ಗೋರಕ್ಷಕರ ಹಾವಳಿ : ರಾಷ್ಟ್ರಪತಿ ಆತಂಕ

Update: 2017-07-06 03:55 GMT

ಗೋರಕರ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಕಗ್ಗೊಲೆಗಳ ಬಗ್ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ನರಹತ್ಯೆಗಳನ್ನು ತಡೆಯಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಕರೆನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಕಳೆದವಾರ ಸಭೆಯೊಂದರಲ್ಲಿ ಮಾತನಾಡಿ ಗೋರಕ್ಷಕರ ಗೂಂಡಾಗಿರಿಯನ್ನು ಖಂಡಿಸಿದ್ದಾರೆ.

ಮೋದಿ ಅವರು ಕಳೆದ ವರ್ಷವೂ ಕೂಡಾ ಇದೇ ರೀತಿ ಬಹಿರಂಗವಾಗಿ ಖಂಡನೆ ಮಾಡಿದ್ದರು. ಆದರೆ, ಪರಿಸ್ಥಿತಿ ಸುಧಾರಿಸಲಿಲ್ಲ. ಪ್ರಧಾನಿ ಸ್ಥಾನದಲ್ಲಿ ಕುಳಿತು ಅವರು ಖಂಡನೆ ಮಾಡುವ ಬದಲು ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸುತ್ತಿರುವವರ ವಿರುದ್ಧ ಉಗ್ರ ಕ್ರಮಕ್ಕೆ ಆದೇಶ ನೀಡಬಹುದಿತ್ತು. ಅಂತಹ ಕ್ರಮ ಕೈಗೊಂಡಿದ್ದರೆ ಗೋರಕ್ಷಕರ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತಿತ್ತು. ಆದರೆ, ಗೋರಕ್ಷಕರ ಮೇಲೆ ಕ್ರಮಕೈಗೊಳ್ಳುವ ಮನಸ್ಸು ಪ್ರಧಾನಿಯವರಿಗಿಲ್ಲ. ಬರೀ ಕಾಟಾಚಾರಕ್ಕೆ ಅವರು ಈ ಹೇಳಿಕೆ ನೀಡುತ್ತಿದ್ದಾರೆ. ಸಂಘಪರಿವಾರಕ್ಕೆ ಸೇರಿದ ಪ್ರಧಾನಿ ಅವರು ಒಂದೆಡೆ ಈ ರೀತಿ ಹೇಳಿಕೆ ನೀಡಿದರೆ, ಪರಿವಾರಕ್ಕೆ ಸೇರಿದ ವಿಶ್ವಹಿಂದೂ ಪರಿಷತ್ತು ಗೋರಕ್ಷಕರ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡಿದೆ.

