ಎಮ್ಮೆ ಸಾಗಾಟಗಾರರ ಮೇಲೆ ದಾಳಿ ನಡೆಸಿದ ಗೋರಕ್ಷಕರು

Update: 2017-07-08 10:40 GMT

ಹೊಸದಿಲ್ಲಿ, ಜು.8 : ರಾಜಧಾನಿಯ ಬಾಬಾ ಹರಿದಾಸ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆಯೊಂದರಲ್ಲಿ ಗೋರಕ್ಷಕ ದುಷ್ಕರ್ಮಿಗಳ ಗುಂಪೊಂದು ಎಮ್ಮೆಗಳನ್ನು ಸಾಗಿಸುತ್ತಿದ್ದ ಆರು ಮಂದಿಯ ಮೇಲೆ ಹಲ್ಲೆ ನಡೆಸಿದೆ. ಎಮ್ಮೆಗಳನ್ನು ಹತ್ಯೆಗೈಯ್ಯಲು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಅವುಗಳ ಸಾಗಾಟಗಾರರಿಗೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರರಿಂದ ಏಳು ಪಿಕ್-ಅಪ್ ವಾಹನಗಳಲ್ಲಿದ್ದ ಜಾನುವಾರುಗಳನ್ನು ದಾಳಿಕೋರರು ವಾಹನಗಳಿಂದ ಕೆಳಕ್ಕಿಳಿಸಿ ಬಿಟ್ಟರೆನ್ನಲಾಗಿದೆ. ಗಾಯಾಳುಗಳಲ್ಲೊಬ್ಬನಾದ ಅಲಿ ಜಾನ್ (40) ಎಂಬಾತನ ಸ್ಥಿತಿ ಗಂಭೀರವಾಗಿದೆ. ಆರೋಪಿಗಳು ಜಾನುವಾರುಗಳಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದಾರೆ.

ಆರೋಪಿಗಳ್ಯಾರೆಂದು ತಿಳಿದು ಬಂದಿಲ್ಲವಾದರೂ ಅವರೆಲ್ಲಾ ಹತ್ತಿರದ ಝರೋಡಾ ಕಲನ್ ಪ್ರದೇಶದ ನಿವಾಸಿಗಳೆಂದು ಮೂಲಗಳು ತಿಳಿಸಿವೆ. ಸ್ಥಳೀಯ ಪೊಲೀಸರು ಘಟನೆ ಸಂಬಂಧ ಎಫ್ ಐ ಆರ್ ದಾಖಲಿಸಿದ್ದಾರೆ.

ದಿಲ್ಲಿಯಲ್ಲಿ ಈದ್ ಶಾಪಿಂಗ್ ಮುಗಿಸಿ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ಅಪ್ರಾಪ್ತ ಮುಸ್ಲಿಂ ಬಾಲಕನೊಬ್ಬ ಗೋಮಾಂಸ ತಿನ್ನುವವನೆಂದು ಆರೋಪಿಸಿ ಸ್ವಘೋಷಿತ ಗೋರಕ್ಷಕರು ಹತ್ಯೆಗೈದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News