ಕನ್ನಡ ಪರಂಪರೆಯ ಮೌಲ್ಯವನ್ನು ಎತ್ತಿ ಹಿಡಿಯಲಿ ಕನ್ನಡದ ಧ್ವಜ

Update: 2017-07-19 04:22 GMT

ವಿವಿಧತೆಯಲ್ಲಿ ಏಕತೆಯೇ ಭಾರತದ ಹೆಗ್ಗಳಿಕೆ. ವೈವಿಧ್ಯಮಯವಾದ ಭಾಷೆ, ಸಂಸ್ಕೃತಿ, ಆಚರಣೆಗಳೇ ಭಾರತದ ಅಂತಃಸ್ಸತ್ವ. ಇಂದು ಭಾರತ ವಿಶ್ವ ಮಾನ್ಯವಾಗಿದ್ದರೆ ಅದಕ್ಕೆ ಆ ಜಾತ್ಯತೀತ ಸ್ವರೂಪವೇ ಕಾರಣ. ಭಾರತವೆಂದರೆ ನೂರಾರು ಸುಂದರ ಅಸ್ಮಿತೆಗಳ ಸಂಘಟನೆ. ತನ್ನತನವನ್ನು ಉಳಿಸಿಕೊಂಡೇ ಭಾರತೀಯತೆಯನ್ನು ಎಲ್ಲ ರಾಜ್ಯಗಳು ಒಪ್ಪಿಕೊಂಡಿವೆ. ಈ ಕಾರಣದಿಂದಲೇ ಕನ್ನಡವೆಂದರೆ ಭಾರತೀಯತೆಯ ಒಂದು ಭಾಗವೇ ಆಗಿದೆ. ಈ ಕಾರಣಕ್ಕಾಗಿಯೇ ಕುವೆಂಪು ಅವರು ‘ಭಾರತ ಜನನಿಯ ತನುಜಾತೆ’ ಎಂದು ಕರ್ನಾಟಕವನ್ನು ಬಣ್ಣಿಸುತ್ತಾರೆ.

ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಗೌರವಿಸುವುದು ಒಕ್ಕೂಟ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ. ಭಾರತೀಯತೆಯ ಲಕ್ಷಣವೂ ಆಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಸಣ್ಣದೊಂದು ಬಿರುಕು ಕಾಣಿಸಿಕೊಂಡಿದೆ. ಜನಾಂಗೀಯ ದೌರ್ಜನ್ಯಗಳಿಗೆ ಪ್ರತಿಕ್ರಿಯಿಸುತ್ತಾ ಬಿಜೆಪಿಯ ಮುಖಂಡ ರೊಬ್ಬರು ‘‘ನಾವು ದಕ್ಷಿಣ ಭಾರತೀಯರ ಜೊತೆಗೇ ಒಟ್ಟಿಗೆ ಬದುಕುತ್ತಿದ್ದೇವೆ.

ಹೀಗಿರುವಾಗ ಜನಾಂಗೀಯ ದ್ವೇಷಕ್ಕೆ ಕಾರಣವೇ ಇಲ್ಲ’’ ಎಂದು ವಿದೇಶೀಯರಿಗೆ ತಮ್ಮ ಹೃದಯ ವೈಶಾಲ್ಯತೆ ಯನ್ನು ಪ್ರಕಟಪಡಿಸಿದ್ದರು. ಈ ಘೋಷಣೆಯಲ್ಲಿ, ದಕ್ಷಿಣ ಭಾರತೀಯರ ಕುರಿತಂತೆ ಉತ್ತರ ಭಾರತೀಯರಲ್ಲಿರುವ ಮನಸ್ಥಿತಿಯನ್ನು ತಿಳಿಸುತ್ತದೆ. ಇಂತಹ ಮನಸ್ಥಿತಿಯ ಮುಂದುವರಿದ ಭಾಗವಾಗಿದೆ, ಉತ್ತರಭಾರತೀಯರ ಸಂಸ್ಕೃತಿ, ಭಾಷೆಯನ್ನು ದಕ್ಷಿಣ ಭಾರತೀಯರ ಮೇಲೆ ಹೇರುವುದಕ್ಕೆ ಸರಕಾರ ಒಂದೊಂದೇ ಯೋಜನೆಗಳನ್ನು ರೂಪಿಸುತ್ತಿರುವುದು.

