ಕಪೋಲ ಕಲ್ಪಿತ ಫತ್ವಾಗಳು,ಸರಣಿ ಸುಳ್ಳುಸುದ್ದಿಗಳು.....

Update: 2017-06-22 10:58 GMT

ಪತ್ನಿ ತನ್ನ 12ರ ಹರೆಯದ ಸೋದರ ಸಂಬಂಧಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಭಾವಿಸಿ ಆಕೆಯ ಮರ್ಮಾಂಗಕ್ಕೆ ‘ಗಮ್‌ಟೇಪ್’ ಅಂಟಿಸಿ ಭದ್ರ ಪಡಿಸುವಷ್ಟು ಸಂಶಯ ಸ್ವಭಾವ ಒಬ್ಬ ವ್ಯಕ್ತಿಯಲ್ಲಿ ಇರಬಹುದೆಂದು ಕಲ್ಪಿಸಲು ನಿಮಗೆ ಸಾಧ್ಯವೇ?
ಶಂಕೆಯಿಲ್ಲ....ಈ ಜಗತ್ತೇ ಒಂದು ವಿಚಿತ್ರ ತಾಣ ಮತ್ತು ಇಲ್ಲಿ ಏನು ಬೇಕಾದರೂ ನಡೆಯಬಹುದು. ರಾಬಟ್ ಬ್ರೌನಿಂಗ್‌ನ ಪ್ರಸಿದ್ಧ ಕವಿತೆ ‘ಪಾರ್ಫಿರಿಯಾಸ್ ಲವರ್’ನಲ್ಲಿ ಪ್ರಿಯತಮ ಸುಂದರಿ ಪಾರ್ಫಿರಿಯಾಳನ್ನು ‘ಶಾಶ್ವತವಾಗಿ ತನ್ನವಳಾಗಿಸಿಕೊಳ್ಳಲು’ ಕೊಲ್ಲುತ್ತಾನೆ. ‘ಆಕೆಗೆ ಏನೂ ನೋವಾಗಲಿಲ್ಲ ಎನ್ನುವುದು ನನಗೆ ಖಚಿತವಿದೆ ’ಎನ್ನುತ್ತಾನೆ ಮತ್ತು ಬಳಿಕ ಪಾರ್ಫಿರಿಯಾಳ ಶವವನ್ನು ಮುದ್ದಾಡುತ್ತಾನೆ.

ಈಗ ಕತರ್‌ನ ಈ ‘ಗಮ್‌ಟೇಪ್’ ಪತಿಯ ವಿಷಯಕ್ಕೆ ಬರೋಣ. ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿಯಾದರೂ ಇಂತಹ ಸುದ್ದಿಗಳ ಬಗ್ಗೆ ಸಂಶಯ ತಳೆಯುತ್ತಾನೆ ಮತ್ತು ಅದನ್ನು ನಂಬುವ ಮುನ್ನ ಆ ಸುದ್ದಿಯ ಮೂಲದ ತನಿಖೆಗಿಳಿಯುತ್ತಾನೆ.
  ಆದರೆ ಮುಸ್ಲಿಮರು ಅಥವಾ ಅರಬ್ಬರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ವಿಚಿತ್ರ ಸುದ್ದಿಗಳ ಅಪ್‌ಡೇಟ್‌ಗಳು ಇಂತಹ ಯಾವುದೇ ಶಂಕೆಯನ್ನು ಮೂಡಿಸುವುದಿಲ್ಲ! ಎಷ್ಟೆಂದರೂ ಮುಸ್ಲಿಮರು ಕ್ರೂರರು, ಬರ್ಬರ ಸ್ವಭಾವದವರು ಮತ್ತು ಸ್ತ್ರೀದ್ವೇಷಿಗಳು, ಅರಬ್ ಮುಸ್ಲಿಮರಂತೂ ಅತ್ಯಂತ ಕೆಟ್ಟವರು....ಅವರು ಏನನ್ನೂ ಮಾಡಲು ಶಕ್ತರು ಎಂಬ ಪರಮ ಸುಳ್ಳನ್ನು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ.

