ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಎಚ್ಚರಿಕೆಯ ಸಂಕೇತಗಳು

Update: 2017-07-18 07:27 GMT

ಮೂತ್ರಪಿಂಡಗಳು ನಮ್ಮ ಶರೀರದ ಮುಖ್ಯಭಾಗವಾಗಿದ್ದು, ಹಲವಾರು ಅಗತ್ಯ ಪ್ರಕ್ರಿಯೆಗಳನ್ನು ನಿರ್ವಹಿಸುತ್ತವೆ. ಮೂತ್ರವನ್ನು ಉತ್ಪಾದಿಸುವ ಮತ್ತು ರಕ್ತವನ್ನು ಸೋಸುವ ಇವು ಶುದ್ಧೀಕರಣ ಮತ್ತು ಶರೀರದಲ್ಲಿನ ನಂಜಿನ ಅಂಶಗಳನ್ನು ತೆಗೆದುಹಾಕುವ ಎರಡು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಶರೀರದಲ್ಲಿನ ಹೆಚ್ಚುವರಿ ದ್ರವ ಮತ್ತು ತ್ಯಾಜ್ಯವನ್ನು ನಿವಾರಿಸುವ ಜೊತೆಗೆ ಎಲುಬುಗಳ ಆರೋಗ್ಯಕ್ಕೆ ಸಹಕರಿಸುತ್ತವೆ ಹಾಗೂ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿ ಸುತ್ತವೆ ಮತ್ತು ಶರೀರದಲ್ಲಿ ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.

  ಮೂತ್ರಪಿಂಡಗಳ ಯಾವುದೇ ಕಾರ್ಯ ನಿರ್ವಹಣೆಗೆ ತೊಂದರೆಯಾದರೆ ಇಡೀ ಶರೀರವು ಅಪಾಯದಲ್ಲಿ ಸಿಲುಕಿಕೊಳ್ಳುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಹೆಚ್ಚುವರಿ ತ್ಯಾಜ್ಯ ಮತ್ತು ದ್ರವಗಳು ಅವುಗಳಲ್ಲಿ ಶೇಖರಣೆಗೊಳ್ಳುತ್ತವೆ ಮತ್ತು ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದನ್ನು ಗುರುತಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾಗಿದೆ.

ದಣಿವು

ಆರೋಗ್ಯವಂತ ಮೂತ್ರಪಿಂಡಗಳು ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುವ ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್‌ನ್ನು ಉತ್ಪಾದಿಸುತ್ತವೆ. ಕೆಂಪು ರಕ್ತಕಣಗಳ ಸಂಖ್ಯೆಯು ತಗ್ಗಿದರೆ ಅದು ದಣಿವನ್ನುಂಟು ಮಾಡುವ ಜೊತೆಗೆ ಮಿದುಳು ಮತ್ತು ಸ್ನಾಯುಗಳ ಸಮಸ್ಯೆಗೆ ಕಾರಣವಾಗುತ್ತದೆ.

ನೋವು

ಮೂತ್ರಪಿಂಡಗಳ ಸುತ್ತುಮುತ್ತಲಿನ ಭಾಗದಲ್ಲಿ ತೀವ್ರನೋವು ಕಾಣಿಸಿಕೊಂಡರೆ ಅದು ಮೂತ್ರಪಿಂಡ ಕಲ್ಲುಗಳು ಅಥವಾ ಮೂತ್ರನಾಳ ಸೋಂಕು ಅಥವಾ ಇತರ ಮೂತ್ರಪಿಂಡ ಸಂಬಂಧಿತ ಪ್ರಮುಖ ರೋಗದ ಸಂಕೇತವಾಗಿರಬಹುದು. ಆದ್ದರಿಂದ ಈ ನೋವನ್ನು ಕಡೆಗಣಿಸಲೇಬಾರದು.

ತಲೆ ಸುತ್ತುವಿಕೆ

 ಮೂತ್ರಪಿಂಡ ವೈಫಲ್ಯದಿಂದ ಮಿದುಳಿಗೆ ಆಮ್ಲಜನಕ ಪೂರೈಕೆಯಲ್ಲಿ ಕೊರತೆಯಾಗು ತ್ತದೆ. ಇದು ತಲೆ ಸುತ್ತುವಿಕೆ, ನೆನಪಿನ ಸಮಸ್ಯೆಗಳು ಮತ್ತು ಏಕಾಗ್ರತೆ ಕಡಿಮೆಯಾಗು ವುದಕ್ಕೆ ಕಾರಣವಾಗುತ್ತದೆ. ಇದು ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳಲ್ಲೊಂದಾ ಗಿದೆ.

