ಕೊಲ್ಲುವವರ ನಡುವೆ ಕಾಯುವವರು

Update: 2017-07-06 18:40 GMT

ಸಮಾಜ ನಿಧಾನಕ್ಕೆ ಹೇಗೆ ಒಳಗಿನ ಸಂವೇದನೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಿದೆ ಎನ್ನುವುದಕ್ಕೆ ಕರಾವಳಿ ಅಪ್ಪಟ ಉದಾಹರಣೆಯಾಗುತ್ತಿದೆ. ಇಲ್ಲಿ, ಚೂರಿ ಇರಿತವೋ, ಕೊಲೆಯೋ ಸಂಭವಿಸಿದರೆ ತಕ್ಷಣ ಕೇಳುವ ಪ್ರಶ್ನೆ ‘‘ಕೊಲೆಯಾದವನ ಧರ್ಮ ಯಾವುದು?’’. ಇದಾದ ಬಳಿಕ ಎರಡನೆ ಪ್ರಶ್ನೆ ‘‘ಕೊಲೆ ಮಾಡಿದವನು ಯಾರು?’’ ಈ ಎರಡು ಪ್ರಶ್ನೆಗಳಿಗೆ ಉತ್ತರ ಕಂಡು ಕೊಂಡ ಬಳಿಕವಷ್ಟೇ ಕೊಲೆಯನ್ನು ಖಂಡಿಸುವ ಒಂದು ಪ್ರವೃತ್ತಿ ಇಂದು ನಮ್ಮ ನಡುವೆ ಬೆಳೆಯುತ್ತಿದೆ.

ಕೊಲೆಯಾದವನು ಮತ್ತು ಕೊಲೆ ಮಾಡಿದವನು ಒಂದೇ ಧರ್ಮಕ್ಕೆ, ಜಾತಿಗೆ ಸೇರಿದ್ದರೆ ಅದು ಮಾಧ್ಯಮಗಳಿಗಾಗಲಿ, ರಾಜಕೀಯ ಸಂಘಟನೆಗಳಿಗಾಗಲಿ ಆತಂಕದ ವಿಷಯವಲ್ಲ. ಕೊಲೆಯಾದವನು ತನ್ನ ಧರ್ಮೀಯನಾಗಿದ್ದು, ಕೊಲೆಗೈದವನು ಇನ್ನೊಂದು ಧರ್ಮಕ್ಕೆ ಸೇರಿದವನಾಗಿದ್ದರೆ, ತಕ್ಷಣ ಅದು ಖಂಡನಾರ್ಹವಾಗುತ್ತದೆ. ಇದೇ ಸಂದರ್ಭದಲ್ಲಿ ಕೊಲೆ ಮಾಡಿದವನು ತನ್ನ ಧರ್ಮೀಯನಾಗಿದ್ದು, ಕೊಲೆಯಾದವನು ಇನ್ನೊಂದು ಧರ್ಮಕ್ಕೆ ಸೇರಿದಾಕ್ಷಣ ವೌನವನ್ನು ತಾಳುತ್ತಾನೆ. ವೌನ ತಾಳುವುದೆಂದರೆ ಕೊಲೆಯನ್ನು ಪರೋಕ್ಷವಾಗಿ ಸಮರ್ಥಿಸುವುದೆಂದೇ ಅರ್ಥ. ಸಾವು, ನೋವು, ಹಿಂಸೆ, ಗಲಭೆಯನ್ನು ಯಾವ ಧರ್ಮೀಯನೇ ಆರಂಭಿಸಲಿ, ಅದು ಒಂದಲ್ಲ ಒಂದು ದಿನ ತನ್ನ ಪಾದದ ಬುಡಕ್ಕೆ ಬಂದೇ ಬರುತ್ತದೆ ಎಂದು ತಿಳಿದುಕೊಂಡ ಸಭ್ಯ ನಾಗರಿಕ, ಯಾವುದೇ ಧರ್ಮಕ್ಕೆ ಸೇರಿದವನು ಕೊಲೆಯಾದರೂ, ಯಾವ ಧರ್ಮಕ್ಕೆ ಸೇರಿದವನು ಕೊಲೆ ಮಾಡಿದರೂ ಮುಂದೆ ನಿಂತು ಖಂಡಿಸುತ್ತಾನೆ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಧರ್ಮ, ಜಾತಿಗಳ ಹೆಸರನ್ನು ಮುಂದಿಟ್ಟು ಹಿಂಸೆಯನ್ನು ವರದಿ ಮಾಡುವ ಪ್ರವೃತಿ ಹೆಚ್ಚುತ್ತಿವೆ. ಯಾಕೆಂದರೆ, ಕೊಲೆಗಾರನ ಜೊತೆಗೆ ಅಥವಾ ಕೊಲೆಯಾದವನ ಜೊತೆಗೆ ಆತನ ಧರ್ಮವನ್ನು ಜೋಡಿಸಿದಾಕ್ಷಣ ಸುದ್ದಿ ರೋಚಕತೆಯನ್ನು ಪಡೆಯುತ್ತವೆ. ಸಮಾಜ ಉದ್ವಿಗ್ನಗೊಂಡಷ್ಟು ಮಾಧ್ಯಮಗಳಿಗೆ ಹೆಚ್ಚು ಹೆಚ್ಚು ಹಿಂಸಾತ್ಮಕ ಸುದ್ದಿಗಳು ಆಹಾರವಾಗಿ ದೊರಕುತ್ತವೆ ಎನ್ನುವಂತಹ ಕ್ರೂರ ಮನಸ್ಥಿತಿ ಇದರ ಹಿಂದೆ ಕೆಲಸ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಕೊಲ್ಲುವವಷ್ಟೇ ಅಲ್ಲ, ಜಾತಿ, ಧರ್ಮಗಳನ್ನು ನೋಡದೆ ಕಾಯುವ ಒಂದು ವರ್ಗವಿದೆ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮರೆ ಮಾಚುವ ಪ್ರಯತ್ನವನ್ನು ಮಾಧ್ಯಮಗಳು ಮಾಡುತ್ತಿವೆ..

