ಶತ್ರುಗಳ ನಡುವೆ ಹೀಗೊಬ್ಬ ಅಜಾತಶತ್ರು

Update: 2017-06-23 04:58 GMT

ರಾಷ್ಟ್ರಪತಿ ಹುದ್ದೆಗಾಗಿ ಎನ್‌ಡಿಎ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಕ್ಷಣವೇ ಯುಪಿಎ ಅಭ್ಯರ್ಥಿ ಯಾರಾಗಿರಬಹುದು ಎನ್ನುವುದು ಊಹಿಸಬಹುದಾಗಿತ್ತು. ಯಾಕೆಂದರೆ, ದಲಿತ ಅಥವಾ ಮಹಿಳೆ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಒಬ್ಬ ಹಿರಿಯ ರಾಜಕೀಯ ಮುತ್ಸದ್ದಿ ಎನ್ನುವ ಕಾರಣಕ್ಕಾಗಿಯೂ ಮೀರಾಕುಮಾರ್‌ಗಿಂತ ಅತ್ಯುತ್ತಮವಾದ ಅಭ್ಯರ್ಥಿಯನ್ನು ಯುಪಿಎ ಊಹಿಸುವುದಕ್ಕೆ ಸಾಧ್ಯವಿಲ್ಲ. ಈ ಬಾರಿ ಬಿಜೆಪಿ ಪಕ್ಕಾ ಆರೆಸ್ಸೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ವಿರುದ್ಧವಾಗಿ ಗಾಂಧೀಜಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯನ್ನು ಕಣಕ್ಕಿಳಿಸುವ ತಂತ್ರವನ್ನೂ ಯುಪಿಎ ರೂಪಿಸಿಕೊಂಡಿತ್ತು.

ಕೋವಿಂದ್ ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ತೃತೀಯ ಶಕ್ತಿಗಳು ಒಂದೊಂದಾಗಿ ತಮ್ಮ ರಾಗ ಬದಲಿಸ ತೊಡಗಿದ ಹಿನ್ನೆಲೆಯಲ್ಲಿ ಯುಪಿಎ ಘೋಷಿಸುವ ಅಭ್ಯರ್ಥಿಯ ಕುರಿತಂತೆ ವಿಶೇಷ ಭರವಸೆಯೇನೂ ಇದ್ದಿರಲಿಲ್ಲ. ಸೋಲುವುದಕ್ಕಾಗಿಯೇ ಚುನಾವಣೆಯ ಕಣಕ್ಕಿಳಿಯಬೇಕಾದ ಪರಿಸ್ಥಿತಿಗೆ ಯಾರು ತನ್ನನ್ನು ಒಡ್ಡಿಕೊಳ್ಳುತ್ತಾರೆ? ಆದರೆ ಕೋವಿಂದ್‌ರಂತಹ ದುರ್ಬಲ ಮುತ್ಸದ್ದಿಯ ಮುಂದೆ ಅಭ್ಯರ್ಥಿಯನ್ನೇ ಇಳಿಸದಿದ್ದರೆ ಅದು ವಿರೋಧ ಪಕ್ಷಗಳ ಮಾತ್ರವಲ್ಲ ಪ್ರಜಾಸತ್ತೆಯ ಬಹುದೊಡ್ಡ ಸೋಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರನ್ನು ಇಳಿಸುವ ಕುರಿತಂತೆಯೂ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಜಕೀಯ ವಲಯದಲ್ಲಿ ಅಂತಹ ವರ್ಚಸ್ಸು ಪ್ರಕಾಶ್ ಅಂಬೇಡ್ಕರ್ ಅವರಿಗೆ ಇದ್ದಿರಲಿಲ್ಲ. ಆದರೆ ಇದೀಗ ಸೋಲು-ಗೆಲುವು ಎಲ್ಲವನ್ನೂ ಪಕ್ಕಕ್ಕಿಟ್ಟು ಕೋವಿಂದ್ ವಿರುದ್ಧ ಮೀರಾಕುಮಾರ್ ಸ್ಪರ್ಧೆಗೆ ಇಳಿಯುವ ಧೈರ್ಯ ತೋರಿಸಿದ್ದಾರೆ. ಆ ಮೂಲಕ ಅವರು ಪ್ರಜಾಸತ್ತೆಯನ್ನು ಗೆಲ್ಲಿಸುವ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ.

