ಉತ್ತರ ಪ್ರದೇಶ: ಬಿಜೆಪಿ ನಾಯಕರ ಚಳಿ ಬಿಡಿಸಿದ ಮಹಿಳಾ ಪೊಲೀಸ್ ಅಧಿಕಾರಿಯ ವರ್ಗಾವಣೆ
ಲಕ್ನೋ, ಜು.2: ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರ ಚಳಿ ಬಿಡಿಸಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ.
ಬುಲಾಂದ್ ಶಹರ್ ಜಿಲ್ಲೆಯ ಸ್ಯಾನಾದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಅವರನ್ನು ಬಹರೈಚ್ ಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೂನ್ 22ರಂದು ಬಿಜೆಪಿ ನಾಯಕ ಪ್ರಮೋದ್ ಕುಮಾರ್ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಆರೋಪದಲ್ಲಿ ಅವರಿಗೆ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ 200ರೂ. ದಂಡ ವಿಧಿಸಿದ್ದರು.ಪೊಲೀಸ್ ಅಧಿಕಾರಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಈ ಕಾರಣಕ್ಕಾಗಿ ಸಿಟ್ಟಾಗಿದ್ದರು.
ಬಳಿಕ ಪ್ರಮೋದ್ ಕುಮಾರ್ ವಿರುದ್ದ ಕಾನೂನು ಕ್ರಮ ಕೈಗೊಂಡಕ್ಕಾಗಿ ಪೊಲೀಸ್ ಅಧಿಕಾರಿಯ ಜೊತೆ ನ್ಯಾಯಾಲಯದ ಆವರಣದಲ್ಲಿ ವಾಗ್ವಾದ ನಡೆಸಿದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಮಾತಿನ ಛಡಿಯೇಟು ನೀಡಿ ಬಾಯ್ಮುಚ್ಚಿಸಿರುವ ವಿಡಿಯೊ ದೃಶ್ಯವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಬಿಜೆಪಿಯ ನಿಯೋಗವೊಂದು ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಪೊಲೀಸ್ ಅಧಿಕಾರಿ ವಿರುದ್ಧ ದೂರು ನೀಡಿದ್ದರು. ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಮುಖ್ಯ ಮಂತ್ರಿ ಆದಿತ್ಯನಾಥ್ ಅವರು ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.