ಜೈಲುಗಳೊಳಗಿರುವ ವಿ-ರೂಪ

Update: 2017-07-17 18:38 GMT

ಈ ದೇಶದಲ್ಲಿ ಎರಡು ಜೈಲುಗಳಿವೆ. ಒಂದು ಶ್ರೀಸಾಮಾನ್ಯರಿಗೆ. ಇನ್ನೊಂದು ವಿಐಪಿಗಳಿಗೆ. ಒಬ್ಬ ಪಿಕ್‌ಪಾಕೆಟ್‌ನಂತಹ ಸಣ್ಣ ಅಪರಾಧ ಮಾಡಿದವನು ಜೈಲಿನಲ್ಲಿ ನೆಲದಲ್ಲಿ ಸೊಳ್ಳೆ ಕಚ್ಚಿಸಿಕೊಂಡು ಮಲಗುತ್ತಾನೆ. ಇದೇ ಸಂದರ್ಭದಲ್ಲಿ ದೇಶಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ ವ್ಯಕ್ತಿ ಅದೇ ಜೈಲಿನೊಳಗೆ ಐಶಾರಾಮವಾಗಿ ಬದುಕುತ್ತಾನೆ. ಅವನ ಪಾಲಿಗೆ ಜೈಲು ಐಶಾರಾಮಿ ಹೊಟೇಲು ಇದ್ದಂತೆ. ಅಂದರೆ, ಅಪರಾಧ ಮಾಡುವುದಾದರೆ ದೊಡ್ಡ ರೀತಿಯಲ್ಲಿ ಮಾಡಿ ಎನ್ನುವುದನ್ನು ನಮ್ಮ ಜೈಲುಗಳಲ್ಲಿ ಅಪರಾಧಿಗಳು ಕಲಿಯುವ ಮೊದಲ ಪಾಠವಾಗಿದೆ.

ಇದು ಕೇವಲ ಕರ್ನಾಟಕದ ಜೈಲಿಗೆ ಸಂಬಂಧಿಸಿದ್ದಲ್ಲ, ಇಡೀ ದೇಶದ ಜೈಲುಗಳ ಕತೆಯಿದು. ಅಪರಾಧಿಗಳನ್ನು ನೋಡುತ್ತಾ ನೋಡುತ್ತಾ ಅವರ ಸಹವಾಸ ದಲ್ಲಿ ಸ್ವತಃ ಜೈಲು ಸಿಬ್ಬಂದಿಯೇ ಅಪರಾಧಿಗಳಾಗಿ ಹೇಗೆ ಮಾರ್ಪಡುತ್ತಾರೆ ಎನ್ನುವುದಕ್ಕೆ ನಮ್ಮ ಜೈಲುಗಳು ಅತ್ಯುತ್ತಮ ಉದಾಹರಣೆ.

ಈ ಜೈಲುಗಳನ್ನು ಸುಧಾರಣೆ ಮಾಡುವ ಅಂದರೆ, ಜೈಲುಗಳೊಳಗಿರುವ ಭ್ರಷ್ಟಾಚಾರಗಳನ್ನು, ಅವ್ಯವಹಾರಗಳನ್ನು ಸರಿಪಡಿಸುವ ಗೋಜಿಗೆ ಯಾವ ಪಕ್ಷಗಳೂ ಈವರೆಗೆ ಮುಂದಾಗಿಲ್ಲ. ಯಾಕೆಂದರೆ, ಈ ಜೈಲುಗಳು ಹೀಗೆ ಭ್ರಷ್ಟವಾಗಿದ್ದರೆ ಮಾತ್ರ ರಾಜಕಾರಣಿಗಳಿಗೂ ಅವರ ಅನುಯಾಯಿಗಳಿಗೂ ಕ್ಷೇಮ. ರಾಜಕಾರಣಿಗಳು ಸದಾ ಜೈಲಿನ ನೆರಳಲ್ಲಿ ಬದುಕುತ್ತಿರುವವರಾಗಿರುವುದರಿಂದ ಜೈಲು ಭ್ರಷ್ಟವಾಗಿದ್ದಷ್ಟೂ ಅವರಿಗೆ ಹೆಚ್ಚು ಲಾಭ. ಒಂದೊಮ್ಮೆ ಈ ಜೈಲನ್ನು ಭ್ರಷ್ಟಾಚಾರದಿಂದ, ಅವ್ಯವಹಾರ ದಿಂದ ಮುಕ್ತಗೊಳಿಸಿ ಅಪರಾಧಿಗಳನ್ನು ಶಿಕ್ಷಿಸಲು ಅಧಿಕಾರಿಗಳಿಗೆ ಪೂರ್ಣ ಅವಕಾಶ ನೀಡಿದರೆ ಅದರ ಮೊದಲ ಬಲಿ ರಾಜಕಾರಣಿಯೇ ಆಗಿರುತ್ತಾನೆ. ಆದುದರಿಂದ, ಜೈಲುಗಳಲ್ಲಿರುವ ಭ್ರಷ್ಟಾಚಾರವೆನ್ನುವುದು ನಮ್ಮ ಜನ ನಾಯಕರೇ ಪೋಷಿಸಿ ಬೆಳೆಸಿರುವಂಥದ್ದು.

