×
Ad

ಗೋಶಾಲೆಗಳಿಗೆ ಮಾದರಿ ಪಂಚನಹಳ್ಳಿ

Update: 2017-07-09 00:01 IST

ಚಿಕ್ಕಮಗಳೂರು, ಜು.8: ಸರಕಾರದ ಹಲವು ಯೋಜನೆಗಳಿಗೆ ಕೋಟಿ ಕೋಟಿ ರೂ. ಬಿಡುಗಡೆಯಾಗುತ್ತದೆ. ಆದರೆ ಆ ಯೋಜನೆಗಳ ಪ್ರಯೋಜನ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಮಾನ್ಯ ಜನರಿಗೆ ತಲುಪುವುದಿಲ್ಲ. ಈ ನಡುವೆ ಇಲ್ಲೊಂದು ಸರಕಾರಿ ಯೋಜನೆ ಜಿಲ್ಲಾಡಳಿತದ ಸಹಾಯದಿಂದ 5 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವು, ನೀರನ್ನು ಒದಗಿಸುವ ಮೂಲಕ ಈ ಭಾಗದ ರೈತರ ಆತ್ಮಸ್ಥೈರ್ಯ ಹೆಚ್ಚಿಸಿದೆ.

ಕಡೂರು ತಾಲೂಕಿನ ಪಂಚನಹಳ್ಳಿ ಗೋಶಾಲೆ ಸಾವಿರಾರು ರಾಸುಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿ ರಾಸುಗಳಿಗೆ ಅಧಿಕಾರಿಗಳು ಮೇವು, ನೀರನ್ನು ನಿಗದಿಯಂತೆ ಒದಗಿಸುವ ಮೂಲಕ ಮನೆ ಮಾತಾಗುತ್ತಿದ್ದಾರೆ.

ಭೀಕರ ಬರಗಾಲದಿಂದ ರೈತ ಕಂಗೆಟ್ಟು ರಾಸುಗಳಿಗೆ ನೀರು, ಮೇವನ್ನು ಒದಗಿಸಲಾಗದೇ ರೈತನ ಬದುಕು ದಿಕ್ಕು ತೋಚ ದಂತಾಗಿದ್ದ ಕಾಲದಲ್ಲಿ ಜಿಲ್ಲೆಯ ರೈತರ ಹಿತಾಸಕ್ತಿಗಾಗಿ ಜಿಲ್ಲೆಯಲ್ಲಿ ಏಕೈಕ ಗೋಶಾಲೆ ಯನ್ನು ಪಂಚನಹಳ್ಳಿ ಗ್ರಾಮದಲ್ಲಿ ಎಪ್ರಿಲ್‌ನಲ್ಲಿ ತೆರೆಯಲಾಗಿತ್ತು.

ಗೋಶಾಲೆ ತೆರೆಯುತ್ತಿದ್ದಂತೆ ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಯ 6 ಸಾವಿರಕ್ಕೂ ಹೆಚ್ಚು ರಾಸುಗಳನ್ನು ತಂದು ರೈತರು ವಾಸ್ತವ್ಯ ಹೂಡಿದರು.

ಸರಕಾರದ ಗೋಶಾಲೆ ರೈತರಿಗೆ ಸಮರ್ಪಕ ವಾಗಿ ಬಳಕೆಯಾಗುವುದೇ ಎನ್ನುವುದು ನೂರಾರು ರೈತರ ಪ್ರಶ್ನೆಯಾಗಿತ್ತು. ಆದರೆ ಜಿಲ್ಲಾಡಳಿತ ಹಾಗೂ ಆರ್ಟ್ ಆಫ್ ಲೀವಿಂಗ್ ಆಶ್ರಯದಲ್ಲಿ ನಡೆಸುತ್ತಿರುವ ಪಂಚನಹಳ್ಳಿ ಗೋಶಾಲೆಯಲ್ಲಿ ಕಳೆದ 2 ತಿಂಗಳಿನಿಂದ ರಾಸುಗಳಿಗೆ ಅಗತ್ಯ ಪ್ರಮಾಣದ ಮೇವು, ನೀರು ಲಭ್ಯವಾಗುವ ಮೂಲಕ ಮಾದರಿ ಗೋಶಾಲೆಯಾಗಿದೆ. ಇನ್ನೂ 1 ತಿಂಗಳು ಗೋಶಾಲೆ ಮುಂದುವರಿಸಲು ರೈತರು ಆಗ್ರಹಿಸಿದ್ದಾರೆ.

ಒಟ್ಟಾರೆ ಭೀಕರ ಬರಗಾಲದಿಂದ ಕಂಗಾ ಲಾಗಿದ್ದ ರೈತರಿಗೆ ಜಿಲ್ಲಾಡಳಿತ ತೆರೆದಿರುವ ಗೋಶಾಲೆ ಸಾವಿರಾರು ರಾಸುಗಳು ಪ್ರಾಣ ಉಳಿಸುವುದರ ಜೊತೆಗೆ ರೈತರ ಬಾಳನ್ನು ಹಸನಾಗಿಸಿದೆ. ಈ ಭಾಗದಲ್ಲಿ ಮುಂಗಾರು ಕೈಕೊಟ್ಟಿದೆ. ಜಿಲ್ಲಾಡಳಿತೆ ಇನ್ನೊಂದು ತಿಂಗಳು ಗೋಶಾಲೆಯನ್ನು ಮುಂದುವರಿಸಿದರೆ ಹೈನುಗಾರಿಕೆ ಆಸರೆಯಾಗಲಿದೆ ಎನ್ನುವುದು ರೈತರ ಆಗ್ರಹ.

ಸರಕಾರ ಗೋಶಾಲೆಯಲ್ಲಿ 1 ರಾಸುವಿಗೆ ದಿನಕ್ಕೆ 5 ಕೆ.ಜಿ. ಮೇವು ನೀಡುತ್ತಿದೆ. ಗೋಶಾಲೆಯಲ್ಲಿ 11ಕ್ಕೂ ಹೆಚ್ಚು ನೀರಿನ ತೊಟ್ಟಿಗಳನ್ನು ನಿರ್ಮಿಸಿ ರಾಸುಗಳಿಗೆ ನೀರನ್ನು ಒದಗಿಸಲಾಗುತ್ತಿದೆ. ಗೋಶಾಲೆ ತೆರೆದಿರುವುದರಿಂದ ಸುತ್ತಮುತ್ತಲಿನ 4 ಜಿಲ್ಲೆಯ ರೈತರಿಗೆ ಅನುಕೂಲವಾಗಿದೆ.ಗೋಶಾಲೆಯಲ್ಲಿ ಯಾವುದೇ ತೊಂದರೆ ಗಳಿಲ್ಲದೆ ಅಧಿಕಾರಿಗಳು ಮೇವು ನೀರನ್ನು ಒದಗಿಸುತ್ತಿದ್ದಾರೆ. ಪಂಚನಹಳ್ಳಿ ಗೋಶಾಲೆ ಮಾದರಿ ಗೋಶಾಲೆಯಾಗಿದೆ.
 ಪರಮೇಶ್, ರೈತ, ಕಡೂರು

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News

ಜಗದಗಲ

ಜಗ ದಗಲ