×
Ad

ಸೌಂದರ್ಯದ ಮಡಿಲಲ್ಲಿ ಭರವಸೆ ಇಲ್ಲದ ದಿನಗಳು...

Update: 2017-07-06 23:47 IST

ಜೋಗಿಯ ಟ್ಯಾಕ್ಸಿ-ವ್ಯಾನ್ ಅವನ ಮನೆಯ ಹೊರಗಡೆ ಇನ್ನೂ ಹಾಗೆಯೆ ನಿಂತಿದೆ. ಅವನ ನಾಯಿ ನಾಪತ್ತೆಯಾಗಿದೆ. ಜೋಗಿಯ ತಾಯಿ ತನ್ನ ಮನೆಗೆ ಬಂದವರಿಗೆಲ್ಲಾ ಜೋಗಿಯ ಮದುವೆಯ ಆಲ್ಬಮ್ ತೋರಿಸುತ್ತಾಳೆ

ಮೇ ತಿಂಗಳ ಮೊದಲ ಭಾಗ. ಮಂಜು ಕವಿದ ಒಂದು ಬೆಳಗ್ಗೆ ಜೋಗಿ ಎಂಬ ಹೆಸರಿನ ಒಬ್ಬ ಮನುಷ್ಯ ರಾನಿಕೇತ್‌ನಲ್ಲಿ ಮಕ್ಕಳನ್ನು ಶಾಲೆಗೆ ಬಿಡುವ ತನ್ನ ಟ್ಯಾಕ್ಸಿಯ ಒಂದು ಸುತ್ತು ಮುಗಿಸಿದ. ಮನೆಗೆ ಬಂದು, ಅದಾಗಲೇ ತನ್ನ ಪೋಷಕರೊಡನೆ ಅವ ಮಾಡಿಹೊಗಿದ್ದ ಜಗಳವನ್ನು ಪುನಃ ಮುಂದುವರಿಸಿದ, ಜಗಳ ಇನ್ನಷ್ಟು ಕೊಳಕಾಯಿತು, ಇನ್ನಷ್ಟು ಜೋರಾಯಿತು. ಗದ್ದಲ ತಾರಕಕ್ಕೇರಿತು. ಜೋಗಿ ತನ್ನ ಹೆಂಡತಿಯ ಒಂದು ಸೀರೆಯನ್ನು ಎಳೆದು ತೆಗೆದು ತಾನು ಸಮೀಪದಲ್ಲೇ ಇರುವ ಮರವೊಂದಕ್ಕೆ ನೇಣು ಹಾಕಿಕೊಂಡು ಸಾಯುತ್ತೇನೆಂದು ಘೋಷಿಸಿದ. ಹೋಗು, ನೇಣು ಹಾಕಿಕೊ ಎಂದು ಅವನ ಪೋಷಕರು ವ್ಯಂಗ್ಯವಾಗಿ ಹೇಳಿದರು.

