ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಜಾತ್ಯತೀತತೆಯ ಪ್ರತೀಕ: ಪಿಣರಾಯಿ ವಿಜಯನ್

Update: 2017-07-03 07:11 GMT

ತಿರುವನಂತಪುರಂ,ಜು.3: ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ದೇಶದ ಜಾತ್ಯತೀತ ತಳಹದಿಯ ಪ್ರತೀಕವಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯದ ಜನಪ್ರತಿನಿಧಿಗಳ ಬೆಂಬಲವನ್ನು ಯಾಚಿಸಿ ಕೇರಳಕ್ಕೆ ಬಂದಿದ್ದ ಮೀರಾಕುಮಾರ್‍ರಿಗೆ ಮಾಸ್ಕಟ್ ಹೊಟೇಲ್‍ನಲ್ಲಿ ನಡೆದ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿ ಮಾತಾಡುತ್ತಿದ್ದರು.

ದೇಶದ ಇಂದಿನ ಅವಸ್ಥೆಗಳೇ ಕೇರಳದ ಆಡಳಿತಪಕ್ಷ ಮತ್ತು ಪ್ರತಿಪಕ್ಷಗಳು ಈ ರೀತಿ ಒಗ್ಗೂಡಲು ಅನುವು ಮಾಡಿಕೊಟ್ಟಿದೆ. ಕೇಂದ್ರಸರಕಾರದ ನಿಲುವುಗಳು ದೇಶದ ಹಿತ ಮತ್ತು ಜನರ ಹಿತಕ್ಕೆ ವಿರುದ್ಧವಾಗಿದೆ. ಕೇಂದ್ರ ಸರಕಾರದ ಕ್ರಮಗಳು ಜನರಲ್ಲಿ ಗುಂಪುಗಾರಿಕೆ ಸೃಷ್ಟಿಸಿದೆ ಎಂದು ಪಿಣರಾಯಿ ವಿಜಯನ್ ಅಭಿಪ್ರಾಯ ವ್ಯಕ್ತಪಡಿಸಿದರು. ದೇಶದಲ್ಲಿ ಕೋಮುಶಕ್ತಿಗಳು ವಿಜ್ರಂಭಿಸುತ್ತಿವೆ. ರೈಲಿನಲ್ಲಿ ಪ್ರಯಾಣಿಸುವ ಸಹೋದರರ ಧರ್ಮ ಯಾವುದೆಂದು ಅರಿತುಕೊಂಡು ಅವರಲ್ಲಿ ಒಬ್ಬನನ್ನು ಕೊಲ್ಲುವ ಇತರರ ಮೇಲೆ ಹಲ್ಲೆನಡೆಸುವ ಘಟನೆ ಕೂಡಾ ನಡೆಯಿತು ಎಂದು ಮುಖ್ಯಮಂತ್ರಿ ವಿಷಾದಿಸಿದರು.

ಏನು ತಿನ್ನಬೇಕು, ಯಾವ ಬಟ್ಟೆ ಧರಿಸಬೇಕೆಂದು ಕೆಲವರು ನಿರ್ಧರಿಸುತ್ತಿದ್ದಾರೆ. ದೇಶದ ಜಾತ್ಯತೀತತೆಗೆ ಅಪಾಯವೊಡ್ಡುವ ಕೆಲಸಕ್ಕೆ ಕೇಂದ್ರಸರಕಾರ ನೇತೃತ್ವವನ್ನು ನೀಡುತ್ತಿದೆ. ಆರೆಸ್ಸೆಸ್ ಮುಂದಾಳುತ್ವದ ಬಿಜೆಪಿಯಲ್ಲಿ ಇದಕ್ಕಿಂತ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಜಾತ್ಯತೀತತೆಗೆ ಬೆದರಿಕೆಯೊಡ್ಡುವ ಒಂದು ವ್ಯವಸ್ಥೆಯ ಪ್ರತಿನಿಧಿ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.  ಈವರೆಗೂ ಎದುರಿಸದಿರುವ ಬೆದರಿಕೆಯನ್ನುದೇಶದ ಜಾತ್ಯತೀತತೆ ತತ್ವ ಇಂದು ಎದುರಿಸುತ್ತಿದೆ. ಆದ್ದರಿಂದ ರಾಜಕೀಯ ವ್ಯತ್ಯಾಸಗಳನ್ನು ಮರೆತು ಒಗ್ಗೂಡಬೇಕಾಗಿದೆ ಎಂದು ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News