ಮೋದಿಯಿಂದ ಗಾಂಧಿಯ ವ್ಯಂಗ್ಯ

Update: 2017-06-29 18:44 GMT

ಗಾಂಧಿಯ ಆಶ್ರಮದಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮಾ ಗಾಂಧೀಜಿಯನ್ನು ವ್ಯಂಗ್ಯ ಮಾಡಿದ್ದಾರೆ. ಈ ದೇಶದ ಸಂವಿಧಾನದ ಆಶಯಗಳನ್ನು ರೌಡಿಗಳು, ಗೂಂಡಾಗಳು, ಹಾಡಹಗಲೇ ನಡು ರಸ್ತೆಯಲ್ಲಿ ಕೊಂದು ಹಾಕುತ್ತಿದ್ದರೆ, ನರೇಂದ್ರ ಮೋದಿಯವರು ‘‘ಹಿಂಸೆಗೆ ಸಮಾಜದಲ್ಲಿ ಸ್ಥಾನವಿಲ್ಲ. ಗೋಭಕ್ತಿಯ ಹೆಸರಿನಲ್ಲಿ ಜನರನ್ನು ಸಾಯಿಸಬೇಡಿ. ಮಹಾತ್ಮಾ ಗಾಂಧೀಜಿ ಇದನ್ನು ಒಪ್ಪಲಾರರು’’ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾರೆ. ಈ ಮೂಲಕ ಅವರು ನಕಲಿ ಗೋರಕ್ಷಕರನ್ನು ಗಾಂಧೀಜಿಯ ಅನುಯಾಯಿಗಳ ಸಾಲಲ್ಲಿ ನಿಲ್ಲಿಸಿದ್ದಾರೆ.

ಗಾಂಧೀಜಿಯನ್ನೇ ಒಪ್ಪದ ಈ ದುಷ್ಕರ್ಮಿಗಳು ನಡು ಬೀದಿಯಲ್ಲಿ ಗೋವಿನ ನೆಪದಲ್ಲಿ ಅಮಾಯಕರನ್ನು ಕೊಂದು ಹಾಕುತ್ತಿದ್ದರೆ, ಗಾಂಧೀಜಿ ಅದನ್ನು ಒಪ್ಪಲಾರರು ಎಂದು ನರೇಂದ್ರ ಮೋದಿ ಕರೆ ಕೊಡುವ ಉದ್ದೇಶವೇನು? ಇಂದು ದೇಶದಲ್ಲಿ ಹಿಂಸಾಚಾರ ನಡೆಸುತ್ತಿರುವವರು ಗಾಂಧೀಜಿಯ ಸಂದೇಶವನ್ನು ಒಪ್ಪುವ ಶ್ರೀಸಾಮಾನ್ಯರಲ್ಲ. ಇದು ಸ್ವತಃ ನರೇಂದ್ರ ಮೋದಿಯವರಿಗೂ ತಿಳಿಯದ ವಿಷಯವಲ್ಲ. ಆದುದರಿಂದ, ಮೋದಿಯ ಹೇಳಿಕೆ ಗಾಂಧೀಜಿಯನ್ನು ಶತಾಯಗತಾಯ ದ್ವೇಷಿಸುವ, ಗಾಂಧೀಜಿಯನ್ನು ಕೊಂದು ಹಾಕಿದ ಗೋಡ್ಸೆಯನ್ನು ಆರಾಧಿಸುವ ಈ ನಕಲಿ ಗೋರಕ್ಷಕರಿಗೆ ಪರೋಕ್ಷವಾಗಿ ಶಹಬ್ಬಾಸ್ ಗಿರಿಯನ್ನೇ ನೀಡಿದಂತಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಹೇಳಿಕೆಯ ಮೂಲಕ ಗೋವಿನ ಹೆಸರಿನಲ್ಲಿ ಹಿಂಸೆಯನ್ನು ನಡೆಸುತ್ತಿರುವುದು ಶ್ರೀಸಾಮಾನ್ಯ ಗೋಭಕ್ತರು ಎಂದು ಮೋದಿ ದೇಶವನ್ನು ನಂಬಿಸಲು ಹೊರಟಿದ್ದಾರೆ. ನರೇಂದ್ರ ಮೋದಿಯವರಿಗೂ ಗೊತ್ತಿರುವಂತೆ, ಇಂತಹ ಕೃತ್ಯಗಳನ್ನು ಎಸಗುತ್ತಿರುವವರಲ್ಲಿ ಬಹುತೇಕರು ರೌಡಿಗಳು, ಗೂಂಡಾಗಳಾಗಿದ್ದಾರೆ. ಬೇರೆ ಬೇರೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಒಳಗೊಂಡವರಾಗಿದ್ದಾರೆ. ಒಂದು ರಾಜಕೀಯ ಸಿದ್ಧಾಂತವನ್ನು ಹೊಂದಿರುವ ಸಂಘಟನೆ ಇವರನ್ನು ಬಳಸಿಕೊಳ್ಳುತ್ತಿದೆ. ಆ ಸಂಘಟನೆಯೇ ಈ ಹಿಂದೆ ಮಹಾತ್ಮಾಗಾಂಧೀಜಿಯನ್ನು ಕೊಂದಿದೆ. ಅವರ ನಿಯಂತ್ರಣದಲ್ಲಿರುವ ಈ ನಕಲಿ ಗೋರಕ್ಷಕರು ನಡೆಸುತ್ತಿರುವ ಹತ್ಯೆಯನ್ನು ನರೇಂದ್ರ ಮೋದಿಯವರು ಈ ದೇಶದ ಹಿಂದೂಗಳ ತಲೆಗೆ, ಅಮಾಯಕ ಶ್ರೀಸಾಮಾನ್ಯನ ತಲೆಗೆ ಕಟ್ಟಿ, ಗಾಂಧೀಜಿಯ ಹೆಸರಿನಲ್ಲಿ ವ್ಯಂಗ್ಯವಾಡಿದ್ದಾರೆ. ನೊಂದವರ ಗಾಯಕ್ಕೆ ಅವರು ಉಪ್ಪು ಸವರಿದ್ದಾರೆ.

ಈ ದೇಶದಲ್ಲಿ ತಲೆತಲಾಂತರಗಳಿಂದ ಗೋರಕ್ಷಕರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗೋವುಗಳನ್ನು ಸಾಕುತ್ತಾ ಹೈನೋದ್ಯಮ ನಡೆಸುತ್ತಾ, ದೇಶಕ್ಕೆ ಹಾಲು, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ನೀಡುತ್ತಿದ್ದಾರೆ. ಅವರ್ಯಾರೂ ಬರೇ ಪೂಜಿಸುವುದಕ್ಕಾಗಿ ಗೋವುಗಳನ್ನು ಸಾಕುತ್ತಿಲ್ಲ. ಅದೊಂದು ಲಾಭದಾಯಕ ಉದ್ಯಮ ಎನ್ನುವ ಕಾರಣಕ್ಕಾಗಿ ಹಳ್ಳಿಗಳ ಪ್ರತಿ ಮನೆಗಳಲ್ಲೂ ಹಟ್ಟಿಗಳಿದ್ದವು. ದೇಶದಲ್ಲಿ ಕ್ಷೀರ ಕ್ರಾಂತಿ ನಡೆದಿದ್ದರೆ ಅದಕ್ಕೆ ಕಾರಣ ಈ ಗ್ರಾಮೀಣ ಪ್ರದೇಶದ ನಿಜವಾದ ಗೋರಕ್ಷಕರು. ಇಂದು ನಿಜವಾದ ಗೋರಕ್ಷಕರೆಲ್ಲ ತಮ್ಮ ಹಟ್ಟಿಗಳನ್ನು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಹಸುವನ್ನು ಮಾರುಕಟ್ಟೆಯಲ್ಲಿ ಮಾರುವ ಸ್ವಾತಂತ್ರವೂ ಇಲ್ಲದೆ, ಅದನ್ನು ಸಾಕುವ ಶಕ್ತಿಯೂ ಇಲ್ಲದೆ ಅವರು ಅತಂತ್ರವಾಗಿದ್ದಾರೆ.

ಇದೇ ಸಂದರ್ಭದಲ್ಲಿ, ಒಂದು ದಿನವೂ ಹಟ್ಟಿಯ ಸೆಗಣಿ ಬಳಿಯದ ಸಣ್ಣಪುಟ್ಟ ಪುಡಿ ರೌಡಿಗಳೆಲ್ಲ ಗೋರಕ್ಷಕರ ವೇಷದಲ್ಲಿ ತಿರುಗಾಡುತ್ತಿದ್ದಾರೆ. ಸರಕಾರದಿಂದ, ವಿವಿಧ ರಾಜಕೀಯ ಸಂಘಟನೆಗಳಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಾ, ಸಮಾಜದಲ್ಲಿ ಭಯೋತ್ಪಾಕರಾಗಿ ಓಡಾಡುತ್ತಿದ್ದಾರೆ. ಇವೆಲ್ಲವೂ ಸ್ಪಷ್ಟವಾಗಿ ಅರಿವಿರುವ ನರೇಂದ್ರ ಮೋದಿ, ಅಮಾಯಕರಂತೆ ಮಾತನಾಡುತ್ತಾರೆ ಎಂದರೆ ಅದರರ್ಥ, ಗೋವಿನ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಹತ್ಯೆಯನ್ನು ನಿಯಂತ್ರಿಸುವ ಉದ್ದೇಶವೇ ಅವರ ಅಜೆಂಡಾದಲ್ಲಿಲ್ಲ. ವಿಪರ್ಯಾಸವೆಂದರೆ, ನರೇಂದ್ರ ಮೋದಿಯವರು ಗೋ ಹಿಂಸಾಚಾರಕ್ಕೆ ಬಲಿಯಾದವರ ಕುರಿತಂತೆ ಸಬರಮತಿ ಆಶ್ರಮದಲ್ಲಿ ಅಣಕವಾಡುತ್ತಿರುವ ಹೊತ್ತಿನಲ್ಲೇ, ಇತ್ತ ಜಾರ್ಖಂಡ್‌ನಲ್ಲಿ ಓರ್ವ ಅಮಾಯಕನನ್ನು ಗೋಮಾಂಸದ ಹೆಸರಿನಲ್ಲಿ ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ.

ಇಂದು ದೇಶದಲ್ಲಿ ಓರ್ವನನ್ನು ಕೊಲ್ಲುವುದು ಎಷ್ಟು ಸುಲಭವೆಂದರೆ, ಗೋಮಾಂಸ ಎಂದು ಹುಯಿಲೆಬ್ಬಿಸಿ, ಒಬ್ಬನಿಗೆ ಚೂರಿಯಿಂದ ಇರಿದರೆ ಅದು ಮಾನ್ಯವಾಗುವಂತಹ ವಾತಾವರಣವಿದೆ. 2017ರ ಮೊದಲ ಆರು ತಿಂಗಳಲ್ಲಿ ಗೋವಿನ ಹೆಸರಿನಲ್ಲಿ 20 ಅಮಾಯಕರನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ ಮತ್ತು ಬಲಿಯಾದ ಆ 20 ಮಂದಿಯೂ ಮುಸ್ಲಿಮರೇ ಆಗಿದ್ದಾರೆ. ಇದು ಏನನ್ನು ಹೇಳುತ್ತದೆ? ಗೋವಿನ ಹೆಸರಲ್ಲಿ ಅವರು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹಲ್ಲೆ ನಡೆಸುತ್ತಿದ್ದಾರೆ. ಹಿಂಸೆ ನಡೆಸುವವರಿಗೆ ಗೋವು ದ್ವೇಷ ಸಾಧಿಸಲು ಒಂದು ನೆಪ ಮಾತ್ರ. ಪ್ರಧಾನಿ ಮೋದಿಯವರು ಗೃಹ ಇಲಾಖೆಯ ಜೊತೆಗೆ ಮಾತುಕತೆ ನಡೆಸಿ, ಅವರಿಗೆ ಸೂಕ್ತ ನಿರ್ದೇಶನ ಕೊಡುವ ಬದಲು, ಸಬರಮತಿ ಆಶ್ರಮದಲ್ಲಿ ಅಸಹಾಯಕನಂತೆ ಮಾತನಾಡುತ್ತಿರುವುದು ಈ ದೇಶದ ಭವಿಷ್ಯದ ಆತಂಕಗಳನ್ನು ಹೇಳುತ್ತಿದೆ. ಸಾರ್ವಜನಿಕವಾಗಿ ಶ್ರೀಸಾಮಾನ್ಯರನ್ನು ನಡು ಬೀದಿಯಲ್ಲಿ ಹತ್ಯೆಗೈಯುವ ಸಂಘಟನೆಗಳನ್ನು ಸರಕಾರಕ್ಕೆ ನಿಷೇಧಿಸಲು ಯಾಕೆ ಕಷ್ಟವಾಗುತ್ತಿದೆ? ಅವರನ್ನೇಕೆ ಇನ್ನೂ ಕಾನೂನಿನ ಅಡಿಯಲ್ಲಿ ಪೋಷಿಸಲಾಗುತ್ತಿದೆ?

ಸಬರಮತಿಯಲ್ಲಿ ನಿಂತು ನರೇಂದ್ರ ಮೋದಿಯವರು ‘‘ಇಂದಿನಿಂದ ದೇಶದ ಎಲ್ಲ ನಕಲಿ ಗೋರಕ್ಷಕ ಸಂಘಟನೆಗಳನ್ನು ನಿಷೇಧಿಸಲಾಗಿದೆ’’ ಎಂಬ ಒಂದು ಘೋಷಣೆಯನ್ನು ನೀಡಿದ್ದಿದ್ದರೆ ಪ್ರಧಾನಿಯಾಗಿ ಕರ್ತವ್ಯವನ್ನು ನಿರ್ವಹಿಸಿದಂತಾಗುತ್ತಿತ್ತು. ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಹಿಂದೆ ರಾಜಕೀಯ ಸಂಘಟನೆಗಳಿವೆ. ಮುಖ್ಯವಾಗಿ ಪ್ರಧಾನಮಂತ್ರಿಯವರ ಪಕ್ಷವೂ ಈ ನಕಲಿ ಗೋರಕ್ಷಕರ ಫಲಾನುಭವಿಗಳಲ್ಲಿ ಒಂದಾಗಿದೆ. ಆದುದರಿಂದಲೇ ಪ್ರಧಾನಮಂತ್ರಿಗೆ ಈ ಹಿಂಸಾಚಾರವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಇಂದು ದೇಶಾದ್ಯಂತ ಹಿಂಸೆಯನ್ನು ಬಿತ್ತಿ, ಬೆಳೆಸಿ ಆ ಮರದಿಂದ ಮತಗಳನ್ನು ಕೊಯ್ಯುವ ಆತುರದಲ್ಲಿವೆ ರಾಜಕೀಯ ಸಂಘಟನೆಗಳು. ಮತ್ತು ಈ ಹಿಂಸಾಚಾರವನ್ನು ತಡೆಯುವ ಎಲ್ಲ ದಾರಿಗಳು ಗೊತ್ತಿದ್ದೂ, ಅಸಹಾಯಕನಂತೆ ವರ್ತಿಸುವ ಮೂಲಕ ಭವಿಷ್ಯದ ಭಯಾನಕತೆಯನ್ನು ತಿಳಿಸಿದ್ದಾರೆ ಪ್ರಧಾನಿ ಮೋದಿ.

ಇಂತಹ ಹೊತ್ತಿನಲ್ಲಿ ದೇಶಾದ್ಯಂತ ‘ನನ್ನ ಹೆಸರಲ್ಲಿ ಬೇಡ-ಹಿಂದೂ ಹೆಸರಿನಲ್ಲಿ ಅಮಾಯಕರ ಕೊಲೆ ಸಹಿಸೆವು’ ಎನ್ನುವ ಅಭಿಯಾನವೊಂದು ಆರಂಭವಾಗಿದೆ. ಈ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ಅಭಿಯಾನದೊಳಗೆ ಭಾಗವಹಿಸುತ್ತಿದ್ದಾರೆ. ಆ ಮೂಲಕ ‘ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ ಹಿಂದೂಗಳಿಂದ ನಡೆಯುತ್ತಿರುವುದಲ್ಲ’ ಎನ್ನುವುದನ್ನು ಅವರು ಜಗತ್ತಿಗೆ ಸಾರುತ್ತಿದ್ದಾರೆ. ಈ ಆಂದೋಲನ ಇನ್ನಷ್ಟು ಬಲಪಡೆಯಬೇಕಾಗಿದೆ.

ಆದುದರಿಂದಲೇ ಸಜ್ಜನರು ಬೀದಿಯಲ್ಲಿ ನಡೆಯುತ್ತಿರುವ ರಕ್ತಪಾತದ ವಿರುದ್ಧ ಬಾಯಿ ತೆರೆಯಬೇಕು. ಸಜ್ಜನರು ಮಾತನಾಡ ತೊಡಗಿದಾಗ ದುರ್ಜನರ ಮಾತುಗಳು ಖಂಡಿತವಾಗಿಯೂ ಅಡಗಿ ಹೋಗುತ್ತವೆೆ. ಈ ದೇಶಕ್ಕೆ ಸದ್ಯ ನರೇಂದ್ರ ಮೋದಿಯಿಂದ ‘ಗಾಂಧೀ ಉಪದೇಶ’ಗಳ ಅಗತ್ಯವಿಲ್ಲ. ಗಾಂಧೀಯ ವೌಲ್ಯಗಳನ್ನು, ಚಿಂತನೆಗಳನ್ನು ಹಂಚಿಕೊಳ್ಳಲು ಸಂಬಂಧಪಟ್ಟ ಚಿಂತಕರಿದ್ದಾರೆ. ಪ್ರಧಾನಿಯಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿ ಕಾನೂನು ವ್ಯವಸ್ಥೆಯನ್ನು ಸುಭದ್ರಗೊಳಿಸುವುದನ್ನು ಮೋದಿಯಿಂದ ದೇಶ ನಿರೀಕ್ಷಿಸುತ್ತಿದೆ. ಈ ದೇಶದ ನಿಜವಾದ ಗೋರಕ್ಷಕರಾಗಿರುವ ರೈತರು ಉಳಿಯಬೇಕಾದರೂ, ನಕಲಿ ಗೋರಕ್ಷಕರ ವೇಷವನ್ನು ಕಳಚಿ ಹಾಕಿ, ಅವರನ್ನು ಸೇರಬೇಕಾದ ಸ್ಥಳಕ್ಕೆ ಸರಕಾರ ಸೇರಿಸಬೇಕು. ಇಲ್ಲವಾದರೆ ರೌಡಿಗಳೇ ಈ ದೇಶದ ಪರ್ಯಾಯ ಸರಕಾರವಾಗಿ ಕಾರ್ಯನಿರ್ವಹಿಸುವ ದಿನಗಳು ಬರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News