ಪರ್ಯಾಯ ಸೇನೆ ಕಟ್ಟ ಹೊರಟಿದ್ದಾರೆಯೇ ಪತಂಜಲಿ ರಾಮ್‌ದೇವ್?

Update: 2017-07-14 18:42 GMT

ಯುಪಿಎ ಸರಕಾರದ ಅವಧಿಯಲ್ಲಿ ಪತಂಜಲಿ ರಾಮ್‌ದೇವ್ ತನ್ನ ತಂಡದ ಜೊತೆಗೆ ಸರಕಾರ ಮತ್ತು ದೇಶದ ವಿರುದ್ಧ ಸಂಚು ನಡೆಸಲು ಹೋಗಿ ವಿಫಲವಾದುದು ಇತಿಹಾಸ. ಧರಣಿ ಸತ್ಯಾಗ್ರಹದ ಹೆಸರಿನಲ್ಲಿ ರಾಮಲೀಲಾ ಮೈದಾನದಲ್ಲಿ ಜನರನ್ನು ಸೇರಿಸಿ ರಾತ್ರೋರಾತ್ರಿ ಭಾರೀ ಅನಾಹುತವೊಂದಕ್ಕೆ ನೀಲಿನಕ್ಷೆಯನ್ನು ರೂಪಿಸಿದ್ದ ಇದೇ ರಾಮ್‌ದೇವ್ ಮತ್ತು ಅವರ ಶಿಷ್ಯರನ್ನು ಪೊಲೀಸರು ಅಟ್ಟಾಡಿಸಿ ಅವರ ಸಂಚನ್ನು ವಿಫಲಗೊಳಿಸಿದ್ದರು.

ರಾಮದೇವ್ ಅವರು ನಿಜಕ್ಕೂ ಒಳ್ಳೆಯ ಉದ್ದೇಶಕ್ಕಾಗಿ ಆ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಿದ್ದರೆ ಹೆಣ್ಣುಮಕ್ಕಳ ಚೂಡಿದಾರ ಧರಿಸಿ ಅಲ್ಲಿಂದ ಪರಾರಿಯಾಗುವ ಅಗತ್ಯವಿದ್ದಿರಲಿಲ್ಲ. ತನ್ನ ಸಂಚು ಬಯಲಾಯಿತು ಎಂದು ಹೆದರಿಯೇ ರಾಮ್‌ದೇವ್ ಅವರು ಅಂದು ಸ್ತ್ರೀ ವೇಷದಲ್ಲಿ ಪಲಾಯನಗೈಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ನಗೆಪಾಟಲಿಗೀಡಾಗಿದ್ದರು. ಈ ಘಟನೆ ನಡೆದು ಹಲವು ವರ್ಷಗಳಾಗಿವೆ. ದೇಶವೂ ಇದನ್ನು ಮರೆತಂತಿದೆ. ಆದರೆ ಈ ಘಟನೆಯನ್ನು ರಾಮ್‌ದೇವ್ ಮರೆತ ಹಾಗೆ ಕಾಣುತ್ತಿಲ್ಲ. ರಾಮ್‌ದೇವ್ ಬಳಗದ ಸಂಚನ್ನು ಪೊಲೀಸ್ ಬಲದ ಮೂಲಕ ವಿಫಲಗೊಳಿಸಿದಾಗ, ಹತಾಶೆಗೊಂಡ ರಾಮ್‌ದೇವ್ ‘ಸರಕಾರದ ವಿರುದ್ಧ ತಾನು ಸೇನೆಯನ್ನು ಕಟ್ಟುತ್ತೇನೆ’ ಎಂದು ಘೋಷಿಸಿದ್ದರು. ‘‘ಸೇನೆಯೊಂದನ್ನು ತರಬೇತುಗೊಳಿಸಿ ರಾಮಲೀಲಾವನ್ನು ರಾವಣಲೀಲಾ ಮಾಡುತ್ತೇನೆ’’ ಎಂದು ಸರಕಾರವನ್ನು ಬೆದರಿಸಿದ್ದರು.