ದೇವದಾರು ಮರಗಳು ತುಂಬ ಗಟ್ಟಿ. ಅವುಗಳ ಕೊಂಬೆಗಳು ಕಂಬದಂತಹ ಕಾಂಡಗಳನ್ನು ಕಾಂಡಗಳಿಂದ ತುಂಬ ಮೇಲಕ್ಕೆ ಭೂಮಿಗೆ ಸಮಾನಾಂತರವಾಗಿ ಬೆಳೆಯುತ್ತವೆ. ಅವುಗಳನ್ನು ಹತ್ತುವುದು ಕಷ್ಟ. ಆದರೆ ಜೋಗಿ 30ರ ಹರೆಯದ ಎತ್ತರದ ಆಳು. ಅವ ಮರಹತ್ತಿ ಸೀರೆಯನ್ನು ನೇಣಿನ ಕುಣಿಕೆಯಾಗಿ ಮಾಡಿದ. ಇದನ್ನೆಲ್ಲ ನೋಡುತ್ತ ನಿಂತಿದ್ದ, ಆಘಾತಗೊಂಡ ಯಾರೂ ಮಧ್ಯಪ್ರವೇಶಿಸುವ ಮೊದಲೇ ಜೋಗಿ ಸತ್ತು ಹೋದ. ತಮ್ಮ ಮಗ ನಿಜವಾಗಿಯೂ ನೇಣು ಹಾಕಿಕೊಳ್ಳುತ್ತಾ ನೆಂದು ತಾವು ಊಹಿಸಿಯೇ ಇರಲಿಲ್ಲ ಎಂದು ಅವನ ಪೋಷಕರು ಪೊಲೀಸರಿಗೆ ಹೇಳಿದರು. ಅವರು ಒಂದು ತೊಟ್ಟು ಕೂಡ ಕಣ್ಣೀರು ಸುರಿಸಲಿಲ್ಲ ಎಂದು ಗಾಳಿಮಾತುಗಳು, ಹರಡಿದವು. ಅವನ ಹೊಡೆತಗಳನ್ನು ತಾಳಲಾರದೆ ಅವನ ಹೆಂಡತಿ ಎರಡು ವಾರಗಳ ಹಿಂದೆ ಅವನನ್ನು ತೊರೆದು ಹೋಗಿದ್ದಳು. ಅವನ ಶವಸಂಸ್ಕಾರಕ್ಕೆ ಅವಳು ಬರಲಿಲ್ಲ. ಒಂದು ಕಾಲದಲ್ಲಿ ಅದ್ದೂರಿಯ ವಸಾಹತುಶಾಹಿ ಬಂಗಲೆಯಾಗಿದ್ದು ಈಗ ಬಿಡಾರಗಳಾಗಿರುವ ಬಾಡಿಗೆ ಕೋಣೆಗಳಲ್ಲಿ ವಾಸಿಸುವ ಅನೇಕ ಕುಟುಂಬಗಳಲ್ಲಿ ಜೋಗಿಯ ಕುಟುಂಬವೂ ಒಂದು...

ನಾನು ಆಗಾಗ್ಗೆ ಜೋಗಿಯನ್ನು ಭೇಟಿಯಾಗುತ್ತಿದ್ದೆ. ನಾನು ಕೊನೆಯ ಬಾರಿ ಅವನೊಡನೆ ಮಾತಾಡಿದ್ದು ಅವನ ನಾಯಿಯ ಬಗ್ಗೆ. ನಾನು ಮುಂದೆ ಹೋಗುವ ಮೊದಲು ಸ್ವಲ್ಪ ಹೊತ್ತು ನಾವು ಹರಟೆ ಹೊಡೆದಿದ್ದೆವು.

ಅವನು ಆರೋಗ್ಯವಾಗಿದ್ದಾಗ ತುಂಬಾ ಖುಷಿಯಾಗಿರುವ ಮನುಷ್ಯ, ಇತರ ಸಂದರ್ಭಗಳಲ್ಲಿ ಅವನ ಮಾನಸಿಕ ಸಮಸ್ಯೆಗಳಿಂದಾಗಿ ಅವ ಸಿಕ್ಕಾಪಟ್ಟೆ ಯಾಗಿ ವರ್ತಿಸುತ್ತಿದ್ದ ಎಂದು ಅವನನ್ನು ಬಲ್ಲ ಹೆಚ್ಚಿನವರು ಹೇಳಿದರು.

ಸರಸ್ವತಿ ವಿದ್ಯಾಮಂದಿರ ಎಂಬ ಒಂದು ಹಿಂದಿ ಶಾಲೆಗೆ ಜೋಗಿ ಹೋಗಿದ್ದ. ಎಂಟನೆ ತರಗತಿಗಿಂತ ಮುಂದೆ ಅವ ಹೋಗಲಿಲ್ಲ. ಅವನ ಪೋಷಕರು ಅವನಿಗೊಂದು ಸೆಕೆಂಡ್ ಹ್ಯಾಂಡ್ ಟ್ಯಾಕ್ಸಿ ಕೊಡಿಸಿದರು. ಅದೇ ಅವನಿಗೆ ವೃತ್ತಿ ಮತ್ತು ಆದಾಯದ ಮೂಲವಾಯಿತು. ಬಳಿಕ ಅವನಿಗೆ ಮದುವೆ ಮಾಡಿದರು.

