ಆಣೆ ರಾಜಕೀಯ ನಿಲ್ಲಿಸಿ, ದುಷ್ಕರ್ಮಿಗಳನ್ನು ಬಂಧಿಸಿ

Update: 2017-07-11 04:22 GMT

ಕಳೆದೆರಡು ದಿನಗಳಿಂದಲೂ ‘ಕರಾವಳಿ ಉದ್ವಿಗ್ನಗೊಳ್ಳಲು ಬಿಜೆಪಿ ಕಾರಣ, ಸಂಘ ಪರಿವಾರ ಕಾರಣ’ ಎಂದು ಮುಖ್ಯಮಂತ್ರಿಯಿಂದ ಹಿಡಿದು, ದಕ್ಷಿಣ ಕನ್ನಡ ಜಿಲ್ಲೆಯ ಸಚಿವರುಗಳು ಪತ್ರಿಕೆಗಳ ಮೂಲಕ ಹೇಳಿಕೆ ನೀಡುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಕೋಮುದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಎಂದೂ ಮುಖ್ಯಮಂತ್ರಿ ಪದೇ ಪದೇ ಎಚ್ಚರಿಸುತ್ತಿದ್ದಾರೆ. ಸದ್ಯಕ್ಕೆ ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸೆಗೆ ನಿಜವಾದ ಕಾರಣರು ಯಾರು ಎನ್ನುವುದನ್ನು ಪತ್ತೇದಾರಿ ಕೆಲಸ ನಡೆಸಿ ಪತ್ತೆ ಹಚ್ಚುವ ಅಗತ್ಯವೇ ಇಲ್ಲ. ಯಾಕೆಂದರೆ, ಕಳೆ ಒಂದು ತಿಂಗಳಿಂದ ಕಲ್ಲಡ್ಕ, ಬಿ.ಸಿ . ರೋಡಿನಲ್ಲಿ ನಡೆಯುತ್ತಿರುವ ಕೃತ್ಯಗಳ ಹಿಂದೆ ಯಾರ್ಯಾರಿದ್ದಾರೆ ಎನ್ನುವುದು ಆ ಊರಿನ ಪುಟ್ಟ ಮಕ್ಕಳಿಗೂ ಗೊತ್ತಿದೆ.

ಆದರೆ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿ, ಅವರನ್ನು ಬಂಧನ ಮಾಡುವ ಬದಲು, ಕೆಲ ಸಚಿವರು ‘ಧರ್ಮಸ್ಥಳಕ್ಕೆ ಬನ್ನಿ, ಆಣೆ ಹಾಕೋಣ...’ ಎಂಬಂತಹ ಬಾಲಿಶ ಹೇಳಿಕೆಗಳನ್ನು ನೀಡುತ್ತಾ ಓಡಾಡುತ್ತಿದ್ದಾರೆ. ಆಣೆಗಳ ಮೂಲಕವೇ ಎಲ್ಲವನ್ನು ನಿರ್ಧಾರ ಮಾಡುವುದಾಗಿದ್ದರೆ ಪೊಲೀಸ್ ಠಾಣೆಗಳು, ನ್ಯಾಯಾಲಯಗಳು ಇರುವುದು ಯಾಕೆ? ದೇವರ ಮೇಲೆ ಭಯವಿದ್ದವರು, ಅಮಾಯಕರನ್ನು ಕೊಲ್ಲುತ್ತಾರೆಯೇ? ಕೊಲ್ಲುವುದಕ್ಕೆ ಪ್ರೋತ್ಸಾಹ ನೀಡುತ್ತಾರೆಯೇ? ಒಂದು ಮೃತ ದೇಹವನ್ನು ಮುಂದಿಟ್ಟುಕೊಂಡು ಊರನ್ನು ಉದ್ವಿಗ್ನಗೊಳಿಸುತ್ತಾರೆಯೇ? ಇಂತಹ ಜನರು ಧರ್ಮಸ್ಥಳದಲ್ಲಿ ಆಣೆ ಮಾಡಿದರೆ ಅವರು ಸಜ್ಜನರೆಂದು ಘೋಷಿಸಲ್ಪಡುವುದು ಹೇಗೆ? ಇಷ್ಟಕ್ಕೂ, ಸೌಜನ್ಯಾ ಪ್ರಕರಣದ ಆರೋಪಿಗಳು ಧರ್ಮಸ್ಥಳದ ನೆರಳಲ್ಲೇ ಓಡಾಡುತ್ತಿರುವಾಗ, ಆ ಹೆಣ್ಣು ಮಗಳ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗದೇ ಇರುವಾಗ, ಕಲ್ಲಡ್ಕದಲ್ಲಿ ನಡೆದ ಗಲಭೆ ಆರೋಪಿಗಳು ಧರ್ಮಸ್ಥಳದಲ್ಲಿ ಆಣೆ ಮಾಡಬೇಕು ಎಂದು ಸಚಿವರೊಬ್ಬರು ಹೇಳಿಕೆ ನೀಡುವುದು ಪ್ರಜಾಸತ್ತೆಯ ಕಟು ವ್ಯಂಗ್ಯವಾಗಿದೆ.