‘ಗಮ್ ಟೇಪ್’ ಪತಿಯ ಕುರಿತು ನ್ಯೂಸ್ ಅಪ್‌ಡೇಟ್‌ನ್ನು ಯುವತಿಯೋರ್ವಳು (ಇತರ ಹಲವರು ಸಹ) ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಳು. ಕತರ್‌ನ ಆ ವ್ಯಕ್ತಿ ತನ್ನ ಪತ್ನಿ ಫೇಸ್‌ಬುಕ್‌ನಲ್ಲಿ 12ರ ಹರೆಯದ ಸೋದರ ಸಂಬಂಧಿಯ ಚಿತ್ರವನ್ನು ಲೈಕ್ ಮಾಡಿದಾಗಿನಿಂದ ತಾನು ವ್ಯವಹಾರ ನಿಮಿತ್ತ ಪ್ರವಾಸಕ್ಕೆ ತೆರಳುವಾಗೆಲ್ಲ ಈ ‘ಗಮ್‌ಟೇಪ್’ ಕೆಲಸಕ್ಕಿಳಿಯುತ್ತಾನೆ ಎಂಬ ಸುದ್ದಿಯ ಮೂಲ ‘‘ಲೈಫ್ ಇನ್ ಸೌದಿ ಅರೇಬಿಯ’ ಎಂಬ ಹೆಚ್ಚು ಪರಿಚಿತವಲ್ಲದ ಬ್ಲಾಗ್ ಆಗಿತ್ತು.

15 ದಿನಗಳ ಹಿಂದೆಯೇ ಇದು ‘ವರ್ಲ್ಡ್ ನ್ಯೂಸ್ ಡೇಲಿ ರಿಪೋರ್ಟ್’ ಎಂಬ ಸುಳ್ಳು ಸುದ್ದಿಗಳ ತಾಣದಲ್ಲಿ ಕಾಣಿಸಿಕೊಂಡಿತ್ತು. ಇತರ ಹಲವಾರು ಜಾಲತಾಣಗಳೊಂದಿಗೆ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಈ ಸುಳ್ಳು ಸುದ್ದಿಯನ್ನು ಬಯಲುಗೊಳಿಸಿತ್ತು. ಆದರೂ ಈ ಯುವತಿ ಸುದ್ದಿಯನ್ನು ತನ್ನ ಫೇಸ್‌ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದಳು. ಸುದ್ದಿ ನಿಜವೋ ಸುಳ್ಳೋ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಗೋಜಿಗೂ ಆಕೆ ಹೋಗಿರಲಿಲ್ಲ.
ಇದೇ ‘ವರ್ಲ್ಡ್ ನ್ಯೂಸ್ ಡೇಲಿ ರಿಪೋರ್ಟ್’ ಸೌದಿಯ ರಾಜಕುಮಾರ ಮಜೀದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಅವರು ಕ್ಯಾಸಿನೋದಲ್ಲಿ ಆರು ಗಂಟೆಗಳ ಜೂಜಾಟದಲ್ಲಿ ಪಣವಾಗಿ 350 ಮಿಲಿಯನ್ ಡಾಲರ್‌ಗಳ ಜೊತೆಗೆ ತನ್ನ ಐವರು ಪತ್ನಿಯರನ್ನೂ ಕಳೆದುಕೊಂಡಿದ್ದಾರೆ ಎಂದು ಕೆಲವು ವಾರಗಳ ಹಿಂದೆ ಬರೆದಿತ್ತು.

ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ಈ ಸುಳ್ಳುಸುದ್ದಿಯನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿದಾಗ ಅದು ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿತ್ತು. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೂ ಯಾವುದೇ ಶಂಕೆಯನ್ನು ವ್ಯಕ್ತಪಡಿಸದೆ ಮೇ 30ರಂದು ಟ್ವಿಟರ್ ನಲ್ಲಿ ಈ ಸುದ್ದಿಯನ್ನು ಹಾಕಿದ್ದರು. ಅಷ್ಟೇ ಏಕೆ, ಕೋಲ್ಕತಾದ ಪ್ರಮುಖ ಉರ್ದು ದೈನಿಕ ‘ಅಖಬಾರ್ ಮಷ್ರಿಕ್’ ಕೂಡ ಜೂ.1ರ ತನ್ನ ಸಂಚಿಕೆಯಲ್ಲಿ ಸೌದಿ ರಾಜಕುಮಾರನ ಸುದ್ದಿಯನ್ನು ಜೂ.2ರಂದು ತನ್ನ ಪ್ರಮುಖ ಸುದ್ದಿಯನ್ನಾಗಿ ಮುಖಪುಟದಲ್ಲಿ ಪ್ರಕಟಿಸಿತ್ತು.

ಇದರ ಸಂಪಾದಕರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಕುತೂಹಲಕರವೆಂದರೆ ಇದೇ ಪತ್ರಿಕೆ ಕೇವಲ ಒಂದು ದಿನದ ಬಳಿಕ ಸೌದಿ ರಾಜಕುಮಾರನ ಕುರಿತ ಸುಳ್ಳು ಸುದ್ದಿಯನ್ನು ಹೇಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವೃತ್ತಪತ್ರಿಕೆಗಳಲ್ಲಿ ಹರಡಲಾಗುತ್ತಿದೆ ಎಂಬ ಕುರಿತು ಪುಟ್ಟ ತುಣುಕೊಂದನ್ನು ಪ್ರಕಟಿಸಿತ್ತು. ಆದರೆ ಈ ಸುಳ್ಳುಸುದ್ದಿಗೆ ತಾನೂ ಉತ್ತೇಜನ ನೀಡಿದ್ದೆ ಎನ್ನುವುದನ್ನು ಮತ್ತು ಅದಕ್ಕಾಗಿ ಕ್ಷಮಾಯಾಚನೆಯನ್ನು ಅದು ಮರೆತೇ ಬಿಟ್ಟಿತ್ತು.
 ದಿನಗಳ ಬಳಿಕ ಝೀ ನ್ಯೂಸ್ ಮತ್ತು ದೈನಿಕ್ ಜಾಗರಣ ಸೇರಿದಂತೆ ಕೆಲವು ಹಿಂದಿ ಪತ್ರಿಕೆಗಳು ಮತ್ತು ಪೋರ್ಟಲ್‌ಗಳೂ ಈ ‘ಸುದ್ದಿ’ಯನ್ನು ಪ್ರಕಟಿಸಿ, ಸೌದಿ ರಾಜಕುಮಾರನ ಘಟನೆಯಿಂದಾಗಿ ಸೌದಿ ಸರಕಾರ ಮುಜುಗರಕ್ಕೀಡಾಗಿದೆ ಎಂದು ಬರೆದು ಒಗ್ಗರಣೆ ಹಾಕಿದ್ದವು.

ಪುರುಷನೋರ್ವ ತೀವ್ರ ಹಸಿವೆಯಿಂದಿದ್ದಾಗ ಮತ್ತು ತಿನ್ನಲೂ ಏನೂ ಲಭಿಸದಿದ್ದಾಗ ತನ್ನ ಪತ್ನಿಯನ್ನೇ ತಿನ್ನಬಹುದು ಎಂದು ಸೌದಿಯ ಗ್ರಾಂಡ್ ಮುಫ್ತಿಯವರು ಫತ್ವಾ ಹೊರಡಿಸಿದ್ದಾರೆಂಬ ಸುಳ್ಳು ಸುದ್ದಿ ಮುಖ್ಯವಾಹಿನಿ ಜಾಗತಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪಾಶ್ಚಾತ್ಯ ದೇಶಗಳು ಮತ್ತು ಭಾರತದ ಹಲವಾರು ಮಾಧ್ಯಮಗಳು ಇದನ್ನು ವರದಿ ಮಾಡಿ ಸೌದಿ ಅರೇಬಿಯಾದಲ್ಲಿ ‘ಮಹಿಳೆಯರ ಹೀನಾಯ ಸ್ಥಿತಿಯನ್ನು’ ಬಿಂಬಿಸಿದ್ದವು. ಕೊನೆಗೆ ಖುದ್ದು ಮುಫ್ತಿಯವರೇ ಇಂತಹ ಫತ್ವಾವನ್ನು ತಾನು ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಮುಸ್ಲಿಮರು ಅಥವಾ ಅರಬ್ಬರ ಬಗ್ಗೆ ಎಂತಹ ಮನೋಸ್ಥಿತಿಯನ್ನು ಸೃಷ್ಟಿಸಲಾಗಿದೆ ಯೆಂದರೆ ಇಂತಹ ಸುದ್ದಿಗಳ ಮೂಲಗಳನ್ನು ಖಚಿತಪಡಿಸಿಕೊಳ್ಳುವ ಗೋಜಿಗೆ ನಾವು ಹೋಗುವುದೇ ಇಲ್ಲ. ಮುಸ್ಲಿಮರ ವಿರುದ್ಧ ಪ್ರಕಟವಾಗಿದ್ದೆಲ್ಲವೂ ಪರಮ ಸತ್ಯ ಎಂದು ಢಾಳಾಗಿ ನಂಬಿಬಿಡುತ್ತೇವೆ. ಮುಸ್ಲಿಮೇತರಿಗಂತೂ ವೇಲ್,ಅರಬಿಕ್/ಉರ್ದು ಪಠ್ಯಪುಸ್ತಕ,ಉದ್ದ ಗಡ್ಡ ಅಥವಾ ಸ್ಕಲ್ ಕ್ಯಾಪ್....ಹೀಗೆ ಇಸ್ಲಾಂ ಅಥವಾ ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ಆದರೂ ಶಂಕೆಯನ್ನು ಉಂಟುಮಾಡುತ್ತದೆ.