19ನೆ ಶತಮಾನದಲ್ಲಿ ನಿರ್ಮಿತವಾದ, ಅಂದಿನಿಂದ ಸೇನಾ ತುಕಡಿಗಳೇ ತುಂಬಿರುವ ರಾನಿಕೇತ್ ಸೇರಿದಂತೆ, ಹಿಮಾಲಯದ ಕೆಲಭಾಗಗಳಲ್ಲಿ ಹೆಚ್ಚಿನ ಯುವಕರ ಜೀವನದ ಮಾದರಿ, ಜೀವನದ ಗತಿ ಇದು.

ಸೇನಾ ಸಿಬ್ಬಂದಿ, ಅವರಿಗೊದಗಿಸಲಾಗುವ ಎಲ್ಲ ಸವಲತ್ತುಗಳೊಂದಿಗೆ ತಮ್ಮ ತಮ್ಮ ವಸತಿಗಳಲ್ಲಿ ವಾಸಿಸುತ್ತಾರೆ. ಅದ್ದೂರಿಯ ಬಂಗಲೆಗಳು ಶ್ರೀಮಂತರಿಗೆ ಸೇರಿದವುಗಳು. ಅವರು ಪ್ರತಿ ವರ್ಷ ಅಲ್ಲಿಗೆ ಬಂದು ಕೆಲವು ದಿನ ಇದ್ದು ಹೋಗುತ್ತಾರೆ. ಉಳಿದ ಜನ ಅರೆ-ಗ್ರಾಮೀಣ ಜನ, ಅವರಿಗೆ ನೌಕರಿಯ ಅವಕಾಶಗಳಿಲ್ಲ. ಅಲ್ಲಿ ಉದ್ಯಮಗಳಿಲ್ಲ. ನಾಗರಿಕ ಪ್ರಪಂಚದಿಂದ, ನಗರಗಳಿಂದ ಅಷ್ಟೊಂದು ದೂರದಲ್ಲಿರುವ ಆ ಸ್ಥಳದಲ್ಲಿ ವಾಣಿಜ್ಯ, ವ್ಯಾಪಾರಗಳ ಮಾತೇ ಇಲ್ಲ. ಅಲ್ಲಿ ಜನರು ತಮ್ಮ ಮನೆಗಳ ಸುತ್ತ ತರಕಾರಿ ಬೆಳೆಯುತ್ತಾರೆ; ಹಸು, ಆಡು ಅಥವಾ ಕೋಳಿಗಳನ್ನು ಸಾಕುತ್ತಾರೆ: ಕನಿಷ್ಠ ಆಹಾರ ಮತ್ತು ಸ್ವಲ್ಪ ಆದಾಯ. ಹೆಂಗಸರು ಹುಲ್ಲು ಕೊಯ್ಯುತ್ತಾರೆ, ಉರು ವಲು ಸಂಗ್ರಹಿಸುತ್ತಾರೆ. ಎಲ್ಲ ರೀತಿಯ ಕೊರತೆಗಳನ್ನು ನೀಗಲು ಜನ ಕೊನೆಯಿಲ್ಲದೆ ಒದ್ದಾಡುತ್ತಿರುತ್ತಾರೆ.