ಪ್ರಧಾನಿ ಹೇಳಿಕೆಯ ಬಗ್ಗೆ ನಯವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಗೋರಕ್ಷಕರ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ‘‘ಪ್ರಧಾನಿ ಏನೇ ಹೇಳಿಕೆ ನೀಡಿರಲಿ ಜಿಹಾದಿಗಳ ವಿರುದ್ಧ ಹೋರಾಡುತ್ತಿರುವ ಗೋರಕ್ಷಕರೇ ತೊಂದರೆಗೆ ಒಳಗಾಗಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಅಂತಲೇ ಪ್ರಧಾನಮಂತ್ರಿಗಳ ಹೇಳಿಕೆಯ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಪಡಬೇಕಾಗಿದೆ. ಆದರೆ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನೀಡಿರುವ ಹೇಳಿಕೆ ಬಗ್ಗೆ ಮಾತ್ರ ಯಾವುದೇ ಸಂದೇಹ ವ್ಯಕ್ತಪಡಿಸಬೇಕಾಗಿಲ್ಲ. ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿಗಳ ಬಗ್ಗೆ ಕಗ್ಗೊಲೆಗಳ ಬಗ್ಗೆ ಅವರು ಪ್ರಾಮಾಣಿಕವಾಗಿಯೇ ಖಂಡಿಸಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ನಡೆದಿರುವ ಈ ಹಾವಳಿ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಕ್ರಮಕೈಗೊಳ್ಳುವ ಮನಸ್ಸು ಸರಕಾರಕ್ಕಿಲ್ಲ. ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿ ಸಂಸದರು ಬಹಿರಂಗವಾಗಿಯೇ ಗೋರಕ್ಷಕರ ಗೂಂಡಾಗಿರಿಯನ್ನು ಸಮರ್ಥಿಸಿ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ಮಾತ್ರ ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗೋರಕ್ಷಕರ ಹಾವಳಿ ಬಗ್ಗೆ ನೀಡಿರುವ ಹೇಳಿಕೆ ಯಾಕೆ ಗಮನಾರ್ಹವಾಗಿದೆಯೆಂದರೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಹೇಳಿಕೆಯಲ್ಲಿ ಗೋರಕ್ಷಕರ ಗೂಂಡಾಗಿರಿಯನ್ನು ಖಂಡಿಸುವ ಉಗ್ರ ಶಬ್ದಗಳು ಇರಲಿಲ್ಲ. ಕೇವಲ ಕಾಟಾಚಾರದ ಹೇಳಿಕೆಯನ್ನು ಅವರು ನೀಡಿದ್ದರು. ಅದು ಜನರನ್ನು ದಾರಿ ತಪ್ಪಿಸಲು ನೀಡಿದ ಹೇಳಿಕೆಯಂತಿತ್ತು. ಆದರೆ, ರಾಷ್ಟ್ರಪತಿಯವರ ಹೇಳಿಕೆ ಅತ್ಯಂತ ಸ್ಪಷ್ಟವಾಗಿತ್ತು. ಕಳೆದವರ್ಷ ಪ್ರಧಾನಿ ಇಂತಹ ಹೇಳಿಕೆ ನೀಡಿದ ನಂತರ ಗೋರಕ್ಷಕರಿಂದ ಸುಮಾರು 21 ದಾಳಿಗಳು ನಡೆದಿವೆ. ಸಮಾಜದ ಅಲ್ಪಸಂಖ್ಯಾತ ವರ್ಗಗಳಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ಪ್ರಧಾನಿ ಎಚ್ಚರಿಕೆ ನೀಡಿದ ನಂತರವೂ ಅಮಾಯಕರ ಕಗ್ಗೊಲೆಗಳು ನಡೆದಿವೆಯೆಂದರೆ ಈ ಹೇಳಿಕೆಗೆ ಯಾವ ಅರ್ಥವೂ ಇಲ್ಲ ಎಂಬುದು ಸ್ಪಷ್ಟವಾಗತ್ತದೆ.

ನರೇಂದ್ರ ಮೋದಿ ಅವರು ಬರೀ ಕಾಟಾಚಾರಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಪುಂಡಾಟಿಕೆ ನಡೆಸಿದವರನ್ನು ಹತ್ತಿಕ್ಕುವ ಪ್ರಾಮಾಣಿಕ ಕಾಳಜಿ ಅವರಿಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗೋರಕ್ಷಕರು ನಡೆಸುತ್ತಿರುವ ಹಿಂಸಾಚಾರ ಅಂದರೆ ಗೋಮಾಂಸದ ಹೆಸರಿನಲ್ಲಿ ಭಾರತೀಯರನ್ನು ಕೊಲ್ಲುತ್ತಿರುವುದು ಆಗಿದೆ. ಗೋರಕ್ಷಣೆಗೆ ಸಂಬಂಧಿಸಿದಂತೆ ಶೇ.97ರಷ್ಟು ಹಿಂಸಾಚಾರಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದಿವೆೆ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರ, ಹರ್ಯಾಣ ಮತ್ತು ಇತರ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಹಾಗೂ ಕೇಂದ್ರ ಸರಕಾರ ಗೋಮಾಂಸ ನಿಷೇಧಕ್ಕೆ ಮುಂದಾದ ನಂತರ ಈ ಕಗ್ಗೊಲೆಗಳು ಆರಂಭವಾದವು.