 ಹಲವಾರು ಹಂತಗಳಲ್ಲಿ ಇಸ್ಲಾಮೊಫೋಬಿಯಾ ಬೀಡುಬಿಟ್ಟಿದೆ ಮತ್ತು ಅದು ಎಷ್ಟೊಂದು ಆಳವಾಗಿ ಪರಿಣಾಮ ಬೀರಿದೆಯೆಂದರೆ ವಿಶ್ವದಲ್ಲಿಂದು ಹಲವಾರು ಮುಸ್ಲಿಮರು ವಿನಾಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರತದಲ್ಲಿಯ ಮುಸ್ಲಿಮರ ಬಗ್ಗೆ ಹೇಳುವುದಾದರೆ ತಾಯ್ನೆಡಿಗೆ ಅವರ ನಿಷ್ಠೆಯ ಕುರಿತು ಅಪನಂಬಿಕೆ ಮತ್ತು ಶಂಕೆ ಸದಾಕಾಲ ಇಲ್ಲಿಯ ಬಹುಸಂಖ್ಯಾತರಲ್ಲಿದೆ ಮತ್ತು ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

ಹೀಗೆ ಭೀತಿವಾದ, ಫತ್ವಾ, ತಲಾಖ್ ಇವುಗಳಿಗೆ ಸಂಬಂಧಿಸಿದಂತೆ ಭಾರತೀಯ ಮಾಧ್ಯಮಗಳಲ್ಲಿ ಮುಸ್ಲಿಮರ ನಕಾರಾತ್ಮಕ ಚಿತ್ರಣ ಸಾಲದೆಂಬಂತೆ ಈಗ ವದಂತಿಗಳ ಕಾರ್ಖಾನೆಗಳ ಮೂಲಕ ‘ಸುದ್ದಿಗಳನ್ನು ’ಸೃಷ್ಟಿಸಲಾಗುತ್ತಿದೆ.
2013ರ ಮುಝಫರ್‌ನಗರ ದಂಗೆಗಳಿಂದ ಹಿಡಿದು ಹೆಚ್ಚುಕಡಿಮೆ ಇತ್ತೀಚಿನ ಪ್ರತಿಯೊಂದು ಕೋಮು ಉದ್ವಿಗ್ನ ಘಟನೆಯಲ್ಲಿ ಸುಳ್ಳುಮಾಹಿತಿಗಳು, ದ್ವೇಷಭಾಷಣ, ವದಂತಿಗಳು ಮತ್ತು ಸುಳ್ಳುಸುದ್ದಿಗಳನ್ನು ಹರಡುವಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್ ಗುಂಪುಗಳ ಪಾತ್ರಗಳು ತೀವ್ರ ಚರ್ಚೆಗೊಳಗಾಗಿವೆ.

