ನಕಲಿ ಸಂಸ್ಕೃತಿ ರಕ್ಷಕರಿಗೆ ಬಲಿಯಾಗುತ್ತಿರುವ ಸಂಸ್ಕೃತಿ

Update: 2017-06-28 03:46 GMT

ಹರಿಯುವ ನದಿಯೊಂದರಲ್ಲಿ ಕುರಿ ಮರಿಯೊಂದು ನೀರು ಕುಡಿಯುತ್ತಿತ್ತು. ತುಸು ದೂರದಲ್ಲಿ ಮೇಲಿನ ಭಾಗದಲ್ಲಿ ನೀರು ಕುಡಿಯುತ್ತಿದ್ದ ತೋಳ ಕುರಿಮರಿಯನ್ನು ನೋಡಿತು. ತೋಳದ ಬಾಯಲ್ಲಿ ನೀರೂರಿತು. ಅದರ ಮೇಲೆ ಹಾರಿ ಅದನ್ನು ತಿನ್ನುವುದಕ್ಕೆ ಒಂದು ಕಾರಣ ಬೇಕು. ಅದಕ್ಕಾಗಿ ಮೊದಲು ಅದರ ಜೊತೆಗೆ ಜಗಳವಾಡಬೇಕು.ಆದುದರಿಂದ ಜೋರಾಗಿ ತೋಳ ಹೇಳಿತು ‘‘ಹೇಯ್, ಕುರಿಮರಿ, ನಾನು ಕುಡಿಯುತ್ತಿರುವ ನೀರನ್ನು ಎಂಜಲು ಮಾಡುವುದಕ್ಕೆ ನಿನಗೆ ಎಷ್ಟು ಧೈರ್ಯ?’’
     
ಕುರಿಮರಿ ಮುಗ್ಧವಾಗಿ ಹೇಳಿತು ‘‘ನದಿ ಮೇಲಿನಿಂದ ಕೆಳಗೆ ಹರಿಯುತ್ತಿದೆ. ನೀವು ಮೇಲೆ ನಿಂತು ನೀರು ಕುಡಿಯುತ್ತಿದ್ದೀರಿ. ನಾನು ನೀವು ಕುಡಿದು ಎಂಜಲಾದ ನೀರನ್ನು ಕುಡಿಯುತ್ತಿದ್ದೇನೆ’’. ತೋಳಕ್ಕೆ ಮತ್ತೆ ಸಿಟ್ಟು ಬಂತು ‘‘ನೀನು ಮಾಡದೆ ಇದ್ದರೆ ಏನಾಯಿತು. ನಿನ್ನ ತಂದೆ ಈ ನೀರನ್ನು ಈ ಹಿಂದೆ ಕುಡಿದು ಎಂಜಲು ಮಾಡಿದ್ದರು’’. ಕುರಿಮರಿ ಮತ್ತೆ ಆತಂಕದಿಂದ ಹೇಳಿತು ‘‘ನನ್ನ ತಂದೆ ಈ ಊರಿನವರಲ್ಲ. ಬೇರೆ ಊರಿನವರು’’. ತೋಳ ಈಗ ಮತ್ತೊಂದು ನೆಪ ಹೇಳಿತು ‘‘ಬೇರೆ ಊರಿನಿಂದ ಬಂದು ನಮ್ಮ ಅನುಮತಿ ಇಲ್ಲದೆ ನೀರು ಕುಡಿಯುವುದಕ್ಕೆ ನಿನಗೆ ಎಷ್ಟು ಧೈರ್ಯ? ಅದರ ಜೊತೆಗೆ ನಮ್ಮನ್ನು ಅವಮಾನಿಸುತ್ತಿದ್ದೀಯಾ’’ ಎಂದು ಕುರಿಮರಿಯ ಮೇಲೇ ಹಾರಿತು. ಒಟ್ಟಿನಲ್ಲಿ ಕುರಿಯನ್ನು ಅದಕ್ಕೆ ತಿನ್ನಬೇಕಾಗಿತ್ತು, ತಿಂದಿತು.