ಕನ್ನಡಿಗರು ಹಿಂದಿಯ ವಿರೋಧಿಗಳು ಖಂಡಿತಾ ಅಲ್ಲ. ಕರ್ನಾಟಕದಲ್ಲಿ, ಹಿಂದಿ, ಮಲಯಾಳಂ, ತಮಿಳು ಎಲ್ಲ ಭಾಷೆಗಳನ್ನು ಪ್ರೀತಿಸುವ ಬಹುದೊಡ್ಡ ಸಮುದಾಯವೇ ಇದೆ. ಅವರು ಹಿಂದಿಯನ್ನು ಒಂದು ಭಾಷೆಯಾಗಿ ಸ್ವೀಕರಿಸಿದ್ದಾರೆ. ಆದರೆ ಇದೀಗ ಕೇಂದ್ರ ಸರಕಾರ ಹಂತಹಂತವಾಗಿ ಕರ್ನಾಟಕದ ಮೇಲೆ ಹಿಂದಿಯನು್ನ ಹೇರುವುದಕ್ಕೆ ಹೊರಟಿದೆ. ಹಿಂದಿ ಭಾಷೆ ಅರಿತ ಕನ್ನಡಿಗರೂ, ಈ ಹೇರಿಕೆಯ ವಿರುದ್ಧ ಶತಾಯಗತಾಯ ಹೋರಾಡುತ್ತಿದ್ದಾರೆ. ಹಿಂದಿ ಹೇರಿಕೆಯ ಮೂಲಕ ಪರೋಕ್ಷವಾಗಿ ಉತ್ತರ ಭಾರತೀಯರು ದಕ್ಷಿಣ ಭಾರತೀಯರ ನೆತ್ತಿಯ ಮೇಲೆ ತಮ್ಮ ಪಾದವನ್ನು ಊರುವ ಪ್ರಯತ್ನದಲ್ಲಿದ್ದಾರೆ.

ವಾಮನ ಬಲಿಚಕ್ರವರ್ತಿ ಯನ್ನು ಮೋಸದಿಂದ ಬಲಿತೆಗೆದುಕೊಂಡ ಇತಿಹಾಸ ಮರುಕಳಿಸುತ್ತಿದೆ. ಬಲಿಚಕ್ರವರ್ತಿಯ ಸ್ಮರಣೆಗಾಗಿ ದಕ್ಷಿಣ ಭಾರತೀಯರು ಆಚರಿಸುತ್ತಿರುವ ‘ಓಣಂ’ನ್ನು ‘ವಾಮನಜಯಂತಿ’ ಎಂದು ಕರೆಯಲು ಹೋಗಿ ಕೇಂದ್ರ ಸರಕಾರ ಛೀಮಾರಿ ಹಾಕಿಸಿಕೊಂಡದ್ದನ್ನೂ ಇಲ್ಲಿ ಉದಾಹರಣೆ ಯಾಗಿ ನೀಡಬಹುದು. ಈ ದೇಶದಲ್ಲಿ ಇತ್ತೀಚಿನವರೆಗೂ ತಮ್ಮ ಮುಖ್ಯ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಕೀಳರಿಮೆಪಡುತ್ತಿದ್ದ ಸಂಸ್ಥೆಯೊಂದು, ಇದೀಗ ತನ್ನ ನಿಯಂತ್ರಣದಲ್ಲಿರುವ ಸರಕಾರದ ಮೂಲಕ ದೇಶದ ವೈವಿಧ್ಯತೆಯನ್ನೆಲ್ಲ ನಾಶ ಮಾಡಿ, ಉತ್ತರ ಭಾರತೀಯ ವೈದಿಕ ಸಂಸ್ಕೃತಿಯನ್ನು ರಾಷ್ಟ್ರೀಯ ತೆಯ ಹೆಸರಲ್ಲಿ ದಕ್ಷಿಣ ಭಾರತೀಯರ ಮೇಲೆ ಹೇರುವ ಹುನ್ನಾರ ನಡೆಸುತ್ತಿದೆ.

ತನ್ನದೇ ಭಗವಾಧ್ವಜವನ್ನು ಸಾರ್ವಜನಿಕವಾಗಿ ಸ್ವಾತಂತ್ರ ದಿನದಂದು ಹಾರಿಸಿದ ಕುಖ್ಯಾತಿಯಿರುವ ಈ ಜನರು, ದೇಶದ ರಾಜ್ಯಗಳು ