ರೈಲ್ ಗೂ ಬಂತು ಎಕಾನಮಿ ಎಸಿ ಬೋಗಿಗಳ ಸೌಲಭ್ಯ
ಹೊಸದಿಲ್ಲಿ, ಜು.2: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಶುಭ ಸುದ್ದಿ. ಶೀಘ್ರದಲ್ಲೇ ರೈಲ್ ನಲ್ಲಿ ’ಎಕಾನಮಿ ಹವಾನಿಯಂತ್ರಿತ ಬೋಗಿಗಳ ಸೌಲಭ್ಯ ದೊರೆಯಲಿದೆ. ಹೊಸ ’ಎಕಾನಮಿ ಹವಾನಿಯಂತ್ರಿತ ಬೋಗಿಗಳಲ್ಲಿ ಟಿಕೆಟ್ ದರ ಸಾಮಾನ್ಯ 3 ಎಸಿ ದರಕ್ಕಿಂತ ಕಡಿಮೆ ಇರುತ್ತದೆ.
ಸಂಪೂರ್ಣ ಎಸಿ ರೈಲಿನಲ್ಲಿ ಮೂರು-ಹಂತದ ಎಕಾನಮಿ ಎಸಿ ಬೋಗಿಗಳು, ಎಸಿ-3, ಎಸಿ-2 ಮತ್ತು ಎಸಿ-1 ದರ್ಜೆಯ ಬೋಗಿಗಳ ಸೌಲಭ್ಯ ಇರುತ್ತವೆ. ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಉದ್ದೇಶಿತ ರೈಲು ಸ್ವಯಂಚಾಲಿತ ಬಾಗಿಲುಗಳನ್ನು ಕೂಡ ಹೊಂದಲಿದ್ದು, ಪ್ರಯಾಣಿಕರಿಗೆ ಎಕಾನಮಿ ಎಸಿ ಬೋಗಿಗಳಲ್ಲಿ ಪ್ರಯಾಣಿಸುವಾಗ ಹೊದಿಕೆಯ ಅಗತ್ಯವಿರುವುದಿಲ್ಲ. ಇತರ ಎಸಿ ಬೋಗಿಗಳಂತೆ ಇಲ್ಲಿ ಕೂಡ ಉಷ್ಣತೆ 24ರಿಂದ 25 ಡಿಗ್ರಿ ಸೆಲ್ಸಿಯಸ್ ಗಳಷ್ಟಿರುತ್ತದೆ.
ಪ್ರಸ್ತುತ ಮೈಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಸ್ಲೀಪರ್, ತೃತೀಯ ಎಸಿ, ದ್ವಿತೀಯ ಎಸಿ ಮತ್ತು ಪ್ರಥಮ ಎಸಿ ದರ್ಜೆಯ ಬೋಗಿಗಳಿವೆ. ರಾಜಧಾನಿ,ಶತಾಬ್ದಿ ಮತ್ತ ಇತ್ತೀಚೆಗೆ ಜಾರಿಗೆ ಬಂದ ಹಮ್ಸಫರ್ ಮತ್ತು ತೇಜಸ್ ರೈಲುಗಳಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು ಇವೆ.