ಕಥನದ ಒಡಲಲ್ಲಿ ಚಳವಳಿ, ದಂಗೆಗಳು

Update: 2023-06-30 06:16 GMT

ನಮ್ಮ ಸುತ್ತಮುತ್ತ ಸದ್ಯ ನಡೆಯುತ್ತಿರುವ ಹಲವಾರು ರಾಜಕೀಯ- ಸಾಮಾಜಿಕ-ಸಾಂಸ್ಕೃತಿಕ ಹೋರಾಟ, ವಿಪ್ಲವಗಳು ಕಾಲಾಂತರದಲ್ಲಿ ಅನೇಕ ಮಾಧ್ಯಮಗಳಲ್ಲಿ ದಾಖಲಾಗುತ್ತವೆ; ಸರಸರನೇ ಪುಸ್ತಕಗಳು ಹೊರ ಬರುತ್ತವೆ. ಸಾಕ್ಷ್ಯಚಿತ್ರಗಳ ನಿರ್ಮಾಣವಾಗುತ್ತವೆ. ಇವು ಕಥನೇತರ ವರ್ಗಕ್ಕೆ ಸೇರಿದವು. ಒಂದು ಕುಟುಂಬದ (ಅಥವಾ ಹಲವು ಕುಟುಂಬ-ಪರಿವಾರಗಳ, ಒಂದೂರಿನ) ಆಗುಹೋಗುಗಳಲ್ಲಿ ಚಳವಳಿ, ದಂಗೆಗಳು ಹಾಸುಹೊಕ್ಕು ಬರಬೇಕಾದ ಕತೆ-ಕಾದಂಬರಿಗಳಲ್ಲಿ ಅವುಗಳ ನಿರ್ವಹಣೆ ಸ್ವಲ್ಪಬೇರೆ ಬಗೆಯದು; ಹೆಚ್ಚು ಸಂಕೀರ್ಣವಾದುದು. ಸೃಜನಶೀಲ ಪ್ರತಿಭೆಯಲ್ಲಿ ಸಂಸ್ಕರಣೆಗೊಂಡಂತಹುದು. ದಿಕ್ಕುಗೆಡಿಸುವ ಒಳಸುಳಿಗಳ ಅನಾವರಣ, ಹಾಸ್ಯ-ಕಟಕಿ, ಕರುಣೆ, ಅನುತಾಪಗಳಂತೆಯೇ ಚೂಪಾದ ಚಿತ್ರಣ ಇಲ್ಲಿ ಲಭ್ಯ. ಹೋರಾಟದ ಆದರ್ಶ-ಆಕಾಂಕ್ಷೆಗಳು ಇದ್ದಂತೆಯೇ ಜರ್ಜರಿತ ಗೊಂಡದ್ದನ್ನು, ಇದರಿಂದಾಗಿ ಸನ್ನಿವೇಶ ತಲೆಕೆಳಗಾಗುವುದನ್ನು ಬಿಡೆಯಿಲ್ಲದೆ ತೋರಿಸುವ ಶಕ್ತಿ, ಧೈರ್ಯ ಅವಕ್ಕೆ ಈ ಪ್ರಕ್ರಿಯೆಯಲ್ಲಿ ಭಾಗಶಃವಾದರೂ ದಕ್ಕಿರುತ್ತದೆ.