ಅದೊಂದು ಹತಾಶೆಯ ಹೇಳಿಕೆ ಎಂದು ಬೆದರಿಕೆಯನ್ನು ಸರಕಾರ ಮತ್ತು ದೇಶ ಹಗುರವಾಗಿ ತೆಗೆದುಕೊಂಡಿತ್ತು. ಆದರೆ, ಇದೀಗ ರಾಮ್‌ದೇವ್, ಅಂತಹದೊಂದು ಪರ್ಯಾಯ ಸೇನೆಯನ್ನು ದೇಶದ ವಿರುದ್ಧ ಕಟ್ಟುವ ಹುನ್ನಾರವೊಂದಕ್ಕೆ ಇಳಿದಿದ್ದಾರೆಯೇ ಎಂಬ ಅನುಮಾನಪಡುವಂತಹ ವಾತಾವರಣ ಅವರ ಹರಿದ್ವಾರದ ಪತಂಜಲಿ ಸಂಕೀರ್ಣದಲ್ಲಿ ಸೃಷ್ಟಿಯಾಗಿದೆ.

ಬಾಬಾ ರಾಮ್‌ದೇವ್ ಬರೇ ಸನ್ಯಾಸಿಯಾಗಿ ಇಂದು ದೇಶದಲ್ಲಿ ಗುರುತಿಸಲ್ಪಡುತ್ತಿಲ್ಲ. ಅವರು ತನ್ನದೇ ವಾಮ ಮಾರ್ಗದ ಮೂಲಕ ಒಂದು ದೊಡ್ಡ ಉದ್ಯಮ ವಲಯವಾಗಿ ರೂಪುಗೊಳ್ಳುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಆರ್ಥಿಕ ವಹಿವಾಟುಗಳನ್ನು ನಡೆಸುವಷ್ಟು ಪ್ರಬಲರಾಗಿದ್ದಾರೆ. ಒಂದು ಸರಕಾರವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದಾರೆ. ಅವರ ಪತಂಜಲಿ ಉತ್ಪಾದನೆ ಕೋಟಿಗಟ್ಟಳೆ ಆದಾಯ ತರುತ್ತಿದೆ ಎಂದು ಹೇಳಲಾಗುತ್ತದೆಯಾದರೂ, ಅವರ ಹಣದ ಮೂಲ ಕೇವಲ ಪತಂಜಲಿ ಉತ್ಪನ್ನಗಳ ಆದಾಯವಷ್ಟೇ ಅಲ್ಲ. ಯೋಗವನ್ನೂ ದಂಧೆಯಾಗಿಸಿಕೊಂಡಿರುವ ರಾಮ್‌ದೇವ್, ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸರಕಾರದ ಮೂಲಕವೇ ಬೇರೆ ಬೇರೆ ವಲಯಗಳಲ್ಲಿ ತನ್ನ ಮೀಸೆಯನ್ನು ತೂರಿಸಿದ್ದಾರೆ.

ರಕ್ಷಣಾವಲಯದಲ್ಲೂ ಒಪ್ಪಂದ ಮಾಡಿಕೊಳ್ಳುವಷ್ಟು ಅವರ ವರ್ಚಸ್ಸು ಬೆಳೆದಿದೆ. ಇದೀಗ ಪತಂಜಲಿ, ಔಷಧಿ, ಯೋಗ ಇತ್ಯಾದಿಗಳನ್ನೆಲ್ಲ ಬದಿಗಿಟ್ಟು ಅವರು ‘ಪರಾಕ್ರಮ ಸುರಕ್ಷಾ ಪ್ರೈವೆಟ್ ಲಿ.’ ಎನ್ನುವ ಹೆಸರಿನಲ್ಲಿ ಭದ್ರತಾ ಸಂಸ್ಥೆಯನ್ನು ಹುಟ್ಟು ಹಾಕಲು ಹೊರಟಿದ್ದಾರೆ ಅಥವಾ ಹಾಗೆಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ ಸೆಕ್ಯೂರಿಟಿ ಗಾರ್ಡ್ ಗಳೆಂಬ ಉತ್ಪನ್ನಗಳನ್ನು ತಯಾರಿಸುವುದು ಅವರ ಉದ್ದೇಶವಂತೆ. ಈ ಹಿನ್ನೆಲೆಯಲ್ಲಿ ಹರಿದ್ವಾರದ ಪತಂಜಲಿ ಸಂಕೀರ್ಣದಲ್ಲಿ ನಿವೃತ್ತ ಸೇನಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಬಲಾಢ್ಯ ಯುವಕರಿಗೆ ತರಬೇತಿ ಶುರು ಹಚ್ಚಿದ್ದಾರೆ.

