×
Ad

ಸರಕಾರಿ ನೌಕರರ ಪ್ಲೇಗ್ ಗುಡಿಸಲು,ಬ್ರೀಫ್‌ಕೇಸ್ ಮತ್ತು ಇನ್ನಿತರ ವಿಲಕ್ಷಣ ಭತ್ತೆಗಳ ಬಗ್ಗೆ ಗೊತ್ತೇ?

Update: 2017-07-09 15:15 IST

ಏಳನೇ ವೇತನ ಆಯೋಗವು ಪರಿಷ್ಕರಿಸಿರುವ ಭತ್ತೆಗಳ ಜಾರಿಗಾಗಿ ವಿತ್ತ ಸಚಿವಾಲಯವು ಇತ್ತೀಚಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಈ ಸುದೀರ್ಘ ಪಟ್ಟಿಯಲ್ಲಿ 197 ವಿವಿಧ ಭತ್ತೆಗಳನ್ನು ಉಲ್ಲೇಖಿಸಲಾಗಿದ್ದು, ಪರಿಷ್ಕೃತ, ರದ್ದುಗೊಂಡ ಮತ್ತು ವಿಲೀನಗೊಂಡ ಕೆಲವು ವಿಲಕ್ಷಣ ಭತ್ತೆಗಳ ವಿವರಗಳಿಲ್ಲಿವೆ.

ಸೈಕಲ್ ಭತ್ತೆ

 ಈ ಭತ್ತೆಯು ಪತ್ರಗಳನ್ನು ವಿತರಿಸಲು ಇಕ್ಕಟ್ಟಾದ ಸಂದುಗೊಂದುಗಳಿಂದ ಹಿಡಿದು ಹಳೆಯ,ಜನನಿಬಿಡ ಪಟ್ಟಣಗಳು ಮತ್ತು ಇತರ ಯಾವುದೇ ಸಂಚಾರ ವ್ಯವಸ್ಥೆ ಇಲ್ಲದಿದ್ದ ದುರ್ಗಮ ಪ್ರದೇಶಗಳಲ್ಲಿ ಅಂಚೆ ಇಲಾಖೆಯ ಯಾತ್ರೆಯ ಚಿತ್ರಣವನ್ನು ನೀಡುತ್ತದೆ. ಅಂದಿನ ದಿನಗಳಲ್ಲಿ ಪೋಸ್ಟ್‌ಮನ್‌ಗಳು ನಡೆದುಕೊಂಡು ಅಥವಾ ಸೈಕಲ್ ತುಳಿಯುತ್ತ ಪತ್ರಗಳನ್ನು ವಿತರಿಸುವುದು ಮಾಮೂಲಾಗಿತ್ತು. ಇದಕ್ಕಾಗಿ ಅವರಿಗೆ ಸೈಕಲ್ ಭತ್ತೆ ನೀಡಲಾಗುತ್ತಿತ್ತು. ಈ ಭತ್ತೆಯನ್ನು ರದ್ದುಗೊಳಿಸುವಂತೆ ವೇತನ ಆಯೋಗವು ಶಿಫಾರಸು ಮಾಡಿತ್ತಾದರೂ ಅದನ್ನು ಉಳಿಸಿಕೊಂಡಿರುವ ಸರಕಾರವು ಹಾಲಿ ಮಾಸಿಕ 90 ರೂ.ಗಳ ಭತ್ತೆಯನ್ನು 180 ರೂ.ಗೆ ದ್ವಿಗುಣಗೊಳಿಸಿದೆ. ಕರ್ತವ್ಯ ನಿರ್ವಹಣೆಗಾಗಿ ಸೈಕಲ್ ಬಳಕೆ ಹೆಚ್ಚಿರುವ ರೈಲ್ವೆಯಂತಹ ಇತರ ಇಲಾಖೆಗಳ ಸಿಬ್ಬಂದಿಗಳಿಗೂ ಸೈಕಲ್ ಭತ್ತೆ ನೀಡಲಾಗುತ್ತಿದೆ.