ಕಾರಣ ಇಲ್ಲಿ ಮುಖ್ಯವಲ್ಲ. ಸದ್ಯಕ್ಕೆ ಈ ದೇಶದಲ್ಲಿ ಗೋಮಾಂಸವನ್ನು ನೆಪವಾಗಿಟ್ಟು ನಡೆಯುತ್ತಿರುವ ಹಿಂಸಾಚಾರಗಳೂ ಇದೇ ಹಾದಿಯನ್ನು ಹಿಡಿದಿವೆ. ಹಿಂಸೆಯನ್ನು ಬಗೆಯುವವರಿಗೆ ಗೋವಿನ ಮೇಲಿರುವ ಪ್ರೀತಿ ಒಂದು ನೆಪ ಮಾತ್ರ. ದ್ವೇಷಿಸುವುದಕ್ಕೆ, ಹಿಂಸಾಚಾರ ನಡೆಸುವುದಕ್ಕೆ ಅವರಿಗೆ ಕಾರಣ ಬೇಕು. ಈ ದೇಶದಲ್ಲಿ ನಮ್ಮ ಹಟ್ಟಿಯಿಂದ ಗೋವುಗಳು ಕಳ್ಳತನವಾಗಿವೆ ಎಂದು ಯಾವುದೇ ರೈತರು ಪೊಲೀಸ್ ಠಾಣೆಗಳಲ್ಲಿ ದೂರುಸಲ್ಲಿಸಿರುವುದು ವರದಿಯಾಗದಿದ್ದರೂ, ಗೋಕಳ್ಳತನದ ಹೆಸರಿನಲ್ಲಿ ಗೋರಕ್ಷಣೆ ಪಡೆ ಸಿದ್ಧಗೊಂಡಿತು. ಅಕ್ರಮ ಗೋಸಾಗಾಟ ನಡೆಸುತ್ತಿದ್ದಾರೆ ಎಂದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದವು.

ಇದಾದ ಬಳಿಕ ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋರಕ್ಷಕರ ಗೋಪ್ರೇಮ ಇನ್ನೊಂದು ಹಂತಕ್ಕೆ ತಲುಪಿಸಿತು. ಮನೆಗೆ ನುಗ್ಗಿ, ಫ್ರಿಡ್ಜ್‌ನಲ್ಲಿ ಗೋಮಾಂಸವಿದೆ ಎಂದು ಆರೋಪಿಸಿ, ಅಖ್ಲಾಕ್ ಎನ್ನುವ ವೃದ್ಧರನ್ನು ಥಳಿಸಿ ಕೊಂದು ಹಾಕಿತು. ರಾಜಸ್ಥಾನದಲ್ಲಿ ಪೆಹ್ಲೂಖಾನ್ ಎನ್ನುವ ರೈತ, ಸಾಕುವುದಕ್ಕಾಗಿಯೇ ಗೋವನ್ನು ಮನೆಗೆ ಕೊಂಡೊಯ್ಯುತ್ತಿದ್ದಾಗಲೂ ಅವನನ್ನು ಈ ಗೋರಕ್ಷಕ ಪಡೆ ತಡೆದು ಹತ್ಯೆ ಮಾಡಿತು. ಇದೀಗ ಈ ಗೋಪ್ರೇಮ ಇನ್ನೊಂದು ಅತಿರೇಕವನ್ನು ತಲುಪಿದೆ. ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಒಬ್ಬ ಮುಸ್ಲಿಮ್ ಯುವಕನನ್ನು ಆತ ಗೋಮಾಂಸಾಹಾರಿ ಎನ್ನುವ ಕಾರಣಕ್ಕಾಗಿ ಇರಿದು ಕೊಂದಿದ್ದಾರೆ.

ಅಲ್ಲಿ ನಡೆದಿರುವುದು ಸೀಟಿಗೆ ಸಂಬಂಧಿಸಿದ ಜಗಳ. ಅವರು ಅಕ್ರಮ ಗೋಸಾಗಾಟ ಮಾಡುತ್ತಿರಲಿಲ್ಲ. ಅವರಲ್ಲಿ ಗೋಮಾಂಸ ಬಿಡಿ ಮೀನು ಮಾಂಸವೂ ಇದ್ದಿರಲಿಲ್ಲ. ಆದರೆ ಈ ತರುಣರು ಟೋಪಿ, ಗಡ್ಡ ಧರಿಸಿದ್ದರು. ಅವರು ಈದ್ ಹಬ್ಬದ ಸಂಭ್ರಮದ ನಿರೀಕ್ಷೆಯಲ್ಲಿದ್ದರು. ರೈಲಿನಲ್ಲಿದ್ದ ದುಷ್ಕರ್ಮಿಗಳು ಪಾನಮತ್ತರಾಗಿದ್ದರಂತೆ. ಬಹುಶಃ ಕೇವಲ ಪಾನಮತ್ತರಾಗಿದ್ದರೆ ಅವರು ಯುವಕರ ಮೇಲೆ ಹಲ್ಲೆ ನಡೆಸಿ ಓರ್ವನನ್ನು ಕೊಲ್ಲುತ್ತಿರಲಿಲ್ಲ. ಬದಲಿಗೆ ಕೋಮುಮತ್ತರಾಗಿದ್ದರು. ಮುಸ್ಲಿಮರಾಗಿರುವ ಕಾರಣ ಅವರು ಗೋಮಾಂಸ ಸೇವಿಸುವವರೇ ಆಗಿರಬೇಕು. ಆದುದರಿಂದ ಅವರು ಕೊಲೆಯಾಗುವುದಕ್ಕೆ ಅರ್ಹರು ಎಂದು ದುಷ್ಕರ್ಮಿಗಳು ತೀರ್ಮಾನಿಸಿದರು. ಓರ್ವ ಯುವಕನನ್ನು ಬರ್ಬರವಾಗಿ ಕೊಂದು ಹಾಕಿದರು.

