ಶಿಕ್ಷಣವೆಂಬುದು ಮಾರುವ ಸರಕೇ?

Update: 2017-07-06 18:32 GMT

ಎಜುಕೇಶನ್ ಟ್ರಸ್ಟ್‌ಗಳ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಜ್ಞಾನದ ಕಡೆ ವಿದ್ಯಾರ್ಥಿಗಳನ್ನು ಒಯ್ಯದೆ ದುಡ್ಡು ಮಾಡುವ ಕೋರ್ಸ್‌ಗಳ ಬಗ್ಗೆ ವೃತ್ತಿ ಮಾರ್ಗದರ್ಶನ ನೀಡುತ್ತಿವೆ. ಹಾಗಾಗಿ ಇಲ್ಲಿಯ ವೃತ್ತಿ ಮಾರ್ಗದರ್ಶನದಲ್ಲಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ತೋರಿಸಲಾಗುತ್ತದೆ. ಅವರು ಹೇಗೆ ಶ್ರೀಮಂತರಾದರು ಎಂಬುದನ್ನು ತಿಳಿಸಲಾಗುತ್ತದೆ. ಅವರ ಜೀವನಚರಿತ್ರೆಯನ್ನು ಇಲ್ಲಿ ವೈಭವೀಕರಿಸಿ ಹೇಳಲಾಗುತ್ತದೆ.


ಈಗೀಗ ಖಾಸಗಿ ಶಿಕ್ಷಣ ಸಂಸ್ಥೆಯವರು ಕೂಡಾ ಹಾರ್ಡ್‌ವೇರ್ ಅಂಗಡಿ ಮಾಲಕರ ಹಾಗೆ ಶೈಕ್ಷಣಿಕ ಮಾರುಕಟ್ಟೆಯನ್ನು ವಿಸ್ತರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಹೊಸ ಸ್ಟ್ರಾಟಜಿ ಏನಂದರೆ, ಎಸೆಸೆಲ್ಸಿ/ಹತ್ತನೆಯ ತರಗತಿಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಅಥವಾ ಟಾಪ್ 10ರಲ್ಲಿ ಕಾಣಿಸಿಕೊಳ್ಳುವ ವಿದ್ಯಾರ್ಥಿಗಳ ಹೆಸರು ಟಿವಿ ಮಾಧ್ಯಮದಲ್ಲಿ ಕಂಡ ತಕ್ಷಣ ಅಂಥಾ ವಿದ್ಯಾರ್ಥಿಗಳ ವಿಳಾಸ ಮತ್ತು ಫೋನ್ ನಂಬರನ್ನು ಖಾಸಗಿ ಶಿಕ್ಷಣ ಸಂಸ್ಥೆಯವರು ಹೇಗಾದರೂ ಸಂಗ್ರಹಿಸುತ್ತಾರೆ.

ಅವರಿಗೆ ಮತ್ತೆ ಮತ್ತೆ ಅಭಿನಂದನೆಗಳನ್ನು ತಿಳಿಸಿ, ಅವರನ್ನು ತಮ್ಮ ತಮ್ಮ ಸಂಸ್ಥೆಗಳಿಗೆ ಸೆಳೆಯುವ ನೆಲೆಯಲ್ಲಿ ಅನೇಕ ಬಗೆಯ ಗಿಮಿಕ್ಸ್‌ಗಳನ್ನು ಇಂದು ಅನೇಕ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ವಿದ್ಯಾರ್ಥಿಗಳ ಮನೆಗೆ ತೆರಳುವುದು, ಅವರ ತಂದೆತಾಯಿಗಳ ಯೋಗಕ್ಷೇಮವನ್ನು ವಿಚಾರಿಸುವುದು, ಹಣ್ಣು-ಹಂಪಲುಗಳನ್ನು ನೀಡಿ ತಮ್ಮ ಬಗ್ಗೆ ಅವರಲ್ಲಿ ವಿಶ್ವಾಸ ಮೂಡಿಸಿ, ಬಳಿಕ ನಿಧಾನಕ್ಕೆ ತಾವು ಬಂದ ಉದ್ದೇಶವನ್ನು ಅರುಹುತ್ತಾರೆ. ನಿಮ್ಮ ಮಕ್ಕಳನ್ನು ನಮ್ಮ ಸಂಸ್ಥೆಗೆ ಸೇರಿಸಿ ಎಂದು ಬೇಡಿಕೊಳ್ಳುತ್ತಾರೆ. ಆರಂಭದಲ್ಲಿ ರಿಯಾಯಿತಿ ನೀಡೋಣ ಎನ್ನುತ್ತಾರೆ. ಆದರೆ ಪೋಷಕರು ತಮ್ಮ ಬೇಡಿಕೆಗಳನ್ನು ಮುಂದಿಡುತ್ತಾರೆ, ರಿಯಾಯಿತಿಗೆ ಸುತರಾಂ ಒಪ್ಪದಿದ್ದಾಗ ಉಚಿತ ಶಿಕ್ಷಣ, ಉಚಿತ ವಸತಿ-ಊಟೋಪಚಾರಗಳ ಆಮಿಷ ಒಡ್ಡುತ್ತಾರೆ. ಕೊನೆಗೂ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಸಫಲವಾಗುತ್ತಾರೆೆ.

 ಹಾಗಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾಕೆ ಮೆರಿಟ್ ವಿದ್ಯಾರ್ಥಿಗಳ ಕಾಲು ಹಿಡಿಯಲು ಹೋಗುತ್ತಿದ್ದಾರೆ? ಉತ್ತರ ಬಹಳ ಸರಳವಾಗಿದೆ. ಇದು ಮತ್ತೆ ಅಡ್ಮಿಶನ್ ತಂತ್ರಗಳು. ಅದರಿಂದ ಕಾಲೇಜಿನ ರ್ಯಾಪೋ ಹೆಚ್ಚುತ್ತದೆ. ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿ ಪಿಯುನಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆಯುತ್ತಾನೆ ಎಂಬ ಲೆಕ್ಕಾಚಾರ ಇವರದು. ಪಿಯುನಲ್ಲಿ ತಮ್ಮ ಕಾಲೇಜಿನಲ್ಲಿ ಓದಿದ್ದು ಎಂಬ ಹೆಸರು ಪತ್ರಿಕೆಯಲ್ಲಿ ಇವರಿಗೆ ಕಾಣಬೇಕು, ಜನರ ಬಾಯಲ್ಲಿ ಸಂಸ್ಥೆಯ ಹೆಸರು ಬರಬೇಕು. ಇದರಿಂದ ಪ್ರಚಾರ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಈ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳನ್ನು ಪಡಕೊಳ್ಳುವ ಮೂಲಕ ಅವರನ್ನು ತಮ್ಮ ಕಾಲೇಜುಗಳಿಗೆ ಜಾಹೀರಾತುದಾರರನ್ನಾಗಿಸುತ್ತವೆ. ಇಲ್ಲಿ ಒಬ್ಬನಿಗೆ ಉಚಿತ ಶಿಕ್ಷಣ ನೀಡಿದರೂ ಅವನಿಗೆ ವಿಶೇಷ ಕಲಿಸುವ ಅಗತ್ಯ ಇರುವುದಿಲ್ಲ.

ಇಂತಹ ಮೆರಿಟ್ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಲ್ಲಿ ಓದಿದರೆ ಮುಂದೆ ಅನೇಕ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜುಗಳಿಗೆ ಇವರು ತಂದುಕೊಡಬಲ್ಲರು ಎಂಬ ಲಾಭದ ಯೋಚನೆ ಇರುತ್ತದೆ. ನಿಜವಾಗಿಯೂ ಕಲಿಸುವ ನೆಲೆಯಲ್ಲಿ ನೋಡುವುದಾದರೆ ಇಂತಹ ವಿದ್ಯಾರ್ಥಿಗಳಿಗೆ ಟೀಚಿಂಗ್ ಸುಲಭವಾಗಿರುತ್ತದೆ. ಯಾಕೆಂದರೆ ಮೆರಿಟ್ ವಿದ್ಯಾರ್ಥಿಗಳಲ್ಲಿ ಒಂದು ಸ್ಪಷ್ಟ ಗುರಿ ಇದೆ, ಉದ್ದೇಶವಿದೆ. ಇಂತಹ ಸ್ವ ಆಸಕ್ತನೂ, ಸ್ವ ಉದ್ದೇಶಿತನೂ ಆದ ವಿದ್ಯಾರ್ಥಿಯಿಂದ ಮುಂದೆ ತಮ್ಮ ಸಂಸ್ಥೆಗೆ ಕೀರ್ತಿ ಬರುತ್ತದೆ ಎಂಬ ಯೋಚನೆ ಇಲ್ಲಿದೆ.

