×
Ad

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಮಾತ್ರವಲ್ಲ ಅದ್ಭುತ ‘ಡಿಸೈನರ್’ ಕೂಡಾ !

Update: 2017-07-02 15:15 IST

ಕೋಲ್ಕತಾ,ಜು.2: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯ ಜೊತೆಗೆ ಪ್ರಮುಖ ಪ್ರತಿಪಕ್ಷ ನಾಯಕಿಯೂ ಆಗಿದ್ದಾರೆ. ಇದರ ಜೊತೆಗೆ ಅವರು ‘ಡಿಸೈನರ್’ ಅಥವಾ ವಿನ್ಯಾಸಕಿಯೂ ಆಗಿದ್ದಾರೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಬಂಧುಗಳ ಪಾಲಿಗಂತೂ ವಿನ್ಯಾಸಕಿಯಾಗಿ ಮಮತಾ ನಿಜಕ್ಕೂ ಒಂದು ಉಡುಗೊರೆ ಯಾಗಿದ್ದಾರೆ.

 ಅವರು ಅತ್ಯಂತ ವೇಗವಾಗಿ ಹೆಣಿಗೆ ಮಾಡುತ್ತಾರೆ. ಡಿ.31ರಂದು ನನಗಾಗಿ ತೋಳಿಲ್ಲದ ಸ್ವೆಟರ್‌ವೊಂದನ್ನು ಹೆಣೆಯಲು ಅವರು ಆರಂಭಿಸಿದ್ದು,ಜನವರಿ 1ರಂದು ಅದು ಪೂರ್ಣಗೊಂಡು ನಾನು ಧರಿಸಿದ್ದೆ. ಅವರು ಸ್ವೆಟರ್‌ನ ಮೇಲೆ ಸುಂದರ ವಿನ್ಯಾಸ ಗಳನ್ನೂ ರಚಿಸಿದ್ದರು ಎಂದು ಮಮತಾರ ಸೋದರನ ಪುತ್ರಿ ಮವು ಬ್ಯಾನರ್ಜಿ ಹೇಳಿದರು.

 ಕಳೆದ ಕೆಲವು ವರ್ಷಗಳಲ್ಲಿ ಲಾಂಛನಗಳು,ದುರ್ಗಾ ಪೂಜೆಗೆ ವಿಗ್ರಹಗಳು ಮತ್ತು ಮಂಟಪಗಳ ವಿನ್ಯಾಸಗಳನ್ನು ಮಮತಾ ರೂಪಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರಿಗಳು ಮತ್ತು ಸಚಿವರ ವಾಹನಗಳ ಮೇಲೆ ಕೆಂಪುದೀಪ ನಿಷೇಧದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಿನಲ್ಲಿ ಕೆಂಪುದೀಪಗಳ ಬದಲು ಅಳವಡಿಸಲು ಧ್ವಜಗಳನ್ನೂ ಅವರು ವಿನ್ಯಾಸ ಗೊಳಿಸಿದ್ದರು.

ವಾಹನಗಳ ಮೇಲೆ ಕೆಂಪುದೀಪದ ಬದಲಿಗೆ ಧ್ವಜವನ್ನು ಅಳವಡಿಸುವ ಪರಿಕಲ್ಪನೆಯನ್ನು ಮಾಡಿದ್ದ ಅವರು, ಬಳಿಕ ಅದರ ಮೇಲೆ ವಿನ್ಯಾಸವಿರಬೇಕೆಂದೂ ನಿರ್ಧರಿಸಿದ್ದರು. ಧ್ವಜವು ಬಂಗಾಳದ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು ಮತ್ತು ಲಾಂಛನವು ಅಧಿಕಾರಿಗಳ ಶ್ರೇಣಿಯನ್ನು ಸೂಚಿಸುವಂತಿರಬೇಕು ಎಂದು ಅವರು ಬಯಸಿದ್ದರು ಮತ್ತು ಅಂತಿಮ ವಿನ್ಯಾಸವನ್ನು ಸ್ವತಃ ಸಿದ್ಧಗೊಳಿಸಿದ್ದರು ಎಂದು ಸರಕಾರದ ಅಧಿಕಾರಿಯೋರ್ವರು ತಿಳಿಸಿದರು.

ಪ.ಬಂಗಾಳದಲ್ಲಿ ಪ್ರಮುಖ ಉತ್ಸವವಾಗಿರುವ ದುರ್ಗಾಪೂಜೆಯ ಸಂದರ್ಭದಲ್ಲಿ ಸಾಮೂಹಿಕ ದುರ್ಗಾ ಪೂಜಾ ಮಂಡಳಿಯೊಂದಕ್ಕಾಗಿ ದೇವಿಯ ವಿಗ್ರಹ ಮತ್ತು ಉತ್ಸವ ಮಂಟಪದ ವಿನ್ಯಾಸವನ್ನೂ ಹಿಂದೆ ಕೇಂದ್ರ ರೈಲ್ವೆ ಸಚಿವೆಯಾಗಿದ್ದಾಗ ಮಮತಾ ರೂಪಿಸಿದ್ದರು. ಕೇಂದ್ರ ಸಚಿವೆಯಾಗಿ ಸದಾ ವ್ಯಸ್ತರಾಗಿದ್ದರೂ ಉತ್ಸವ ಮಂಟಪ ಮತ್ತು ದೇವಿಯ ವಿಗ್ರಹವನ್ನು ಅವರು ವಿನ್ಯಾಸಗೊಳಿಸಿದ್ದರು ಎಂದು ಬಕುಲ ಬಾಗನ್ ಸಾರ್ವಜನಿಕ ದುರ್ಗಾ ಉತ್ಸವ ಸಮಿತಿಯ ಮಾಜಿ ಕಾರ್ಯದರ್ಶಿ ರಾಮಕುಮಾರ್ ಡೇ ನೆನಪಿಸಿಕೊಂಡರು.

ಆಡಳಿತಾತ್ಮಕ ಸಭೆಗಳಿಂದ ಹಿಡಿದು ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾಗಲೂ ಮಮತಾ ಕಾಗದದ ಮೇಲೆ ಚಿತ್ರಗಳು ಮತ್ತು ವಿನ್ಯಾಸಗಳನ್ನು ಗೀಚುತ್ತಿರುತ್ತಾರೆ. ತಡರಾತ್ರಿಯವರೆಗೂ ಎಚ್ಚರವಾಗಿದ್ದು ಡಿಸೈನಿಂಗ್ ಮತ್ತು ಪೇಂಟಿಂಗ್ ಬಗ್ಗೆ ಚಿಂತನೆ ನಡೆಸುತ್ತಿರುತ್ತಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದರು.

ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳಿಗಾಗಿ ಎಲ್ಲ ಪ್ರಚಾರ ಅಭಿಯಾನಗಳಿಗೆ ಸೂಕ್ತ ವಾದ ಲಾಂಛನವೊಂದನ್ನೂ ಮಮತಾ ರೂಪಿಸಿದ್ದು, ಅದನ್ನು ‘ವಿಶ್ವ ಬಾಂಗ್ಲಾ’ ಎಂದು ಹೆಸರಿಸಿದ್ದಾರೆ. ಶಾಲಾಮಕ್ಕಳಿಗೆ ಸೈಕಲ್ ವಿತರಣೆಯ ಯೋಜನೆ ‘ಸಬುಜ್ ಸಾಥಿ’ ಗಾಗಿ ಅವರೇ ಖುದ್ದಾಗಿ ಲಾಂಛನವನ್ನು ರೂಪಿಸಿದ್ದರು.

ಮಮತಾ ತುಂಬ ಭಾವಜೀವಿಯಾಗಿದ್ದಾರೆ ಮತ್ತು ವಿನ್ಯಾಸಗಳನ್ನು ರೂಪಿಸುವತ್ತ ಅವರ ಒಲವು ಅದನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಪ್ರತಿಷ್ಠಿತ ಚಿತ್ರ ಕಲಾವಿದ ಹಾಗೂ ಟಿಎಂಸಿ ಸಂಸದ ಜೋಗನ್ ಚೌಧುರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News