ಈ ವ್ಯಕ್ತಿಯ ದೇಹದಲ್ಲಿ ದ್ವಿಗುಣಗೊಳ್ಳುತ್ತಿದೆ ಗುಂಡುಸೂಜಿಗಳ ಸಂಖ್ಯೆ!

Update: 2017-07-08 08:13 GMT

ಕೋಟಾ,ಜು.8 : ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಕೋಟಾದ ಬದ್ರಿಲಾಲ್ ಮೀನಾ ಎಂಬ ವ್ಯಕ್ತಿಯ ದೇಹದಲ್ಲಿ ಗುಂಡುಸೂಜಿಗಳಿವೆ ಎಂದು ಸಿಟಿ ಸ್ಕ್ಯಾನ್ ವರದಿ ತಿಳಿಸಿದ ನಂತರ  ಆತ ಕಳೆದ ನಾಲ್ಕು ತಿಂಗಳಲ್ಲಿ ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕಳೆದ ವಾರ ಫರೀದಾಬಾದ್ ನಗರದ ಏಷ್ಯನ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ನಲ್ಲಿ ಎರಡು ಶಸ್ತ್ರಕ್ರಿಯೆಗೊಳಗಾಗಿದ್ದಾನೆ, ವೈದ್ಯರು ಆತನ ದೇಹದಿಂದ 100 ಗುಂಡುಸೂಜಿಗಳನ್ನು ಈ ಶಸ್ತ್ರಕ್ರಿಯೆ ಮೂಲಕ ಹೊರತೆಗೆದಿದ್ದಾರೆ. ಆದರೆ ಇದೀಗ ಆತನ ದೇಹದಲ್ಲಿ ಒಟ್ಟು 150 ಗುಂಡುಸೂಜಿಗಳಿರಬಹುದೆಂದು ಅಂದಾಜಿಸಲಾಗಿದೆ.

ಆತ ಮಾನಸಿಕ ಅಸ್ವಸ್ಥನಾಗಿದ್ದು ತನ್ನ ದೇಹದೊಳಕ್ಕೆ  ತಾನೇ ಗುಂಡುಸೂಜಿ ಚುಚ್ಚುತ್ತಿದ್ದಾನೆ. ಆದರೆ ಈ ಗುಂಡುಸೂಜಿಗಳು ಹೇಗೆ ನನ್ನ ದೇಹದೊಳಗೆ ಪ್ರವೇಶಿಸಿದೆ ಎಂದು ತಿಳಿದಿಲ್ಲ ಎಂದು ಬದ್ರಿಲಾಲ್ ಹೇಳುತ್ತಾನೆ. ಆತನ ಪುತ್ರ ಮತ್ತು ಪತ್ನಿ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.

ಬದ್ರಿಲಾಲ್ ಗುಣಮುಖನಾದ ನಂತರ ಆತನ ಮಾನಸಿಕ ಸ್ಥಿತಿಯ ಬಗ್ಗೆ ವೈದ್ಯರು ಪರಾಮರ್ಶಿಸಲಿದ್ದಾರೆಂದು ಹೇಳಲಾಗಿದೆ.

ಎಪ್ರಿಲ್ ತಿಂಗಳಲ್ಲಿ ಕಾಲು ನೋವು ಹಾಗೂ ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ಬದ್ರಿಲಾಲ್ ಕೋಟಾದ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿದ್ದಾಗ ಆತನ ದೇಹದಲ್ಲಿ ಗುಂಡುಸೂಜಿಗಳಿರುವುದು ಪತ್ತೆಯಾಗಿದ್ದವು. ಅಂದಿನಿಂದ ಆತ ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸುಮಾರು 30ಕೆಜಿಗೂ ಅಧಿಕ ದೇಹತೂಕ ಕಳೆದುಕೊಂಡಿದ್ದಾನೆ.

ಹದಿನೈದು ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಹಾಗೂ ಗಂಟಲು ನೋವಿನ ಚಿಕಿತ್ಸೆಗಾಗಿ ಆತ ಫರೀದಾಬಾದ್ ನ ಆಸ್ಪತ್ರೆಗೆ ಬಂದಿದ್ದ. ಸಿಟಿ ಸ್ಕ್ಯಾನ್ ನಡೆಸಿದಾಗ ಆತನ ಕುತ್ತಿಗೆ ಗುಂಡು ಸೂಜಿಗಳ ಕುಶನ್ ನಂತಿರುವುದು ಪತ್ತೆಯಾಗಿತ್ತು. ಆತನ ಗಂಟಲಲ್ಲಿ, ಹೊಟ್ಟೆ, ಕೈ ಕಾಲುಗಳಲ್ಲಿ 150 ಗುಂಡುಸೂಜಿಗಳಿರುವುದು ತಿಳಿದು ಬಂದಿತ್ತು. ಹತ್ತು ಸೂಜಿಗಳು ಆತನ  ಶ್ವಾಸನಾಳಕ್ಕೆ ಚುಚ್ಚಲ್ಪಟ್ಟಿದ್ದರೆ  ಮೂರು  ಅನ್ನ ನಾಳದಲ್ಲಿತ್ತು ಹಾಗೂ ಒಂದು ಕೊರಳಿನ ಧ್ವನಿಪೆಟ್ಟಿಗೆಯಲ್ಲಿತ್ತು. ಇನ್ನೆರಡು ಸೂಜಿಗಳು ಮೆದುಳಿಗೆ ರಕ್ತ ಪೂರೈಸುವ ಪ್ರಮುಖ ರಕ್ತನಾಳದಲ್ಲಿತ್ತು. ಜೂನ್ 29 ಹಾಗೂ ಜುಲೈ 2ರಂದು ಎರಡು ಶಸ್ತ್ರಕ್ರಿಯೆಗಳನ್ನು ಆತನಿಗೆ ನಡೆಸಲಾಗಿತ್ತು.

ಈ ಹಿಂದೆ ದಿಲ್ಲಿಯ ರೈಲ್ವೆ ಆಸ್ಪತ್ರೆಯಲ್ಲಿ ಆತನ ದೇಹದಿಂದ ಏಳು ಸೂಜಿಗಳನ್ನು ಹೊರತೆಗೆಯಲಾಗಿತ್ತೆಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News