ಡೋಕ ಲಾ ದೋಖಾ: ಮುತ್ಸದ್ದಿತನವೇ ಪರಿಹಾರ

Update: 2017-07-03 18:30 GMT

ದೂರದಲ್ಲಿರುವ ಸಂಬಂಧಿಕರಿಗಿಂತಲೂ ನೆರೆಯ ಆಪ್ತನ ಜೊತೆಗೆ ಹೆಚ್ಚು ಚೆನ್ನಾಗಿರಿ ಎನ್ನುವ ಮಾತೊಂದಿದೆ. ಇದು ಮನೆಗಷ್ಟೇ ಸೀಮಿತವಾದ ಮಾತಲ್ಲ. ಒಂದು ದೇಶದ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಮಾತು ಅರ್ಥಪೂರ್ಣ. ನೆರೆಹೊರೆ ದೇಶಗಳ ಸಹಕಾರ ಇಲ್ಲದೇ ಯಾವ ದೇಶವೂ ಅಭಿವೃದ್ಧಿಯ ಕಡೆಗೆ ಮುನ್ನಡೆಯಲು ಸಾಧ್ಯವಿಲ್ಲ. ಸಹಕಾರವೆಂದರೆ ಅದರ ಅರ್ಥ ಸೌಹಾರ್ದ. ಎರಡು ದೇಶಗಳು ಉತ್ತಮ ಸಂಬಂಧ ಹೊಂದಿದಂತೆಯೇ ಆ ದೇಶಗಳು ಒಳಗಿಂದೊಳಗೆ ಬಲಿಷ್ಠವಾಗತೊಡಗುತ್ತವೆ.

ಆದುದರಿಂದ ಯಾವುದೇ ದೇಶ ಮೊತ್ತ ಮೊದಲು ತನ್ನ ನೆರೆಯ ದೇಶದ ಜೊತೆಗಿನ ಸಂಬಂಧಕ್ಕೆ ಹೆಚ್ಚು ಆದ್ಯತೆಯನ್ನು ನೀಡಬೇಕು. ಆದರೆ ಇಂದು ಹೆಚ್ಚು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಮೂಲಕ ದೇಶಗಳು ತಮ್ಮ ಹೊರಒಳಗಿನ ಭದ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಭಾರತ ಉಪಖಂಡ ಈ ಕಾರಣದಿಂದಲೇ ಅತ್ಯಂತ ಆತಂಕಕಾರಿ ಸನ್ನಿವೇಶವನ್ನು ಎದುರಿಸುತ್ತಿದೆ.

ಪಾಕ್, ಭಾರತ, ಶ್ರೀಲಂಕಾ, ಬಾಂಗ್ಲಾ, ಭೂತಾನ್, ನೇಪಾಳ ಇವೆಲ್ಲವು ಸೌಹಾರ್ದದಿಂದ ಕೈ ಜೋಡಿಸಲು ಹಲವು ಕಾರಣಗಳಿದ್ದವು. ಈ ಎಲ್ಲ ದೇಶಗಳು ಒಂದಲ್ಲ ಒಂದು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಿಂದ ಪರಸ್ಪರ ಸೋದರ ಸಂಬಂಧಿಗಳೇ ಆಗಿವೆ. ಇವುಗಳಿಗೆ ನೀರೆರೆದು ಪೋಷಿಸಿ, ಪರಸ್ಪರ ನಂಬಿಕೆಯ ಮೂಲಕ ಒಂದಾಗಿ ಸಾಗುವ ಕಡೆಗೆ ನಮ್ಮ ನಾಯಕರು ಪ್ರಯತ್ನಿಸಿದ್ದಿದ್ದರೆ ಇಂದು ಭಾರತವೂ ಸೇರಿದಂತೆ ಉಪಖಂಡ ಅಭಿವೃದ್ಧಿಯ ತುತ್ತ  ತುದಿಯಲ್ಲಿ ಇರಬಹುದಿತ್ತೇನೋ?