ರಾಜ್ಯ ಸರಕಾರದ ಅಸಹಾಯಕತೆಯ ಪರಮಾವಧಿಯನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಕೋಮುವಾದಿ ನರರಾಕ್ಷಸರಿಂದ ಸಂತ್ರಸ್ತರಾದವರೆಲ್ಲ ನ್ಯಾಯ ಬೇಡಲು ಧರ್ಮಸ್ಥಳಕ್ಕೆ ತೆರಳಬೇಕೆಂದು ಈ ಸಚಿವರು ಪರೋಕ್ಷವಾಗಿ ಜನರಿಗೆ ಸೂಚನೆ ನೀಡುತ್ತಿದ್ದಾರೆಯೇ?

ಮುಖ್ಯವಾಗಿ ಜಿಲ್ಲೆಯಲ್ಲಿ ಸಂಘಪರಿವಾರ, ಅದರಲ್ಲೂ ಕಲ್ಲಡ್ಕದಲ್ಲಿ ಪ್ರಭಾಕರ ಭಟ್ಟರು ರಾಜಕೀಯವಾಗಿ ಅತ್ಯಂತ ಹತಾಶೆಯಲ್ಲಿರುವುದೇ ಬಂಟ್ವಾಳ ಉದ್ವಿಗ್ನಗೊಳ್ಳಲು ಮುಖ್ಯ ಕಾರಣ. ಬಿಜೆಪಿ ಅಧಿಕಾರದಲ್ಲಿರುವಾಗ, ಅದರ ಸರ್ವ ಪ್ರಯೋಜನವನು್ನ ಪಡೆದವರು ಆರೆಸ್ಸೆಸ್ ಮುಖಂಡ   ಕಲ್ಲಡ್ಕ ಭಟ್ಟರು. ಕೋಮುವಾದದ ಮರೆಯಲ್ಲೇ ಕೆಲವು ಆರ್ಥಿಕ ವ್ಯವಹಾರಗಳನ್ನೂ ಅವರು ನಡೆಸುತ್ತಾ ಬರುತ್ತಿದ್ದಾರೆ. ಅದಕ್ಕಾಗಿ ಕೆಲವು ದುಷ್ಕರ್ಮಿಗಳನ್ನು ಅವರು ಕಲ್ಲಡ್ಕ ಪರಿಸರದಲ್ಲಿ ಸಾಕುತ್ತಿದ್ದಾರೆ. ಇದೀಗ ವಿವಿಧ ಇಲಾಖೆಗಳಲ್ಲಿ ಅವರು ಹೇಳಿದ ಮಾತಿಗೆ ಬಾಲ ಅಲ್ಲಾಡಿಸುವ ಅಧಿಕಾರಿಗಳಿದ್ದಾರಾದರೂ, ರಾಜಕೀಯ ಅಧಿಕಾರವಿಲ್ಲದೇ ಇರುವುದರಿಂದ ಹಿಂದಿನಂತೆ ಮುಕ್ತವಾಗಿ ಅವರಿಗೆ ಆದೇಶಗಳನ್ನು ನೀಡಲು ಭಟ್ಟರಿಗೆ ಸಾಧ್ಯವಾಗುತ್ತಿಲ್ಲ.

ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ಮೂಲೆಗುಂಪಾಗಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯತೆ ಹೆಚ್ಚುತ್ತಿದೆ. ಇವೆೆಲ್ಲಕ್ಕಿಂತಲೂ ಮೋದಿಯ ಆರ್ಥಿಕ ನೀತಿಯಿಂದಾಗಿ ಜನರೆಲ್ಲರೂ ಹತಾಶೆಗೀಡಾಗಿದ್ದಾರೆ. ಮೋದಿಯ ಮೇಲಿಟ್ಟ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮೋದಿಯ ಹೆಸರಿನಲ್ಲಿ ಮತ ಯಾಚನೆ ಮಾಡುವಂತೆಯೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯದಿದ್ದರೂ ಪರವಾಗಿಲ್ಲ, ಕನಿಷ್ಠ ತನ್ನ ಕ್ಷೇತ್ರದಲ್ಲಾದರೂ, ತನ್ನ ಅಭ್ಯರ್ಥಿ ಆಯ್ಕೆಯಾದರೆ ಸಾಕು ಎನ್ನುವಂತಹ ಹತಾಶ ಸ್ಥಿತಿಯಲ್ಲಿ ಪ್ರಭಾಕರ ಭಟ್ಟರಿದ್ದಾರೆ.

ಈ ಕಾರಣದಿಂದಾಗಿಯೇ ಬಂಟ್ವಾಳವನ್ನು ಕೇಂದ್ರವಾಗಿಟ್ಟುಕೊಂಡು ಕಲ್ಲಡ್ಕ ಭಟ್ಟರ ಪರಿವಾರ ಕೋಮುಹಿಂಸಾಚಾರ ನಡೆಸಲು ಕಳೆದ ಐದು ತಿಂಗಳಿಂದ ಸತತವಾಗಿ ಯತ್ನಿಸುತ್ತಾ ಬಂದಿದೆ. ಎರಡು ಚೂರಿ ಇರಿತಗಳು ಕಲ್ಲಡ್ಕದಲ್ಲಿ ಬೆನ್ನು ಬೆನ್ನಿಗೆ ಸಂಭವಿಸಿದವು. ಇದರಿಂದ ಇನ್ನೊಂದು ಸಮುದಾಯ ಸಂಪೂರ್ಣ ಉದ್ವಿಗ್ನವಾಗಲಿಲ್ಲವೆಂಬ ಹತಾಶೆಯಿಂದ, ಅಂತಿಮವಾಗಿ ಒಬ್ಬ ಅಮಾಯಕ ಆಟೋ ಚಾಲಕನನ್ನು ಕೊಂದು ಹಾಕಲಾಯಿತು. ಈ ಚಾಲಕ ಅಂದು ತನ್ನ ಊರಿನ ರಸ್ತೆ ದುರಸ್ತಿಯ ಕೆಲಸದಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸಿ, ಬಳಿಕ ಒಬ್ಬ ಅಂಗವಿಕಲ ವ್ಯಕ್ತಿಯನ್ನು ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿ ಅವರನ್ನು ಮನೆಗೆ ತಲುಪಿಸಿದ್ದರು. ಕೊಲೆಗೀಡಾದ ವ್ಯಕ್ತಿ ಒಂದು ಸಣ್ಣ ಪಕ್ಷದ ಕಾರ್ಯಕರ್ತರಾಗಿದ್ದರೂ, ಸ್ಥಳೀಯವಾಗಿ ಎಲ್ಲ ಧರ್ಮೀಯರಿಗೂ ಬೇಕಾದ ಸಜ್ಜನರಾಗಿದ್ದರು. ಯಾವುದೇ ಕಾರಣವಿಲ್ಲದೆ, ಅವರು ಮುಸ್ಲಿಮ್ ಎನ್ನುವ ಒಂದೇ ಕಾರಣಕ್ಕೆ ಸಂಘಪರಿವಾರ ಕಾರ್ಯಕರ್ತರು ಕೊಂದು ಹಾಕಿದರು.

