ಮನುಷ್ಯರನ್ನು ರಕ್ಷಿಸಿ,ಗೋರಕ್ಷಕರನ್ನು ನಿಷೇಧಿಸಿ

Update: 2017-07-08 10:16 GMT

ಹೊಸದಿಲ್ಲಿ, ಜು. 8: ಗೋರಕ್ಷಣೆಯ ಹೆಸರಿನಲ್ಲಿ ಗುಂಪುಗಳು ಅಮಾಯಕರನ್ನು ಹತ್ಯೆಗೈಯ್ಯುತ್ತಿರುವ ಪಿಡುಗು ಇತ್ತೀಚಿಗೆ ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಆದರೆ ಸರಕಾರ ಇದನ್ನು ನಿವಾರಿಸಲು ಈವರೆಗೂ ಮುಂದಾಗಿಲ್ಲ ಎನ್ನುವುದು ತೀರ ನಿರಾಶೆಯನ್ನು ಹುಟ್ಟಿಸಿದೆ.

ಕಳೆದ ಜೂ.28ರಂದು ಸೆಲೆಬ್ರಿಟಿಗಳೂ ಸೇರಿದಂತೆ ಸಾವಿರಾರು ಜನರು ಬೀದಿಗಿಳಿದು ಸರಕಾರದ ಉದಾಸೀನತೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೆ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಬಲವಾಗಿ ಖಂಡಿಸಿದ್ದರು. ಆದರೆ ಹಿಂಸಾಚಾರ ಮಾತ್ರ ಎಗ್ಗಿಲ್ಲದೆ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ನಟಿ ಸ್ವರ ಭಾಸ್ಕರ್ ಅವರು ‘ಚೇಂಜ್ ಡಾಟ್ ಆರ್ಗ್ ’ನಲ್ಲಿ ‘ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮಾತನ್ನು ಕೃತಿಗಿಳಿಸಲು ಇದು ಸಕಾಲ’ ಎಂಬ ಹೆಸರಿನಲ್ಲಿ ಅಹವಾಲೊಂದನ್ನು ದಾಖಲಿಸಿದ್ದಾರೆ. ದೇಶಾದ್ಯಂತ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ತಡೆಯಲು ಮಾನವ ಸುರಕ್ಷಾ ಕಾನೂನನ್ನು ಜಾರಿಗೊಳಿಸುವಂತೆ ಈ ಅಭಿಯಾನವು ಆಗ್ರಹಿಸಿದೆ.

‘‘ನಾನು ಭಾರತೀಯ ಚಿತ್ರರಂಗದಲ್ಲಿ ಓರ್ವ ನಟಿಯಾಗಿದ್ದೇನೆ. ಆದರೆ ಭಾರತದ ಪ್ರಜ್ಞಾವಂತ ಪ್ರಜೆಯಾಗಿ ಈ ಹತ್ಯೆಗಳು ನಡೆಯುವುದಕ್ಕೆ ನಾನು ಅವಕಾಶ ನೀಡುವುದಿಲ್ಲ. ನಾನು ಸಾವಿರಾರು ಯುವಜನರ ಜೊತೆ ಈ ಸಾರ್ವಜನಿಕ ಪಿಡುಗಿನ ವಿರುದ್ಧ ಎದ್ದು ನಿಂತಿದ್ದೇನೆ ಮತ್ತು ಇತ್ತೀಚಿಗೆ ವಿಶ್ವದ 20 ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ ’’ ಎಂದು ಸ್ವರ ಭಾಸ್ಕರ್ ತನ್ನ ಅಹವಾಲಿನಲ್ಲಿ ತಿಳಿಸಿದ್ದಾರೆ.

‘ನಾಟ್ ಇನ್ ಮೈ ನೇಮ್’ ಆಂದೋಲನದ ಮೂಲಕ ಇಂತಹ ಹಿಂಸಾಚಾರಗಳು ನಮ್ಮ ಹೆಸರಿನಲ್ಲಿ ನಡೆಯುವುದು ಬೇಡ ಎಂದು ನಾವೀಗಾಗಲೇ ಘೋಷಿಸಿದ್ದೇವೆ. ಮರುದಿನವೇ ಪ್ರಧಾನಿ ಮೋದಿಯವರು ಗೋರಕ್ಷಣೆೆಯ ಹೆಸರಿನಲ್ಲಿ ಮಾನವರ ಹತ್ಯೆಗಳನ್ನು ಖಂಡಿಸಿ ಹೇಳಿಕೆಯೊಂದನ್ನು ನೀಡಿದ್ದಾರೆ. ಆನಂತರವೂ ಗೋರಕ್ಷಕರ ಹಿಂಸಾಚಾರ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಾನವ ಸುರಕ್ಷಾ ಕಾನೂನನ್ನು ಜಾರಿಗೊಳಿಸಬೇಕು. ಗುಂಪುಗಳಿಂದ ಹತ್ಯೆಗಳ ಬಗ್ಗೆ ಯಾವುದೇ ದತ್ತಾಂಶಗಳು ಲಭ್ಯವಿಲ್ಲದ್ದರಿಂದ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಅವುಗಳನ್ನು ಸಂಗ್ರಹಿಸಬೇಕು. ಗೋರಕ್ಷಕರಿಂದ ಹಿಂಸಾಚಾರದ ಪ್ರಕರಣಗಳನ್ನು ವರದಿ ಮಾಡಲು ರಾಷ್ಟ್ರೀಯ ಸಹಾಯವಾಣಿಯೊಂದನ್ನು ಸ್ಥಾಪಿಸಬೇಕು. ಗೋರಕ್ಷಕರ ಗುಂಪುಗಳನ್ನು ನಿಷೇಧಿಸಬೇಕು ಮತ್ತು ಪೊಲೀಸರಿಗೆ ಸ್ವಾತಂತ್ರವನ್ನು ನೀಡಲು ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು, ವ್ಯಕ್ತಿಗಳ ಹಕ್ಕುಗಳು ಮತ್ತು ಗುಂಪು ನ್ಯಾಯ/ಗೋರಕ್ಷಕರ ಹಾವಳಿಯ ಕೆಡುಕುಗಳ ಬಗ್ಗೆ ಕಾನೂನು ಜಾರಿ ಅಧಿಕಾರಿಗಳಲ್ಲಿ ಅರಿವು ಮತ್ತು ಸಂವೇದನೆಯನ್ನು ಮೂಡಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಅಭಿಯಾನವನ್ನು ನಡೆಸಲಾಗುತ್ತಿದೆ.

ಸುಮಾರು 23,607 ಜನರು ಈಗಾಗಲೇ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದು ಆಯ್ದ ಪ್ರತಿಭಟನೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಚಿಂತನಾ ಕ್ರಮದಲ್ಲಿಯ ಸಮಸ್ಯೆಯಾಗಿದೆ ಎಂದು ಸ್ವರ ಭಾಸ್ಕರ್ ಪ್ರಧಾನಿಯನ್ನು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News