ಅತ್ಯಂತ ಅನುಮಾನಾಸ್ಪದ ವ್ಯಕ್ತಿಗಳು ಸಂಕೀರ್ಣದೊಳಗೆ ಪ್ರವೇಶ ಪಡೆಯುತ್ತಿದ್ದು, ಅವರೆಲ್ಲರೂ ಈ ಸೆಕ್ಯೂರಿಟಿ ಏಜೆನ್ಸಿಯ ತರಬೇತಿದಾರರು, ತರಬೇತಿ ಪಡೆಯುವವರು ಎಂದು ಪತಂಜಲಿ ಆಶ್ರಮ ಮಾಧ್ಯಮಗಳ ಮುಂದೆ ಹೇಳುತ್ತಿದೆ. ತನ್ನನ್ನು ತಾನು ಬಾಬಾ, ಯೋಗಪಟು ಎಂದು ಕರೆದುಕೊಳ್ಳುವ ರಾಮ್‌ದೇವ್ ಎನ್ನುವ ಉದ್ಯಮಿಗೂ-ಭದ್ರತಾ ಸಂಸ್ಥೆಗೂ ಏನು ಸಂಬಂಧ? ಸೆಕ್ಯೂರಿಟಿಗಾರ್ಡ್ ಗಳಿಗೆ ತರಬೇತಿ ನೀಡಿ, ಅವರನ್ನು ವಿವಿಧ ಸಂಸ್ಥೆಗಳಿಗೆ ಒದಗಿಸುವ ಕೆಲಸಕ್ಕೆ ಹೊರಟಿದ್ದಾರೆಯೋ ಅಥವಾ ಆ ಮೂಲಕ ಪರ್ಯಾಯ ಸೇನೆ ಕಟ್ಟಿ ತನ್ನ ಸಾಮ್ರಾಜ್ಯದ ರಕ್ಷಣೆಗೆ ಅವರನ್ನು ನಿಲ್ಲಿಸಲಿದ್ದಾರೋ? ರಾಮ್‌ದೇವ್ ಆಶ್ರಮದಲ್ಲಿ ನಡೆಯುತ್ತಿರುವ ಶಸ್ತ್ರಾಸ್ತ್ರ ತರಬೇತಿ ಈ ಕಾರಣಕ್ಕಾಗಿ ಗಂಭೀರ ತನಿಖೆಗೆ ಒಳಪಡಬೇಕಾಗಿದೆ.

ಇಂದು ಈ ದೇಶದ ಬಾಬಾಗಳು, ಸ್ವಾಮೀಜಿಗಳ ಆಶ್ರಮಗಳು ಅತ್ಯಂತ ಅನುಮಾನಾಸ್ಪದ ಪ್ರದೇಶಗಳಾಗಿವೆ. ಅಸಾರಾಂ ಬಾಪು ಎನ್ನುವ ಸ್ವಾಮೀಜಿಯ ಆಶ್ರಮದೊಳಗೆ ನಡೆದಿರುವ ಅತ್ಯಾಚಾರ, ಕೊಲೆಗಳನ್ನು ಪ್ರಶ್ನಿಸುವುದೇ ಅಸಾಧ್ಯ ಎನ್ನುವಂತಹ ಸನ್ನಿವೇಶವನ್ನು ಆ ಸ್ವಾಮೀಜಿಯ ಗೂಂಡಾಗಳು ಸೃಷ್ಟಿಸಿದ್ದರು. ಹಾಗೆಯೇ, ಹರ್ಯಾಣದಲ್ಲಿ ಸಂತ ರಾಮ್‌ಪಾಲ್‌ನನ್ನು ಬಂಧಿಸುವ ಸಂದರ್ಭದಲ್ಲಿ ನಮ್ಮ ಸೇನೆ ಅಪಾರ ನಾಶನಷ್ಟವನ್ನು ಎದುರಿಸಿತ್ತು. ಉತ್ತರ ಪ್ರದೇಶದ ಮಥುರಾದಲ್ಲಿ ರಾಮ್ ರಕ್ಷ್ ಯಾದವ್ ಬಣ ಪರ್ಯಾಯ ಸರಕಾರವನ್ನೇ ನಡೆಸುತ್ತಿತ್ತು. ಇದನ್ನು ಅಂತಿಮವಾಗಿ ಭಾರೀ ಪೊಲೀಸ್ ಪಡೆಗಳ ಮೂಲಕ ಬಗ್ಗು ಬಡಿಯಲಾಯಿತು.