ಅಂದರೆ ಮುಸ್ಲಿಮ್ ಹೆಸರಿನ ವ್ಯಕ್ತಿಯನ್ನು ಕೊಂದು ಹಾಕಿದರೆ, ಊರಲ್ಲಿ ಕೋಮುಗಲಭೆಯಾಗುತ್ತದೆ ಎನ್ನುವುದು ಕೊಂದವರ ಲೆಕ್ಕಾಚಾರ. ಆದರೆ ಲೆಕ್ಕಾಚಾರ ತಪ್ಪಿತು. ಈ ಕೊಲೆ ನಡೆದಿದ್ದರೂ ಬಂಟ್ವಾಳದ ಜನರು ಗರಿಷ್ಠ ಸಹನೆಯೊಂದಿಗೆ ಊರಿನ ಶಾಂತಿಯನ್ನು ಕಾಪಾಡಿದರು. ಇದು ಜನರ ಗೆಲುವಾಗಿತ್ತು. ವಿಪರ್ಯಾಸವೆಂದರೆ, ಈ ಕೊಲೆ ಸಂಭವಿಸಿದ ಕೆಲವೇ ದಿನಗಳಲ್ಲಿ ಶರತ್ ಎಂಬವರ ಮೇಲೆ ಅಪರಿಚಿತರಿಂದ ಬರ್ಬರ ದಾಳಿ ನಡೆಯಿತು. ಗಾಯಗೊಂಡು ತನ್ನ ಅಂಗಡಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ, ಸ್ಥಳೀಯವಾಗಿದ್ದ ಯಾವುದೇ ಸಂಘಪರಿವಾರದ ವ್ಯಕ್ತಿ ಅವರನ್ನು ರಕ್ಷಿಸಲು ಬಂದಿರಲಿಲ್ಲ.

ಪಕ್ಕದ ಅಂಗಡಿಯ ಅಬ್ದುರ್ರವೂಫ್ ಎನ್ನುವ ತರುಣ ಗಾಯಾಳುವನ್ನು ಎತ್ತಿಕೊಂಡು ತನ್ನ ರಿಕ್ಷಾದಲ್ಲಿ ಹಾಕಿ ಆಸ್ಪತ್ರೆ ತಲುಪಿಸಿದ್ದರು. ಅಲ್ಲಿಂದ ಮಂಗಳೂರಿಗೆ ಕೊಂಡೊಯ್ಯಲು ವೈದ್ಯರು ತಿಳಿಸಿದಾಗಲೂ ಅಬ್ದುರ್ರವೂಫ್‌ನ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಆಸ್ಪತ್ರೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಆಗಲೇ ಬಂದು ಸೇರಿದ್ದರಾದರೂ ಗಾಯಾಳುವಿನ ನೆರವಿಗೆ ಧಾವಿಸಿರಲಿಲ್ಲ. ಆದರೆ ಎರಡು ದಿನಗಳ ಬಳಿಕ ಇದೇ ಸಂಘಪರಿವಾರದ ನಾಯಕರು ಸೆಕ್ಷನನ್ನು ಉಲ್ಲಂಘಿಸಿ ಪ್ರತಿಭಟನೆಯ ಹೆಸರಲ್ಲಿ ‘ಸಂಭ್ರಮಾಚರಣೆ’ ನಡೆಸಿದರು.

ಶರತ್ ಹಲ್ಲೆಗೆ ಪ್ರತಿಭಟನೆ ಎಂದು ಇದನ್ನು ಕರೆದರಾದರೂ, ಅಲ್ಲಿ ಭಟ್ಟರನ್ನು ಮೆರವಣಿಗೆಯಲ್ಲಿ ಹೊತ್ತು ಕಾರ್ಯಕರ್ತರು ಸಂಭ್ರಮಿಸುತ್ತಿರುವುದು ಎಲ್ಲ ಮಾಧ್ಯಮಗಳಲ್ಲೂ ಛಾಯಾಚಿತ್ರ ಸಮೇತ ವರದಿಯಾಯಿತು. ಈ ಸಭೆಯಲ್ಲಿ ನಳಿನ್‌ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಮೊದಲಾದ ಜನಪ್ರತಿನಿಧಿಗಳೂ ಸೇರಿದ್ದರು. ಸೆಕ್ಷನ್ ಹಾಕಿರುವುದು ಶಾಂತಿ ಸ್ಥಾಪನೆಗಾಗಿ. ಆದರೆ ಈ ಜನಪ್ರತಿನಿಧಿಗಳು ಸೆಕ್ಷನ್ ಉಲ್ಲಂಘಿಸಿದರು. ಅಂದರೆ ಶಾಂತಿ ಸ್ಥಾಪನೆ ಇವರಿಗೆ ಬೇಕಾಗಿರಲಿಲ್ಲ. ಮರುದಿನ ಶರತ್‌ರ ಮೃತದೇಹದ ಹಿಂದೆ ಮೆರವಣಿಗೆಯಲ್ಲಿ ಸಾಗಿದ ಈ ಜನರು ತಮ್ಮದೇ ಮೆರವಣಿಗೆಯ ಮೇಲೆ ತಾವೇ ಕಲ್ಲು ತೂರಾಟ ನಡೆಸಿದರು. ಇದಕ್ಕಿಂತ ಮಿಗಿಲಾದ ಅಮಾನವೀಯತೆ ಇದೆಯೇ?ಹೀಗಿರುವಾಗ ‘ಶಾಂತಿಯನ್ನು ಸ್ಥಾಪಿಸಿ’ ಎಂದು ಮುಖ್ಯಮಂತ್ರಿಯ ಬಳಿ ಆಗ್ರಹಿಸುವ ನೈತಿಕತೆ ಬಿಜೆಪಿಯ ಮುಖಂಡರಿಗೆ ಎಲ್ಲಿದೆ?

