ವಿಮಾ ಪಾಲಿಸಿ ಖರೀದಿಯ ನಂತರದ ನಿಮ್ಮ ಹಕ್ಕುಗಳ ಬಗ್ಗೆ ಗೊತ್ತೇ?
ಇಂದಿನ ಧಾವಂತದ ದಿನಗಳಲ್ಲಿ ತಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ಜೀವವಿಮೆ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಹೆಚ್ಚಿನವರು ವಿಮಾ ಪಾಲಿಸಿ ಖರೀದಿಸಿದ ನಂತರ ಅದನ್ನು ಭದ್ರವಾಗಿಟ್ಟು ಕಾಲಕಾಲಕ್ಕೆ ವಿಮಾಕಂತುಗಳನ್ನು ತುಂಬುತ್ತಿರುತ್ತಾರೆಯೇ ಹೊರತು ಕಂಪನಿಯಿಂದ ತಾವು ಪಡೆದುಕೊಳ್ಳಬಹುದಾದ ಸೇವೆಯ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇಲ್ಲಿವೆ ಅಂತಹ ಕೆಲವು ಹಕ್ಕುಗಳು......
ವಿಮಾ ಪಾಲಿಸಿಯನ್ನು ನೀವು ಸ್ವೀಕರಿಸಿದ ಬಳಿಕ ಅದರಿಂದ ದೊರೆಯುವ ಲಾಭಗಳ ಬಗ್ಗೆ ಚಿಂತನೆ ನಡೆಸುವ ಮತ್ತು ಖರೀದಿ ನಿರ್ಧಾರವನ್ನು ಪುನರ್‌ಪರಿಶೀಲಿಸುವ ಹಕ್ಕು ನಿಮಗಿದೆ. ನೀವು ಖರೀದಿಸಿರುವ ಯೋಜನೆಯು ಲಾಭಕರವಲ್ಲ ಎಂದು ನಿಮಗೆ ಕಂಡುಬಂದರೆ 15 ದಿನಗಳೊಳಗೆ ನೀವದನ್ನು ಕಂಪನಿಗೆ ವಾಪಸ್ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಮಾರ್ಟಿಲಿಟಿ ಮತ್ತು ಸ್ಟಾಂಪ್ ಶುಲ್ಕ ಕಡಿತಕ್ಕೊಳಪಟ್ಟು ನೀವು ಪಾವತಿಸಿದ ಪ್ರೀಮಿಯಂ ಮೊತ್ತವನ್ನು ವಾಪಸ್ ಪಡೆಯುವ ಹಕ್ಕು ನಿಮಗಿದೆ.
ಯುನಿಟ್ ಲಿಂಕ್ಡ್ ವಿಮಾ ಯೋಜನೆಯಾದರೆ ಕಂಪನಿಯು ಮೇಲಿನ ಶುಲ್ಕಗಳನ್ನು ಕಡಿತಗೊಳಿಸಿದ ಬಳಿಕ ಪಾಲಿಸಿಯನ್ನು ರದ್ದುಗೊಳಿಸುವ ದಿನದ ಯುನಿಟ್ ವೌಲ್ಯವನ್ನು ಲೆಕ್ಕ ಹಾಕಿ ಯುನಿಟ್‌ಗಳ ಮೊತ್ತವನ್ನು ಮರಳಿಸುತ್ತದೆ.
ಪಾಲಿಸಿದಾರರು ತಾವು ಖರೀದಿಸಲು ಬಯಸಿರುವ ಪಾಲಿಸಿಯಲ್ಲಿನ ಹೂಡಿಕೆ ನೀತಿಗಳನ್ನು ತಿಳಿದುಕೊಳ್ಳುವ ಹಕ್ಕನ್ನೂ ಹೊಂದಿದ್ದಾರೆ.