ವರ್ಷಗಳ ಹಿಂದೆ, ಬಂಟ್ವಾಳದಲ್ಲಿ ಒಂದು ದುರ್ಘಟನೆ ಸಂಭವಿಸಿತು. ಟಿಪ್ಪು ಜಯಂತಿಯ ಸಂದರ್ಭದಲ್ಲಿ ಕೋಮುಗಲಭೆ ನಡೆಸುವುದಕ್ಕೆಂದೇ ಭುವಿತ್ ಶೆಟ್ಟಿ ಎಂಬ ಸಂಘಪರಿವಾರ ಕಾರ್ಯಕರ್ತ ಮುಸ್ಲಿಮನೆಂದು ಭಾವಿಸಿ ಹರೀಶ್ ಪೂಜಾರಿ ಎಂಬ ಯುವಕನನ್ನು ಇರಿದು ಕೊಂದ. ಇದೇ ಸಂದರ್ಭದಲ್ಲಿ ಹರೀಶ್‌ನನ್ನು ರಕ್ಷಿಸುವುದಕ್ಕಾಗಿ ಇನ್ನೊಬ್ಬ ಮುಸ್ಲಿಮ್ ತರುಣ ಅಲ್ಲಿಗೆ ಧಾವಿಸಿದ. ಈ ಸಂದರ್ಭದಲ್ಲಿ ಈತನ ಮೇಲೂ ಹಲ್ಲೆಯಾಯಿತು.