ಈ ವಿಚಾರವಾಗಿ ಅಂಕಿಅಂಶಗಳು ಸಾಕಷ್ಟು ಸ್ಪಷ್ಟವಾಗಿವೆ. ಜೂನ್ 29ರಂದು ರಾಂಚಿ ಸಮೀಪದ ರಾಮ್‌ಗಡದಲ್ಲಿ ಅಲಿಮುದ್ದೀನ್ ಅನ್ಸಾರಿ ಎಂಬ ವ್ಯಾಪಾರಿಯನ್ನು ಉದ್ರಿಕ್ತ ಜನರ ಗುಂಪೊಂದು ಹತ್ಯೆ ಮಾಡಿತು. ಗೋರಕ್ಷಣೆಯ ಹೆಸರಿನಲ್ಲಿ ನಡೆಸಿದ ಹಿಂಸೆಯನ್ನು ವಿರೋಧಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ನಂತರದ ಕೆಲವೇ ಗಂಟೆಗಳಲ್ಲಿ ಈ ಹತ್ಯೆ ನಡೆಯಿತು. ಜೂನ್ 27ರಂದು ಜಾರ್ಖಂಡ್‌ನಲ್ಲಿ ಪಶುಸಂಗೋಪನೆಯಲ್ಲಿ ತೊಡಗಿದ್ದ ರೈತ ಉಸ್ಮಾನ್ ಅನ್ಸಾರಿ ಅವರ ಮನೆಯ ಹೊರಗೆ ಸತ್ತ ದನ ಸಿಕ್ಕಿತೆಂದು ಸುಮಾರು 100 ಜನರ ಗುಂಪು ಅನ್ಸಾರಿ ಮೇಲೆ ಹಲ್ಲೆ ನಡೆಸಿತು. ಅವರ ಮನೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿತು. ಜೂ.24ರಂದು ಪಶ್ಚಿಮಬಂಗಾಳದ ಜಿನಾಜ್‌ಪುರದಲ್ಲಿ ಗೋಕಳ್ಳತನ ಮಾಡಿದ್ದಾರೆಂದು ಆರೋಪಿಸಿ ನಾಸಿರ್‌ವುಲ್ ಹಕ್, ಮುಹಮ್ಮದ್ ಸಮೀರುದ್ದೀನ್ ಹಾಗೂ ಮುಹಮ್ಮದ್ ನಾಸಿರ್ ಎನ್ನುವ ಮೂವರು ಕಟ್ಟಡ ಕಾರ್ಮಿಕರನ್ನು ಉದ್ರಿಕ್ತರ ಗುಂಪೊಂದು ಹೊಡೆದು ಕೊಂದಿತ್ತು.

ಜೂ.22ರಂದು ಹರ್ಯಾಣದಲ್ಲಿ ರೈಲೊಂದರಲ್ಲಿ ಜುನೈದ್ ಖಾನ್ ಎಂಬ 16 ವರ್ಷದ ಹುಡುಗನನ್ನು ಚಾಕುವಿನಿಂದ ಇರಿದು ಕೊಲ್ಲಲಾಯಿತು. ಚಾಕುವಿನಿಂದ ಇರಿಯುವ ಮೊದಲು ಜುನೈದ್‌ನನ್ನು ಗೋಮಾಂಸ ತಿನ್ನುವವ ಎಂದು ನಿಂದಿಸಲಾಯಿತು. ಮೇ 26ರಂದು ಮಹಾರಾಷ್ಟ್ರದಲ್ಲಿ ಗೋಮಾಂಸ ಹೊಂದಿದ ಅನುಮಾನದ ಮೇಲೆ ಗೋರಕ್ಷಕರೆಂದು ಕರೆದುಕೊಳ್ಳುವವರು ಇಬ್ಬರು ಮುಸ್ಲಿಮ್ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಿದರು. ಈ ಇಬ್ಬರ ಕೆನ್ನೆಗೆ ಬಾರಿಸಿ ಜೈಶ್ರೀರಾಮ್ ಎಂದು ಹೇಳಲು ಒತ್ತಾಯಿಸಿದರು.