ಮೇರೆ ಮೀರಿದ ಅವಗಣನೆಗೆ ಒಳಗಾದ ದೇಶದ ಅನ್ನದಾತರು ಇತ್ತೀಚೆಗೆ ಸಿಡಿದು ನಿಂತಾಗ ‘ಫ್ಯಾಮಿಷ್ಡ್ ಫಾರ್ಮರ್ಸ್‌ ಸ್ಟೀಲ್ ದಿ ಶೋ ಫ್ರಂ ವ್ಯಾಲೀಸ್ ವಿಲನ್ಸ್-ಕ್ಷುಧೆಗೊಂಡ ರೈತರು ಕಣಿವೆಯ ಕೇಡಿಗಳಿಂದ ದೃಶ್ಯ ಕಸಿದಿದ್ದಾರೆ’ ಶೀರ್ಷಿಕೆಯಲ್ಲಿ ತಮ್ಮ ನಿರೀಕ್ಷಣೆ ವ್ಯಕ್ತಪಡಿಸಿದ್ದು, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅಂಕಣಕಾರ ಪುಷ್ಪೇಷ್ ಪಂತ್. ಅವರ ಈ ಅನಿಸಿಕೆ, ಹಲವು ಕ್ಷೋಭೆಗಳು, ನಾಡಿನಲ್ಲಿ ಒಟ್ಟೊಟ್ಟಾಗಿ, ಒಂದರ ಬೆನ್ನಲ್ಲಿ ಒಂದು ಘಟಿಸುತ್ತಿರುವ ಸಂದರ್ಭವನ್ನು ಉಲ್ಲೇಖಿಸುತ್ತಿದೆ ಎಂಬುದು ಸ್ಪಷ್ಟ. ಇದೇ ಪದಪುಂಜ ಬಳಸಿ ಹೇಳುವುದಾದರೆ, ಕೆಲವೇ ದಿನಗಳಲ್ಲಿ ಗೂರ್ಖಾಲ್ಯಾಂಡ್ ಚಳವಳಿ ದೃಶ್ಯ ಕಸಿಯುತ್ತದೇನೋ ಎನ್ನುವಷ್ಟಿದೆ ಅದರ ಕಾವು. 1986-88 ವರ್ಷಗಳಲ್ಲಿ ಹಿಂದೊಮ್ಮೆ ಡಾರ್ಜಿಲಿಂಗ್‌ಪರ್ವತ ಪ್ರದೇಶ ಪ್ರತ್ಯೇಕತೆ ಬಯಸಿ ಹೊತ್ತಿ ಉರಿದದ್ದನ್ನು ಅಪರೂಪವಾಗಿ ದಾಖಲಿಸಿರುವ ಕೃತಿ, ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್ (2004)’. ಕಿರಣ್ ದೇಸಾಯಿ ಬರೆದ ಈ ಕಾದಂಬರಿ 2006ರ ಸಾಲಿನ ಪ್ರತಿಷ್ಠಿತ ಮ್ಯಾನ್‌ಬೂಕರ್ ಪ್ರಶಸ್ತಿ ಗೆದ್ದುಕೊಂಡಿತು.

ಭಾರತದ ಮುಖ್ಯ ಐತಿಹಾಸಿಕ ಸಂದರ್ಭಗಳ ಕಥನೀಕರಣ, ಸಮಕಾಲೀನ ಭಾರತೀಯ ಇಂಗ್ಲಿಷ್ ಬರವಣಿಗೆಯಲ್ಲಿ ಬಗೆ ಬಗೆಯ ಟ್ರೆಂಡ್ ಸೃಷ್ಟಿಸಿದೆ ಎಂದು ಗುರುತಿಸುತ್ತಾರೆ, ವಿಮರ್ಶಕರು: ಬ್ರಿಟಿಷರಿಂದ ಬಿಡುಗಡೆಗೆ ಮೊದಲಿನ ದಂಗೆಯ ದಿನಗಳು (ಮ್ಯೂಟಿನಿ ನಾವೆಲ್), ಸ್ವಾತಂತ್ರ್ಯ ನಂತರದ ದೇಶ ವಿಭಜನೆ (ಪಾರ್ಟಿಷನ್ ಲಿಟರೇಚರ್), ಜನತಂತ್ರದ ಉಸಿರುಗಟ್ಟಿಸಿದ ತುರ್ತುಪರಿಸ್ಥಿತಿ ಕಾಲದ ‘ಎಮರ್ಜೆನ್ಸಿ ಫಿಕ್ಷನ್’ ಮುಂತಾಗಿ ಅವುಗಳನ್ನು ಹೆಸರಿಸಬಹುದು.

ವಿವಿಧತೆಯಲ್ಲಿ ಏಕತೆ ಸ್ತುತಿಸುವ ರಾಷ್ಟ್ರಪ್ರೇಮ ಹಾಗೂ ನೆಹರೂ ಪ್ರಣೀತ ಸೆಕ್ಯುಲರ್ ಅಸ್ಮಿತೆ ಈ ಕಥನಗಳಲ್ಲಿ ಪ್ರಶ್ನೆಗೆ ಒಳಗಾಗಿರಲಿಲ್ಲ. ವಿಶ್ವದ ಎದುರು ನಿಲ್ಲಲು ಬೇಕಾದ ಗಟ್ಟಿಗತನ ಪ್ರೇರೇಪಿಸುವ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕವಾಗಿ ಒಗ್ಗೂಡಬೇಕಾದ ಅಗತ್ಯ ಸಾರುವ ಸಲ್ಮಾನ್ ರಶ್ದಿಯ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಒಂದು ಮುಖ್ಯ ಉದಾಹರಣೆ. ಆದರೆ, ಸಹಸ್ರಮಾನದ ತಿರುವಿನಲ್ಲಿ ರಚಿಸಲ್ಪಟ್ಟ ಹಲವು ಸಾಹಿತ್ಯ ಕೃತಿಗಳು ಈ ಮೌಲ್ಯಗಳನ್ನು ಮರು ಪರೀಕ್ಷೆಗೆ ಒಡ್ಡಿರುವುದು, ಅನುಮಾನದಿಂದ ನೋಡಿರುವುದು ಸ್ಪಷ್ಟವಾಗಿ ಕಾಣುತ್ತದೆ ಎನ್ನುವುದು ವಿಮರ್ಶಕರ ಪ್ರತಿಪಾದನೆ. ದೇಶವ್ಯಾಪ್ತಿಯಿಂದ ಚದುರಿ ಸಣ್ಣ ಸಣ್ಣ ನಿರ್ಲಕ್ಷಿತ ಪ್ರದೇಶಗಳಿಗೆ ಚಳವಳಿಗಳು ಸಕಾರಣವಾಗಿ ಸಾಗಿರುವುದು ಸಹ ಅವರ ದೃಷ್ಟಿಯಲ್ಲಿ ಒಂದು ಗಮನಾರ್ಹ ಬೆಳವಣಿಗೆ.

ಕೇರಳ ನಾಡಿನ ಭೂಮಿಕೆ ಹೊಂದಿರುವ ಅರುಂಧತಿ ರಾಯ್ ಅವರ ‘ಗಾಡ್ ಆಫ್ ಸ್ಮಾಲ್ ಥಿಂಗ್ಸ್’, ಸುಂದರಬನದ ಆದಿವಾಸಿಗಳ ಗಾಥೆಯಾದ ಅಮಿತಾವ್ ಘೋಷ್‌ರ ‘ದಿ ಹಂಗ್ರಿ ಟೈಡ್’, ಕೃಷಿಕರು ಕ್ರಾಂತಿಕಾರಿಗಳಾಗುವ ಸಿ.ಪಿ. ಸುರೇಂದ್ರನ್ ಬರೆದ ‘ಆ್ಯನ್ ಐರನ್ ರೆವಲ್ಯೂಷನ್’(ಮತ್ತೆ ಕೇರಳ), ವಿ.ಎಸ್. ನೈಪಾಲರ ‘ಮ್ಯಾಜಿಕ್ ಸೀಡ್ಸ್’ (ದಕ್ಷಿಣ ಪ್ರಾಂತ) ಹಾಗೂ ಕಿರಣ್ ದೇಸಾಯಿ ನಿರೂಪಿಸುವ ಪಶ್ಚಿಮ ಬಂಗಾಳದ ನೇಪಾಳಿ ಮಾತನಾಡುವ ಗೂರ್ಖಾ ಮತ್ತಿತರ ಬುಡಕಟ್ಟು ಸಮುದಾಯಗಳ ಪ್ರತ್ಯೇಕ ರಾಜ್ಯ ಹಾಗೂ ಸ್ವಾಯತ್ತತೆಗಾಗಿ ಹೋರಾಟದ ಕತೆ...ಸಣ್ಣ ಪ್ರದೇಶಗಳು ಕ್ರಾಂತಿಗೆ ಸಜ್ಜಾದ ಜ್ವಲಂತ ಉದಾರಣೆಗಳಿವು.

ಪಶ್ಚಿಮದ ‘ಮಾರ್ಕ್ಸಿಸ್ಟ್/ಮಾವೋಯಿಸ್ಟ್ ತಾತ್ವಿಕತೆ’ಯನ್ನು ಸ್ಥೂಲವಾಗಿ ಅಳವಡಿಸಿಕೊಂಡು ಮುಂದುವರಿದಿರುವುದೂ ಅವುಗಳನ್ನು ಪೋಣಿಸುವ ಏಕ ಸೂತ್ರ. ದಿಲ್ಲಿ ಅಪ್ಪಿಕೊಂಡಿರುವ ಪ್ರಜಾತಾಂತ್ರಿಕ ‘ಭಾಷೆ’ಯೊಂದಿಗೆ ಈ ತಾತ್ವಿಕತೆ ಸಂವಾದ ನಡೆಸುವುದಾದರೂ ಹೇಗೆ ಎಂಬ ಕಗ್ಗಂಟನ್ನೂ ಈ ಕಥನ ಪ್ರತಿನಿಧೀಕರಣಗಳು ಮುಂದಿಡುತ್ತವೆ ಎಂಬುದು ವಿಮರ್ಶಕರ ಎರಡನೆ ಹಂತದ ಗ್ರಹಿಕೆ.

* * *
ತುಂಬ ಚಿತ್ರವತ್ತಾಗಿ, ಅರೆಕ್ಷಣದ ನಿರ್ವಾತವೂ ಇಲ್ಲದಂತೆ, ಆಂಗಿಕಾಭಿನಯದಲ್ಲಿ, ಹನಿ ಕಡಿಯದ ಮಳೆಯಂತಹ ಕತೆ ಹೇಳುವಿಕೆ ‘ಇನ್‌ಹೆರಿಟೆನ್ಸ್...’ನಲ್ಲಿದೆ. ಎಲ್ಲಕ್ಕೂ ಭಾಷೆಯೇ ಆಸರೆ. ಸುಮಾರು ಮೂರನೆ ಒಂದು ಭಾಗವಾದ ಮೇಲೆ, ಕಾದಂಬರಿಯಲ್ಲಿ ದಂಗೆಯ ಸೊಲ್ಲು. ಶ್ರಮಿಕ ವರ್ಗದ ಬದುಕು-ಬವಣೆಗಳ ಪರಿಚಯವೇ ಇಲ್ಲದ, ಅವರ ನೆರಳೂ ಸೋಕದ ಹಾಗೆ ಬದುಕುವ, ಉಣ್ಣಲು, ಉಡಲು ಸಾಕಷ್ಟು ಇರುವ, ಪಾಶ್ಚಿಮಾತ್ಯ ರೀತಿ-ನೀತಿ, ಸಂಗೀತ-ನೃತ್ಯ-ವಾಚನಾಭಿರುಚಿಗಳಿಗೆ ಕುರುಡಾಗಿ ಆತುಕೊಂಡ, ಅದರಿಂದಾಗಿ ತಾವು ಇತರರಿಗಿಂತ ಭಿನ್ನ ಎಂದು ಭ್ರಮಿಸುವ ಲೋಲಾ-ನೋನಿ ಎಂಬ ಇಬ್ಬರು ಮಹಿಳೆಯರ, ಧೋರಣೆಯುಕ್ತ ಸಂಭಾಷಣೆಯಲ್ಲಿ ಅದು ಹೀಗೆ ನುಸುಳಿ ಬರುತ್ತದೆ: ‘‘ಇಲ್ಲೊಂದು ಪ್ರತ್ಯೇಕತಾ ಚಳವಳಿ, ಅಲ್ಲೊಂದು ಹೋರಾಟ. ಭಯೋತ್ಪಾದಕರು, ಗೆರಿಲ್ಲಾಗಳು, ದಂಗೆಕೋರರು, ರೆಬೆಲ್‌ಗಳು, ಚಳವಳಿಗಾರರು, ಸಂಚು ರೂಪಿಸುವವರು...ಎಲ್ಲ ಒಬ್ಬರನ್ನು ನೋಡಿ ಒಬ್ಬರು ಕಲಿಯುತ್ತಾರೆ. ಸಿಖ್ಖರ ಖಲಿಸ್ತಾನ, ಉಲ್ಫಾ, ನೇಫಾ, ಪಿಎಲ್‌ಎ, ಜಾರ್ಖಂಡ್, ಬೋಡೊಲ್ಯಾಂಡ್, ಗೂರ್ಖಾಲ್ಯಾಂಡ್, ತ್ರಿಪುರ, ಮಿಜೋರಮ್, ಮಣಿಪುರ, ಕಾಶ್ಮೀರ, ಅಸ್ಸಾಂಗಳಿಂದ ನೇಪಾಳಿಗಳು ಉತ್ತೇಜನಗೊಂಡಿರುವುದು ನಿಸ್ಸಂದೇಹ.’’

ಮುಂದೆ ಇದೇ ದಂಗೆಕೋರರು ಆ ಸೋದರಿಯರ ಶಿಷ್ಟ ಅಭಿರುಚಿಯ ಮನೆ, ತೋಟಗಳನ್ನೆಲ್ಲ ಧ್ವಂಸ ಮಾಡಿ ಆಕ್ರಮಿಸಿಕೊಳ್ಳುತ್ತಾರೆ. ದೂರು ನೀಡಲು ಹೋದಾಗ ಪೊಲೀಸ್ ಅಧಿಕಾರಿ ಅಣಕು ಗೌರವ ಪ್ರದರ್ಶಿಸಿ ಅವಮಾನಿಸುತ್ತಾನೆ. ಇನ್ನು ಇಷ್ಟೇ. ಮೇಲೆ ಹೋದ ಚಕ್ರ ಕೆಳಗೆ ಬರುವಂತೆ ಇತರರನ್ನು ತುಚ್ಛವಾಗಿ ಕಂಡವರು ತುಚ್ಛೀಕರಣಕ್ಕೆ ಒಳಗಾಗುವುದು ನೈಸರ್ಗಿಕ ನಿಯಮ ಎಂಬಂತೆ ಕಾದಂಬರಿಯ ಕೇಂದ್ರ ಪಾತ್ರ, ನಿವೃತ್ತ ನ್ಯಾಯಾಧೀಶ, ದರ್ಪಿಷ್ಟ ಜೇಮು ಪಟೇಲ್ ನಿರ್ವಿಣ್ಣನಾಗುತ್ತಾನೆ. ಜೀವಮಾನವಿಡೀ ಸ್ಥಳೀಯರನ್ನು ಎರಡನೆ ದರ್ಜೆಯವರನ್ನಾಗಿಯೇ ನಡೆಸಿಕೊಂಡವನು ಈತ. ತರುಣನಾಗಿದ್ದಾಗ ಮಾವ ನೀಡಿದ ವರದಕ್ಷಿಣೆಯಿಂದ ಸಾಗರದಾಚೆ ಓದಲು ಹೋಗಿದ್ದವ. ಅಲ್ಲಿ ಅನುಭವಿಸಿದ ಕೀಳರಿಮೆ, ಸಾಂಸ್ಕೃತಿಕ ಆಘಾತ, ಆಯುಷ್ಯವೆಲ್ಲಾ ಕಾಡುವಷ್ಟು ಆಳವಾಗಿ ಅವನನ್ನು ಗೀರಿವೆ.