ವಿಪರ್ಯಾಸವೆಂದರೆ, ಆ ಬರ್ಬರ ಹತ್ಯೆಗೆ ರೈಲಿನಲ್ಲಿದ್ದ ಉಳಿದ ಪ್ರಯಾಣಿಕರ ವೌನ ಸಮ್ಮತಿಯಿತ್ತು. ಹಾಡುಹಗಲು, ನೂರಾರು ಪ್ರಯಾಣಿಕರ ನಡುವೆ ನಡೆದ ಹತ್ಯೆ ಇದಾಗಿದ್ದರೂ, ಈವರೆಗೆ ಯಾರನ್ನೂ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಕಳೆದ ಶನಿವಾರ ಕೋಲ್ಕತಾದಲ್ಲಿ, ದನಗಳ್ಳರು ಎಂಬ ಆರೋಪವನ್ನು ಹೊರಿಸಿ ಸ್ಥಳದಲ್ಲೇ ಮೂವರು ಯುವಕರನ್ನು ಕೊಂದು ಹಾಕಲಾಯಿತು. ಈ ದೇಶ ನಿಧಾನಕ್ಕೆ ಯಾರ ಕೈವಶವಾಗುತ್ತಿದೆ ಎನ್ನುವುದರ ಸೂಚನೆಯಿದು. ಇಂದು ನಗರದ ಬೀದಿಗಳಲ್ಲಿ ರೌಡಿಗಳು, ಗೂಂಡಾಗಳು, ಪಿಕ್‌ಪಾಕೆಟ್ ಮಾಡುವವರು ಕೇಸರಿ ಶಾಲೊಂದನ್ನು ಧರಿಸಿದರೆ, ಒಬ್ಬನನ್ನು ಕೊಲೆ ಮಾಡುವುದಕ್ಕೂ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಈ ಮೂಲಕ ಭಾರತದ ಸನಾತನ ಸಂಸ್ಕೃತಿಯೆನ್ನುವುದು ತತ್ವಜ್ಞಾನಿಗಳಿಂದ, ಋಷಿ ಮುನಿಗಳಿಂದ, ರೌಡಿಗಳ ಕೈಗೆ ಹಸ್ತಾಂತರವಾಗುತ್ತಿದೆ. ಈ ದೇಶದ ಸಂಸ್ಕೃತಿಯ ವಕ್ತಾರನೆನಿಸಿಕೊಳ್ಳುವವನಿಗೆ ಮಹಾಭಾರತ, ರಾಮಾಯಣ ಬರೆದಿರುವವರ ಹೆಸರು ಗೊತ್ತಿರಬೇಕಾಗಿಲ್ಲ.

ಆತ ಯಾವುದಾದರೊಂದು ಸಂಘಪರಿವಾರ ಸಂಘಟನೆಯ ಸದಸ್ಯನಾಗಿದ್ದರೆ ಸಾಕು. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಸರ್ವ ಅಪರಾಧಗಳನ್ನು ಮಾಡುವುದಕ್ಕೆ ಆತ ಅರ್ಹನಾಗುತ್ತಾನೆ. ಬಹುಶಃ ಈ ಮೂಲಕ ಪತನಗೊಳ್ಳುತ್ತಿರುವುದು ಈ ದೇಶದ ಸಂವಿಧಾನ, ಪ್ರಜಾಸತ್ತೆ ಮಾತ್ರವಲ್ಲ, ಯಾವುದನ್ನು ಹಿಂದೂ ಸಂಸ್ಕೃತಿ ಎಂದು ಈ ದೇಶದ ಜನರು ಕರೆಯುತ್ತಾ ಬಂದಿದ್ದಾರೆಯೋ ಆ ಪ್ರಾಚೀನ ಸಂಸ್ಕೃತಿಯೂ ಈ ‘ಸಂಸ್ಕೃತಿ’ ರಕ್ಷಕರ ಕೈಯಲ್ಲಿ ನಡುರಸ್ತೆಯಲ್ಲಿ ಪ್ರಾಣ ಬಿಡುತ್ತಿದೆ. ತಮಾಷೆಯೆಂದರೆ ಪ್ರಧಾನಿಯಾಗಿ ನರೇಂದ್ರ ಮೋದಿ ಈ ಕುರಿತಂತೆ ಈ ವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅವರು ಅಮೆರಿಕದಲ್ಲಿ ಟ್ರಂಪ್ ಜೊತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮತ್ತು ಚೀನಾ, ಬಾಂಗ್ಲಾ ಪಾಕಿಸ್ತಾನಕ್ಕೆ ಭಯೋತ್ಪಾದನೆಯ ವಿರುದ್ಧ ಪಾಠ ಮಾಡುತ್ತಿದ್ದಾರೆ.