ಆದರೆ ಸೌಹಾರ್ದಕ್ಕಿಂತ ಶಸ್ತ್ರಾಸ್ತ್ರಗಳನ್ನು ನಂಬಿದ ಕಾರಣಕ್ಕಾಗಿಯೇ ಈ ಎಲ್ಲ ದೇಶಗಳು, ತಮ್ಮ ತಮ್ಮ ಜನರ ಅಭಿವೃದ್ಧಿಗೆ ವ್ಯಯಿಸಬೇಕಾದ ಹಣವನ್ನು ಸೇನೆಗೆ ವ್ಯಯಿಸಬೇಕಾದಂತಹ ಸ್ಥಿತಿ ಬಂದಿದೆ. ಶಸ್ತ್ರಾಸ್ತ್ರಗಳನ್ನು ಆಧರಿಸಿ ದೇಶವನ್ನು ಮುನ್ನಡೆಸುವುದು ಒಂದು ರೀತಿಯಲ್ಲಿ ಹುಲಿಸವಾರಿ ಇದ್ದಂತೆ. ಒಮ್ಮೆ ಇದರ ಮೇಲೇರಿದರೆ ಇಳಿಯುವಂತಿಲ್ಲ. ಇಂದು ಪಾಕಿಸ್ತಾನ, ಭಾರತದ ಸ್ಥಿತಿಯಂತೂ ಈ ಹುಲಿ ಸವಾರಿಯ ಮೂಲಕವೇ ಮುಂದುವರಿಯುತ್ತಿದೆ. ಉಭಯ ದೇಶಗಳ ತಿಕ್ಕಾಟವನ್ನು ತಮಗೆ ಪೂರಕವಾಗಿ ಬಳಸಿಕೊಳ್ಳಲು ಒಂದೆಡೆ ಅಮೆರಿಕ ಯತ್ನಿಸುತ್ತಿದ್ದರೆ ಮಗದೊಂದೆಡೆ ಚೀನಾ ಸಂಚು ಹೂಡಿದೆ. ಭಾರತ ಅಮೆರಿಕಕ್ಕೆ ಹೆಚ್ಚು ಹತ್ತಿರವಾದಂತೆಯೇ, ಪಾಕಿಸ್ತಾನ ಚೀನಾಕ್ಕೆ ಹತ್ತಿರವಾಗುತ್ತಿದೆ. ಈ ಒಲ್ಲದ ಸಂಬಂಧವನ್ನು ನಿಭಾಯಿಸಲೇಬೇಕಾದಂತಹ ಸ್ಥಿತಿ ಉಭಯ ದೇಶದ್ದೂ ಆಗಿದೆ. ಹುಲಿ ಸವಾರಿಯಿಂದ ಇಳಿದರೆ ಏರಿದ ಹುಲಿಯೇ ನುಂಗಿ ಹಾಕುವ ಭಯ ಉಭಯ ದೇಶಗಳದ್ದೂ ಆಗಿದೆ.

ಮೋದಿ ಸರಕಾರ ಪಾಕಿಸ್ತಾನದ ವಿಷಯದಲ್ಲಿ  ಯುದ್ಧಾತುರವನ್ನು ಪ್ರದರ್ಶಿಸುತ್ತಾ ಬರುತ್ತಿದೆ. ತನ್ನ ಆರ್ಥಿಕ ನೀತಿಗಳ ವೈಫಲ್ಯಗಳನ್ನು ಮುಚ್ಚಿಹಾಕುವುದಕ್ಕೂ ಆಗಾಗ ಪಾಕಿಸ್ತಾನದ ಜಪ ಮಾಡುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಚೀನಾ ಎನ್ನುವುದನ್ನು ಅದು ಮರೆಗೆ ಸರಿಸುತ್ತಿದೆ. ಈ ಕುರಿತಂತೆ ಜನರನ್ನು ಸರಕಾರ ಕತ್ತಲೆಯಲ್ಲಿಟ್ಟರೂ, ವಾಸ್ತವ ಮುನ್ನೆಲೆಗೆ ಬರಲೇಬೇಕು. ಡೋಕ ಲಾದಲ್ಲಿ ಚೀನಾ ಮಾಡಿರುವ ಧೋಖಾ ಈಗ ಬಹಿರಂಗವಾಗಿದ್ದು ಮೋದಿ ಸರಕಾರ ಇಕ್ಕಟ್ಟಿನಲ್ಲಿದೆ. ಸಿಕ್ಕಿಂ ಗಡಿಯಲ್ಲಿ ಸದ್ಯಕ್ಕೆ ಭಾರತ ಮತ್ತು ಚೀನಾ ನಡುವಿನ ತಿಕ್ಕಾಟ ಯಾವ ಸಂದರ್ಭದಲ್ಲೂ ಒಂದು ಯುದ್ಧ ಸ್ಫೋಟಕ್ಕೆ ಕಾರಣವಾಗಬಹುದು.

