ಅವಿರೋಧವಾಗಿ ಆಯ್ಕೆಯಾದ ಭಾರತದ ಏಕೈಕ ರಾಷ್ಟ್ರಪತಿ ಯಾರು ಗೊತ್ತೇ ?
ಹೊಸದಿಲ್ಲಿ, ಜು. 17 : ದೇಶಕ್ಕೆ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವುದಕ್ಕಾಗಿ ಸೋಮವಾರ ಮತದಾನ ನಡೆದಿದೆ. ಎನ್ ಡಿ ಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರು ವಿಪಕ್ಷ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ದೊಡ್ಡ ಅಂತರದಲ್ಲಿ ಈ ಚುನಾವಣೆ ಜಯಿಸುವುದು ಬಹುತೇಕ ಖಚಿತ.
ಒಟ್ಟು 10,98,903 ಮತಗಳ ಪೈಕಿ ಕೋವಿಂದ್ ಅವರು 63% ಮತ ಪಡೆಯುವುದು ಖಚಿತ. ಅದರ ಜೊತೆ ಜೆಡಿಯು ಹಾಗು ಬಿಜೆಡಿ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿವೆ. ಜುಲೈ 20 ರಂದು ಈ ಮತದಾನದ ಫಲಿತಾಂಶ ಪ್ರಕಟವಾಗಲಿದೆ.
ಆದರೆ ಈವರೆಗಿನ 13 ರಾಷ್ಟ್ರಪತಿಗಳ ಪೈಕಿ ಚುನಾವಣೆ ಎದುರಿಸದೆ ಅವಿರೋಧವಾಗಿ ಆಯ್ಕೆಯಾಗಿರುವ ಏಕೈಕ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರು.
1977 ರಲ್ಲಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಹಠಾತ್ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆ ಆದಾಗ ಒಟ್ಟು 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ಈ ಪೈಕಿ ಸಂಜೀವ ರೆಡ್ಡಿ ಯವರನ್ನು ಬಿಟ್ಟು ಉಳಿದ 36 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿತು. ನೀಲಂ ಸಂಜೀವ ರೆಡ್ಡಿಯವರು ದೇಶದ ಆರನೇ ರಾಷ್ಟ್ರಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು.