ಝಿಂಬಾಬ್ವೆ ಐತಿಹಾಸಿಕ ಜಯ

Update: 2017-06-30 18:39 GMT

ಗಾಲೆ, ಜೂ.30: ಆರಂಭಿಕ ದಾಂಡಿಗ ಸೊಲೊಮನ್ ಮೈರೆ ದಾಖಲಿಸಿದ ಚೊಚ್ಚಲ ಶತಕದ ನೆರವಿನಲ್ಲಿ ಝಿಂಬಾಬ್ವೆ ತಂಡ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 317 ರನ್‌ಗಳ ಸವಾಲನ್ನು ಪಡೆದ ಝಿಂಬಾಬ್ವೆ ತಂಡ ಇನ್ನೂ 14 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 322 ರನ್ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು.
ಸೊಲೊಮನ್ ಮೈರೆ 112 ರನ್(96 ಎಸೆತ, 14ಬೌ) ಶತಕ, ಸಿಯಾನ್ ವಿಲಿಯಮ್ಸ್(65), ಮತ್ತು ಸಿಕಂದರ್ ರಝಾ(ಔಟಾಗದೆ 67) ಅರ್ಧಶತಕಗಳ ಸಹಾಯದಿಂದ ಝಿಂಬಾಬ್ವೆ ಸ್ಮರಣೀಯ ಜಯ ದಾಖಲಿಸಿತು.

 ಇದರೊಂದಿಗೆ ಝಿಂಬಾಬ್ವೆ ತಂಡ ಶ್ರೀಲಂಕಾ ನೆಲದಲ್ಲಿ ಐತಿಹಾಸಿಕ ಜಯ ಗಳಿಸಿದೆ. ಕಠಿಣ ಸವಾಲನ್ನು ಬೆನ್ನಟ್ಟಿದ ಝಿಂಬಾಬ್ವೆ ತಂಡ 10.2 ಓವರ್‌ಗಳಲ್ಲಿ 46 ರನ್ ಗಳಿಸಿದ್ದಾಗ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮೂರನೆ ವಿಕೆಟ್‌ಗೆ ಸೊಲೊಮನ್ ಮತ್ತು ವಿಲಿಯಮ್ಸ್ ಜೊತೆಯಾಗಿ 161 ರನ್ ಸೇರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಸೊಲೊಮನ್ 16 ರನ್ ಮತ್ತು 94ರನ್ ಮಾಡಿದ್ದಾಗ ಜೀವದಾನ ಪಡೆದಿದ್ದರು. ಇವುಗಳ ಪ್ರಯೋಜನ ಪಡೆದು ಚೊಚ್ಚಲ ಶತಕ ದಾಖಲಿಸಿದ ಸೊಲೊಮನ್ ಅವರು ಗುಣರತ್ನೆಗೆ ರಿಟರ್ನ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ವಿಲಿಯಮ್ಸ್ ತಂಡದ ಸ್ಕೋರ್‌ನ್ನು 34.3 ಓವರ್‌ಗಳಲ್ಲಿ 220ಕ್ಕೆ ತಲುಪಿಸಿ ನಿರ್ಗಮಿಸಿದರು.
ಐದನೆ ವಿಕೆಟ್‌ಗೆ ಸಿಕಂದರ್ ರಝಾ ಮತ್ತು ಮಾಲ್ಕಮ್ ವಾಲೆರ್ ಮುರಿಯದ ಜೊತೆಯಾಟದಲ್ಲಿ 102 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಾಲೆರ್ ಔಟಾಗದೆ 40 ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 316 ರನ್ ಗಳಿತ್ತು.
ಆರಂಭಿಕ ದಾಂಡಿಗ ದಿಕ್‌ವೆಲ್ಲಾ (10) ಅವರನ್ನು ಹೊರತುಪಡಿಸಿದರೆ ಗುಣತಿಲಕ (60), ಕುಸಾಲ್ ಮೆಂಡಿಸ್(86), ಉಪುಲ್ ತರಂಗ(ಔಟಾಗದೆ 79),ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(43), ಗುಣರತ್ನೆ (28) ಉತ್ತಮ ಕೊಡುಗೆ ನೀಡಿ ಶ್ರೀಲಂಕಾ ತಂಡದ ಸ್ಕೋರ್‌ನ್ನು 316ಕ್ಕೆ ತಲುಪಿಸುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 50 ಓವರ್‌ಗಳಲ್ಲಿ 316/5(ಮೆಂಡಿಸ್ 86, ತರಂಗ ಔಟಾಗದೆ 79, ಗುಣತಿಲಕ 60, ಮ್ಯಾಥ್ಯೂಸ್ 43; ಚಟಾರ 49ಕ್ಕೆ 2)
ಝಿಂಬಾಬ್ವೆ 47.4 ಓವರ್‌ಗಳಲ್ಲಿ 322/4(ಸೊಲೊಮನ್ 112, ವಿಲಿಯಮ್ಸ್ 65, ರಝಾ ಔಟಾಗದೆ 67, ವಾಲ್ಲೆರ್ ಔಟಾಗದೆ 40; ಗುಣರತ್ನೆ 45ಕ್ಕೆ 2).
ಪಂದ್ಯಶ್ರೇಷ್ಠ: ಸೊಲೊಮನ್ ಮೈರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News