‘‘ಗೋ ರಕ್ಷಕರ ವೇಷದಲ್ಲಿ ಕ್ರೂರ ಕ್ರಿಮಿನಲ್‌ಗಳು’’: ಸೈಯದ್ ಘಯೂರುಲ್ ಹಸನ್ ರಿಝ್ವಿ
ಪ್ರಶ್ನೆ: ಕಳೆದ ಹಲವು ದಶಕಗಳಲ್ಲಿ ಎನ್‌ಸಿಎಂನ ಅಧ್ಯಕ್ಷರಾದವರಲ್ಲಿ ನೀವು ಅತ್ಯಂತ ಕಿರಿಯರು, ಆದ್ದರಿಂದ ನಿಮ್ಮಿಂದ ಜನತೆ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ನಿಮ್ಮ ಆದ್ಯತೆಗಳೇನು? ಅಥವಾ ನೀವು ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ನಿಮ್ಮ ಗಮನವನ್ನು ಕೇಂದ್ರೀಕರಿಸುವ ಮುಖ್ಯ ವಿಷಯಗಳು ಯಾವುವು?
ಉತ್ತರ: ಕೆಳಮಟ್ಟದಲ್ಲಿ, ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಗುರುತಿಸಲು ನಾವು ಒಂದು ರೋಡ್ ಮ್ಯಾಪ್ ತಯಾರಿಸಿದ್ದೇವೆ, ಇಲ್ಲಿಗೆ ಬರಲಾಗದ, ತುಂಬಾ ದೂರದಲ್ಲಿರುವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಆಲಿಸಲು ಆಯೋಗವು ಅವರಿದ್ದಲ್ಲಿಗೆ ಹೋಗುತ್ತದೆ; ಅಂತಹ ಸ್ಥಳಗಳಲ್ಲಿ ನಾವು ಶಿಬಿರಗಳನ್ನು ಏರ್ಪಡಿಸುತ್ತೇವೆ. ಅವರ ಹಕ್ಕುಗಳು ಹಾಗೂ ಅವರಿಗಾಗಿ ಇರುವ ಯೋಜನೆಗಳ ಬಗ್ಗೆ ನಾವು ಅವರಿಗೆ ತಿಳಿಸಿ ಹೇಳುತ್ತೇವೆ. ಇದಕ್ಕಾಗಿ ನಾವು ಅಲ್ಪಸಂಖ್ಯಾತರ ಪ್ರಾಬಲ್ಯವಿರುವ 90 ಜಿಲ್ಲೆಗಳನ್ನು ಆಯ್ಕೆ ಮಾಡಿದ್ದೇವೆ.
ಪ್ರಶ್ನೆ: ಕಳೆದ ಎರಡು ವರ್ಷಗಳಲ್ಲಿ ಸುಮಾರು ಹನ್ನೆರಡು ಮಂದಿಯನ್ನು ಬಹುಪಾಲು ಮುಸ್ಲಿಮರನ್ನು, ಸ್ವ-ಘೋಷಿತ ಗೋ ರಕ್ಷಕರು ಬಡಿದು ಸಾಯಿಸಿದ್ದಾರೆ. ನೀವು ಈ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ?
ಉತ್ತರ: ಈ ವಿಷಯಗಳ ಬಗ್ಗೆ ನಾನು ಹಲವು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದ್ದೇನೆ. ಇವರು ಗೋ ರಕ್ಷಕರಲ್ಲ, ಇವರು ಸರಕಾರಕ್ಕೆ ಕೆಟ್ಟ ಹೆಸರು ತರುವ ಹಾಗೂ ಅಲ್ಪಸಂಖ್ಯಾತರಲ್ಲಿ ಭೀತಿ ಹುಟ್ಟಿಸುವ, ಟೆರರೈಸ್ ಮಾಡುವ ಕ್ರೂರ ಕ್ರಿಮಿನಲ್‌ಗಳು. ಈ ಸಮಸ್ಯೆಯನ್ನು ಎದುರಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ. ಇದು ರಾಜ್ಯ ಸರಕಾರಗಳಿಗೆ ಸೇರಿದ ಕಾನೂನು ಮತ್ತು ವ್ಯವಸ್ಥೆಗೆ ಸಂಬಂಧಿಸಿದ ವಿಷಯ.