ಪರಪ್ಪನ ಅಗ್ರಹಾರ ಜೈಲಿನ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆ ಬೀದಿ ಘರ್ಷಣೆ ನಡೆಯುತ್ತಿದ್ದು, ಇಡೀ ರಾಜ್ಯ ಅದನ್ನು ದಿಗ್ಮೂಢವಾಗಿ ನೋಡುತ್ತಿದೆ. ಕಾರಾಗೃಹಕ್ಕೆ ಸಂಬಂಧಪಟ್ಟ ಡಿಜಿಪಿ ಸತ್ಯನಾರಾಯಣ ರಾವ್ ಮತ್ತು ಡಿಐಜಿ ಡಿ. ರೂಪಾ ನಡುವಿನ ಘರ್ಷಣೆ ಕೇವಲ ಅವರಿಬ್ಬರಿಗೆ ಸೀಮಿತವಾಗಿ ಉಳಿಯದೇ, ಅದು ಬೇರೆ ಬೇರೆ ರಾಜಕೀಯ ರೂಪಗಳನ್ನು ಪಡೆಯುತ್ತಿದೆ.

ಎಷ್ಟರಮಟ್ಟಿಗೆ ಎಂದರೆ ಇಡೀ ಜೈಲನ್ನು ಈ ಇಬ್ಬರು ಅಧಿಕಾರಿಗಳು ಎರಡು ಬಣವಾಗಿಸಿ, ಪರಸ್ಪರ ಕಾದಾಡಲು ಹಚ್ಚಿದ್ದಾರೆ. ಕೈದಿಗಳನ್ನು ಉತ್ತಮ ದಾರಿಗೆ ಕೊಂಡೊಯ್ಯುವ ಪೊಲೀಸ್ ಅಧಿಕಾರಿಗಳೇ ತಪ್ಪು ದಾರಿಯಲ್ಲಿ ಹೆಜ್ಜೆಯಿಟ್ಟರೆ ಏನಾಗಬಹುದು ಎನ್ನುವುದಕ್ಕೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಎರಡು ಗುಂಪುಗಳಾಗಿ ಹೊಡೆದಾಡಿಕೊಂಡಿರುವುದೇ ಉದಾಹರಣೆ. ಡಿಐಜಿ ರೂಪಾ ಅವರು ಜೈಲಿನಲ್ಲಿ ಭಾರೀ ಭ್ರಷ್ಟಾಚಾರವಿದೆ ಎಂದು ಆರೋಪಿಸಿ, ವರದಿಯೊಂದನ್ನು ನೀಡಿದ್ದಾರೆ. ತೆಲಗಿಯೂ ಸೇರಿದಂತೆ ವಿಐಪಿ ಕೈದಿಗಳು ಐಶಾರಾಮವಾಗಿ ಜೈಲಿನಲ್ಲಿ ಕಳೆಯುತ್ತಿದ್ದಾರೆ ಎನ್ನುವುದು ಅವರ ಆರೋಪದಲ್ಲಿ ಪ್ರಮುಖವಾದುದು. ಅಷ್ಟೇ ಅಲ್ಲ, ಶಶಿಕಲಾ ಅವರಿಗೂ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ, ಇದಕ್ಕಾಗಿ ಡಿಜಿಪಿಗೆ ಎರಡು ಕೋಟಿ ರೂ. ಲಂಚ ನೀಡಲಾಗಿದೆ ಎಂದು ಅವರು ದೂರಿದ್ದಾರೆ. ಹಾಗೆಯೇ ಜೈಲಿನೊಳಗೆ ಗಾಂಜಾ ಅವ್ಯಾಹತವಾಗಿ ಸರಬರಾಜು ಆಗುತ್ತಿದೆ. ಹೀಗೆ ಮುಂದುವರಿದಿದೆ ಆರೋಪ. ಮುಖ್ಯವಾಗಿ ಇವರು ಮಾಡಿರುವ ಆರೋಪಗಳಲ್ಲಿ ಕೆಲವಂತೂ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಮಂಗಳೂರಿನಂತಹ ಪುಟ್ಟ ಜೈಲಿನ ಸ್ಥಿತಿಯನ್ನೇ ನೋಡಿ. ಇಲ್ಲಿ, ಕೈದಿಗಳು ಕೈಯಲ್ಲಿ ಮಾರಾಕಾಯುಧಗಳಿಂದ ಇನ್ನೊಬ್ಬ ಸಹ ಕೈದಿಯನ್ನು ಬರ್ಬರವಾಗಿ ಕೊಚ್ಚಿ ಕೊಂದು ಹಾಕುತ್ತಾರೆ. ಕೊಲೆಯತ್ನಕ್ಕಾಗಿ ಜೈಲಿಗೆ ಬಂದವರು ಕೊಲೆಗಾರರಾಗಿ ಈ ಜೈಲಿನಲ್ಲೇ ಭಡ್ತಿ ಪಡೆದುಕೊಳ್ಳುತ್ತಾರೆ. ಇದು ಹೇಗೆ ಸಂಭವಿಸುತ್ತದೆ ಎನ್ನುವುದಕ್ಕೆ ಅಧಿಕಾರಿಗಳಲ್ಲಿ ಈವರೆಗೆ ಸ್ಪಷ್ಟ ಉತ್ತರವಿಲ್ಲ. ಇನ್ನು ಪರಪ್ಪನ ಅಗ್ರಹಾರವಂತೂ ಕುಖ್ಯಾತವಾದುದು. ರಾಜಕೀಯ ಕೈದಿಗಳೂ ಇಲ್ಲಿದ್ದಾರೆ. ತೆಲಗಿಯಂತಹ ಕುಖ್ಯಾತ ಅಪರಾಧಿ ಜೈಲಿನಲ್ಲಿ ಐಶಾರಾಮಿಯಾಗಿ ಬದುಕುತ್ತಿರುವುದು ರೂಪಾ ಸಂಶೋಧನೆ ಮಾಡಿದ ಹೊಸ ವಿಷಯವೂ ಅಲ್ಲ.

ಇಷ್ಟಕ್ಕೂ, ಇಷ್ಟೆಲ್ಲ ವರದಿ ಮಾಡಿರುವ ರೂಪಾ ಕೂಡ ಕಾರಾಗೃಹ ವಿಭಾಗಕ್ಕೆ ಸಂಬಂಧಿಸಿದವರಾದ ಕಾರಣ, ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದೇ ಅರ್ಥವಲ್ಲವೇ? ತೆಲಗಿ ಈ ಜೈಲಲ್ಲಿರುವುದು ಇಂದು ನಿನ್ನೆಯಲ್ಲ. ಅವನು ಜೈಲು ಸೇರಿ ದಶಕವೇ ಕಳೆದಿದೆ ಮತ್ತು ಆರಂಭದಿಂದಲೂ ಅವನು ಐಶಾರಾಮಿಯಾಗಿಯೇ ಬದುಕುತ್ತಿದ್ದಾನೆ ಎಂಬ ಆರೋಪವಿದೆ. ಇಷ್ಟು ಸಮಯ ಇವುಗಳಿಗೆಲ್ಲ ಅವಕಾಶ ಕೊಟ್ಟು ಇದೀಗ ಏಕಾಏಕಿ, ರೂಪಾ ವರದಿಯ ಹೆಸರಲ್ಲಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ತುಸು ಅನುಮಾನಕ್ಕೆ ಕಾರಣವಾಗಿದೆ.