ಅದನ್ನು ತುಂಬಿಕೊಳ್ಳಲೆಂಬಂತೆ, ಕಣ್ಣಿಗೆ ಹೊಡೆಯುವ ಪಾಶ್ಚಿಮಾತ್ಯ ಜೀವನಶೈಲಿ, ವಿಚಿತ್ರ ಅಭ್ಯಾಸ-ಸಂಪ್ರದಾಯಗಳನ್ನು ಅಳವಡಿಸಿಕೊಂಡಿದ್ದಾನೆ. ತನ್ನೆಲ್ಲ ಪ್ರೀತಿ-ನಚ್ಚುಗೆಯನ್ನು ಸಾಕುನಾಯಿ ‘ಮಟ್’ ಮೇಲೆ ಕೇಂದ್ರೀಕರಿಸಿದ್ದಾನೆ. ಬದುಕಿನ ಸಂಧ್ಯೆಯಲ್ಲಿ ಅಕಸ್ಮಾತ್ ಆತನ ಆಸರೆಗೆ ಬಂದವಳು ಸಾಯ್; ಅಪ್ಪನನ್ನು ಧಿಕ್ಕರಿಸಿ ಓಡಿಹೋಗಿ ಪ್ರೇಮವಿವಾಹ ಮಾಡಿಕೊಂಡ ಮಗಳ ಮಗಳು. ಕರುಳ ಸಂಬಂಧದ ಅಜ್ಜನೊಂದಿಗೆ ಯಾವುದೇ ಪ್ರೀತಿಯ ಒಡನಾಟವಿಲ್ಲದೆ, ಸಮಾನ ವಯಸ್ಕರ ಸ್ನೇಹ-ಸಂಬಂಧಗಳ ಬಿಸುಪಿನಿಂದ ವಂಚಿತಳಾಗಿ ತನ್ನಷ್ಟಕ್ಕೇ ಬದುಕುತ್ತಿರುವವಳು. ಮನೆಯಲ್ಲಿ ತುಂಬ ಸಮಯದಿಂದ ಉಳಿದಿರುವ ಅಡುಗೆಯಾತ ‘‘ಸಾಯ್ ಬೇಬಿ’’ ಎಂದು ಅಷ್ಟಿಷ್ಟು ವಾತ್ಸಲ್ಯ ಹರಿಸುತ್ತಾನೆ. ಇಂತಹ ಪರಿಸರದಲ್ಲಿರುವ ಹದಿವಯಸ್ಸಿನ ಆ ಹುಡುಗಿಗೆ ಗಣಿತ ಹೇಳಿಕೊಡಲು ಬರುವಾತ, ನೇಪಾಳಿ ಹುಡುಗ ಗ್ಯಾನ್. ಅದೆಷ್ಟೇ ಅಸಡ್ಡಾಳ ಜೋಡಿಯಾದರೂ ತಾರುಣ್ಯದ ಅಮಲಲ್ಲಿ ಅವರು ಒಬ್ಬರಿಗೊಬ್ಬರು ಸಹ್ಯರಾಗುತ್ತಾ ಹೋಗುತ್ತಾರೆ.

ಈ ಪ್ರೇಮಸೌಧ ಒಮ್ಮೆಲೇ ಕುಸಿಯುವುದು, ಇದ್ದಕ್ಕಿದ್ದಂತೆ ಗ್ಯಾನ್ ಚಳವಳಿಗೆ ಸೇರ್ಪಡೆಯಾದಾಗ. ಆವೇಶದಿಂದ ಮುಖ ಕೆಂಪಾಗಿಸಿಕೊಂಡು ಕ್ರಾಂತಿ ಘೋಷಣೆ ಕೂಗುತ್ತಾ ಹೋಗುವ ಗ್ಯಾನ್, ಅವಳನ್ನು ಅನುನಯಿಸುವ, ಕುಶಾಲು ಮಾಡುವ ಗ್ಯಾನ್‌ಗಿಂತ ತುಂಬ ಭಿನ್ನ: ಈಗ ಅವನಿಗೆ ಪುಡಿಗಾಸು ಫೀ ಕೊಟ್ಟು ದೂರದಿಂದ ತನ್ನನ್ನು ಪಾಠ ಹೇಳಲು ಕರೆಸುವ ನ್ಯಾಯಾಧೀಶನ ಕೃಪಣತೆ ಸಿಟ್ಟು-ಹತಾಶೆ ತರಿಸುತ್ತದೆ. ನೆಲದ ಸಂಸರ್ಗವೇ ಇಲ್ಲದಂತೆ ಇರುವ ತಾತ-ಮೊಮ್ಮಗಳ ಊಟ-ಉಪಚಾರದ ಅಭ್ಯಾಸಗಳು, ನಿಯಮಗಳು ರೇಜಿಗೆ ತರುತ್ತವೆ; ಕುಡಿದ ಅಮಲಿನಲ್ಲಿ ಗೆಳೆಯರ ಮುಂದೆ ಅವನ್ನೆಲ್ಲ ಅಣಕಿಸುವಷ್ಟು, ತನ್ನ ಹುಡುಗಿಯನ್ನು ಕೀಳಾಗಿ ತೋರಿಸುವಷ್ಟು ಅಸೂಕ್ಷ್ಮನಾಗಬಲ್ಲ...ಹೀಗೆ ಎಲ್ಲರ ಜೀವನ ಗತಿಯನ್ನೂ ಗುರುತು ಸಿಗದಂತೆ ದಂಗೆ ಪ್ರಭಾವಿಸುತ್ತ ಹೋಗುತ್ತದೆ. ಕ್ರಾಂತಿಯ ಉತ್ಪನ್ನವೇ ಆದ ನಿರ್ಮಾನುಷ ಕ್ರೌರ್ಯ, ಹಿಂಸೆ, ಸಿಕ್ಕವರ ಮೇಲೆಲ್ಲ ಹರಿಹಾಯುವ ಅದರ ವೈಖರಿಯನ್ನು ಕಥನದಷ್ಟು ಬೇರೆ ಯಾವ ಅಭಿವ್ಯಕ್ತಿಯೂ ನಿಜಗಾಣಿಸಲಾರದು.