ಪ್ರಶ್ನೆ: ಗೋ ರಕ್ಷಕರ ಹಲ್ಲೆಗೊಳಗಾಗುವ ವಿಷಯದಲ್ಲಿ ಸರಕಾರ ಯಾವುದೇ ಕ್ರೋಡೀಕರಿಸಿದ ಕ್ರಮ ತೆಗೆದುಕೊಂಡಂತೆ ಕಾಣುವುದಿಲ್ಲ. ಆದ್ದರಿಂದ ನೀವು ರಾಜ್ಯ ಸರಕಾರಗಳ ಜತೆ ಈ ವಿಷಯದಲ್ಲಿ ಯಾವುದೇ ಪತ್ರವ್ಯವಹಾರ ನಡೆಸಿದ್ದೀರಾ?
ಉತ್ತರ: ಇಲ್ಲ, ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಕಂಡುಹಿಡಿದು ಅವರ ವಿರುದ್ಧ ಮೊಕದ್ದಮೆ ಹೂಡಿ ಅವರನ್ನು ಬಂಧಿಸಲಾಗಿದೆ. ಆದ್ದರಿಂದ ರಾಜ್ಯ ಸರಕಾರಗಳು ಏನೂ ಮಾಡುತ್ತಿಲ್ಲವೆಂದು ಹೇಳುವುದು ತಪ್ಪು.
ಪ್ರಶ್ನೆ: ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಕೇವಲ ಆಪಾದನೆಯ ನೆಲೆಯಲ್ಲಿ ಡೈರಿ ರೈತರ ಮೇಲೆ ದಾಳಿ ನಡೆಸಿ, ಅವರ ಮೇಲೆ ಚಾರ್ಚ್‌ಶೀಟ್ ಹಾಕಿ ಅವರ ಜಾನುವಾರುಗಳನ್ನು ಸಹ ಅವರಿಂದ ವಶಪಡಿಸಿಕೊಳ್ಳಲಾಯಿತು. ಅವರ ಕುಟುಂಬಗಳು ಇನ್ನೂ ಆ ಜಾನುವಾರುಗಳನ್ನು ಮರಳಿ ಪಡೆದಿಲ್ಲ.
ಉತ್ತರ: ನಾವು ಇದನ್ನು ಗಮನಿಸಿ ಈ ಬಗ್ಗೆ ಸಂಬಂಧಪಟ್ಟ ರಾಜ್ಯ ಸರಕಾರಗಳ ಜೊತೆ ಸಂಪರ್ಕದಲ್ಲಿದ್ದೇವೆ. ಇಂತಹ ಎಲ್ಲ ಘಟನೆಗಳು ದುರದೃಷ್ಟಕರ. ಅಲ್ಪ ಸಂಖ್ಯಾತ ಆಯೋಗ ಇಂತಹ ಘಟನೆಗಳನ್ನು ಸಮರ್ಥಿಸುವುದಿಲ್ಲ ಮತ್ತು ಇವು ಭವಿಷ್ಯದಲ್ಲಿ ಸಂಭವಿಸದಂತೆ ಕ್ರಮಗಳನ್ನು ತೆಗೆದು ಕೊಳ್ಳುತ್ತಿದ್ದೇವೆ.
ಪ್ರಶ್ನೆ: ಹತ್ಯೆಯಾದವರ ಕುಟುಂಬಗಳಿಗೆ ಇಷ್ಟರವರೆಗೆ ಯಾವುದೇ ಪರಿಹಾರ ದೊರಕಿಲ್ಲ. ದೊರಕುವಂತೆ ಮಾಡಲು ನೀವು ರಾಜ್ಯ ಸರಕಾರಗಳ ಜೊತೆ ಮಾತುಕತೆ ನಡೆಸುತ್ತಿದ್ದೀರಾ?
ಉತ್ತರ: ಜೇವಾರ್ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ನಾವು ಪರಿಹಾರ ಕೊಡಿಸಿದ್ದೇವೆ. ರಾಜಸ್ಥಾನದಲ್ಲಿ ನಡೆದ ಪೆಹ್ಲೂ ಖಾನ್ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು, ಮುಗ್ಧ ಖಾನ್‌ರನ್ನು ಕೊಂದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ನಾವು ರಾಜ್ಯ ಸರಕಾರಕ್ಕೆ ಬರೆದಿದ್ದೇವೆ.
