ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ತನಕ ಕಾರು, ಎಸಿ ಖರೀದಿಸಬೇಡಿ

Update: 2017-06-23 05:54 GMT

ನೈನಿತಾಲ್, ಜೂ.23: ತನ್ನ ಆದೇಶದಂತೆ ಉತ್ತರಾಖಂಡದ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸದ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಈ ಸೌಲಭ್ಯಗಳನ್ನು ಒದಗಿಸುವ ತನಕ ಯಾವುದೇ ಐಷಾರಾಮಿ ವಸ್ತುಗಳಾದ ಕಾರುಗಳು, ಹವಾನಿಯಂತ್ರಣ ವ್ಯವಸ್ಥೆಗಳು ಹಾಗೂ ಪೀಠೋಪಕರಣಗಳನ್ನು ಖರೀದಿಸದಂತೆ ಮುಂದಿನ ಆದೇಶದ ತನಕ ನಿರ್ಬಂಧ ವಿಧಿಸಿದೆ.

ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನೂ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ತನಕ ಅಧಿಕಾರಿಗಳ ವೇತನ ತಡೆಹಿಡಿಯಬಾರದೇಕೆ ಎಂದು ಪ್ರಶ್ನಿಸಿದೆ.

‘‘ಅಧಿಕಾರಿಗಳೆಲ್ಲರೂ ಕುಷನ್ ಕುರ್ಚಿಗಳಲ್ಲಿ ಕುಳಿತುಕೊಳ್ಳುವುದಿಲ್ಲವೇ ? ವಿದ್ಯಾರ್ಥಿಗಳೇಕೆ ಕುಳಿತುಕೊಳ್ಳಬಾರದು?’’ ಎಂದೂ ನ್ಯಾಯಾಲಯ ಪ್ರಶ್ನಿಸಿದೆ.

ತನ್ನ ನವೆಂಬರ್ 19, 2016ರ ಆದೇಶದಲ್ಲಿ ನ್ಯಾಯಾಲಯವು ಶಾಲೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ಬೆಂಚು, ಡೆಸ್ಕು, ಬ್ಲ್ಯಾಕ್ ಬೋರ್ಡ್, ಕಂಪ್ಯೂಟರ್, ಗ್ರಂಥಾಲಯ ಮತ್ತು ಶೌಚಾಲಯಗಳನ್ನು ಒದಗಿಸುವಂತೆ ರಾಜ್ಯ ಸರಕಾರಕ್ಕೆ ಹೇಳಿತ್ತು. ಆದರೂ ಈ ನಿಟ್ಟಿನಲ್ಲಿ ನಿಧಿ ಕಾಯ್ದಿರಿಸಿಲ್ಲವೇಕೆ ಎಂದು ವಿವರಣೆ ನೀಡಲು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ವಿತ್ತ ಕಾರ್ಯದರ್ಶಿಗೆ ಆದೇಶಿಸಲಾಗಿದೆ.

2014ರಲ್ಲಿ ದೀಪಕ್ ರಾನಾ ಎನ್ನುವ ಡೆಹ್ರಾಡೂನ್ ನಿವಾಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿದ್ದರಲ್ಲದೆ ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯ ಬಗ್ಗೆ ದೂರಿದ್ದರು.

ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿತ್ತ ಇಲಾಖೆಗೆ 903 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ಮಾರ್ಚ್ 14, 2017ರಂದು ಕಳುಹಿಸಿದ್ದರೂ ಇಲ್ಲಿಯ ತನಕ ಯಾವುದೇ ಉತ್ತರವಿಲ್ಲ ಎಂದಿದ್ದಾರೆ.

ನ್ಯಾಯಾಲಯದ ಆದೇಶ ಪಾಲಿಸಲು ಹಣಕಾಸಿನ ಕೊರತೆಯಿದೆಯೆಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News