ಕೊಲೆಯಾದವನು ‘ಹರೀಶ್’ ಆಗಿರುವುದರಿಂದ ಮುಸ್ಲಿಮರೇ ಕೊಂದಿರಬೇಕು ಎಂದು ಭಾವಿಸಿ ಮರುದಿನ ಸಂಘಪರಿವಾರ ಸಂಘಟನೆಗಳು ಜಿಲ್ಲೆಯಾದ್ಯಂತ ಬಂದ್ ಆಚರಿಸಿದವು. ಮಾಧ್ಯಮಗಳೂ ಈ ಕೊಲೆಯನ್ನು ವೈಭವೀಕರಿಸಿದವು. ಆದರೆ ಬಳಿಕ ಕೊಲೆ ಮಾಡಿದವನು ಸಂಘಪರಿವಾರದ ಕಾರ್ಯಕರ್ತ ಭುವಿತ್ ಶೆಟ್ಟಿ ಎನ್ನುವುದು ಗೊತ್ತಾದಾಕ್ಷಣ ಎಲ್ಲರೂ ವೌನ ತಾಳಿದರು. ತಮ್ಮದೇ ಧರ್ಮೀಯನೊಬ್ಬನನ್ನು ತಮ್ಮದೇ ಸಂಘಟನೆಯ ಕಾರ್ಯಕರ್ತ ಕೊಂದರೆ ಸಂಘಪರಿವಾರಗಳಿಗೆ ನ್ಯಾಯ ಸಮ್ಮತವಾಗುವುದು ಹೇಗೆ? ವಿಪರ್ಯಾಸವೆಂದರೆ, ತಮ್ಮ ಧರ್ಮೀಯನನ್ನೇ ಕೊಂದ ದುಷ್ಕರ್ಮಿಗಳನ್ನು ಹಿಂದುತ್ವದ ಸಂಘಟಕರು ರಕ್ಷಿಸುತ್ತಿದ್ದಾರೆ. ಕರಾವಳಿಯಲ್ಲಿ ಇನ್ನಷ್ಟು ಅನಾಹುತಗಳಿಗೆ ಅಂತಹ ಯುವಕರನ್ನು ಬಳಸಿಕೊಂಡು ಯೋಜನೆ ರೂಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮವನ್ನು ಮೀರಿ ಹರೀಶ್ ಪೂಜಾರಿಯನ್ನು ರಕ್ಷಿಸಲು ಮುಂದಾದ ಯುವಕ ಮಾಧ್ಯಮಗಳಿಗೆ ಮುಖ್ಯವಾಗಲೇ ಇಲ್ಲ.

ಇತ್ತೀಚೆಗೆ ಬಂಟ್ವಾಳ ಕೊಲೆ, ಚೂರಿ ಇರಿತಗಳ ಕಾರಣಕ್ಕಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಓರ್ವ ಸ್ಥಳೀಯ ರಾಜಕೀಯ ಮುಖಂಡನ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಈ ಹತ್ಯೆಯ ಒಗಟನ್ನು ಪೊಲೀಸರು ಬಿಡಿಸಿ ಕೆಲವು ಸಂಘಪರಿವಾರ ಮುಖಂಡರನ್ನು ಬಂಧಿಸುತ್ತಿದ್ದಂತೆಯೇ ಬಿ.ಸಿ.ರೋಡ್‌ನ ಲಾಂಡ್ರಿ ಅಂಗಡಿಯಲ್ಲಿ ಓರ್ವ ಯುವಕನಿಗೆ ಬರ್ಬರವಾಗಿ ಇರಿಯಲಾಗಿದೆ. ಆತ ಆರೆಸ್ಸೆಸ್‌ನ ಕಾರ್ಯಕರ್ತ ಎನ್ನುವುದು ಬೆಳಕಿಗೆ ಬಂದ ಬೆನ್ನಿಗೇ ಕೊಲೆಯನ್ನು ಯಾರು ಮಾಡಿರಬಹುದು ಎನ್ನುವುದನ್ನು ಕೆಲ ಮಾಧ್ಯಮಗಳು ನಿರ್ಧರಿಸಿಯೇ ಬಿಟ್ಟವು.