ನನ್ನ ಗಂಡ ಮತ್ತು ನಾನು ಇಲ್ಲಿ ಸ್ವತಂತ್ರವಾದ ಒಂದು ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ಆರಂಭದ ದಿನಗಳಲ್ಲಿ ನೌಕರಿ ಹುಡುಕಿಕೊಂಡು ಹಲವರು ನಮ್ಮ ಮನೆಗೆ ಬರುತ್ತಿದ್ದರು. ಸಣ್ಣ ಪ್ರಕಾಶನ ಸಂಸ್ಥೆಯೊಂದರ ಆರ್ಥಿಕ ಸ್ಥಿತಿಯನ್ನು ವಿವರಿಸಿ ಹೇಳಿ, ನಮ್ಮಲ್ಲಿ ನೌಕರಿ ಇಲ್ಲವೆಂದಾಗ ಅವರ ಮುಖದಲ್ಲಿ ಮೂಡುವ ನಿರಾಶೆಯನ್ನು ನೋಡಲು ನಮಗೆ ತುಂಬ ಕಷ್ಟವಾಗುತ್ತಿತ್ತು. ‘ನೌಕರಿರಹಿತ ಬೆಳವಣಿಗೆ’ಯ ಬಗ್ಗೆ ಅರ್ಥಶಾಸ್ತ್ರಜ್ಞರನ್ನು ಇತ್ತೀಚೆಗೆ ನಮ್ಮ ದೇಶದ ವಿತ್ತ ಸಚಿವರು ನಿರಾಧಾರವೆಂದು ತಳ್ಳಿಹಾಕಿದ್ದಾರೆ. ಆದರೆ ಸತ್ಯಸಂಗತಿ ಏನೆಂದರೆ ಉದ್ಯೋಗದಲ್ಲಿ ಬೆಳವಣಿಗೆ ಶೂನ್ಯಕ್ಕೆ ಸಮೀಪವಿದೆ ಮತ್ತು ನಗರಗಳಿಂದ ತುಂಬಾ ದೂರದ ಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಹೆಚ್ಚಳವನ್ನು ಸಂಗ್ರಹಿಸುವ ಅಂಕೆಸಂಖ್ಯೆಗಳು ಅರ್ಥಹೀನ.

ರಾನಿಕೇತ್‌ನ ಪ್ರತಿ ಬೀದಿಯ ಮೂಲೆಯಲ್ಲೂ ತಂಗಾಳಿಗೆ ಮೈಯೊಡ್ಡಿ ಗಂಡಸರು ಕಾಣಸಿಗುತ್ತಾರೆ. ಯಾಕೆಂದರೆ ಅವರು ಮಾಡಬಹುದಾದ ಕೆಲಸ ಬೇರೇನೂ ಇಲ್ಲ. ಹೆಚ್ಚಿನವರು ಮಧ್ಯದಲ್ಲೇ ಶಾಲೆಬಿಟ್ಟವರು. ದೊಡ್ಡ ಪಟ್ಟಣಗಳಿಗೆ ತಪ್ಪಿಸಿಕೊಂಡು ಹೋಗುವ ಕನಸು ಕಾಣುತ್ತಾ ಅವರು ಫೋನಿನ ಪರದೆಗಳನ್ನು ದಿಟ್ಟಿಸಿ ನೋಡುತ್ತಾರೆ. ಕೆಲವರು ಸ್ಥಳೀಯವಾಗಿ ವೈಟರ್‌ಗಳಾಗಿ, ಮನೆಕೆಲಸದ ಆಳುಗಳಾಗಿ ಅರೆಬರೆ ವೇತನಕ್ಕೆ ದುಡಿಯುತ್ತಾರೆ. ನಗರಗಳಿಗೆ ಹೋದವರು ಸೋತು ಹಿಂದಿರುಗುತ್ತಾರೆ. ಅವರು ಸಂಬಂಧಿಕರಿಂದ ಕಾಡಿಬೇಡಿ ಪಡೆದ ಹಣದಿಂದ ಒಂದೆರಡು ಬಾಟಲಿ ಮದ್ಯ ಖರೀದಿಸುತ್ತಾರೆ. ಬೆಟ್ಟದ ಒಂದು ಬದಿಗೆ ಹೋಗಿ ಬೆಂಕಿ ಉರಿಸಿ ಚಳಿಕಾಯಿಸುತ್ತಾ ಕುಡಿಯುತ್ತಾರೆ. ಅಲ್ಲಲ್ಲಿ ಕಾಡುಗಳ ಉದ್ದಕ್ಕೂ ಅವರ ಒಡೆದ ಗ್ಲಾಸ್‌ಗಳು ಬಿದ್ದಿರುತ್ತವೆ. ವಿಸ್ತಾರವಾದ ಬೆಟ್ಟಗಳು ಅದ್ಭುತ, ಆಕರ್ಷಕ. ಆದರೆ ಇದೊಂದು ಗ್ರಾಮೀಣ ಇಲಿ ಬೋನು.

