ಸಿಯಾಚಿನ್,ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿತ ಯೋಧರ ಭತ್ತೆಗಳಲ್ಲಿ ಭಾರೀ ಏರಿಕೆ

Update: 2017-07-07 16:18 GMT

ಹೊಸದಿಲ್ಲಿ,ಜು.7: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಅಪಾಯ ಮತ್ತು ಸಂಕಷ್ಟ ಭತ್ಯೆಗಳಲ್ಲಿ ದುಪ್ಪಟ್ಟಿಗೂ ಹೆಚ್ಚು ಏರಿಕೆಯನ್ನು ಮಾಡಿರುವ ಸರಕಾರವು, ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿತ ಭದ್ರತಾ ಸಿಬ್ಬಂದಿಗಳ ಈ ಭತ್ಯೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ.

 ಈ ಸಂಬಂಧ ಏಳನೇ ವೇತನ ಆಯೋಗವು ಮಾಡಿದ್ದ ಶಿಫಾರಸುಗಳನ್ನು ಸಂಪುಟವು ಅಲ್ಪ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದ್ದು,ಗುರುವಾರ ಭತ್ಯೆ ಏರಿಕೆಯ ಅಧಿಸೂಚನೆ ಹೊರಬಿದ್ದಿದೆ.

 ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿಯಾಗಿರುವ ಸಿಯಾಚಿನ್‌ನಲ್ಲಿ ನಿಯೋಜಿತ ಯೋಧರ ಅಪಾಯ ಮತ್ತು ಸಂಕಷ್ಟ ಭತ್ಯೆಗಳನ್ನು ಮಾಸಿಕ 14,000 ರೂ.ಗಳಿಂದ 30,000 ರೂ.ಗಳಿಗೆ ಮತ್ತು ಅಧಿಕಾರಿಗಳಿಗೆ ಮಾಸಿಕ 21,000 ರೂ.ಗಳಿಂದ 42,500 ರೂ.ಗಳಿಗೆ ಹೆಚ್ಚುಸಲಾಗಿದೆ. ಅತ್ಯಂತ ಎತ್ತರ ಪ್ರದೇಶ ಭತ್ಯೆಯನ್ನು ಮಾಸಿಕ 810-16,800 ರೂ.ಗಳಿಂದ 2,700-25,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಬಂಡಾಯ ನಿಗ್ರಹ ಕಾರ್ಯಾಚರಣೆ ಭತ್ಯೆಯನ್ನು ಮಾಸಿಕ 3,000-11,700 ರೂ.ಗಳಿಂದ 6,000-16,900 ರೂ.ಗಳಿಗೆ ಏರಿಸಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯುಕ್ತ ಸಿಆರ್‌ಪಿಎಫ್ ಸಿಬ್ಬಂದಿಗಳ ವಿಶೇಷ ಭತ್ಯೆಯನ್ನು ಮಾಸಿಕ 8,400-16,800 ರೂ.ಗಳಿಂದ 17,300-25,000 ರೂ.ಗಳಿಗೆ ಹೆಚ್ಚಿಸಲಾಗಿದೆ.

 ಶಾಂತಿ ಪ್ರದೇಶಗಳಲ್ಲಿ ಸೇನಾ ಅಧಿಕಾರಿಗಳಿಗೆ ಪಡಿತರ ನಗದು ಭತ್ಯೆ (ಆರ್‌ಎಂಎ) ಮತ್ತು ಉಚಿತ ಪಡಿತರವನ್ನು ಸ್ಥಗಿತಗೊಳಿಸುವಂತೆ ವೇತನ ಆಯೋಗವು ಮಾಡಿರುವ ಶಿಫಾರಸನ್ನು ಸರಕಾರವು ಒಪ್ಪಿಕೊಂಡಿಲ್ಲ ಮತ್ತು ಆರ್‌ಎಂಎ ಅನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News