ಇವರಿಗೆ ಕಡಿಮೆ ಅಂಕದ ವಿದ್ಯಾರ್ಥಿಗಳು ಬೇಡ, ಅದರಿಂದ ಪ್ರಯೋಜನವಿಲ್ಲ. ಶೈಕ್ಷಣಿಕವಾಗಿ ದುರ್ಬಲವಾಗಿ ಕಾಣುವ ಗ್ರಾಮೀಣ ವಿದ್ಯಾರ್ಥಿಗಳನ್ನು ಕಂಡರೆ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದು ಬಗೆಯ ಅಸಡ್ಡೆ, ಅನಾದರ. ಅ ಎಲ್ಲ ವಿದ್ಯಾರ್ಥಿಗಳ ಆ ಶೈಕ್ಷಣಿಕ ಸ್ಥಿತಿಗೆ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಕಾರಣ ಏನು ಎಂಬ ಬಗ್ಗೆ ಇವರಿಗೆ ಯೋಚನೆ ಇಲ್ಲ. ಚೆನ್ನಾಗಿ ಓದುವ ವಿದ್ಯಾರ್ಥಿಗಳನ್ನು ಮಾತ್ರ ಪಡೆದುಕೊಂಡು ಅವರ ಫಲಿತಾಂಶದಿಂದ ಕಾಲೇಜು ಕಟ್ಟ ಹೊರಟವರು ಇವರು. ಮಾತ್ರವಲ್ಲದೆ, ಜನರ ದಾರಿ ತಪ್ಪಿಸಲು ಹುಸಿ ಫಲಿತಾಂಶವನ್ನು ಮಾಧ್ಯಮದಲ್ಲಿ ಪ್ರಕಟಪಡಿಸುತ್ತಾರೆ. ಇದು ವಿದ್ಯಾವಂತರು, ಶಿಕ್ಷಣ ತಜ್ಞರು, ಧಾರ್ಮಿಕ ನೀತಿಬೋಧಕರು, ಕ್ಯಾಪಿಟಲಿಸ್ಟ್‌ಗಳು ಮಾಡು ವಂತಹ ಮಾರ್ಕೆಟಿಂಗ್ ಸ್ಟ್ರಾಟಜಿ. ಇವರೆಲ್ಲರಿಗೂ ಶಿಕ್ಷಣ ಎಂಬುದು ಬಂಡವಾಳ. ಇವರಿಗೂ ಶಿಕ್ಷಣ ಎಂಬುದು ಹಾರ್ಡ್‌ವೇರ್ ಅಂಗಡಿಯಲ್ಲಿ ದೊರೆಯುವ ಒಂದು ಬಗೆಯ ಸರಕಿನಂತೆ.