ಕೋವಿಂದ್ ದಲಿತ ಸಮುದಾಯದಿಂದ ಬಂದವರು ಎಂದು ಬಿಜೆಪಿ ಹೇಳುತ್ತಿದೆ. ಅವರು ದಲಿತ ಸಮುದಾಯದಿಂದ ಬಂದವರು ಎನ್ನುವುದಕ್ಕಿಂತ ದಲಿತ ಸಮುದಾಯದ ಏಳಿಗೆಗೆ ಎಷ್ಟರಮಟ್ಟಿಗೆ ಪಕ್ಷದೊಳಗಾದರೂ ಧ್ವನಿಯೆತ್ತಿದ್ದಾರೆ ಎನ್ನುವುದು ಬಹುಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಕೋವಿಂದ್ ಬರೇ ಆರೆಸ್ಸೆಸ್‌ನ ಆಯ್ಕೆ ಎನ್ನುವುದಕ್ಕಿಂತ ಮೋದಿಯ ಆಯ್ಕೆ ಎನ್ನುವುದೇ ವಾಸಿ. ಸಾಧಾರಣವಾಗಿ, ರಾಷ್ಟ್ರಪತಿಯಾಗುವವರಲ್ಲಿ ಒಂದಿಷ್ಟು ಸ್ವಂತಿಕೆಯಿದ್ದರೂ ಅದು ಒಂದಲ್ಲ ಒಂದು ದಿನ ಸರಕಾರಕ್ಕೆ ಮುಳುವಾಗಬಹುದು. ರಾಜೀವ್‌ಗಾಂಧಿಗೆ ಜೈಲ್ ಸಿಂಗ್ ತೊಡಕಾದಂತೆ, ವಾಜಪೇಯಿಗೆ ಕೆ. ಆರ್. ನಾರಾಯಣನ್ ಅಡ್ಡಿಯಾದಂತೆ. ಸದ್ಯದ ದಿನಗಳಲ್ಲಿ ಪ್ರಜಾಸತ್ತೆಯನ್ನು ಕಾರ್ಪೊರೇಟ್ ಬಳಗ ಹೈಜಾಕ್ ಮಾಡಿದೆ. ಅವರ ಮೂಗಿನ ನೇರಕ್ಕೆ ಒಂದೊಂದಾಗಿ ಆರ್ಥಿಕ ನೀತಿಗಳು ಅನುಷ್ಠಾನಗೊಳ್ಳುತ್ತಿವೆ.

ಇಂತಹ ಸಂದರ್ಭದಲ್ಲಿ ಸ್ವಂತಿಕೆಯಿರುವ ಒಬ್ಬ ಮುತ್ಸದ್ದಿ ನಾಯಕ ರಾಷ್ಟ್ರಪತಿಯಾದಲ್ಲಿ ಒಂದಲ್ಲ ಒಂದು ದಿನ ಅದು ಸರಕಾರದ ಕೊರಳಿಗೆ ಉರುಳಾಗಬಹುದು. ಈ ನಿಟ್ಟಿನಲ್ಲಿ ದಲಿತ ಎಂಬ ಗುರಾಣಿಯನ್ನು ಮುಂದಿಟ್ಟುಕೊಂಡು ಓರ್ವ ಮುತ್ಸದ್ದಿಯಲ್ಲದ, ಸುದ್ದಿಯಲ್ಲಿಲ್ಲದ, ಸ್ವಂತಿಕೆಯಿಲ್ಲದ ನಾಯಕನನ್ನು ಮೋದಿ ಬಳಗ ಆರಿಸಿದೆ. ಆರೆಸ್ಸೆಸ್ ತನ್ನ ಕಾರ್ಯಯೋಜನೆಯನ್ನು ರೂಪಿಸುವುದಕ್ಕೂ ಈ ಆಯ್ಕೆ ಪೂರಕವಾಗಿದೆ. ಆರೆಸ್ಸೆಸ್ ತನ್ನೆಲ್ಲ ಸಂಚುಗಳನ್ನೂ ಈಡೇರಿಸಿಕೊಂಡಿರುವುದು ದಲಿತ ಮತ್ತು ಹಿಂದುಳಿದವರ್ಗಗಳ ನಾಯಕರ ಮರೆಯಲ್ಲಿ ನಿಂತು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಕೋವಿಂದ್ ಆಯ್ಕೆಯ ಮೂಲಕ ಮೋದಿಯವರು ಪಕ್ಷದೊಳಗಿರುವ ಹಿರಿ ತಲೆಗಳ ಬಾಯಿ ಮುಚ್ಚಿಸಿದ್ದಾರೆ.