ಮಗ ಸತ್ತರೂ ಪರವಾಗಿಲ್ಲ ಸೊಸೆ ವಿಧವೆಯಾಗಬೇಕು ಎನ್ನುವ ಹಟದಲ್ಲಿ ಪಾಕಿಸ್ತಾನವು ಇದೀಗ ಚೀನಾದ ಸ್ನೇಹದ ತೆಕ್ಕೆಯಲ್ಲಿ ಬಿದ್ದಿದೆ. ಈ ಸ್ನೇಹದ ಹಿಂದಿರುವುದು ಪಾಕಿಸ್ತಾನದ ಅಭಿವೃದ್ಧಿಗಿಂತಲೂ ಭಾರತದ ಜೊತೆಗಿನ ವೈರತ್ವ ಎನ್ನುವುದು ಗಮನಾರ್ಹ. ಭಾರತ ಸ್ವಾತಂತ್ರಗೊಂಡಾಗ ಪಾಕಿಸ್ತಾನ ಅತ್ಯಾತುರದಿಂದ ಅಮೆರಿಕದ ಸ್ನೇಹದ ತೆಕ್ಕೆಗೆ ಬಿತ್ತು. ಆದರೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಮಾತ್ರ ಮುತ್ಸದ್ದಿತನದ ಹೆಜ್ಜೆಯನ್ನಿಟ್ಟರು. ಅವರು ಅಲಿಪ್ತ ನೀತಿಗೆ ಮಹತ್ವವನ್ನು ನೀಡಿದರು. ಇಂದಿರಾ ಗಾಂಧಿಯ ಕಾಲದವರೆಗೂ ಭಾರತ ತೃತೀಯ ಶಕ್ತಿಯಾಗಿ, ಅಲಿಪ್ತ ನೀತಿಯ ನಾಯಕನಾಗಿ ವಿಶ್ವದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವುದನ್ನು ಗಮನಿಸಬೇಕು. ಆದರೆ ಪಿ.ವಿ.ನರಸಿಂಹ ರಾವ್ ಮತ್ತು ಅಟಲ್ ಕಾಲದಲ್ಲಿ ಭಾರತದ ವಿದೇಶಾಂಗ ನೀತಿ ದುರ್ಬಲಗೊಂಡಿತು.

ಎನ್‌ಡಿಎ ಸರಕಾರವಂತೂ ಅಮೆರಿಕದ ಜೊತೆಗೆ ಸ್ನೇಹ ಮಾಡುವ ಆತುರದಲ್ಲಿ, ಎಲ್ಲ ಮಿತ್ರ ವಲಯಗಳಲ್ಲೂ ಅಪನಂಬಿಕೆಯನ್ನು ಬಿತ್ತಿತು. ಅಮೆರಿಕದ ಸ್ನೇಹದಿಂದ ಪಾಕಿಸ್ತಾನ ಇಂದು ಎಂತಹ ಸ್ಥಿತಿಗೆ ಬಂದು ನಿಂತಿದೆ ಎನ್ನುವ ವಾಸ್ತವ ನಮ್ಮ ಮುಂದಿದ್ದರೂ, ಬೆಂಕಿಯ ಸಂಗಕ್ಕೆ ಬಿದ್ದ ಚಿಟ್ಟೆಯಂತೆ ಟ್ರಂಪ್‌ನ ಬಾಹುಗಳಲ್ಲಿ ಸೇರಿಕೊಳ್ಳಲು ನರೇಂದ್ರ ಮೋದಿ ಆತುರರಾಗಿದ್ದಾರೆ. ಇತ್ತ ಪಾಕಿಸ್ತಾನ ತನ್ನ ಚೀನಾದ ಜೊತೆಗಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಪರಿಣಾಮವಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ಮತ್ತೆ ಬಿಗಡಾಯಿಸುತ್ತಿದೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ಹೇಳಿಕೆ ಪ್ರತಿ ಹೇಳಿಕೆಗಳು ಅತ್ಯಂತ ಪ್ರಚೋದನಾಕಾರಿಯಾಗಿವೆ.

ಈಗಾಗಲೇ ಚೀನಾ ನೀಡಿರುವ ‘1962ರ ಪಾಠದಿಂದ ಕಲಿಯಿರಿ’ ಎನ್ನುವ ಹೇಳಿಕೆ, ಒಂದು ದೇಶವನ್ನು ಪರೋಕ್ಷವಾಗಿ ಯುದ್ಧಕ್ಕೆ ಆಹ್ವಾನಿಸುವಂತಹದ್ದಾಗಿದೆ. ಡೋಕ ಲಾದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಮತ್ತೊಮ್ಮೆ ದೋಖಾ ಎಸಗಲು ಸಿದ್ಧವಾಗಿ ನಿಂತಿರುವುದು ಅದರ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ. ಆದರೆ ಇದಕ್ಕೆ ಜೇಟ್ಲಿಯವರು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರಾದರೂ, ರಾಜಕಾರಣಿಗಳು ಬಹಿರಂಗವಾಗಿ ಮಾಧ್ಯಮಗಳಲ್ಲಿ ಹೇಳಿಕೆ, ಪ್ರತ್ಯುತ್ತರಗಳನ್ನು ನೀಡುವುದು ಅಪಾಯಕಾರಿಯಾಗಿದೆ. ಉಭಯ ದೇಶಗಳ ನಡುವೆ ಅದು ತಪ್ಪು ಅಭಿಪ್ರಾಯಗಳನ್ನು ಬಿತ್ತಿ, ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಬಹುದು.