ಅದನ್ನು ನಮ್ಮಲ್ಲಿಂದ ಮಾತ್ರ ಕೊಂಡುಕೊಳ್ಳಿ ಎನ್ನುವ ರೀತಿಯಲ್ಲಿ ಇವರ ಪ್ರಚಾರ, ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಶೈಕ್ಷಣಿಕ ಮಾರುಕಟ್ಟೆಯ ನಿರ್ಮಾತೃಗಳು ಎಜುಕೇಶನ್ ಟ್ರಸ್ಟ್ ಗಳ ಮೂಲಕ ಅಥವಾ ಚ್ಯಾರಿಟೇಬಲ್ ಟ್ರಸ್ಟ್‌ಗಳ ಮೂಲಕ ತಮ್ಮ ಸಂಸ್ಥೆಗಳನ್ನು ನಡೆಸುತ್ತಿರುತ್ತಾರೆ. ಎಜುಕೇಶನ್ ಅಂದರೆ ಶಿಕ್ಷಣ. ಚ್ಯಾರಿಟಿ ಅಂದರೆ ಸಮಾಜಸೇವೆ. ಶಿಕ್ಷಣ ಅಂದರೆ ಜ್ಞಾನದ ಕಡೆಗೆ ಕರೆದೊಯ್ಯುವುದು. ದುರ್ಬಲರಿಗೆ, ಅನಾಥರಿಗೆ, ಬಡವರಿಗೆ ಶೈಕ್ಷಣಿಕ ಸಹಾಯ ನೀಡುವುದು ಚ್ಯಾರಿಟೇಬಲ್ ಟ್ರಸ್ಟ್‌ಗಳ ಮೂಲಕ ನಡೆಯುವ ಸಂಸ್ಥೆಗಳ ಕಾರ್ಯಕ್ರಮವಾಗಬೇಕು. ಆದರೆ ವಾಸ್ತವದಲ್ಲಿ ಅದು ಹಾಗೆ ಆಗುತ್ತಿಲ್ಲ. ಎಜುಕೇಶನ್ ಟ್ರಸ್ಟ್‌ಗಳ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಜ್ಞಾನದ ಕಡೆ ವಿದ್ಯಾರ್ಥಿಗಳನ್ನು ಒಯ್ಯದೆ ದುಡ್ಡು ಮಾಡುವ ಕೋರ್ಸ್ ಗಳ ಬಗ್ಗೆ ವೃತ್ತಿ ಮಾರ್ಗದರ್ಶನ ನೀಡುತ್ತಿವೆ. ಹಾಗಾಗಿ ಇಲ್ಲಿಯ ವೃತ್ತಿ ಮಾರ್ಗದರ್ಶನದಲ್ಲಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ತೋರಿಸಲಾಗುತ್ತದೆ. ಅವರು ಹೇಗೆ ಶ್ರೀಮಂತರಾದರು ಎಂಬುದನ್ನು ತಿಳಿಸಲಾಗುತ್ತದೆ. ಅವರ ಜೀವನಚರಿತ್ರೆಯನ್ನು ಇಲ್ಲಿ ವೈಭವೀಕರಿಸಿ ಹೇಳಲಾಗುತ್ತದೆ. ಈ ತರಗತಿಗಳಲ್ಲಿ ಸಾಮಾನ್ಯವಾಗಿ ತೋರಿಸಲಾಗುವ ಆದರ್ಶ ವ್ಯಕ್ತಿಗಳೆಂದರೆ- ಸ್ಟೀವ್‌ಜಾಬ್, ಅಂಬಾನಿ, ಬಿಲ್‌ಗೇಟ್ಸ್ ರಂತಹ ಶ್ರೀಮಂತರು ಮತ್ತು ಕೆಲವೊಂದು ಶ್ರೀಮಂತ ಕಂಪೆನಿಗಳು. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ ಇಂತಹ ಸಂಸ್ಥೆಗಳಲ್ಲಿ ನೀಡಲಾಗುವ ಮಾಹಿತಿಗಳೇ ಜ್ಞಾನವಾಗಿದೆ, ವಿಜ್ಞಾನವಾಗಿದೆ ಮತ್ತು ಇದನ್ನೇ ಪ್ರತಿಯೊಬ್ಬರೂ ‘ಗುಣಮಟ್ಟದ ಶಿಕ್ಷಣ’ ಎಂಬುದಾಗಿ ಹೇಳುತ್ತಾ ಬರುತ್ತಿದ್ದಾರೆ.

   ಪ್ರತೀ ಬಾರಿಯೂ ಯಾರಿಂದ ಯಾವುದರಿಂದ ತಮ್ಮ ಸಂಸ್ಥೆಗಳಿಗೆ ಲಾಭವಿದೆ? ಯಾರು ಉತ್ಪಾದಕರು ಯಾರು ಅನುತ್ಪಾದಕರು ಎಂಬ ಲೆಕ್ಕಾಚಾರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯವರು ಕ್ರಮೇಣ ಕಾಲೇಜಿನಲ್ಲೇ ನೋಟ್ ಪುಸ್ತಕ ಮತ್ತು ಪಠ್ಯ ಪುಸ್ತಕಗಳನ್ನು ಮಾರಾಟಕ್ಕೆ ತೊಡಗಿದರು. ಕೆಲವೊಂದು ಕಾಲೇಜುಗಳ ಕಚೆೇರಿಯಲ್ಲೇ ಬಕೆಟ್‌ಗಳನ್ನು ಮತ್ತು ಹಾಸ್ಟೆಲ್‌ಗಳಲ್ಲಿ ಹಾಸಿಗೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಮಾತು ಕೇಳಿ ಬಂದಿತ್ತು. ಅಂದರೆ ತಾವು ನಡೆಸುವ ವಿದ್ಯೆಯ ಅಂಗಡಿಗಳಲ್ಲಿ ಅದಕ್ಕೆ ಪೂರಕವಾದ ಎಲ್ಲ ಸಾಮಗ್ರಿಗಳನ್ನು ಮಾರಾಟ ಮಾಡುವ ಕಾಯಕಕ್ಕೆ ತೊಡಗಿದ ಸಂಸ್ಥೆಗಳು ಅಲ್ಲೂ ಲಾಭದ ಲೆಕ್ಕಾಚಾರವನ್ನು ಇಟ್ಟುಕೊಂಡವು. ನಿಜ. ಶಿಕ್ಷಣದಿಂದ ತನ್ನಲ್ಲಿ ಏನೋ ಶ್ರೇಷ್ಠವಾದ ಒಂದು ಆಗಬೇಕು. ವಿದ್ಯೆಯಿಂದ ವಿನಯ ಬರುವುದು, ತುಂಬಿದ ಕೊಡ ತುಳುಕುವುದಿಲ್ಲ ಎಂದೆಲ್ಲ ತಿಳಿದವರು ಹೇಳುತ್ತಾರೆ.