ಪ್ರಶ್ನೆ: ಹೊಸ ಜಾನುವಾರು ಮಾರಾಟ ಕಾನೂನು, ಧಾರ್ಮಿಕ ಕಾರಣಕ್ಕಾಗಿ ಬಲಿಕೊಡುವುದನ್ನೂ ಸೇರಿಸಿ, ಜಾನುವಾರು ಹತ್ಯೆಯನ್ನು ನಿಷೇಧಿಸಿದೆ. ಈ ನಿಷೇಧವು ಮಾಂಸ ಸೇವಿಸುವ ಧಾರ್ಮಿಕ ಅಲ್ಪಸಂಖ್ಯಾತರೂ ಸೇರಿದಂತೆ ದೇಶದ ಜನತೆಯ ಸಂವಿಧಾನಿಕ ಹಕ್ಕುಗಳ ಮೇಲೆ ನಡೆದ ದಾಳಿ ಎನ್ನಲಾಗುತ್ತಿದೆ. ಇಷ್ಟೇ ಅಲ್ಲದೆ, ಈ ನಿಷೇಧವು ಮಿಲಿಯಗಟ್ಟಲೆ ಜನರ ಹೊಟ್ಟೆಪಾಡಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇವರ ಹಕ್ಕುಗಳನ್ನು ರಕ್ಷಿಸಲು ಎನ್‌ಸಿಎಂ ಏನಾದರೂ ಪರಿಹಾರವನ್ನು ಶಿಫಾರಸು ಮಾಡುತ್ತದೆಯೆ?
ಉತ್ತರ: ಈ ಬಗ್ಗೆ ಎನ್‌ಸಿಎಂ ಜೂನ್ 22ರಂದು ಒಂದು ಸಭೆ ನಡೆಸಲಿದೆ, ಅಲ್ಲಿ ಚರ್ಚಿಸಿದ ಬಳಿಕ ಯಾವ ಸಂಭಾವ್ಯ ಪರಿಹಾರ ಸಾಧ್ಯವೆಂದು ನಾವು ನೋಡುತ್ತೇವೆ. ಅದಕ್ಕನುಗುಣವಾಗಿ ಸರಕಾರಕ್ಕೆ ಸಲಹೆ ನೀಡುತ್ತೇವೆ.
ಪ್ರಶ್ನೆ: ಸಾಮಾನ್ಯವಾಗಿ ಮುಸ್ಲಿಮರು ಮತ್ತು ಬಿಜೆಪಿ ನಡುವೆ ಪರಸ್ಪರ ಸೌಹಾರ್ದ ಸಂಬಂಧಗಳಿಲ್ಲವೆಂಬುವುದು ಒಂದು ಬಹಿರಂಗ ಸತ್ಯ. ಹೀಗಾಗಿ ಮುಸ್ಲಿಮರ ಸಮಸ್ಯೆಗಳನ್ನು ನಿಭಾಯಿ ಸುವಾಗ ನಿಮಗೆ ಏನಾದರೂ ಸಮಸ್ಯೆ ಎದುರಾಗಬಹುದೆ?
ಉತ್ತರ: ಅಲ್ಪಸಂಖ್ಯಾತರು ಮತ್ತು ಕೇಂದ್ರ ಸರಕಾರದ ಮಧ್ಯೆ ಏನಾದರೂ ಅಪನಂಬಿಕೆ ಇದ್ದಲ್ಲಿ ಅದನ್ನು ಹೋಗಲಾಡಿಸಿ ಉಭಯರ ನಡುವೆ ಇರುವ ಕಂದಕವನ್ನು ಕಡಿಮೆ ಮಾಡುವುದು ಎನ್‌ಸಿಎಂನ ಜವಾಬ್ದಾರಿ ಕೂಡ.