ಭಾರತ ಮತ್ತು ಚೀನಾದ ನಡುವೆ ಇನ್ನೊಂದು ಯುದ್ಧವೇನಾದರೂ ನಡೆದರೆ ಅದರ ನಷ್ಟ ಉಭಯ ದೇಶಗಳಿಗಷ್ಟೇ ಅಲ್ಲ, ಉಪಖಂಡದ ಮೇಲೂ ದುಷ್ಪರಿಣಾಮಗಳನ್ನು ಹರಡಬಹುದು ಮತ್ತು ಆ ಯುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದುಷ್ಪರಿಣಾಮಗಳನ್ನೂ ಬೀರಬಹುದು. ಆದುದರಿಂದ, ಚೀನಾ-ಭಾರತ ಅದೇನೂ ಮಾತುಕತೆ ನಡೆಸುವುದಿದ್ದರೂ ಮಾಧ್ಯಮಗಳ ಮೂಲಕ ನಡೆಸದೇ, ರಾಜತಾಂತ್ರಿಕರ ನಡುವಿನ ಮಾತುಕತೆಗೆ ಸೀಮಿತಗೊಳಿಸಬೇಕು. ಸಿಕ್ಕಿಂನ ಇನ್ನೊಂದು ಭಾಗದಲ್ಲಿ ಚೀನಾ ನಿರ್ಮಿಸುತ್ತಿರುವ ರಸ್ತೆಯೇ ಎಲ್ಲ ವಿವಾದಕ್ಕೆ ಸದ್ಯದ ಕಾರಣವಾಗಿದೆ. ಭಾರತದ ಸೈನಿಕರು ಆ ರಸ್ತೆ ನಿರ್ಮಾಣಕ್ಕೆ ತಡೆಯಾಗಿದ್ದಾರೆ.

ತನ್ನ ಅನುಮತಿಯಿಲ್ಲದೆ ಚೀನ ಏಕಪಕ್ಷೀಯವಾಗಿ ರಸ್ತೆ ನಿರ್ಮಿಸಲು ಮುಂದಾಗಿದೆ ಎನ್ನುವುದು ಭಾರತದ ಆಕ್ಷೇಪವಾಗಿದೆ. ಅದೇನೇ ಇರಲಿ. ಇದು ಸೇನೆಯಿಂದ ಇತ್ಯರ್ಥಗೊಳ್ಳಬಹುದಾದ ಬಿಕ್ಕಟ್ಟು ಅಲ್ಲ. ಈ ನಿಟ್ಟಿನಲ್ಲಿ ಜಿ 20 ಸಮ್ಮೇಳನದ ಸಂದರ್ಭದಲ್ಲಿ ಉಭಯ ದೇಶಗಳ ನಾಯಕರು ಕುಳಿತು ಮಾತುಕತೆ ನಡೆಸುವುದು ಅತ್ಯುತ್ತಮ ಮಾರ್ಗವಾಗಿದೆ. ಉಭಯ ದೇಶಗಳು ಗರಿಷ್ಠ ಸಹನೆಯನ್ನು ಪಾಲಿಸಬೇಕು ಮತ್ತು ಕೊಡುಕೊಳ್ಳುವಿಕೆಗೆ ಸಿದ್ಧವಾಗಿರಬೇಕು. ಇಲ್ಲವಾದರೆ ಈ ವಿವಾದ ಯುದ್ಧವೊಂದಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ ಮತ್ತು ಭಾರತ-ಚೀನಾ ಎರಡೂ ದೇಶಗಳು ಈ ಹಿಂದಿನಂತಿಲ್ಲ. ಆದುದರಿಂದ ಸಾವು ನೋವುಗಳು ಈ ಹಿಂದಿನದ್ದಕ್ಕಿಂತ ಭೀಕರವಾಗಿರುತ್ತದೆ ಮತ್ತು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಅಮೆರಿಕದಂತಹ ದೇಶಗಳು ತುದಿಗಾಲಲ್ಲಿ ನಿಂತಿವೆ. ಈ ಎಚ್ಚರದೊಂದಿಗೆ ಭಾರತ ಮುಂದಿನ ಹೆಜ್ಜೆಯನ್ನು ಇಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News