ಕಾರಣ ಏನೇ ಇರಲಿ, ರೂಪಾ ಅವರು ಬಹಿರಂಗ ಪಡಿಸಿದ ವಿಷಯ ಗಂಭೀರವಾದುದು. ಕನಿಷ್ಠ ಇನ್ನಾದರೂ ಜೈಲಿನೊಳಗೆ ಕೈದಿಗಳನ್ನು ಕೈದಿಗಳಂತೆಯೇ ಉಪಚಾರ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಇದರಿಂದ ಸಾಧ್ಯವಾಗುವುದಾದರೆ ನಾಡಿಗೆ ಸಾಕಷ್ಟು ಒಳಿತುಗಳಿವೆ. ಆದರೆ ಇದೇ ಸಂದರ್ಭದಲ್ಲಿ ರೂಪಾ ಅವರು ಕಾನೂನು, ಗೌಪ್ಯತೆಗೆ ಸಂಬಂಧ ಪಟ್ಟಂತೆ ಕೆಲವು ಸೂಕ್ಷ್ಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.

ಮುಖ್ಯವಾಗಿ ಜೈಲುಗಳಲ್ಲಿರುವ ಏಡ್ಸ್ ರೋಗಿಗಳ ಹೆಸರನ್ನು ಅವರು ಬಹಿರಂಗ ಪಡಿಸಿದ್ದಾರೆ. ಇದು ಜೈಲು ಕಾನೂನಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ಮನುಷ್ಯನ ಖಾಸಗಿ ಘನತೆಗೆ ಸಂಬಂಧಪಟ್ಟದ್ದೂ ಹೌದು. ಇಷ್ಟಕ್ಕೂ ಏಡ್ಸ್ ರೋಗವೆನ್ನುವುದು ಅಪರಾಧದ ಭಾಗವಲ್ಲ. ರೂಪಾ ಈ ವಿಷಯದಲ್ಲಿ ತುಂಬಾ ಅಸೂಕ್ಷ್ಮವಾಗಿ ನಡೆದುಕೊಂಡಿದ್ದಾರೆ. ಮುಖ್ಯವಾಗಿ ರೂಪಾ ಈ ವರದಿಯನ್ನು ತನಗೆ ಮೂರು ಮೆಮೋ ಸಿಕ್ಕಿದ ಬಳಿಕವಷ್ಟೇ ಯಾಕೆ ಬಹಿರಂಗಪಡಿಸಿದರು ಎನ್ನುವುದು ಇನ್ನೊಂದು ಪ್ರಶ್ನೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಭರದಲ್ಲಿ ಅವರು ಜೈಲಿನೊಳಗಿರುವ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ ಇಲ್ಲಿವರೆಗೆ ಅವರೂ ಈ ಭ್ರಷ್ಟಾಚಾರದ ಒಂದು ಭಾಗವಾಗಿದ್ದರು ಎನ್ನುವುದನ್ನು ಗಮನಿಸಬೇಕಾಗಿದೆ ಮತ್ತು ಎಲ್ಲ ಆರೋಪಗಳಿಗೆ ಸ್ವತಃ ರೂಪಾ ಸ್ಪಷ್ಟೀಕರಣವನ್ನು ನೀಡಬೇಕಾಗುತ್ತದೆ.

