×
Ad

ಅಡುಗೆ ಸಹಾಯಕರ ನೇಮಕಕ್ಕೆ ಪ್ರಾಯೋಗಿಕ ಪರೀಕ್ಷೆ

Update: 2017-07-05 23:56 IST

ದಾವಣಗೆರೆ, ಜು.5: ಯುವ ಬಾಣಸಿಗರ ಸಂತೆಯೇ ನೆರೆದಂತಿದ್ದ ಅಲ್ಲಿ ಕೆಲವರು ಲಗುಬಗೆಯಿಂದ ಬಾಣಲೆಯಲ್ಲಿ ಎಣ್ಣೆಯಿಟ್ಟು ಒಗ್ಗರಣೆ ಕೊಡುತ್ತಿದ್ದರೆ, ಮತ್ತೆ ಕೆಲವರು ಮುದ್ದೆಗೆ ಹೆಸರಿಟ್ಟು ಮುದ್ದೆ ತಯಾರು ಮಾಡುತ್ತಿದ್ದರು. ಮತ್ತೆ ಕೆಲವರು ಚಪಾತಿ, ರೊಟ್ಟಿ, ಪಲ್ಯ, ಸಾಂಬಾರು ಸಿದ್ಧಪಡಿಸುತ್ತಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ಅಡುಗೆಯವರು ಮತ್ತು ಅಡುಗೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಲ್ಲಿ 1:3 ಅಭ್ಯರ್ಥಿಗಳಿಗೆ ನಗರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ದಲ್ಲಿ ಇಂದು ಅಡುಗೆ ಸಹಾಯಕರಿಗೆ ನಡೆಸಲಾದ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಂಡುಬಂದ ದೃಶ್ಯವಿದು.

ಇಲಾಖೆಯಲ್ಲಿ ಒಟ್ಟು 56 ಅಡುಗೆಯವರು ಮತ್ತು 92 ಅಡುಗೆ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಡುಗೆಯರಿಗೆ 2,197, ಅಡುಗೆ ಸಹಾಯಕರ ಹುದ್ದೆಗೆ 4,688 ಅರ್ಜಿಗಳು ಬಂದಿದ್ದವು. ದಾಖಲಾತಿ ಪರಿಶೀಲನೆಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ 1:3 ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.

ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ ಚನ್ನಗಿರಿ ತಾಲೂಕಿನ ಕೆರೆಕಟ್ಟೆಯ ಕಾಶೀನಾಥ್ ಅಡುಗೆಯವರು ಮತ್ತು ಅಡುಗೆ ಸಹಾಯಕರು ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, ಅಡುಗೆಯವರ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪ್ಪಿಟ್ಟು ಸಿದ್ಧಡಿಸಿದ್ದರು. ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮಾಡಿದ ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ಉಮೇಶ್ ತರಕಾರಿ ಪಲ್ಯ ತಯಾರಿಸಿದ್ದರು. ನ್ಯಾಮತಿಯ ಬಿಎ ಪದವೀಧರ ಹನುಮಂತರಾವ್ ಅವಲಕ್ಕಿ ಉಪ್ಪಿಟ್ಟು, ಉಚ್ಚಂಗಿದುರ್ಗದ ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಪದವೀಧರ ಸಂತೋಷ್ ಜಿ. ರಾಗಿಮುದ್ದೆ, ಕೃಷಿಯಲ್ಲಿ ಡಿಪ್ಲೊಮಾ ಮಾಡಿರುವ ಚನ್ನಗಿರಿಯ ಸುಪ್ರೀತಾ ಹಾಗೂ ಹಿರೇಕೋಗಲೂರಿನ ಲೋಹಿತ್ ಪುಳಿಯೋಗರೆ ಮತ್ತು ಕೇಸರಿಬಾತ್ ತಯಾರಿಕೆಯಲ್ಲಿ ತೊಡಗಿದ್ದರು.

