ಸಿಕ್ಕಿಂ ಗಡಿಯಲ್ಲಿ ಭಾರತದಿಂದ ವಿಶ್ವಾಸ ದ್ರೋಹ: ಚೀನಾ ಆರೋಪ

Update: 2017-07-03 13:25 GMT

ಬೀಜಿಂಗ್, ಜು. 3: ಸಿಕ್ಕಿಂನಲ್ಲಿ ಭಾರತದೊಂದಿಗೆ ತಾನು ಹೊಂದಿರುವ ಗಡಿಯನ್ನು ಸರಿಯಾಗಿಯೇ ಗುರುತಿಸಲಾಗಿದೆ ಹಾಗೂ ಭಾರತೀಯ ಸೇನೆಯು ಕಳೆದ ತಿಂಗಳು ಅಲ್ಲಿ ತೆಗೆದುಕೊಂಡ ಕ್ರಮವು ಈ ಹಿಂದಿನ ಭಾರತೀಯ ಸರಕಾರಗಳು ತೆಗೆದುಕೊಂಡ ನಿಲುವಿನ ಉಲ್ಲಂಘನೆಯಾಗಿದೆ ಎಂದು ಚೀನಾ ಇಂದು ಹೇಳಿದೆ.

‘‘ಸಿಕ್ಕಿಂ ಕುರಿತ 1890ರ ಚೀನಾ-ಬ್ರಿಟಿಶ್ ಒಪ್ಪಂದವನ್ನು ಅನುಮೋದಿಸಿ ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ 1959ರಲ್ಲಿ ಚೀನಾ ಪ್ರಧಾನಿ ಝೂ ಎನ್‌ಲೈ ಅವರಿಗೆ ಪತ್ರವೊಂದನ್ನು ನೀಡಿದ್ದರು. ಭಾರತದಲ್ಲಿ ಆ ನಂತರ ಬಂದ ಸರಕಾರಗಳೂ ಇದನ್ನು ಅನುಮೋದಿಸಿವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

ಭಾರತದ ಈ ಒಪ್ಪಂದವನ್ನು ಪರಿಶೀಲಿಸಿ ಡೋಕ್ಲಂ ಪ್ರದೇಶದಿಂದ ತನ್ನ ಪಡೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಚೀನಾ ಹಿಮಾಲಯದ ಗಡಿಯಲ್ಲಿ ನಿರ್ಮಿಸುತ್ತಿರುವ ನೂತನ ರಸ್ತೆಯ ಕಾಮಗಾರಿಯನ್ನು ನಿಲ್ಲಿಸಲು ಭಾರತೀಯ ಪಡೆಗಳು ಒಂದು ತಿಂಗಳ ಹಿಂದೆ ವಾಸ್ತವಿಕ ನಿಯಂತ್ರಣ ರೇಖೆಯೆಂಬ ವಾಸ್ತವಿಕ ಗಡಿಯನ್ನು ದಾಟಿ ಬಂದಿವೆ ಎಂದು ಚೀನಾ ಆರೋಪಿಸಿದೆ. ಇದು ‘ಗಂಭೀರ ಭದ್ರತಾ’ ಕಳವಳವನ್ನು ಹುಟ್ಟುಹಾಕಿದೆ ಎಂದರು.

 ಭಾರತ, ಚೀನಾ ಮತ್ತು ಭೂತಾನ್‌ಗಳ ಗಡಿಗಳು ಸಂಧಿಸುವ ದುರ್ಗಮ ಭೂಭಾಗದಲ್ಲಿ ಹೊಸ ಸಂಘರ್ಷ ತಲೆದೋರಿದೆ.

ಬೀಜಿಂಗ್ ಕಳೆದ ವಾರ ಔಪಚಾರಿಕ ಪ್ರತಿಭಟನೆ ಸಲ್ಲಿಸಿತ್ತು. ರಸ್ತೆ ಕಾಮಗಾರಿ ನಿಲ್ಲಿಸಲು ಭಾರತೀಯ ಗಡಿ ಸೈನಿಕರು ಸಿಕ್ಕಿಂ ರಾಜ್ಯದಿಂದ ಗಡಿ ದಾಟಿ ತನ್ನ ಟಿಬೆಟ್ ಭೂಭಾಗಕ್ಕೆ ಬಂದಿದ್ದಾರೆ ಎಂದು ಅದು ಆರೋಪಿಸಿತ್ತು.

ಆದರೆ ಶುಕ್ರವಾರ ಇದಕ್ಕೆ ಪ್ರತಿಕ್ರಿಯಿಸಿದ ಭಾರತ, ಏಕಪಕ್ಷೀಯವಾಗಿ ರಸ್ತೆ ನಿರ್ಮಿಸುವುದಕ್ಕಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಈ ಪ್ರದೇಶವನ್ನು ಪ್ರವೇಶಿಸಿದೆ ಎಂದು ಹೇಳಿದೆ.

ಬಿಕ್ಕಟ್ಟು ಇತ್ಯರ್ಥಗೊಳ್ಳದಿದ್ದರೆ ಯುದ್ಧವೂ ಸಾಧ್ಯ; ಚೀನಾ ಚಿಂತಕರ ಎಚ್ಚರಿಕೆ

ಭಾರತದೊಂದಿಗಿನ ಗಡಿ ಸಂಘರ್ಷಗಳಲ್ಲಿ ಯುದ್ಧದ ಬೆಲೆ ತೆತ್ತಾದರೂ ಚೀನಾವು ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುತ್ತದೆ ಎಂದ ಅಭಿಪ್ರಾಯವನ್ನು ಚೀನಾದ ಮಾಧ್ಯಮಗಳು ಮತ್ತು ಚೀನಾ ಪರ ಚಿಂತಕರು ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಚೀನಾಗಳ ನಡುವಿನ ಸಂಘರ್ಷವನ್ನು ಸರಿಯಾಗಿ ನಿಭಾಯಿಸದೆ ಹೋದರೆ ಯುದ್ಧ ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಹೇಳುತ್ತಾರೆ.

ಸಿಕ್ಕಿಂ ಗಡಿಯ ಡೋಕ್ಲಮ್‌ನಲ್ಲಿ ಏರ್ಪಟ್ಟಿರುವ ಬಿಕ್ಕಟ್ಟು ಮೂರನೆ ವಾರಕ್ಕೆ ಮುಂದುವರಿದಿರುವಂತೆಯೇ ಈ ಎಚ್ಚರಿಕೆ ವ್ಯಕ್ತವಾಗಿದೆ.

‘‘ಚೀನಾ ಕೂಡ 1962ಕ್ಕಿಂತ ಭಿನ್ನವಾಗಿದೆ’’ ಎಂದು ಅಂತಾರಾಷ್ಟ್ರೀಯ ಅಧ್ಯಯನಗಳ ಶಾಂೈ ಮುನಿಸಿಪಲ್ ಸೆಂಟರ್‌ನಲ್ಲಿ ಪ್ರೊಫೆಸರ್ ಆಗಿರುವ ವಾಂಗ್ ಡೆಹುವ ಹೇಳಿದ್ದಾರೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ಹೇಳಿದೆ.

2017ರ ಭಾರತವು 1962ರ ಭಾರತಕ್ಕಿಂತ ಭಿನ್ನವಾಗಿದೆ ಎಂಬ ರಕ್ಷಣಾ ಸಚಿವ ಅರುಣ್ ಜೇಟ್ಲಿಯ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News