ಅವರಿಗೆ ಸದಾ ಭಯೋತ್ಪಾದನೆಯಿಂದ ನರಳುತ್ತಿರುವ ಪಾಕಿಸ್ತಾನ ಕುರಿತಂತೆ ಕಾಳಜಿ. ಪಾಕಿಸ್ತಾನ ಕನಿಷ್ಠ ತೋರಿಕೆಗಾಗಿಯಾದರೂ ಭಯೋತ್ಪಾದಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಆದರೆ ಇಂದು ಭಾರತದಲ್ಲಿ ಭಯೋತ್ಪಾದಕರು ಸಂಸ್ಕೃತಿ ರಕ್ಷಕರ ವೇಷದಲ್ಲಿ ನಡು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇವುಗಳ ವಿರುದ್ಧ ನರೇಂದ್ರ ಮೋದಿ, ಒಂದು ಸಾಲಿನ ಹೇಳಿಕೆಯನ್ನೂ ಈವರೆಗೆ ನೀಡಿಲ್ಲ. ತನ್ನ ದೇಶದೊಳಗೆ ನಡೆಯುತ್ತಿರುವ ಹಿಂಸಾಚಾರಗಳೆಲ್ಲವೂ ‘ಸಂಸ್ಕೃತಿ’ಯ ಭಾಗ ಎಂದು ತಿಳಿದುಕೊಂಡಿರುವ ಪ್ರಧಾನಿಯೊಬ್ಬರು ಇನ್ನೊಂದು ದೇಶಕ್ಕೆ ಭಯೋತ್ಪಾದನೆಯ ಕುರಿತಂತೆ ಪಾಠ ಮಾಡಿದರೆ, ಅದನ್ನು ಆ ದೇಶ ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡೀತು? ವಿಶ್ವಕ್ಕೆ ಶಾಂತಿ, ಸೌಹಾರ್ದದ ಪಾಠವನ್ನು ಬೋಧಿಸುವ ಅಧಿಕೃತ ಪರವಾನಿಗೆ ಹೊಂದಿದವರಂತೆ ಆಡುತ್ತಿರುವ ಮೋದಿ, ಮೊದಲು ತನ್ನ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗಳ ವಿರುದ್ಧ ಮಾತನಾಡಬೇಕು ಮತ್ತು ಅದನ್ನು ಪರಿಣಾಮಕಾರಿಯಾಗಿ ದಮನಿಸುವ ಮೂಲಕ ಅವರು ಇತರ ದೇಶಗಳಿಗೆ ಮಾದರಿಯಾಗಬೇಕು.

ನರೇಂದ್ರ ಮೋದಿಯವರ ಜನವಿರೋಧಿ ಆರ್ಥಿಕ ನೀತಿಯಿಂದ ಒಂದೆಡೆ ರೈತರು, ಸಣ್ಣ ಉದ್ಯಮಿಗಳು ಬೀದಿಗೆ ಬಿದ್ದಿದ್ದಾರೆ. ಮಗದೊಂದೆಡೆ ರೌಡಿಗಳು, ಉಂಡಾಡಿಗಳು ಬೀದಿಗಳಲ್ಲಿ ಸಂಸ್ಕೃತಿ ವಕ್ತಾರರ ವೇಷ ಧರಿಸಿ ಶ್ರೀಸಾಮಾನ್ಯನಿಗೆ ಸಮಸ್ಯೆಯಾಗುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ, ಭಾರತವನ್ನು ನಾಶ ಮಾಡಲು ವಿದೇಶಿ ಉಗ್ರರು, ಭಯೋತ್ಪಾದಕರ ಅಗತ್ಯವಿರುವುದಿಲ್ಲ. ಆದುದರಿಂದ, ತಕ್ಷಣ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವಿದೇಶ ಪ್ರವಾಸಗಳನ್ನು ನಿಲ್ಲಿಸಿ, ಭಾರತದೊಳಗಿನ ಪ್ರವಾಸಕ್ಕೆ ಆದ್ಯತೆ ನೀಡಬೇಕಾಗಿದೆ. ತನ್ನ ಪರಿವಾರಕ್ಕೇ ಶಾಂತಿ, ಸೌಹಾರ್ದದ ಪಾಠ ಬೋಧಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News