ಬ್ರೀಫ್‌ಕೇಸ್ ಭತ್ತೆ

ಹಿರಿಯ ಸರಕಾರಿ ಅಧಿಕಾರಿಗಳು ಬ್ರೀಫ್‌ಕೇಸ್ ಹಿಡಿದುಕೊಂಡು ಓಡಾಡುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. ಹೀಗಾಗಿ ಬ್ರೀಫ್‌ಕೇಸ್ ಖರೀದಿಸಲೆಂದೇ ಈ ಅಧಿಕಾರಿಗಳಿಗೆ ವಿಶೇಷ ಭತ್ತೆಯನ್ನು ನೀಡಲಾಗುತ್ತದೆ ಮತ್ತು ಇದು ಕೆಲವು ವರ್ಗಗಳ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ. ಈ ‘ಬ್ರೀಫ್‌ಕೇಸ್’ನ ಸರಕಾರಿ ವ್ಯಾಖ್ಯೆಯಲ್ಲಿ ಆಫೀಸ್ ಬ್ಯಾಗ್ ಮತ್ತು ಲೇಡಿಸ್ ಪರ್ಸ್ ಕೂಡ ಒಳಗೊಂಡಿವೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಭತ್ತೆಯನ್ನು ನೀಡಲಾಗುತ್ತಿದ್ದು, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು 10,000 ರೂ.ವರೆಗೆ ಪಡೆಯುತ್ತಾರೆ. ಈ ಭತ್ತೆಯನ್ನು ಉಳಿಸಿಕೊಳ್ಳುವಂತೆ ವೇತನ ಆಯೋಗವು ಮಾಡಿದ ಶಿಫಾರಸನ್ನು ಸರಕಾರವು ಒಪ್ಪಿಕೊಂಡಿದೆ.

ಪುಸ್ತಕ ಭತ್ತೆ

ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವು ಕಡಿಮೆಯಾಗಿರಬಹುದು. ಆದರೆ ಉದಯೋನ್ಮುಖ ರಾಜತಾಂತ್ರಿಕ ವರ್ಗ ದವರಿಗೆ ಅದು ಅನಿವಾರ್ಯವಾಗಿದೆ. ಭಾರತೀಯ ವಿದೇಶಾಂಗ ಸೇವೆ(ಐಎಫ್‌ಎಸ್) ಗಾಗಿ ತರಬೇತಿ ಪಡೆಯುತ್ತಿರುವ ಅಧಿಕಾರಿಗಳಿಗೆ ಒಂದು ಬಾರಿಗೆ 15,000 ರೂ.ಗಳ ಪುಸ್ತಕ ಭತ್ತೆಯನ್ನು ನೀಡಲಾಗುತ್ತದೆ.

ಸಾಬೂನು ಭತ್ತೆ

ಅಸ್ಸಾಂ ರೈಫಲ್ಸ್‌ನ ‘ಬಿ’ ಮತ್ತು ‘ಸಿ’ ವರ್ಗಗಳ ಸಿಬ್ಬಂದಿಗಳಿಗೆ ಮಾಸಿಕ 90 ರೂ.ಗಳ ಸಾಬೂನು ಭತ್ತೆಯನ್ನು ನೀಡಲಾಗುತ್ತದೆ. ಪ್ರತ್ಯೇಕ ಭತ್ತೆಯನ್ನಾಗಿ ಅದನ್ನು ರದ್ದುಗೊಳಿಸು ವಂತೆ ಮತ್ತು ಸಮಗ್ರ ವೈಯಕ್ತಿಕ ನಿರ್ವಹಣೆ ಭತ್ತೆಯಲ್ಲಿ ವಿಲೀನಗೊಳಿಸುವಂತೆ ವೇತನ ಆಯೋಗದ ಶಿಫಾರಸನ್ನು ಸರಕಾರವು ಒಪ್ಪಿಕೊಂಡಿದೆ.