ಬಾಯಿಯಲ್ಲಿ ಲೋಹೀಯ ರುಚಿ

ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ರಕ್ತದಲ್ಲಿ ಕಲ್ಮಶ ಶೇಖರಣೆಯು ಬಾಯಿಯ ದುರ್ವಾಸನೆ ಮತ್ತು ಆಹಾರದ ರುಚಿಯಲ್ಲಿ ಬದಲಾವಣೆ ಗಳಿಗೆ ಕಾರಣವಾಗುತ್ತದೆ. ಹಸಿವು ಕಡಿಮೆಯಾಗುವಿಕೆ ಮತ್ತು ಬಾಯಿಯಲ್ಲಿ ಲೋಹೀಯ ರುಚಿ ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳಲ್ಲಿ ಸೇರಿವೆ.

ಚರ್ಮದ ಮೇಲೆ ದದ್ದುಗಳು

ರಕ್ತದಲ್ಲಿ ಕಲ್ಮಶ ಶೇಖರಣೆಯು ತುರಿಸುವಿಕೆ ಮತ್ತು ಚರ್ಮದಲ್ಲಿ ದದ್ದುಗಳಿಗೆ ಕಾರಣವಾಗುತ್ತದೆ. ಚರ್ಮವು ಒಣಗಬಹುದು. ಲೋಷನ್‌ಗಳು ಅಥವಾ ಕ್ರೀಮ್‌ಗಳನ್ನು ಬಳಸುವುದರಿಂದ ಇವು ನಿವಾರಣೆಯಾಗುವುದಿಲ್ಲ, ಏಕೆಂದರೆ ಸಮಸ್ಯೆ ಆಂತರಿಕವಾಗಿ ರುತ್ತದೆ.

ಕಡಿಮೆ ಉಸಿರಾಟ

 ಕೆಂಪು ರಕ್ತಕಣಗಳ ಪ್ರಮಾಣ ಕಡಿಮೆಯಾದರೆ ಅದು ಶರೀರದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ. ಇದು ಉಸಿರಾಟದ ಅವಧಿಯನ್ನು ತಗ್ಗಿಸುತ್ತದೆ. ಇದು ಮೂತ್ರಪಿಂಡಕ್ಕೆ ಹಾನಿಯಾಗಿರುವುದನ್ನು ಸೂಚಿಸಬಹುದು. ಮೂತ್ರಪಿಂಡ ವೈಫಲ್ಯದ ಪ್ರಮುಖ ಲಕ್ಷಣವಾಗಿರುವ ಇದರ ಬಗ್ಗೆ ಎಚ್ಚರಿಕೆಯಿಂದಿ ರುವುದು ಒಳ್ಳೆಯದು.

ಊತ

ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಹೆಚ್ಚುವರಿ ದ್ರವಗಳು ಶರೀರದಲ್ಲಿಯೇ ಉಳಿದುಕೊಳ್ಳುತ್ತವೆ. ಇದು ಸಂದುಗಳು, ಕೈಕಾಲುಗಳು ಮತ್ತು ಮುಖ ಊದಿಕೊಳ್ಳಲು ಕಾರಣವಾಗುತ್ತದೆ.

ಮೂತ್ರ ಬದಲಾವಣೆ

ಆಗಾಗ್ಗೆ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗುವುದು ಮತ್ತು ಮೂತ್ರದ ಬಣ್ಣದಲ್ಲಿ ಬದಲಾವಣೆ, ನೊರೆಯಂಥ ಮೂತ್ರ,ರಾತ್ರಿಯಿಡೀ ಆಗಾಗ್ಗೆ ತುರ್ತು ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಯ ವೇಳೆ ಒತ್ತಡ ಮತ್ತು ತೊಂದರೆ ಇವು ಮೂತ್ರಪಿಂಡ ವೈಫಲ್ಯದ ಸಾಮಾನ್ಯ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News