ವ್ಯಕ್ತಿ ಸಾವು: ಮತ್ತೆ ತಲೆದೋರಿದ ಹಿಂಸಾಚಾರ

Update: 2017-07-06 16:17 GMT

 ಬಸಿರ್ಹಾತ್, ಜು. 6: ವಿವಾದಾತ್ಮಕ ಫೇಸ್‌ಬುಕ್ ಪೋಸ್ಟ್ ಹಿನ್ನನೆಲೆಯಲ್ಲಿ ನಡೆದ ಕೋಮ ಹಿಂಸಾಚಾರದಲ್ಲಿ ಹಲ್ಲೆಗೊಳಗಾಗಿದ್ದ 65 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬಸಿರ್ಹಾತ್ ವಲಯದ ವಿವಿಧ ಭಾಗಗಳಲ್ಲಿ ಮತ್ತೆ ಹಿಂಸಾಚಾರ ತಲೆದೋರಿದೆ.

 ಬಸಿರ್ಹಾತ್ ಉಪವಲಯದ ಬೈಬ್ಲಾ ನಿವಾಸಿ ಕಾರ್ತಿಕ್ ಘೋಶ್ ಮೃತಪಟ್ಟ ದುರ್ದೈವಿ. ಬುಧವಾರ ಮಾರುಕಟ್ಟೆಯಿಂದ ಬೈಕ್‌ನಲ್ಲಿ ಮನಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಬಾಂಗ್ಲಾದೇಶದ ಗಡಿಯಿಂದ 12 ಕಿ. ಮೀ. ದೂರದಲ್ಲಿರುವ ಬಸಿರ್ಹಾತ್ ವಲಯದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ನಡೆದ ಮೊದಲ ಸಾವು ಇದು. ರವಿವಾರ ಸಂಜೆಯಿಂದ ಉದ್ರಿಕ್ತ ಗುಂಪುಗಳು ಅಂಗಡಿ, ಕಟ್ಟಡಗಳಿಗೆ ಬೆಂಕಿ ಹಚ್ಚಿದರು ಹಾಗೂ ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಿಗಿದ್ದರು.

ಗುರುವಾರ ಇನ್ನೊಂದು ಗುಂಪು ಪ್ರಾರ್ಥನಾ ಸ್ಥಳ, ಅಂಗಡಿಗಳಿಗೆ ನುಗ್ಗಿ ದಾಂದಲೆ ನಡೆಸಿತು. ಗಲಭೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಹಾಗೂ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು.

 ಈಗ ಗಲಭೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಬಿಜೆಪಿಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಂದು ಗುಂಪಿನ ಜನರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದೆ. ತೃಣಮೂಲ ಕಾಂಗ್ರೆಸ್ ರಾಜ್ಯಪಾಲರು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಈಗಾಗಲೇ ಪೊಲೀಸರು ಹಾಗೂ ಅರೆ ಸೇನಾ ಪಡೆಗಳು ಬದುರಿಯಾದಲ್ಲಿ ಬೀಡುಬಿಟ್ಟಿದ್ದು, ಮತ್ತೆ ಯಾವುದೇ ಸಂಘರ್ಷ ಉಂಟಾದ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News