ಈ ಸಂದರ್ಭದಲ್ಲಿ ಒಂದು ಸಣ್ಣ ಯುದ್ಧವೇ ನಡೆದಿತ್ತು. ನಮ್ಮ ಭದ್ರತಾ ಪಡೆಗಳಿಗೂ ಅಪಾರ ಹಾನಿಯಾಗಿದ್ದವು. ಬಾಬಾ ರಾಮ್‌ದೇವ್ ಒಬ್ಬ ಸನ್ಯಾಸಿಯೋ, ಅಥವಾ ವೈದ್ಯನೋ ಅಥವಾ ಒಬ್ಬ ಉದ್ಯಮಿಯೋ ಆಗಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಅವರಿಗೆ ತನ್ನದೇ ಆದ ರಾಜಕೀಯ ಅಜೆಂಡಾಗಳಿವೆ. ಇದನ್ನು ಈ ಹಿಂದೆ ಯುಪಿಎ ಸರಕಾರವಿದ್ದಾಗಲೇ ಬಹಿರಂಗಪಡಿಸಿದ್ದಾರೆ ಮತ್ತು ಇನ್ನೊಮ್ಮೆ ಪ್ರಜಾಸತ್ತಾತ್ಮಕ ಸರಕಾರದ ವಿರುದ್ಧ ದಂಗೆಯೇಳುವ ಉದ್ದೇಶದಿಂದಲೇ ತನ್ನ ಆಶ್ರಮದಲ್ಲಿ ತರಬೇತಿ ಶಿಬಿರ ಆರಂಭಿಸಿದ್ದಾರೆ ಎಂದು ದೇಶ ಯಾಕೆ ಭಾವಿಸಬಾರದು? ಈ ಹಿಂದೆ, ಶ್ರೀ ರವಿಶಂಕರ್ ಅವರ ಶಿಬಿರದಲ್ಲಿ, ಮಾಲೆಗಾಂವ್ ಸ್ಫೋಟ ಆರೋಪಿ ಕರ್ನಲ್ ಪುರೋಹಿತ್ ತರಬೇತಿ ನೀಡಿದ್ದ ಎನ್ನುವುದು ಬಹಿರಂಗವಾಗಿರುವಾಗ, ರಾಮ್‌ದೇವ್‌ರಂತಹ ನಕಲಿ ಬಾಬಾ, ಭದ್ರತಾ ಸಂಸ್ಥೆ ಸ್ಥಾಪಿಸುವ ಹೆಸರಿನಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದ್ದಾರೆ ಎಂದೇ ನಾವು ಭಾವಿಸಬೇಕಾಗುತ್ತದೆ.

