ಏಕದಿನ ಸರಣಿ ಜಯಿಸಿದ ಝಿಂಬಾಬ್ವೆ ಕ್ರಿಕೆಟ್ ತಂಡ

Update: 2017-07-10 18:48 GMT

ಹಂಬನ್‌ಟೋಟ, ಜು.10: ಐದನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು 3 ವಿಕೆಟ್‌ಗಳ ಅಂತರದಿಂದ ಮಣಿಸಿ ಮತ್ತೊಮ್ಮೆ ಶಾಕ್ ನೀಡಿರುವ ಝಿಂಬಾಬ್ವೆ ತಂಡ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ.

8 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಮೊದಲ ಸರಣಿ ಜಯಿಸಿದ ಝಿಂಬಾಬ್ವೆ ದಕ್ಷಿಣ ಏಷ್ಯಾ ದೇಶದಲ್ಲಿ ಚೊಚ್ಚಲ ಸರಣಿ ಗೆದ್ದ ಸಾಧನೆಯನ್ನೂ ಮಾಡಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಆಫ್ ಸ್ಪಿನ್ನರ್ ಸಿಕಂದರ್ ರಝಾ (3-21) ಹಾಗೂ ಕ್ರಿಮರ್(2-23) ಶ್ರೀಲಂಕಾಕ್ಕೆ ಕಡಿವಾಣ ಹಾಕಲು ಸಫಲರಾದರು.
ಶ್ರೀಲಂಕಾ ಇನಿಂಗ್ಸ್‌ನಲ್ಲಿ ಜೊತೆಯಾಟದ ಕೊರತೆ ಕಂಡು ಬಂತು. ಆರಂಭಿಕ ಆಟಗಾರ ದನುಷ್ಕಾ ಗುಣತಿಲಕ(52) ಹಾಗೂ ಅಸೆಲಾ ಗುಣರತ್ನೆ(ಅಜೇಯ 59) ಅರ್ಧಶತಕ ಗಳಿಸಿದರೂ ಶ್ರೀಲಂಕಾ ದೊಡ್ಡ ಮೊತ್ತ ಗಳಿಸಲು ವಿಫಲವಾಯಿತು. ಗೆಲುವಿಗೆ 204 ರನ್ ಗುರಿ ಪಡೆದ ಝಿಂಬಾಬ್ವೆ ತಂಡದ ಪರ ಮಸಕಝ (73 ರನ್, 86 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಮೈರ್(43, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್‌ಗೆ 92 ರನ್ ಸೇರಿಸಿ ಭರ್ಜರಿ ಆರಂಭ ನೀಡಿದ್ದರು.

ಝಿಂಬಾಬ್ವೆ ಆರಂಭಿಕ ಆಟಗಾರ ಹ್ಯಾಮಿಲ್ಟನ್ ಮಸಕಝ ಗರಿಷ್ಠ ಸ್ಕೋರ್(73) ದಾಖಲಿಸಿದರು. ಒಂದು ಹಂತದಲ್ಲಿ 1 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿದ್ದ ಝಿಂಬಾಬ್ವೆ 38 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

 8ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 29 ರನ್ ಸೇರಿಸಿದ ರಝಾ(ಅಜೇಯ 27) ಹಾಗೂ ನಾಯಕ ಗ್ರೇಮ್ ಕ್ರಿಮರ್(ಅಜೇಯ 11) ಇನ್ನೂ 71 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಝಿಂಬಾಬ್ವೆ ಅಪರೂಪದ ಸರಣಿ ಗೆಲುವು ದಾಖಲಿಸಿತು.

ಹ್ಯಾಮಿಲ್ಟನ್ ಮಸಕಝ ಸರಣಿಶ್ರೇಷ್ಠ ಹಾಗೂ ಸಿಕಂದರ್ ರಝಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News