 ಐಸಿಸಿ ಚಾಂಪಿಯನ್ಸ್ ಟೋಫಿಯಲ್ಲಿ ಭಾರತವು ತನ್ನ ಬದ್ಧವೈರಿ ಪಾಕಿಸ್ತಾನದ ಎದುರು ಸೋಲನ್ನಪ್ಪುತ್ತಿದ್ದಂತೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದ್ದವು. ಆ ಬಗ್ಗೆ ಯಾವುದೇ ಸಾಕ್ಷಾಧಾರವಿಲ್ಲದಿದ್ದರೂ ಕೆಲವೆಡೆ ಗುಂಪು ಘರ್ಷಣೆಗಳೂ ನಡೆದಿದ್ದವು.

‘ಅಮರ್ ಉಜಾಲಾ’ ಹಿಂದಿ ದೈನಿಕವುವ ಅಲಿಗಡ ಮುಸ್ಲಿಂ ವಿವಿಯ ಬಳಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಬರೆದಿತ್ತು ಮತ್ತು ಮರುದಿನ ಆ ವಿಜಯೋತ್ಸವದ ಚಿತ್ರಗಳನ್ನೂ ಪ್ರಕಟಿಸಿತ್ತು. ವಾಸ್ತವದಲ್ಲಿ ಆ ಚಿತ್ರಗಳು ಪಾಕಿಸ್ತಾನದಲ್ಲಿ ಅಲ್ಲಿಯ ಜನರು ಆಚರಿಸಿದ್ದ ವಿಜಯೋತ್ಸವದ ಚಿತ್ರಗಳಾಗಿದ್ದವು ಮತ್ತು ಅಲಿಗಡ ಮುಸ್ಲಿಂ ವಿವಿಯಲ್ಲಿ ಪಾಕ್ ವಿಜಯಕ್ಕಾಗಿ ಯಾವುದೇ ಸಂಭ್ರಮ ನಡೆದಿರಲಿಲ್ಲ!
ತನ್ಮಧ್ಯೆ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಹಿಂದು ವ್ಯಕ್ತಿಯೋರ್ವ ದೂರು ಕೊಟ್ಟ ಮಾತ್ರಕ್ಕೆ 15 ಮುಸ್ಲಿಮರ ವಿರುದ್ಧ ದೇಶದ್ರೋಹ ಆರೋಪವನ್ನು ಹೊರಿಸಲಾಗಿದೆ.

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಬಲಪಂಥೀಯ ಸಿದ್ಧಾಂತಗಳಿಗೆ ಅಂಟಿಕೊಂಡಿರುವ ಹಲವಾರು ಜಾಲತಾಣಗಳು ಹಿಂದುತ್ವ ಸಿದ್ಧಾಂತವನ್ನು ಹರಡುತ್ತ ಆಡಳಿತ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸುಳ್ಳು ಸುದ್ದಿಗಳ ಸೃಷ್ಟಿ ಹುಲುಸಾದ ದಂಧೆಯಾಗಿಬಿಟ್ಟಿದೆ. ಆದರೆ ಇದ್ದುದರಲ್ಲೇ ಸಮಾಧಾನದ ವಿಷಯವೆಂದರೆ ಇಂತಹ ಸುಳ್ಳುಸುದ್ದಿಗಳನ್ನು ಬಯಲಿಗೆಳೆಯುವ ಕೆಲವು ಜಾಲತಾಣಗಳು ಇವೆ.ಪ್ರತೀಕ್ ಸಿನ್ಹಾ ಅವರ ‘ಆಲ್ಟ್ ನ್ಯೂಸ್’ ಇತರ ಹಲವಾರು ಸುದ್ದಿತಾಣಗಳಲ್ಲಿಯ ಸುಳ್ಳುಸುದ್ದಿಗಳನ್ನು ಬಯಲುಗೊಳಿಸಿದೆ. ಚೆಕ್4ಸ್ಪಾಮ್.ಕಾಮ್,ಎಸ್‌ಎಂ ಹೋಕ್ಸ್ ಸ್ಲೇಯರ್ ಇತ್ಯಾದಿಗಳೂ ಹಲವಾರು ಸುಳ್ಳು ಸುದ್ದಿಗಳನ್ನು ಬಯಲುಗೊಳಿಸಿವೆ. ಕೆಲವು ಟಿವಿ ಚಾನೆಲ್‌ಗಳು ‘‘ವೈರಲ್ ವಿಡಿಯೋದ ಸತ್ಯ’ ದಂತಹ ಕಾರ್ಯಕ್ರಮಗಳನ್ನೂ ಆರಂಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News