ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೇರಳ ನರ್ಸ್‌ಗಳಿಂದ ಜು.17 ರಿಂದ ಅನಿರ್ದಿಷ್ಟಾವಧಿ ಮುಷ್ಕರ

Update: 2017-07-14 05:51 GMT

ತಿರುವನಂತಪುರ, ಜು.14: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸುಮಾರು 80,000 ನರ್ಸ್‌ಗಳು ಜು.17 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕೇರಳದ ಖಾಸಗಿ ಆಸ್ಪತ್ರೆಗಳ ಕಾರ್ಯಚಟುವಟಿಕೆ ಸ್ತಬ್ಧವಾಗುವ ಸಾಧ್ಯತೆಯಿದೆ.

ನರ್ಸ್‌ಗಳು ಮುಷ್ಕರಕ್ಕೆ ಕರೆಕೊಟ್ಟಿರುವ ಕಾರಣ ನಮ್ಮಿಂದ ಕೇವಲ ತುರ್ತು ಸೇವೆಗಳನ್ನು ನೀಡಲು ಮಾತ್ರ ಸಾಧ್ಯ ಎಂದು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

 ಯುನೈಟೆಡ್ ನರ್ಸ್ ಅಸೋಸಿಯೇಶನ್(ಯುಎನ್‌ಎ) ಹಾಗೂ ಭಾರತೀಯ ನರ್ಸ್ ಸಂಸ್ಥೆ ಈಗ ನಡೆಯುತ್ತಿರುವ ಆಂದೋಲನದ ನೇತೃತ್ವವಹಿಸಿದ್ದು, ಜು.17 ರಿಂದ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

 "ಸುಪ್ರೀಂಕೋರ್ಟ್ ನಿಗದಿಪಡಿಸಿರುವ 20,000 ರೂ. ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ನರ್ಸ್‌ಗಳು ಕಳೆದ ಕೆಲವು ದಿನಗಳಲ್ಲಿ ಮುಷ್ಕರದಲ್ಲಿ ನಿರತರಾಗಿದ್ದಾರೆ. ಮುಷ್ಕರದಲ್ಲಿ ಒಟ್ಟು 80,000 ನರ್ಸ್‌ಗಳು ಭಾಗವಹಿಸಲಿದ್ದಾರೆ. ನಾವು ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯುವುದಿಲ್ಲ'' ಎಂದು ಯುಎನ್‌ಎ ಅಧ್ಯಕ್ಷೆ ಜಾಸ್ಮಿನ್ ಶಾ ಹೇಳಿದ್ದಾರೆ.

"ಪದವೀಧರ ನರ್ಸ್‌ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಟ್ರೈನಿಗಳಾಗಿ ತೆಗೆದುಕೊಂಡು ತಿಂಗಳಿಗೆ ಕೇವಲ 6,500 ರೂ. ಸಂಬಳ ನೀಡುತ್ತಿದ್ದಾರೆ. ಎಲ್ಲ ಯೋಗ್ಯ ನರ್ಸ್‌ಗಳಿಗೆ ಕನಿಷ್ಠ 20,000 ರೂ. ಸಂಬಳ ನೀಡಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ. ಈಗ ಘೋಷಿಸಿರುವ 17,200 ರೂ. ಮೂಲ ವೇತನ ನ್ಯಾಯಸಮ್ಮತವಾಗಿಲ್ಲ'' ಎಂದು ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News