ನಾಗರಿಕರನ್ನು ಗಲಭೆಕೋರರಿಂದ ರಕ್ಷಿಸಲು ಬರುವ ಪೊಲೀಸರು, ಮಿಲಿಟರಿ ಇತ್ಯಾದಿ ವಿರೋಧಿ ಬಣವೂ ಚಾಚೂ ತಪ್ಪದೆ ಹೀಗೆಯೇ ನಡೆದುಕೊಳ್ಳುತ್ತದೆ. ಅದನ್ನು ಹೇಳಲು ಲೇಖಕಿ ಈ ದೃಷ್ಟಾಂತ ಬಳಸುತ್ತಾರೆ: ಜಡ್ಜ್ ಮನೆಗೆ ನುಗ್ಗಿ, ಗೋಡೆಯ ಮೇಲೆ ಸ್ಥಾಪಿಸಿದ್ದ ಕೋವಿ, ಇನ್ನಿತರ ಕಲಾತ್ಮಕ ವಸ್ತುಗಳನ್ನು ಗಲಭೆಕೋರರು ಹೊತ್ತೊಯ್ದಿರುತ್ತಾರೆ. ಅದರ ವಿಚಾರಣೆಗೆಂದು ಬರುವ ಪೊಲೀಸ್ ಅಧಿಕಾರಿ, ಚಹಾ ಹೀರಿ, ಸಾಯ್ ಜತೆ ‘ಬೇಕಾರ್’ ಮಾತಾಡಿ, ಖಂಡಿತ ನಿಮ್ಮ ವಸ್ತುಗಳನ್ನು ಹುಡುಕಿಕೊಡುತ್ತೇವೆ ಎಂಬ ಪೊಳ್ಳು ಆಶ್ವಾಸನೆ ನೀಡಿ...ಒಟ್ಟಿನಲ್ಲಿ ಒಂದು ಪ್ರಹಸನವನ್ನೇ ನಡೆಸಿ ಹೋಗಿರುತ್ತಾನೆ. ಕೆಲ ದಿನಗಳ ತರುವಾಯ ಒಬ್ಬಾತನನ್ನು ಅಪರಾಧಿ ಎಂದು ಘೋಷಿಸಿ ಹೊತ್ತು ಹಾಕಿಕೊಂಡು ಬರುತ್ತಾರೆ. ಆತ, ಮಾರುಕಟ್ಟೆ ಪ್ರದೇಶದಲ್ಲಿ ಸದಾಕಾಲ ಕುಡಿದು ಬಿದ್ದಿರುವ ಆಸಾಮಿ; ಅಲ್ಲಿ ಓಡಾಡುವವರಿಗೆಲ್ಲ ಅದು ಪರಿಚಿತ ದೃಶ್ಯ. ಹಳ್ಳದಿಂದ ಜಗ್ಗಿ ಎಬ್ಬಿಸಿ, ಕೆನ್ನೆ ತಟ್ಟಿ ಎಚ್ಚರಿಸಿ ಒಬ್ಬರಲ್ಲ ಒಬ್ಬರು ದಾರಿಹೋಕರು, ಯಾವುದೋ ಒಂದು ಹೊತ್ತಿನಲ್ಲಿ ಅವನನ್ನು ಮನೆ ಕಡೆ ತಿರುಗಿಸುತ್ತಿದ್ದರು. ಕೈಕಾಲು ಕಟ್ಟಿತಂದು ಠಾಣೆಯಲ್ಲಿ ಅವನನ್ನು ಕೆಡವುವ ಆರಕ್ಷಕರು ಮನಬಂದಂತೆ ಥಳಿಸುತ್ತಾರೆ. ಪಾಶವೀ ಹೊಡೆತಗಳಿಂದ ಸಾಯುವಂತೆ ಆದವನನ್ನು ಹೊರದಬ್ಬುತ್ತಾರೆ.