ಆದರೆ ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯನ್ನು ಯಾವ ಜಾತಿ ಧರ್ಮದ ಕಣ್ಣಲ್ಲೂ ನೋಡದೆ ತಕ್ಷಣ ಧಾವಿಸಿ ಆತನನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ಅಬ್ದುರ್ರವೂಫ್ ಎಂಬ ತರುಣನ ಕುರಿತಂತೆ ಮಾಧ್ಯಮಗಳು ಕಣ್ಣಿದ್ದೂ ಕುರುಡಾದವು. ಸಂತ್ರಸ್ತ ತನ್ನ ಲಾಂಡ್ರಿ ಅಂಗಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದಾಗ, ಸ್ಥಳೀಯರು ಹತ್ತಿರ ಹೋಗಲೂ ಬೆದರಿ ನಿಂತಿದ್ದಾಗ, ಅಬ್ದುರ್ರವೂಫ್ ಧಾವಿಸಿ ಆತನನ್ನು ಎತ್ತಿಕೊಂಡು, ಇತರರ ನೆರವಿನಿಂದ ಆಸ್ಪತ್ರೆಗೆ ಸೇರಿಸಿದರು. ಬಹುಶಃ ಆ ತರುಣ ಅಲ್ಲಿಗೆ ತಲುಪದೇ ಇದ್ದರೆ, ಗಾಯಾಳು ಅಲ್ಲೇ ಸಾಯುತ್ತಿದ್ದನೇನೋ.

ಆರೆಸ್ಸೆಸ್ ಕಾರ್ಯಕರ್ತನ ಮೇಲೆ ಯಾರೇ ಮಾರಣಾಂತಿಕ ಹಲ್ಲೆ ನಡೆಸಿರಲಿ. ಆದರೆ ಅದನ್ನು ಧರ್ಮದ ಕಣ್ಣಿನಲ್ಲಿ ನೋಡಬೇಕಾಗಿಲ್ಲ. ಇಲ್ಲಿ ಕೊಲ್ಲುವ ಕೈಗಳಿಗಿಂತ ಕಾಯುವ ಕೈಗಳು ಅಧಿಕ ಇವೆ ಎನ್ನುವುದನ್ನು ಅಬ್ದುರ್ರವೂಫ್ ನಿರೂಪಿಸಿದರು. ಒಂದು ಧರ್ಮದ ನಿಜವಾದ ಪ್ರತಿನಿಧಿಗಳು ಕಾಯುವವರು ಆಗಿರುತ್ತಾರೆಯೇ ಹೊರತು ಕೊಲ್ಲುವವರಲ್ಲ. ಹಿಂದೂ, ಮುಸ್ಲಿಮ್ ಹೆಸರಲ್ಲಿ ಒಬ್ಬನನ್ನು ಕೊಲ್ಲುವವರು ತಮ್ಮ ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಕೊಲ್ಲುತ್ತಾರೆಯೇ ಹೊರತು, ಅವರು ಯಾವುದೇ ಧರ್ಮವನ್ನು ಪ್ರತಿನಿಧಿಸುವವರಲ್ಲ.

ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗಾಗಿ ನ್ಯಾಯಾಲಯದಲ್ಲಿ ಹೋರಾಡಿ, ಸಂಕಷ್ಟಗಳನ್ನು ಎದುರಿಸುತ್ತಿರುವ ನೂರಾರು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮುಸ್ಲಿಮರಲ್ಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಇಂತಹ ಮಾನವೀಯ ಮನಸ್ಸುಗಳ ಮೂಲಕ ಆಯಾ ಧರ್ಮದ ವೈಶಾಲ್ಯವನ್ನು ಕಂಡುಕೊಳ್ಳಬೇಕೇ ಹೊರತು, ಕೊಲೆಗಡುಕರ ಮೂಲಕ ಅಲ್ಲ. ಕೊಲೆಗಾರರು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ. ಕೊಲೆ, ಹಿಂಸೆಯೇ ಅವರ ಧರ್ಮ. ಅಬ್ದುರ್ರವೂಫ್‌ನಂತಹ ತರುಣರ ಸಂಖ್ಯೆ ಹೆಚ್ಚುತ್ತಾ ಹೋದ, ಶಾಂತಿ ನೆಮ್ಮದಿ ಹೆಚ್ಚುತ್ತಾ ಹೋಗುತ್ತದೆ. ಆದುದರಿಂದಲೇ ಮಾಧ್ಯಮಗಳು ಕಾಯುವ ಕೈಗಳಿಗೆ ಹೆಚ್ಚು ಹೆಚ್ಚು ಪ್ರಚಾರವನ್ನು ನೀಡಬೇಕೇ ಹೊರತು, ಕೊಲ್ಲುವ ಕೈಗಳಿಗಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News