ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಯುದ್ಧ ವಿಮಾನಗಳ ಹಾರಾಟ

Update: 2017-07-07 13:21 GMT

ಟೋಕಿಯೊ, ಜು. 7: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದ ಸಂಪೂರ್ಣ ಒಡೆತನ ತನಗೆ ಸೇರಿದ್ದು ಎಂಬ ಚೀನಾದ ನಿಲುವನ್ನು ಧಿಕ್ಕರಿಸಿ, ಅಮೆರಿಕದ ಎರಡು ಬಾಂಬರ್ ವಿಮಾನಗಳು ಸಮುದ್ರದ ಮೇಲಿನಿಂದಾಗಿ ಹಾರಿವೆ ಎಂದು ಅಮೆರಿಕದ ವಾಯುಪಡೆ ಶುಕ್ರವಾರ ತಿಳಿಸಿದೆ.

ಇದರೊಂದಿಗೆ, ಈ ಸಮುದ್ರವನ್ನು ಅಂತಾರಾಷ್ಟ್ರೀಯ ಜಲಪ್ರದೇಶ ಎಂಬುದಾಗಿ ಪರಿಗಣಿಸುವ ತನ್ನ ಹಕ್ಕನ್ನು ಅಮೆರಿಕ ಪ್ರತಿಪಾದಿಸಿದೆ ಎಂದಿದೆ.

ಗುರುವಾರ ಪಶ್ಚಿಮ ಶಾಂತ ಸಾಗರದಲ್ಲಿರುವ ದ್ವೀಪ ಗುವಾಮ್‌ನಿಂದ ಹೊರಟ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನಗಳು ವಿವಾದಾಸ್ಪದ ಜಲಪ್ರದೇಶದಲ್ಲಿ ಹಾರಾಟ ನಡೆಸಿದವು.

ಅಮೆರಿಕದ ಬಾಂಬರ್ ವಿಮಾನಗಳು ಹಾರಾಟ ನಡೆಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರಗಳಲ್ಲಿ ನೌಕಾಯಾನ ಅಥವಾ ಮೇಲಿನಿಂದ ಹಾರುವ ಹಕ್ಕಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.

‘‘ಆದರೆ, ಯಾವುದೇ ದೇಶವು ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಚೀನಾದ ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡಲು ನೌಕಾಯಾನದ ಸ್ವಾತಂತ್ರವನ್ನು ಬಳಸುವುದನ್ನು ಚೀನಾ ಕಟ್ಟುನಿಟ್ಟಾಗಿ ವಿರೋಧಿಸುತ್ತದೆ’’ ಎಂದರು.

ದಕ್ಷಿಣ ಚೀನಾ ಸಮುದ್ರದ ಹಲವು ಭಾಗಗಳ ಮೇಲೆ ತಮಗೂ ಹಕ್ಕಿದೆ ಎಂಬುದಾಗಿ ಬ್ರೂನೆ, ಮಲೇಶ್ಯ, ಫಿಲಿಪ್ಪೀನ್ಸ್, ವಿಯೆಟ್ನಾಮ್ ಮತ್ತು ತೈವಾನ್‌ಗಳೂ ಹೇಳುತ್ತಿವೆ.

ಈ ಸಮುದ್ರದ ಮೂಲಕ ವಾರ್ಷಿಕ 5 ಟ್ರಿಲಿಯನ್ ಡಾಲರ್ (3.23 ಕೋಟಿ ಕೋಟಿ ರೂಪಾಯಿ) ವೌಲ್ಯದ ಸರಕುಗಳ ಸಾಗಾಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News