ಹಾವೇರಿ ಜಿಲ್ಲೆಯ ಡಿ.ಎಡ್ ಆದ ಮಮತಾ ಮಲಗಾಂವ್, ಬಿಎ, ಡಿಎಡ್ ಆದ ದಾವಣಗೆರೆಯ ಮಂಗಳಾ ಗೌರಮ್ಮ, ಬಿಾಂ ಪದವೀಧರೆ ರಂಜಿತಾ ಎನ್. ಆರ್, ಎಲೆಕ್ಟ್ರಿಕಲ್ ಎಲೆಕ್ಟ್ರಾನ್ಸಿಕ್ಸ್ ಡಿಪ್ಲೊಮಾ ಮಾಡಿದ ರೇಣುಕಾ, ಬಳ್ಳಾರಿ ಜಿಲ್ಲೆಯ ಹುಲಿಕೆರೆಯ ಬಿಎಸ್ಸಿ ಪದವೀಧರೆ ಸ್ವಪ್ನಾ, ಬಿಎ, ಡಿಎಡ್ ಪದವೀಧರೆ ಚನ್ನಗಿರಿ ಚಿರಡೋಣಿಯ ಸೌಭಾಗ್ಯಾ, ಬಿಎಸ್ಸಿ, ಡಿಎಡ್ ಪದವೀಧರೆ ಸೌಮ್ಯಾ, ಬಿಎ ಪದವೀಧರ ನಿಬಗೂರಿನ ಸಂತೋಷ್, ಬಿಎ, ಡಿಎಡ್ ಪದವೀಧರೆ ಲಕ್ಷ್ಮೀ, ಬಿಎ ಬಿಎಡ್ ಪದವೀಧರೆ ಪಾರ್ವತೀಬಾಯಿ, ಚಿತ್ರದುರ್ಗದ ಐಟಿಐ ಮಾಡಿರುವ ಶಶಿಧರ್ ಸೇರಿದಂತೆ ಪರೀಕ್ಷೆಗೆ ಹಾಜರಾದ ಯುವಕ ಯುವತಿಯರು ಇಲಾಖೆ ವತಿಯಿಂದ ನೀಡಲಾದ ಪಟ್ಟಿಯಲ್ಲಿರುವ ಉಪ್ಪಿಟ್ಟು, ಕೇಸರಿಬಾತ್, ಚಿತ್ರಾನ್ನ, ಮುದ್ದೆ, ಚಪಾತಿ, ರೊಟ್ಟಿ, ತರಕಾರಿ ಸಾಂಬಾರ್, ತರಕಾರಿ ಪಲ್ಯ, ತಿಳಿಸಾರು, ಪುಳಿಯೋಗರೆ, ಅವಲಕ್ಕಿ ಉಪ್ಪಿಟ್ಟು, ಶ್ಯಾವಿಗೆ ಪಾಯಸ ಹೀಗೆ 12 ಬಗೆಯ ಭಕ್ಷ್ಯಗಳ ತಯಾರಿಕೆಯಲ್ಲಿ ನಿರತರಾಗಿದ್ದರು.

ದಾವಣಗೆರೆ ಬಿಕಾಂ ಪದವೀಧರೆ ರಂಜಿತಾ ಮಾತನಾಡಿ, ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಸರಕಾರಿ ಕೆಲಸಕ್ಕೆ ಪ್ರಯತ್ನಿಸಿದ್ದೆ. ಮನೆಯಲ್ಲಿ ಅಡುಗೆ ಮಾಡಿ ಅನುಭವವಿದ್ದು, ಈ ಹುದ್ದೆ ಲಭಿಸಿದಲ್ಲಿ ಕಷ್ಟವಾಗುವುದಿಲ್ಲವೆಂದರು.

ಈ ಹುದ್ದೆಗೆ ಎಸೆಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಿದ್ದರೂ, ಅರ್ಜಿ ಹಾಕಿದವರಲ್ಲಿ ಬಹುತೇಕರು ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಂಎಸ್ಸಿ, ಬಿಎಡ್, ಡಿಎಡ್ ಸ್ನಾತಕ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಸೇರಿದಂತೆ ಇಂಜಿನಿಯರಿಂಗ್ ಪದವೀಧರರೂ ಕೂಡ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದು ಗಮನ ಸೆಳೆಯಿತು.

ಮೂರು ಕೊಠಡಿಗಳಲ್ಲಿ ಎರಡು ಸಾಲುಗಳಲ್ಲಿ ತಲಾ ಹತ್ತು ಅಭ್ಯರ್ಥಿಗಳಂತೆ ಒಂದು ಕೊಠಡಿ ಯಲ್ಲಿ 20 ಜನರಿಗೆ ಅಡುಗೆ ತಯಾರಿಸಲು ಅವಕಾಶ ಕಲ್ಪಿಸಲಾಗಿದ್ದು, ಒಟ್ಟು ಮೂರು ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಹನ್ನೆರಡು ಬಗೆಯ ಭಕ್ಷ್ಯಗಳ ಚೀಟಿ ಯನ್ನು ಲಾಟರಿ ಮೂಲಕ ಎತ್ತಿ ಅಭ್ಯರ್ಥಿಗೆ ನೀಡಲಾಗಿದ್ದು, 30 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಮೂರು ಕೊಠಡಿಗಳಲ್ಲಿ ಒಟ್ಟು 60 ಗ್ಯಾಸ್‌ಸ್ಟವ್‌ಗಳನ್ನು ಮತ್ತು ಅಡುಗೆ ಸಾಮಗ್ರಿಗಳನ್ನು ಒದಗಿಸಲಾಗಿತ್ತು. ಪ್ರತೀ ಕೊಠಡಿಗೆ ಒಬ್ಬರು ನೋಡಲ್ ಅಧಿಕಾರಿ ಹಾಗೂ ಹೋಮ್‌ಸೈನ್ಸ್ ವಿಭಾಗದಿಂದ ಒಬ್ಬರು, ಪ್ರಾಂಶುಪಾಲರು, ವಿಸ್ತರಣಾಧಿಕಾರಿ ಮತ್ತು ವಾರ್ಡನ್ ಸೇರಿದಂತೆ ನಾಲ್ಕು ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಜಿಲ್ಲಾಮಟ್ಟದಲ್ಲಿ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮನ್ಸೂರ್ ಪಾಷಾ ಹೇಳಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಸುನೀತಾ, ಪ್ರಾಂಶುಪಾಲರು, ಮೇಲ್ವಿಚಾರಕರು ಉಪಸ್ಥಿತರಿದ್ದರು.