ಕೋವಿಂದ್ ಹಿರಿಯ ನಾಯಕ ರಾಜ್‌ನಾಥ್ ಸಿಂಗ್ ಅವರ ಆಪ್ತ ಎನ್ನುವ ನೆಲೆಯಲ್ಲೂ ಅಡ್ವಾಣಿ, ಜೋಷಿ ಮೊದಲಾದವರೆಲ್ಲ ಬಾಯಿ ತೆರೆಯುವಂತೆಯೇ ಇಲ್ಲ. ಹಾಗೊಮ್ಮೆ ಬಾಯಿ ತೆರೆದರೆ, ದಲಿತ ಅಭ್ಯರ್ಥಿಯನ್ನು ವಿರೋಧಿಸಿದರೆಂಬ ಕಳಂಕವನ್ನೂ ಅವರು ಹೊತ್ತುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ, ಹಿರಿಯ ತಲೆಗಳಾದ ಅಡ್ವಾಣಿ, ಜೋಷಿ, ಸುಶ್ಮಾ ಸ್ವರಾಜ್ ಮೊದಲಾದವರು ಎಲ್ಲವನ್ನೂ ನುಂಗಿಕೊಂಡು ಬಿಜೆಪಿಯೊಳಗೆ ತಮ್ಮ ಕೊನೆಯ ದಿನಗಳನ್ನು ಕಳೆಯಬೇಕಾಗಿದೆ. ಹಾಗೆ ನೋಡಿದರೆ, ಸದ್ಯದ ಸ್ಥಿತಿಯಲ್ಲಿ ಅಡ್ವಾಣಿಯವರು ರಾಷ್ಟ್ರಪತಿಯಾಗಿದ್ದರೆ, ಒಂದಿಷ್ಟಾದರೂ ಸ್ಪಷ್ಟ, ನೇರ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದರೋ ಏನೋ? ಈಗಾಗಲೇ ರಾಜಕೀಯ ಏಳು ಬೀಳುಗಳಲ್ಲಿ ಸಾಕಷ್ಟು ಅನುಭವಗಳನ್ನು ತನ್ನದಾಗಿಸಿಕೊಂಡಿರುವ, ದೇಶ ತುರ್ತುಪರಿಸ್ಥಿತಿಯತ್ತ ಸಾಗುತ್ತಿದೆ ಎಂದು ಪಕ್ಷದೊಳಗಿದ್ದುಕೊಂಡೇ ಬಹಿರಂಗವಾಗಿ ಹೇಳಿದ ಅಡ್ವಾಣಿ, ಕೋವಿಂದ್ ಅವರಿಗಿಂತ ಹೆಚ್ಚು ಒಳ್ಳೆಯ ಅಭ್ಯರ್ಥಿಯಾಗಿ ಕಾಣುತ್ತಾರೆ.

ಯಾವ ಅಧಿಕಾರಕ್ಕಾಗಿ ಬಾಬರಿ ಮಸೀದಿಯನ್ನು ಮುಂದಿಟ್ಟುಕೊಂಡು ಅಡ್ವಾಣಿ ದೇಶಾದ್ಯಂತ ರಕ್ತದ ಹೊಳೆ ಹರಿಸಿದರೋ, ಅದೇ ಬಾಬರಿ ಮಸೀದಿ ಅವರನ್ನು ರಾಷ್ಟ್ರಪತಿಯಾಗದಂತೆ ತಡೆದಿರುವುದು ಒಂದು ವಿಪರ್ಯಾಸವೇ ಸರಿ. ಕೋವಿಂದ್‌ಗೆ ಹೋಲಿಸಿದರೆ ಎಲ್ಲ ರೀತಿಯಲ್ಲೂ ಮೀರಾಕುಮಾರ್ ಉತ್ತಮ ಅಭ್ಯರ್ಥಿ. ದಲಿತ ಸಮುದಾಯದಿಂದ ಬಂದವರೂ ಹೌದು. ಮಹಿಳೆಯೂ ಹೌದು. ದಿವಂಗತ ಬಾಬು ಜಗಜೀವನ್ ರಾಮ್ ಅವರ ಪುತ್ರಿಯಾಗಿರುವ ಮೀರಾಕುಮಾರ್ ರಾಜಕೀಯದಲ್ಲಿ ಅಪಾರ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ ‘ಅಜಾತ ಶತ್ರು’ ಎಂಬ ಬಿರುದಿಗೆ ಪಾತ್ರರಾದವರು. ಆ ಬಿರುದು ಅವರನ್ನು ರಾಷ್ಟ್ರಪತಿ ಸ್ಥಾನದತ್ತ ಮಾತ್ರ ಕೊಂಡೊಯ್ಯಲಾರದು. ಐದು ಬಾರಿ ಲೋಕಸಭೆಗೆ ಆಯ್ಕೆಯಾದ ಮೀರಾ ಕುಮಾರ್, ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಚಿವೆಯಾಗಿಯೂ ಯಶಸ್ವಿಯಾದವರು.