ಈ ಹಿಂದೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿ ತನ್ನ ಕರ್ತವ್ಯದ ವ್ಯಾಪ್ತಿಯಿಂದ ಹೊರಗೆ ಕಾಲಿಟ್ಟು ರಾಜಕೀಯ ಮಾಡಲು ಹೋಗಿ, ಕೆಲಸ ಕಳೆದುಕೊಂಡ ಉದಾಹರಣೆ ನಮ್ಮ ಮುಂದಿದೆ. ರೂಪಾ ಅದೇ ಹಾದಿಯಲ್ಲಿ ನಡೆದಿದ್ದಾರೆಯೋ ಎಂಬ ಅನುಮಾನ ಕಾಡುತ್ತದೆ. ಸರಕಾರಕ್ಕೆ ದೂರು ನೀಡಿಯೂ ಪ್ರಯೋಜನವಾಗಲಿಲ್ಲ ಎಂದಾದರೆ ಅದನ್ನು ಬಳಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡಬಹುದಿತ್ತು. ಆದರೆ ದೂರು ನೀಡುವುದರ ಜೊತೆಗೇ ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ದು, ಅವರ ಇತರ ಅಜೆಂಡಾಗಳನ್ನು ಅದು ಬಹಿರಂಗಗೊಳಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಜೈಲಿನಲ್ಲಿ ಈ ಇಬ್ಬರು ಅಧಿಕಾರಿಗಳ ಕಾರಣದಿಂದ ಕೈದಿಗಳು ಕಚ್ಚಾಟ ಆಡುವಂತಾದುದು, ಪೊಲೀಸ್ ಅಧಿಕಾರಿಗಳೇ ಹೇಗೆ ಕ್ರಿಮಿನಲ್‌ಗಳನ್ನು ಪರ-ವಿರೋಧದ ರೀತಿಯಲ್ಲಿ ವಿಭಜಿಸಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುತ್ತದೆ. ಆದುದರಿಂದ, ರೂಪಾ ಅವರು ಮಾಡಿರುವ ಆರೋಪಗಳನ್ನು ಸರಕಾರ ಗಂಭೀರವಾಗಿ ತನಿಖೆಗೊಳಪಡಿಸಬೇಕು. ಜೊತೆಗೆ ಡಿಜಿಪಿ-ಡಿಜಿಪಿಗಳಿಬ್ಬರನ್ನೂ ವಿಚಾರಣೆ ನಡೆಸಿ, ಅವರಿಗೆ ತಮ್ಮ ಹುದ್ದೆಯ ಘನತೆಯನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ.

ಇದೇ ಸಂದರ್ಭದಲ್ಲಿ ವಿರೋಧಪಕ್ಷಗಳ ವೌನ ನಿರೀಕ್ಷಿತವಾದುದೇ ಆಗಿದೆ. ಯಾಕೆಂದರೆ ಜೈಲುಗಳ ಇಂದಿನ ಸ್ಥಿತಿಗೆ ಬಿಜೆಪಿ ಸರಕಾರದ ಪಾಲು ಸಣ್ಣದೇನೂ ಅಲ್ಲ. ಜೈಲುಗಳು ಕಳೆದ ನಾಲ್ಕು ವರ್ಷಗಳಲ್ಲಿ ಕುಲಗೆಟ್ಟಿರುವುದಲ್ಲ. ಇದಕ್ಕೆ ರಾಜ್ಯದ ಎಲ್ಲ ಸರಕಾರಗಳೂ ತಮ್ಮ ತಮ್ಮ ಗರಿಷ್ಠ ಪಾಲುಗಳನ್ನು ನೀಡಿವೆ. ರಾಜಕಾರಣಿಗಳ ಒತ್ತಡಗಳೇ ಜೈಲು ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಭ್ರಷ್ಟರನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆೆ.

ನಿಜವಾದ ತನಿಖೆ ನಡೆಸಿದರೆ, ಬಿಜೆಪಿಯ ನಾಯಕರ ಹುಳುಕುಗಳೂ ಒಂದೊಂದಾಗಿ ಹೊರ ಬರಬಹುದು ಎನ್ನುವ ಭಯದಿಂದಲೇ ಈ ಪ್ರಕರಣದ ಕುರಿತಂತೆ ಯಾವ ಅಭಿಪ್ರಾಯವನ್ನೂ ಸ್ಪಷ್ಟವಾಗಿ ನೀಡದೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News