ಇಂದು ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆಗಳ ಹಿಂದೆ, ಇಂತಹ ಪರ್ಯಾಯ ಅನೈತಿಕ ಪೊಲೀಸರ ಪಾತ್ರ ಬಹುದೊಡ್ಡದಿದೆ. ಗೋರಕ್ಷಕರು ಎಂಬ ಹೆಸರಿನಲ್ಲಿ ದೇಶಾದ್ಯಂತ ಪರ್ಯಾಯ ಪೊಲೀಸ್‌ಗಿರಿಯ ಹಿಂಸಾಚಾರ ಹೆಚ್ಚುತ್ತಿವೆ. ಈ ರಕ್ಷಕರ ಹಿನ್ನೆಲೆಯನ್ನೊಮ್ಮೆ ನೋಡಿದರೆ, ಒಂದು ಕ್ರಿಮಿನಲ್ ಚರಿತ್ರೆಯೇ ತೆರೆದುಕೊಳ್ಳುತ್ತದೆ. ದೇಶದ ಸೆಕ್ಯೂರಿಟಿ ಏಜೆನ್ಸಿಗಳ ಬಹುತೇಕ ಹಿಡಿತ ಕ್ರಿಮಿನಲ್‌ಗಳ ಕೈಯಲ್ಲಿದೆ. ಕರಾವಳಿಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಮೊದಲು ತಮ್ಮ ಕ್ರಿಮಿನಲ್‌ಗಳ ಮೂಲಕ ಸಮಾಜದ ಭದ್ರತೆಯನ್ನು ಇವರು ಕೆಡಿಸುತ್ತಾರೆ. ಜನರಲ್ಲಿ ಅಭದ್ರತೆಯನ್ನು ಬಿತ್ತುತ್ತಾರೆ. ‘ನಮ್ಮ ಕ್ರಿಮಿನಲ್‌ಗಳಿಂದ ನಿಮ್ಮ ಉದ್ದಿಮೆಗೆ ತೊಂದರೆ ಬಾರದೇ ಇರಬೇಕಾದರೆ ಇಷ್ಟು ಪಾವತಿ ಮಾಡಿ’ ಎಂದು ಹಪ್ತಾ ವಸೂಲಿಗೆ ಇಳಿಯುತ್ತಾರೆ.

ಸೆಕ್ಯೂರಿಟಿಯ ಏಜೆನ್ಸಿಯ ಹೆಸರಿನಲ್ಲಿ ಕರಾವಳಿಯನ್ನು ಹೇಗೆ ಕ್ರಿಮಿನಲ್‌ಗಳು ಪರೋಕ್ಷವಾಗಿ ಆಳುತ್ತಿದ್ದಾರೆ ಎನ್ನುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಇದೀಗ ಆ ದಂಧೆಗೆ ರಾಮ್‌ದೇವ್ ನೇರವಾಗಿ ಇಳಿದಿದ್ದಾರೆ. ಈವರೆಗೆ ಆರೋಗ್ಯ, ಅಧ್ಯಾತ್ಮವನ್ನು ದಂಧೆ ಯಾಗಿಸಿ ಹಣ ದೋಚುತ್ತಿದ್ದ ರಾಮ್‌ದೇವ್ ಅಧಿಕೃತವಾಗಿ ಗೂಂಡಾಗಳನ್ನು ಸಾಕಿ, ಅವರಿಗೆ ತರಬೇತಿ ಕೊಟ್ಟು ನೇರವಾಗಿ ದೇಶದ ಪ್ರಜಾಸತ್ತೆಗೆ ಸವಾಲು ಹಾಕಲು ಹೊರಟಿದ್ದಾರೆ. ಪರಿಸ್ಥಿತಿ ಕೈ ಮೀರುವ ಮೊದಲು ದೇಶದ ಕಾನೂನು ಸುವ್ಯವಸ್ಥೆ ಎಚ್ಚರಗೊಳ್ಳಬೇಕಾಗಿದೆ. ರಾಮ್‌ದೇವ್ ಆಶ್ರಮದಲ್ಲಿ ನಡೆಯುತ್ತಿರುವ ತರಬೇತಿ ಈ ಕಾರಣಕ್ಕಾಗಿ ಗಂಭೀರ ತನಿಖೆಗೆ ಒಳಪಡಬೇಕಾಗಿದೆ. ಇಲ್ಲವಾದರೆ, ದೇಶದ ಜನತೆ ತಮ್ಮ ವೌನಕ್ಕಾಗಿ ಮುಂದೊಂದು ದಿನ ಭಾರೀ ಬೆಲೆ ತೆರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News