ಯುಲಿಪ್ ಯೋಜನೆಯು ಶೇರು ಮಾರುಕಟ್ಟೆಯೊಂದಿಗೆ ತಳುಕು ಹಾಕಿಕೊಂಡಿರು ವುದರಿಂದ ನೀವು ನಿವ್ವಳ ಆಸ್ತಿ ವೌಲ್ಯ(ಎನ್‌ಎವಿ)ದ ಇತ್ತೀಚಿನ ಮಾಹಿತಿಗಳನ್ನು ಮತ್ತು ವಾರ್ಷಿಕ ಅಕೌಂಟ್ ಸ್ಟೇಟ್‌ಮೆಂಟ್ ಪಡೆದುಕೊಳ್ಳಬಹುದು. ಒಂದು ಫಂಡ್‌ನಿಂದ ಇನ್ನೊಂದು ಫಂಡ್‌ಗೆ ವರ್ಗಾವಣೆಗೊಳ್ಳುವ ಹಕ್ಕೂ ನಿಮಗಿದೆ.
ನೀವು ಆಯ್ದುಕೊಂಡ ಜೀವವಿಮೆ ಯೋಜನೆ ಅಥವಾ ಕಂಪನಿಯ ಸೇವೆಗಳು ನಿಮಗೆ ತೃಪ್ತಿ ನೀಡದಿದ್ದರೆ ನೀವು ಕಂಪನಿಯ ನೋಡಲ್ ಅಧಿಕಾರಿಯ ಬಳಿ ದೂರು ದಾಖಲಿಸಬಹುದು. ಕಂಪನಿಯ ಉತ್ತರವು ತೃಪ್ತಿಕರವಿಲ್ಲದಿದ್ದಲ್ಲಿ ಗ್ರಾಹಕರ ನ್ಯಾಯಾಲಯ ಅಥವಾ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.
ಪಾಲಿಸಿಯು ಊರ್ಜಿತದಲ್ಲಿದ್ದಾಗ ಪಾಲಿಸಿದಾರ ನಿಧನನಾದರೆ ವಾರಸುದಾರರು ವಿಮಾ ಮೊತ್ತಕ್ಕೆ ಕೋರಿಕೆ ಸಲ್ಲಿಸಿದ 15 ದಿನಗಳಲ್ಲಿ ಕಂಪನಿಯು ಅಗತ್ಯ ದಾಖಲೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಅಗತ್ಯವಿದ್ದರೆ ಅದನ್ನು ಕಂಪನಿಯು 180 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ.
ಯಾವುದೇ ಹೆಚ್ಚಿನ ತನಿಖೆ ಅಗತ್ಯವಿಲ್ಲದಿದ್ದರೆ ಕಂಪನಿಯು ವಾರಸುದಾರರಿಂದ ಎಲ್ಲ ಅಗತ್ಯ ದಾಖಲೆಗಳನ್ನು ಪಡೆದುಕೊಂಡ 30 ದಿನಗಳಲ್ಲಿ ವಿಮಾಹಣವನ್ನು ಪಾವತಿಸ ಬೇಕಾಗುತ್ತದೆ.
ವಿಮಾದಾರ ಬದುಕಿದ್ದು ಪಾಲಿಸಿಯು ಪಕ್ವಗೊಂಡಿದ್ದರೆ ಕಂಪನಿಯು ಪಕ್ವತಾ ದಿನಾಂಕಕ್ಕೆ ಕನಿಷ್ಠ ಎರಡು ತಿಂಗಳ ಮೊದಲು ಪಾಲಿಸಿ ಹಣವನ್ನು ಆತನಿಗೆ ಯಾವಾಗ ಪಾವತಿಸಲಾ ಗುತ್ತದೆ ಎನ್ನುವುದನ್ನು ಪತ್ರಮುಖೇನ ತಿಳಿಸಬೇಕಾಗುತ್ತದೆ.
ಪಾಲಿಸಿದಾರನಿಂದ ಅಗತ್ಯ ದಾಖಲೆಗಳನ್ನು ಸ್ವೀಕರಿಸಿದ 30 ದಿನಗಳಲ್ಲಿ ಪಾಲಿಸಿಯ ಹಣವನ್ನು ಆತನಿಗೆ ಪಾವತಿಸುವುದು ಕಡ್ಡಾಯವಾಗಿದೆ.