ಅಡುಗೆಯವರು ಮತ್ತು ಅಡುಗೆ ಸಹಾಯಕರ ಎರಡೂ ಹುದ್ದೆಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿರುವುದು ಉತ್ತಮ ಅನುಭವ. ಎಂಎಸ್ಸಿ ಆದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯು ವುದು ಅಷ್ಟು ಸುಲಭವಿಲ್ಲ. ಯಾವುದೇ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದರೂ ಲಕ್ಷಾಂತರ ಮಂದಿ ಅರ್ಜಿ ಹಾಕುತ್ತಾರೆ ಮತ್ತು ಸ್ಪರ್ಧೆ ಹೆಚ್ಚಿರುತ್ತದೆ. ಅಡುಗೆ ಅಥವಾ ಅಡುಗೆ ಸಹಾಯಕರ ಹುದ್ದೆ ಯಾವುದರಲ್ಲಿ ಆಯ್ಕೆಯಾದರೂ ಸಂತೋಷದಿಂದ ಕೆಲಸ ಮಾಡುತ್ತೇನೆಂದರು.

ಕಾಶೀನಾಥ್ ಕೆರೆಕಟ್ಟೆ,
ಭೌತಶಾಸ್ತ್ರ ಎಂಎಸ್ಸಿ ಪದವೀಧರ

ಅಡುಗೆಯವರ ಪ್ರಾಯೋಗಿಕ ಪರೀಕ್ಷೆಯಲ್ಲಿ 124 ಅಭ್ಯರ್ಥಿಗಳ ಪೈಕಿ 122 ಮಂದಿ ಪಾಲ್ಗೊಂಡಿದ್ದರು. ಅಡುಗೆ ಸಹಾಯಕರ ಪರೀಕ್ಷೆಯಲ್ಲಿ 223 ಅಭ್ಯರ್ಥಿಗಳ ಪೈಕಿ 211 ಮಂದಿ ಹಾಜರಾಗಿದ್ದರು.

ಬಾಣಸಿಗ ಹುದ್ದೆಗೆ ಇಂಜಿನಿಯರಿಂಗ್ ಪದವೀಧರ !

ಈ ಹುದ್ದೆಗೆ ಎಸೆಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಿದ್ದರೂ, ಅರ್ಜಿ ಹಾಕಿದವರಲ್ಲಿ ಬಹುತೇಕರು ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಂಎಸ್ಸಿ, ಬಿಎಡ್, ಡಿಎಡ್ ಸ್ನಾತಕ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಸೇರಿದಂತೆ ಇಂಜಿನಿಯರಿಂಗ್ ಪದವೀ ಧರರೂ ಕೂಡ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದು ಗಮನ ಸೆಳೆಯಿತು.

ಪ್ರಸ್ತುತ ಬೆಂಗಳೂರಿನ ಇನ್‌ಫೋಸಿಸ್ ಸಂಸ್ಥೆಯ ಬಿಪಿಒ ಸೆಂಟರ್‌ನಲ್ಲಿ ಮಾಹೆಯಾನ 22 ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದೇನೆ. ಕೆಲಸ ಒತ್ತಡಭರಿತವಾಗಿದೆ. ಅಡುಗೆ/ಅಡುಗೆ ಸಹಾಯಕರ ಕೆಲಸ ಸಿಕ್ಕರೆ ತುಂಬ ಅನುಕೂಲವಾಗುತ್ತದೆ. ತಮ್ಮ ಸ್ಥಳೀಯ ಪ್ರದೇಶದಲ್ಲಿ ಪೋಷಕರನ್ನು ನೋಡಿಕೊಂಡು ಒತ್ತಡರಹಿತವಾಗಿ ಕೆಲಸ ಮಾಡುವ ಅವಕಾಶ ದೊರೆ ತಂತಾಗುತ್ತದೆ. ಹೀಗೆ ಅಭ್ಯರ್ಥಿಗಳು ತಮ್ಮ ಅನುಭವ ಗಳನ್ನು ಹಂಚಿಕೊಂಡರು.
ರಮೇಶ್, ಬಿಎಸ್ಸಿ, ಡಿಎಡ್

Writer - ಪ್ರಕಾಶ್ ದಾವಣಗೆರೆ

contributor

Editor - ಪ್ರಕಾಶ್ ದಾವಣಗೆರೆ

contributor

Similar News

ಜಗದಗಲ

ಜಗ ದಗಲ