‘‘ಇಲ್ಲ, ನಾನು ಯಾರ ಮನೆಗೂ ಹೋಗಿಲ್ಲ, ಯಾವ ಬಂದೂಕೂ ಕದ್ದಿಲ್ಲ, ನನಗೇನೂ ಗೊತ್ತಿಲ್ಲ...ಆದರೂ ತಪ್ಪಾಯಿತು ಬಿಟ್ಟುಬಿಡಿ ಎಂದು ಕೂಗುತ್ತಿದ್ದವನ ಹಲುಬುವಿಕೆ ಬೆಟ್ಟದಲ್ಲೆಲ್ಲ ಪ್ರತಿಧ್ವನಿಸಿತು. ಜನಜೀವನ ಅಸ್ತವ್ಯಸ್ತವಾಯಿತು ಎಂದು ಸಾರಿದ ಪ್ರಥಮ ಕೂಗು ಅದಾಗಿತ್ತು.’’ ಇದು ವಿದೇಶದಲ್ಲಿಯೂ ಪ್ರತಿಧ್ವನಿಸುತ್ತದೆ.

ಒಳ್ಳೆಯ ಜೀವನ ನಡೆಸಲು ಬೇಕಾದ ಒಂದಷ್ಟು ಹಣ ಸಂಪಾದನೆಗೆಂದು ತಾಯ್ನೆಡನ್ನು ಬಿಟ್ಟು ಅಮೆರಿಕ ಸೇರಿಕೊಂಡು ಕಷ್ಟಪಡುತ್ತಿದ್ದ ಕುಕ್ ಮಗ ಬಿಜೂ, ತಂದೆಗೆ ಏನಾಯಿತೋ ಎಂದು ತಲ್ಲಣಿಸುತ್ತಾನೆ. ಸಾವಿರಾರು ಮೈಲಿ ಅಂತರದಲ್ಲಿರುವ ಅವರಿಬ್ಬರೂ ‘‘ನೀನು ಚೆನ್ನಾಗಿದ್ದೀಯಾ, ಏನೂ ತೊಂದರೆ ಇಲ್ಲವಾ?’’ ಎಂದು ಪರಸ್ಪರರ ಮೇಲೆ ಪ್ರೀತಿ ಹರಿಸುತ್ತ ಟೆಲಿಫೋನ್‌ನಲ್ಲಿ ಕೂಗಿ ಸಂಭಾಷಣೆ ನಡೆಸುವುದು ಗಂಟಲುಬ್ಬಿಸುವ ವಿವರ. ಜಡ್ಜ್ ಮನೆಯ ಭಾವನಾ ರಾಹಿತ್ಯಕ್ಕೂ ಈ ಅಪ್ಪಟ ಕಕ್ಕುಲಾತಿಗೂ ಆಕಾಶ-ಭೂಮಿಗಳ ಅಂತರ!

ಕಡೆಗೂ ಕ್ರಾಂತಿಯ ಬೆಂಕಿಯಲ್ಲಿ ಬದುಕಿ ಉಳಿಯುವವರು, ಸ್ಥಿರವಾಗಿ ನಿಲ್ಲುವವರು ಬಿಜೂ ಮತ್ತು ಆತನ ಅಪ್ಪನಂತಹ ಅಮಾಯಕರೇ ಎಂಬುದರಲ್ಲಿಯೂ ಏನೋ ಸಂದೇಶ ಇದೆ.

Writer - ವೆಂಕಟಲಕ್ಷ್ಮಿ ವಿ.ಎನ್

contributor

Editor - ವೆಂಕಟಲಕ್ಷ್ಮಿ ವಿ.ಎನ್

contributor

Similar News