‘ಮಹಾರಾಜ’ನಿಗೆ ಕೊನೆಗೂ ವಿದಾಯ
ಹೊಸದಿಲ್ಲಿ,ಜೂ.28: ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದಲ್ಲಿನ ಹೂಡಿಕೆ ಹಿಂದೆಗೆತಕ್ಕೆ ಕೇಂದ್ರ ಸಂಪುಟವು ಬುಧವಾರ ತಾತ್ವಿಕ ಒಪ್ಪಿಗೆಯನ್ನು ನೀಡಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ತಿಳಿಸಿದರು. ಸರಕಾರಿ ನೌಕರರ ಭತ್ಯೆಗಳ ಕುರಿತು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಷ್ಕರಣೆಯೊಂದಿಗೆ ಸಂಪುಟ ಸಭೆಯು ಒಪ್ಪಿಕೊಂಡಿದೆ ಎಂದೂ ಅವರು ಇದೇ ವೇಳೆ ತಿಳಿಸಿದರು.
ಏರ್ ಇಂಡಿಯಾದಲ್ಲಿನ ಹೂಡಿಕೆ ಹಿಂದೆಗೆತಕ್ಕೆ ತಾತ್ವಿಕ ಒಪ್ಪಿಗೆಯ ಮೂಲಕ ಸರಕಾರವು ದೇಶದ ಹೆಮ್ಮೆಯ ವಿಮಾನಯಾನ ಸಂಸ್ಥೆಯನ್ನು ನಿರ್ವಹಿಸಲು ಖಾಸಗಿ ಸಹಭಾಗಿತ್ವವನ್ನು ಹೊಂದಲು ಮಾರ್ಗಗಳನ್ನು ಅನ್ವೇಷಿಸಲಿದೆ.
ಹೂಡಿಕೆ ಹಿಂದೆಗೆತಕ್ಕೆ ಗಡುವು ಮತ್ತು ವಿಧಿವಿಧಾನಗಳನ್ನು ನಿರ್ಧರಿಸಲು ವಿತ್ತ ಸಚಿವಾಲಯದ ಅಧೀನದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಹಿಂದಿನ ಯುಪಿಎ ಸರಕಾರವು ಬಿಡುಗಡೆ ಮಾಡಿದ್ದ 30,000 ಕೋ.ರೂ.ಗಳ ಪಾರುಗಾಣಿಕೆಯ ಬಲದಲ್ಲಿ ಉಸಿರಾಡುತ್ತಿರುವ ಏರ್ ಇಂಡಿಯಾವನ್ನು ಪುನಃಶ್ಚೇತನಗೊಳಿಸುವ ಮಾರ್ಗಗಳಿಗಾಗಿ ನಾಗರಿಕ ವಾಯುಯಾನ ಸಚಿವಾಲಯವು ತಡಕಾಡುತ್ತಿದೆ.
ದೇಶದಲ್ಲಿ ಅತ್ಯಂತ ಹೆಚ್ಚಿನ ವಿಮಾನಗಳನ್ನು (140) ಹೊಂದಿರುವ ಏರ್ ಇಂಡಿಯಾ ಸುಮಾರು 41 ಅಂತರರಾಷ್ಟ್ರೀಯ ಮತ್ತು 72 ದೇಶಿಯ ಯಾನಗಳನ್ನು ನಿರ್ವಹಿಸುತ್ತಿದೆ.
ವಿಮಾನಗಳ ಜೊತೆಗೆ ಸಂಸ್ಥೆಯು ತನ್ನ ವಶದಲ್ಲಿ ಅಗಾಧ ಭೂಮಿಯನ್ನೂ ಹೊಂದಿದೆ. ಮಧ್ಯ ಮುಂಬೈಯಲ್ಲಿನ ಸುಮಾರು 32 ಎಕರೆ ಜಮೀನು ಮತ್ತು 1,600 ಕೋ.ರೂ.ಗೂ ಅಧಿಕ ವೌಲ್ಯದ ಮರೀನ್ ಡ್ರೈವ್‌ನಲ್ಲಿರುವ ಏರ್ ಇಂಡಿಯಾದ ಮುಖ್ಯ ಕಚೇರಿ ಇದರಲ್ಲಿ ಸೇರಿವೆ. ಅಲ್ಲದೆ ದಿಲ್ಲಿ, ಲಂಡನ್, ಹಾಂಗ್‌ಕಾಂಗ್, ನೈರೋಬಿ, ಜಪಾನ್ ಮತ್ತು ಮಾರಿಷಿಯಸ್‌ಗಳಲ್ಲಿ ಏರ್‌ಇಂಡಿಯಾದ ಆಸ್ತಿಗಳಿವೆ.
ಏಳನೇ ವೇತನ ಆಯೋಗದ ಶಿಫಾರಸುಗಳನ್ನು 34 ಪರಿಷ್ಕರಣೆಗಳೊಂದಿಗೆ ಸಂಪುಟವು ಒಪ್ಪಿಕೊಂಡಿದ್ದು, ಪರಿಷ್ಕೃತ ದರಗಳು ಜುಲೈ 1ರಿಂದ ಅನ್ವಯಗೊಳ್ಳಲಿವೆ ಎಂದೂ ಜೇಟ್ಲಿ ತಿಳಿಸಿದರು.
ನೂತನ ಭತ್ಯೆ ದರಗಳಿಂದ 34 ಲಕ್ಷ ಸರಕಾರಿ ನೌಕರರು ಮತ್ತು 14 ಲಕ್ಷ ರಕ್ಷಣಾ ಸಿಬ್ಬಂದಿಗಳಿಗೆ ಲಾಭವಾಗಲಿದೆ.