ಭಯೋತ್ಪಾದನೆ ನಿಗ್ರಹಕ್ಕೆ ಆದ್ಯತೆ: ಮೋದಿ

Update: 2017-06-27 03:46 GMT

ವಾಷಿಂಗ್ಟನ್, ಜೂ. 27: ಪಾಕಿಸ್ತಾನ ತನ್ನ ಪ್ರದೇಶವನ್ನು ನೆರೆ ದೇಶದ ಮೇಲಿನ ಭಯೋತ್ಪಾದಕ ದಾಳಿಯ ನೆಲೆಯಾಗಿ ಬಳಸಿಕೊಳ್ಳಬಾರದು ಎಂದು ಆ ದೇಶಕ್ಕೆ ಎಚ್ಚರಿಕೆಯ ಸಂದೇಶವನ್ನು ಭಾರತ ಹಾಗೂ ಅಮೆರಿಕ ಜಂಟಿಯಾಗಿ ನೀಡಿವೆ.

ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಮಾತುಕತೆ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಉಭಯ ದೇಶಗಳು ಪಣ ತೊಟ್ಟಿವೆ ಎಂದು ವಿವರಿಸಲಾಗಿದೆ.

26/11ರ ಮುಂಬೈ ದಾಳಿ ಮತ್ತು ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ಘಟನೆಗಳಿಗೆ ಸಂಬಂಧಪಟ್ಟವರನ್ನು ನ್ಯಾಯದ ಕಟೆಕಟೆಗೆ ತರಬೇಕು ಎಂದು ಆಗ್ರಹಿಸಲಾಗಿದೆ. ಉಗ್ರರ ಪಾಲಿಗೆ ಸ್ವರ್ಗ ಎನಿಸಿದ ತಾಣಗಳನ್ನು ನಿರ್ಮೂಲನೆ ಮಾಡಲು ಜಂಟಿ ಹೋರಾಟ ನಡೆಸುವುದಾಗಿಯೂ ಉಭಯ ನಾಯಕರು ಎಚ್ಚರಿಕೆ ನೀಡಿದ್ದಾರೆ.

"ಭಾರತ ಹಾಗೂ ಅಮೆರಿಕ ನಡುವಿನ ಭದ್ರತಾ ಪಾಲುದಾರಿಕೆಗೆ ವಿಶೇಷ ಮಹತ್ವವಿದೆ. ಉಭಯ ದೇಶಗಳು ಭಯೋತ್ಪಾದನೆ ಪಿಡುಗನ್ನು ತೊಡೆದುಹಾಕಲು ಬದ್ಧವಾಗಿವೆ. ಜತೆಗೆ ಉಗ್ರಗಾಮಿ ಸಂಘಟನೆಗಳನ್ನೂ ನಿರ್ಮೂಲನೆ ಮಾಡುವುದು ಮತ್ತು ಅವರ ಕ್ರಾಂತಿಕಾರಿ ಸಿದ್ಧಾಂತ ವನ್ನೂ ತೊಡೆದುಹಾಕುವುದು ನಮ್ಮ ಆದ್ಯತೆ. ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿದ್ದೇವೆ" ಎಂದು ಟ್ರಂಪ್ ಹೇಳಿದರು.

ಭಯೋತ್ಪಾದನೆ ಜಾಗತಿಕ ಭದ್ರತಾ ಸಮಸ್ಯೆಯಾಗಿದ್ದು, ವಿಶ್ವದ ಯಾವುದೇ ಮೂಲೆಯಲ್ಲಾದರೂ ಇದರ ವಿರುದ್ಧದ ಹೋರಾಟಕ್ಕೆ ಉಭಯ ದೇಶಗಳು ಕೈಜೋಡಿಸಲು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಖಾತೆ ಕಾರ್ಯದರ್ಶಿ ಎಸ್.ಜೈಶಂಕರ್ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News