ಜೋಗಿಯ ಹಾಗೆ ಹಲವರು ಟ್ಯಾಕ್ಸಿ ಓಡಿಸುತ್ತಾರೆ. ಆದರೆ ಪ್ರವಾಸೋದ್ಯಮ ಕುಂಠಿತಗೊಂಡಿದೆ. ಎಡ್ಮಂಡ್ ಹಿಲರಿ ಮತ್ತು ಫ್ರಾಂಕ್ ಸ್ಮಿತ್ ತಮ್ಮ ಪ್ರಸಿದ್ಧ ಪರ್ವತಾರೋಹಣಗಳನ್ನು ಇದೇ ಸುಂದರ ಪಟ್ಟಣದಿಂದ ಆರಂಭಿಸಿದರು. ಚಿಕ್ಕಪುಟ್ಟ ಪರ್ವತಾರೋಹಣ ಕಂಪೆನಿಗಳು ಪರ್ವತಾರೋಹಿಗಳ ಸಂಖ್ಯೆ ಕುಸಿದ ಪರಿಣಾಮವಾಗಿ ತಮ್ಮ ಸಿಬ್ಬಂದಿಯಲ್ಲಿ ಹಲವರನ್ನು ವಜಾಗೊಳಿಸಿವೆ. ಭಾರತವು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಕಾರಣಕ್ಕಾಗಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತ್ತಿಲ್ಲ ಅನ್ನಿಸುತ್ತದೆ.

ಇಂತಹ ನಿರಾಸೆಯ ಭರವಸೆಯಿಲ್ಲದ ಸನ್ನಿವೇಶದಲ್ಲಿ ಯಾವ ಕ್ಷಣದಲ್ಲೂ ಹಿಂಸೆ ಪುಟಿದೇಳಬಹುದು. 2014ರಲ್ಲಿ ಡೆಹ್ರಾಡೂನ್‌ನಲ್ಲಿ ತಮ್ಮ ಕಾರಿನ ಚಾಲಕ ರಾಜುದಾಸ್‌ನಿಂದ ದರೋಡೆ ಮಾಡಲ್ಪಟ್ಟು ಬಳಿಕ ಕೊಲೆಯಾದ ಪ್ರವಾಸಿ ದಂಪತಿಯ ಬಗ್ಗೆ ಜೋಗಿಗೆ ಗೊತ್ತಿಲ್ಲದೆ ಇರಲಾರದು. ಆದರೆ ಜೋಗಿ ಮತ್ತು ರಾಜುದಾಸ್ ಕೆಲವು ದಿನ ಸುದ್ದಿಯಲ್ಲಿದ್ದರು. ಆದರೆ ಇವರಂತಹ ಹಲವರು, ಆತ್ಮಹತ್ಯೆ ಮಾಡಿಕೊಳ್ಳುವವರು ಅಥವಾ ಕೊಲೆಮಾಡುವವರು, ಸುದ್ದಿಯಾಗದೆ ಉಳಿದು ಬಿಡುತ್ತಾರೆ.

ಜೋಗಿಯ ಟ್ಯಾಕ್ಸಿ-ವ್ಯಾನ್ ಅವನ ಮನೆಯ ಹೊರಗಡೆ ಇನ್ನೂ ಹಾಗೆಯೆ ನಿಂತಿದೆ. ಅವನ ನಾಯಿ ನಾಪತ್ತೆಯಾಗಿದೆ. ಜೋಗಿಯ ತಾಯಿ ತನ್ನ ಮನೆಗೆ ಬಂದವರಿಗೆಲ್ಲಾ ಜೋಗಿಯ ಮದುವೆಯ ಆಲ್ಬಮ್ ತೋರಿಸುತ್ತಾಳೆ.

Writer - ಅನುರಾಧ ರಾಯ್

contributor

Editor - ಅನುರಾಧ ರಾಯ್

contributor

Similar News

ಜಗದಗಲ

ಜಗ ದಗಲ