ಭಾರತದ ಪ್ರಪ್ರಥಮ ಮಹಿಳಾ ಸ್ಪೀಕರ್‌ಆಗಿ ಅದಕ್ಕೆ ಇನ್ನಷ್ಟು ಘನತೆಯನ್ನು ತಂದುಕೊಟ್ಟವರು. ಅದರ ಸಮನ್ವಯತೆಯನ್ನು ಕಾಪಾಡಿ, ವಿರೋಧ ಪಕ್ಷಗಳಿಂದಲೂ ಸೈ ಅನಿಸಿಕೊಂಡವರು. ರಾಜಕೀಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಳ್ಳುವ ಮುನ್ನ, ವಿವಿಧ ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿ ಅನುಭವಿಗಳಾದವರು. ಸದ್ಯದ ರಾಜಕೀಯ ಸ್ಥಿತಿಯಲ್ಲಿ ಮೀರಾಕುಮಾರ್ ರಾಷ್ಟ್ರಪತಿಯಾಗುವುದರಿಂದ ತೃತೀಯ ಶಕ್ತಿಗೆ ಆನೆಬಲ ಬಂದಂತಾಗುತ್ತದೆ. ಸಣ್ಣ ಪುಟ್ಟ ಲಾಭಕ್ಕಾಗಿ ರಾಷ್ಟ್ರಪತಿಯೆನ್ನುವ ಸ್ಥಾನವನ್ನೇ ಬಿಜೆಪಿಗೆ ದಾನಮಾಡಿ ಬಿಟ್ಟರೆ, ಮುಂದಿನ ದಿನಗಳಲ್ಲಿ ಈ ಪ್ರಾದೇಶಿಕ ಪಕ್ಷಗಳು ಬಹಳಷ್ಟು ಕಳೆದುಕೊಳ್ಳುವುದಕ್ಕಿವೆ.

ಈ ಹಿನ್ನೆಲೆಯಲ್ಲಿ ಕನಿಷ್ಠ ನಿತೀಶ್ ಕುಮಾರ್‌ರಂತಹ ಸಜ್ಜನ ರಾಜಕಾರಣಿಗಳಾದರೂ ಮೀರಾಕುಮಾರ್‌ರನ್ನು ಬೆಂಬಲಿಸುವ ಅಗತ್ಯವಿದೆ. ಈ ಚುನಾವಣೆಯಲ್ಲಿ ಮೀರಾಕುಮಾರ್ ಅವರ ಸೋಲು ಖಚಿತವೇ ಆಗಿದ್ದರೂ, ಕೊನೆಯವರೆಗೂ ಅವರು ಸೋಲದಂತೆ ಪ್ರಯತ್ನಿಸುವ ಹೊಣೆಗಾರಿಕೆ ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಎಲ್ಲ ಜಾತ್ಯತೀತ ಪಕ್ಷಗಳದ್ದಾಗಿದೆ. ಮೀರಾಕುಮಾರ್ ಸೋಲು ಪ್ರಜಾಸತ್ತೆಯ ಸೋಲು ಮಾತ್ರವಲ್ಲ, ನಿಜವಾದ ಅರ್ಥದಲ್ಲಿ ಒಬ್ಬ ದಲಿತ ನಾಯಕಿಯ ಸೋಲು ಕೂಡ ಆಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಚುನಾವಣೆ ಈ ದೇಶದ ಜಾತ್ಯತೀತ ಶಕ್ತಿಗಳನ್ನು ಮತ್ತೊಮ್ಮೆ ಉಜ್ಜಿ ನೋಡಲಿದೆ. ಮತ್ತು ಅಸಲಿ, ನಕಲಿಗಳ ನಡುವಿನ ಬಣ್ಣ ಬಯಲಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News