ಇವೆಲ್ಲ ನಮ್ಮ ವರ್ತನೆ ನಡವಳಿಕೆ ಮತ್ತು ಜ್ಞಾನಕ್ಕೆ ಸಂಬಂಧ ಪಟ್ಟ ಮಾತುಗಳು. ಶಿಕ್ಷಣದ ಮೂಲಕ ಇವೆಲ್ಲ ಒಬ್ಬ ವ್ಯಕ್ತಿಗೆ ದತ್ತವಾಗುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಬಗೆಯ ಶಿಕ್ಷಣ ಖಿಲವಾದ ಈ ಹೊತ್ತಲ್ಲಿ ವಿದ್ಯಾರ್ಥಿಯಲ್ಲಿ ಅದಮ್ಯ ಅಹಂಕಾರ, ಉಡಾಫೆ, ಒರಟುತನ, ನಿರ್ಲಕ್ಷ್ಯ, ಹಿರಿಯರ ಬಗ್ಗೆ ಅಗೌರವ, ಅನಾದರವನ್ನು ಕಾಣುತ್ತೇವೆ. ಈಗಿನ ಯುವಪೀಳಿಗೆಗೆ ಅಧ್ಯಾಪಕರು ಜೋಕರ್ ಥರಾ ಕಾಣುತ್ತಾರೆ. ಹಾಗೆಂದು ಎಲ್ಲ ಶಿಕ್ಷಕರು ಸಂಸ್ಕಾರವಂತರು ಎಂದು ವಾದಿಸುವುದು ನನ್ನ ಉದ್ದೇಶವಲ್ಲ. ಅಪ್ರಾಮಾಣಿಕರಿದ್ದಾರೆ, ಲಫಂಗರಿದ್ದಾರೆ, ಮಾನಗೇಡಿ ಶಿಕ್ಷಕರಿದ್ದಾನೆ. ಹಾಗೆಯೇ ಉತ್ತಮ ಸಂಸ್ಕಾರ ಇರುವ ವಿದ್ಯಾರ್ಥಿಗಳೂ ಇದ್ದಾರೆ. ಆದರೆ ಇತ್ತೀಚೆಗೆ ನಕಾರಾತ್ಮಕವಾದ ವರ್ತನೆಯನ್ನು ತೋರುವ ಬಹುತೇಕ ವಿದ್ಯಾರ್ಥಿಗಳಲ್ಲಿ ಕಾಣುವ ಅಪಾರವಾದ ಆತ್ಮವಿಶ್ವಾಸ ಯಾರನ್ನಾದರೂ ದಂಗುಬಡಿಸುವಂಥಾದ್ದೇ.

ಜೊತೆಗೆ ಇಂತಹ ಸಮಾಜ ಘಾತುಕ, ವಿಕಾರ ಮನಸ್ಸಿನ ನಡವಳಿಕೆಗಳನ್ನು ಕಡೆಗಣಿಸುವ, ನಿರ್ಲಕ್ಷಿಸುವ ಹಿರಿಯರನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ. ಇಂದು ಪೋಷಕರೇ ಮನೆಯಲ್ಲಿ ವಿದ್ಯಾಸಂಸ್ಥೆ ಮತ್ತು ಅಧ್ಯಾಪಕರ ಬಗ್ಗೆ ನಕಾರಾತ್ಮಕವಾದ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಮಕ್ಕಳ ಮುಂದೆಯೇ ಅವರಿಗೆ ಕಲಿಸುವ ಅಧ್ಯಾಪಕನನ್ನು ಹೀಯಾಳಿಸುವುದು ಇಂದು ಸರ್ವೇ ಸಾಮಾನ್ಯ. ನಾವು ಸಂಸ್ಥೆಗೆ ಕೈತುಂಬ ದುಡ್ಡು ಕೊಟ್ಟಿದ್ದೇವೆ, ಹಾಗಾಗಿ ನಮ್ಮ ಬೇಡಿಕೆಗಳನ್ನು ಸಂಸ್ಥೆ ಈಡೇರಿಸಬೇಕು ಎಂಬ ಯೋಚನೆ ಮಾತ್ರ ಈ ಪೋಷಕರಲ್ಲಿರುತ್ತದೆ.