ಗುಡಿಸಲು ಭತ್ಯೆ

ಪ್ಲೇಗ್ ಮಹಾಮಾರಿ ಊರೂರುಗಳನ್ನು ಕಾಡುತ್ತಿದ್ದ ಕಾಲದಿಂದಲೂ ಈ ಭತ್ತೆ ಮುಂದುವರಿದುಕೊಂಡು ಬಂದಿದೆ. ಇದನ್ನು ರೈಲ್ವೆ ಆವರಣದಿಂದ ಹೊರಗೆ ವಾಸವಿದ್ದ ರೈಲ್ವೆ ನೌಕರರಿಗೆ ನೀಡಲಾಗುತ್ತಿತ್ತು. ತಾವಿರುವ ಪ್ರದೇಶದಲ್ಲಿ ಪ್ಲೇಗ್ ಹರಡಿದರೆ ಅವರು ತಮ್ಮ ಮನೆಗಳನ್ನು ತೆರವುಗೊಳಿಸಿ ರೈಲ್ವೆಯ ಜಾಗದಲ್ಲೋ ಬೇರೆಲ್ಲೋ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿರುತ್ತಿದ್ದರು. ನಂಬಿದರೆ ನಂಬಿ, ಬಿಟ್ಟರೆ ಬಿಡಿ....ಅವರಿಗೆ ತಿಂಗಳಿಗೆ ಕೇವಲ 100 ರೂ.ಗಳ ಭತ್ತೆ ನೀಡಲಾಗುತ್ತಿತ್ತು. ಪ್ಲೇಗ್ ಹಾವಳಿ ಇನ್ನೂ ಇದ್ದಿದ್ದರೆ ತಿಂಗಳಿಗೆ 100 ರೂ.ಗಳ ಭತ್ತೆಯಲ್ಲಿ ಗುಡಿಸಲನ್ನು ನಿರ್ಮಿಸಿ ನಿರ್ವಹಿಸುವುದು ಸಾಧ್ಯವಿತ್ತೇ? ಅಚ್ಚರಿ ಬೇಕಿಲ್ಲ, ವೇತನ ಆಯೋಗವು ಈ ಭತ್ತೆಯನ್ನು ರದ್ದುಗೊಳಿಸಿದೆ.

ಗೌಪ್ಯ ರಕ್ಷಣೆ ಭತ್ತೆ

ಅತ್ಯಂತ ರಹಸ್ಯ ದಾಖಲೆಗಳನ್ನು ನೋಡಿಕೊಳ್ಳುವ ಮತ್ತು ‘ಸೂಕ್ಷ್ಮ ಹಾಗೂ ಕಠಿಣ ಕರ್ತವ್ಯ’ ನಿರ್ವಹಿಸುವ ಸಂಪುಟ ಸಚಿವಾಲಯದ ಅಧಿಕಾರಿಗಳಿಗೆ ಈ ಭತ್ತೆಯನ್ನು ನೀಡಲಾಗುತ್ತದೆ. ಸರಕಾರವು ಈ ಭತ್ತೆಯ ಮೊತ್ತವನ್ನು ರಹಸ್ಯವಾಗಿಯೇ ಇಟ್ಟಿದೆ. ಅಧಿಕಾರಿಯು ಹೊಂದಿರುವ ಹುದ್ದೆಯನ್ನು ಅವಲಂಬಿಸಿ ತಿಂಗಳಿಗೆ ಇಂತಿಷ್ಟು ಮೊತ್ತವನ್ನು ಪಾವತಿಸಲಾಗುತ್ತದೆ ಎನ್ನುವುದು ಮಾತ್ರ ಸದ್ಯಕ್ಕೆ ತಿಳಿದಿರುವ ಮಾಹಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News