ಪ್ರಶ್ನೆ: ಎನ್‌ಸಿಎಂ ಕಾಯ್ದೆಯ ಪ್ರಕಾರ ಅದು ಒಂದು ಅರೆ ನ್ಯಾಯಾಂಗ ಸಂಸ್ಥೆಯಲ್ಲ. ಆದ್ದರಿಂದ ಅದು ಯಾವುದೇ ವಿಷಯದಲ್ಲಿ ತಾನಾಗಿಯೇ ಕಾನೂನು ಕ್ರಮ ತೆಗೆದುಕೊಳ್ಳುವ ಹಾಗಿಲ್ಲ. ಅಲ್ಪಸಂಖ್ಯಾತರ ಆಯೋಗಕ್ಕೆ ಇನ್ನಷ್ಟು ಅಧಿಕಾರಗಳನ್ನು ನೀಡಬೇಕೆಂದು ನಿಮಗೆ ಅನ್ನಿಸುತ್ತದೆಯೇ?
ಉತ್ತರ: ಎಸ್ಸಿ/ಎಸ್ಟಿ ಮತ್ತು ಮಹಿಳಾ ಆಯೋಗಗಳಿಗಿರುವ ಅಧಿಕಾರಗಳು ಈ ಆಯೋಗಕ್ಕೆ (ಎನ್‌ಸಿಎಂ) ಇಲ್ಲ. ನಮಗೆ ಶಿಕ್ಷಿಸುವ ಅಧಿಕಾರ ಇಲ್ಲ. ಆದರೆ ನಮಗೆ ದೂರುಬಾರದೆ ಇದ್ದಾಗ ಸ್ವಯಂ ನಾವಾಗಿಯೇ ವಿಚಾರಣೆ ನಡೆಸುವ ಅಧಿಕಾರ ಇದೆ. ಜೇವಾರ್ ಪ್ರಕರಣದಲ್ಲಿ ನಾವು ಈ ಅಧಿಕಾರ ಬಳಸಿ ಸಂಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಕರೆದಿದ್ದೇವೆ. ನ್ಯಾಯಾಂಗ ಅಧಿಕಾರಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ನಮಗೆ ಯಾವಾಗ ಜಯಲಭಿಸುತ್ತದೆ ನೋಡೋಣ.
ಸ್ವ-ಘೋಷಿತ ಗೋರಕ್ಷಕರ ಬಗ್ಗೆ ನಾನು ಹಲವು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದ್ದೇನೆ. ಇವರು ಗೋ ರಕ್ಷಕರಲ್ಲ, ಇವರು ಸರಕಾರಕ್ಕೆ ಕೆಟ್ಟ ಹೆಸರು ತರುವ ಹಾಗೂ ಅಲ್ಪಸಂಖ್ಯಾತರಲ್ಲಿ ಭೀತಿ ಹುಟ್ಟಿಸುವ, ಟೆರರೈಸ್ ಮಾಡುವ ಕ್ರೂರ ಕ್ರಿಮಿನಲ್‌ಗಳು. ಈ ಸಮಸ್ಯೆಯನ್ನು ಎದುರಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ. ಇದು ರಾಜ್ಯ ಸರಕಾರಗಳಿಗೆ ಸೇರಿದ ಕಾನೂನು ಮತ್ತು ವ್ಯವಸ್ಥೆಗೆ ಸಂಬಂಧಿಸಿದ ವಿಷಯ.
‘ನ್ಯಾಶನಲ್ ಕಮಿಶನ್ ಫಾರ್ ಮೈನಾರಿಟಿಸ್ (ಎನ್‌ಸಿಎಂ) ಅಧ್ಯಕ್ಷ ಸೈಯದ್ ಘಯೂರುಲ್ ಹಸನ್ ರಿಝ್ವಿಯವರು ‘ಇಂಡಿಯಾ ಟುಮಾರೊ. ನೆಟ್’ನ ಜತೆ ನಡೆಸಿದ ಒಂದು ವೀಡಿಯೊ ಸಂದರ್ಶನದಲ್ಲಿ ತನ್ನ ಆದ್ಯತೆಗಳು ಏನು? ಎಂಬ ಬಗ್ಗೆ ವಿವರಿಸಿ, ದೇಶದ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಸಂಬಂಧಿಸಿದ ಹಲವು ಸಮಕಾಲೀನ ವಿಷಯಗಳ ಕುರಿತು ಮಾತಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