ಇಂತಹ ಪೋಷಕರಿಂದ ಪ್ರೇರಣೆಗೆ ಒಳಗಾಗುವ ಅಪಕ್ವ ಮನಸ್ಸಿನ, ಹುಡುಗಾಟಿಕೆಯ ಸ್ವಭಾವದ ವಿದ್ಯಾರ್ಥಿಗಳು ಇನ್ನೇನು ಮಾಡಲು ಸಾಧ್ಯ?. ಹಾಗಾಗಿ ಇಂದು ವಿದ್ಯಾರ್ಥಿಗಳಲ್ಲಿ ನಾವು ಕಾಣುವುದು ಗ್ರಾಹಕ ಸಂಸ್ಕೃತಿಯನ್ನು. ನಮ್ಮ ಇಷ್ಟದಂತೆ ಇರುತ್ತೇವೆ, ನಮ್ಮನ್ನು ಸಹಿಸಿಕೊಂಡು ನಮಗೆ ಬೇಕಾದುದನ್ನು ನೀವು ನೀಡಬೇಕು ಎಂಬ ಕಸ್ಟಮರ್-ಪ್ರೊಡಕ್ಟ್ ಯೋಚನೆಯ ಮಾರ್ಕೆಟ್ ಮನೋಭಾವವನ್ನು ಅವರು ತಮ್ಮ ವರ್ತನೆಯಲ್ಲಿ ತೋರಿಸುತ್ತಿರುತ್ತಾರೆ. ಈಗಿನ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಾಪಕರೆಂದರೆ ಸಂತೆಯಲ್ಲಿ ತರಕಾರಿ ಮಾರುವವನ ಹಾಗೆ. ವಾಸ್ತವದಲ್ಲಿ ಶಿಕ್ಷಣದ ಮೂಲಕ ನಮ್ಮ ಭಾಷೆ - ಸಂಸ್ಕೃತಿಯ ಬಗ್ಗೆ ಅರಿವು-ಅಭಿಮಾನ ಹೆಚ್ಚಾಗಬೇಕು ಎಂಬುದು ನಮ್ಮೆಲ್ಲ ಹಿರಿಯರ ಆದರ್ಶ.

ಆದರೆ ಇಂದು ವಿದ್ಯಾವಂತರಿಗೆ ಭಾಷೆ- ಸಂಸ್ಕೃತಿಗಳ ಬಗ್ಗೆ ಅಭಿಮಾನವಿಲ್ಲ, ಗೌರವವಿಲ್ಲ. ಭಾಷೆಯೊಂದು ನಾಶವಾದರೆ ಹಲವಾರು ಶತಮಾನಗಳಿಂದ ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿರುವಂತಹ ಸಂಸ್ಕೃತಿಯೇ ನಾಶವಾದಂತೆ ಎಂಬ ಕನಿಷ್ಠ ಮಟ್ಟದ ಅರಿವು ಇಂದು ಪೋಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಅಥವಾ ವಿದ್ಯಾಸಂಸ್ಥೆಯವರಿಗಾಗಲಿ ಇಲ್ಲದಿರುವುದು ಅತ್ಯಂತ ವಿಷಾದನೀಯ. ಯಾವ ನಾಶದ ಬಗ್ಗೆಯೂ ಚಿಂತೆ ಇಲ್ಲದ ಇವರಿಗೆ ಇರುವುದು ತಮ್ಮ ಅಸ್ತಿತ್ವ ಮತ್ತು ಲಾಭದ ಚಿಂತೆ ಮಾತ್ರ. ಭಾಷೆ, ಸಮಾಜ, ಸಂಸ್ಕೃತಿ, ಪ್ರಕೃತಿ, ಮೌಲ್ಯಗಳೆಲ್ಲವೂ ಇವರೆಲ್ಲರಿಗೂ ಅಪ್ರಸ್ತುತ.

Writer - ಡಾ.ದಿನೇಶ್ ನಾಯಕ್ ಕಾರಾಜೆ

contributor

Editor - ಡಾ.ದಿನೇಶ್ ನಾಯಕ್ ಕಾರಾಜೆ

contributor

Similar News