ್ ಈ ಐತಿಹಾಸಿಕ  ಮಸೀದಿಯನ್ನು ಸ್ಫೋಟಿಸಿದೆ.

ಈ ಮಸೀದಿ ಇರಾಕ್ ದೇಶದ ಐತಿಹಾಸಿಕ ಪುರಾತನ ಸ್ಥಳಗಳಲ್ಲೊಂದಾಗಿತ್ತು. ಅಲ್-ಹದ್ಬ (ಗೂನು ಬೆನ್ನು) ಎಂಬ ಹೆಸರಿನ ಈ ಪ್ರಾಚೀನ ಮಿನಾರೆಟ್ ಅನ್ನು 1172ರಲ್ಲಿ ನಿರ್ಮಿಸಲಾಗಿತ್ತು ಹಾಗೂ ಅದು ಮೋಸುಲ್ ನಗರದ ಪ್ರಮುಖ ಆಕರ್ಷಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News