ಮುಖ್ಯವಾಗಿ ಸೆಕ್ಷನ್ ಉಲ್ಲಂಘಿಸಿದ ಎಲ್ಲ ಜನಪ್ರತಿನಿಧಿಗಳ ಮೇಲೆ ಮತ್ತು ಪ್ರಭಾಕರ ಭಟ್ಟರ ಮೇಲೆ ಪ್ರಕರಣ ದಾಖಲಿಸಬೇಕಾಗಿದೆ. ಯಾವ ದಾಕ್ಷಿಣ್ಯವೂ ಇಲ್ಲದೆ ಪ್ರಭಾಕರ ಭಟ್ಟರನ್ನು ಬಂಧಿಸಬೇಕಾಗಿದೆ. ‘ಬಂಧಿಸಿದರೆ ಕೋಮುಗಲಭೆ ನಡೆಯುತ್ತದೆ’ ಎನ್ನುವುದು ಕೆಲವು ಅಧಿಕಾರಿಗಳ ಸಮಜಾಯಿಷಿ. ಆದರೆ ಈವರೆಗೆ ಅವರನ್ನು ಬಂಧಿಸದೇ ಕಲ್ಲಡ್ಕ ಮತ್ತು ಬಂಟ್ವಾಳ ಕಂಡ ಶಾಂತಿ ಅಷ್ಟರಲ್ಲೇ ಇದೆ. ಬಿಜೆಪಿಯ ನಾಯಕನೇ ಶರತ್ ಶವ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿರುವುದು ಬಹಿರಂಗವಾಗಿರುವುದರಿಂದ ಕೋಮುಗಲಭೆಗೆ ಅವರು ವ್ಯವಸ್ಥಿತ ಸಂಚು ರೂಪಿಸಿರುವುದು ಬೆಳಕಿಗೆ ಬಂದಂತಾಗಿದೆ.

ಆದುದರಿಂದ ಇತ್ತೀಚಿನ ಉದ್ವಿಗ್ನತೆಯ ಹಿಂದಿರುವ ಎಲ್ಲ ಪ್ರಮುಖ ಸಂಘಪರಿವಾರ ವೇಷದಲ್ಲಿರುವ ಗೂಂಡಾಗಳ ಮೇಲೆ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸುವ ಕೆಲಸ ನಡೆಯಬೇಕು. ಕರಾವಳಿಯಲ್ಲಿ ಈ ಭಟ್ಟರು ಹರಿಸಿದ ವಿಷಭಾಷಣಕ್ಕಾಗಿ ಈ ಹಿಂದೆಯೇ ಇವರನ್ನು ಹೆಡೆಮುರಿ ಕಟ್ಟಿದ್ದರೆ ಇಂದು ಕರಾವಳಿ ನೆಮ್ಮದಿಯಿಂದ ಉಸಿರಾಡುತ್ತಿತ್ತೋ ಏನೋ? ಬಹುಶಃ ಅಂತಹದೊಂದು ನೆಮ್ಮದಿಯಲ್ಲಿ ಕರಾವಳಿಯ ಜನರು ಇರುವುದು ಕಾಂಗ್ರೆಸ್‌ಗೂ ಬೇಕಾಗಿರಲಿಲ್ಲ ಎಂದು ಕಾಣುತ್ತದೆ. ಅದಕ್ಕಾಗಿಯೇ ಪ್ರಭಾಕರ ಭಟ್ಟರು ಮತ್ತು ಅವರ ಪರಿವಾರವನ್ನು ಈ ನಾಲ್ಕು ವರ್ಷಗಳಲ್ಲಿ ಓಡಾಡಲು ಬಿಟ್ಟು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಂಧಿಸುವ ಮಾತನಾಡುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News