ಎಪ್ರಿಲ್ 30ರಂದು ಅಸ್ಸಾಂನ ನಾಗಾಂವ್‌ನಲ್ಲಿ ದನ ಕಳ್ಳತನ ನಡೆಸಿದ ಅನುಮಾನದ ಮೇಲೆ ಅಬು ಹನೀಫ್ ಹಾಗೂ ರಿಯಾಜುದ್ದೀನ್ ಅಲಿ ಎಂಬವರನ್ನು ಉದ್ರಿಕ್ತ ಗುಂಪೊಂದು ಹಲ್ಲೆ ಮಾಡಿತು. ಕಳೆದ ಎಪ್ರಿಲ್ 1ರಂದು ರಾಜಸ್ಥಾನದ ಹಲ್ವಾರ್ ಬಳಿ ರೈತ ಪೆಹ್ಲೂಖಾನ್ ಮತ್ತು ಇತರ ನಾಲ್ವರು ಮುಸ್ಲಿಮರ ಮೇಲೆ ಗೋರಕ್ಷಕರ ಗುಂಪೊಂದು ಹಲ್ಲೆ ಮಾಡಿ ಥಳಿಸಿತು. ಈ ಸಂದರ್ಭ ಗಂಭೀರ ಗಾಯಗೊಂಡಿದ್ದ ಪೆಹ್ಲೂಖಾನ್ ಆನಂತರ ಕೊನೆಯುಸಿರೆಳೆದರು.

ಈ ಹತ್ಯೆಗಳು ಮತ್ತು ಹಲ್ಲೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಸರಕಾರದ ಪರೋಕ್ಷ ಬೆಂಬಲದಿಂದಲೇ ಈ ಕಗ್ಗೊಲೆಗಳು ನಡೆಯುತ್ತಿವೆ; ಇವುಗಳನ್ನು ನಿಲ್ಲಿಸಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ. ಇದಾದ ಎರಡು ದಿನಗಳ ನಂತರ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಹಿಂಸೆಗೆ ಜಾಗವಿಲ್ಲ ವೆಂದು ಕಾಟಾಚಾರದ ಪ್ರತಿಕ್ರಿಯೆ ನೀಡಿದರು.

ಜೂನ್ 29ರಂದು ಗುಜರಾತ್‌ನಲ್ಲಿ ಅವರು ಮಾಡಿದ ಭಾಷಣದಲ್ಲಿ ಇನ್ನೊಂದು ರೀತಿ ಹೇಳಿಕೆ ನೀಡಿದರು. ಅಲ್ಲಿ ಗೋರಕ್ಷಕರನ್ನು ಹಾಡಿ ಹೊಗಳಿದರು. ಒಂದೆಡೆ ಗೋರಕ್ಷಕರನ್ನು ಹೊಗಳುತ್ತಾ ಮತ್ತೊಂದೆಡೆ ಖಂಡಿಸುತ್ತಾ ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ವಿಚಾರದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಪ್ರತಿಪಕ್ಷಗಳಿಗೂ ಸ್ಪಷ್ಟವಾದ ನಿಲುವು ಇಲ್ಲ. ಗುಜರಾತ್‌ನಲ್ಲಿರುವ ಕಾಂಗ್ರೆಸ್ ನಾಯಕರು ಗೋರಕ್ಷಣೆಯ ಪರವಾಗಿಯೇ ಮಾತನಾಡುತ್ತಾರೆ. ಬಿಜೆಪಿ ಕೂಡಾ ಚುನಾವಣಾ ರಾಜಕಾರಣಕ್ಕಾಗಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ.

ಕೇರಳ, ಗೋವಾ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ಭಕ್ಷಣೆಗೆ ತನ್ನ ಅಭ್ಯಂತರವಿಲ್ಲವೆಂದು ಅಲ್ಲಿನ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗೋರಕ್ಷಣೆಯ ಕಾರಣಕ್ಕಾಗಿ ನಡೆದಿರುವ ನರಮೇಧಗಳನ್ನು ತಡೆಗಟ್ಟಲು ಮಾಡಿಕೊಂಡ ಮನವಿ ಸ್ವಾಗತಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News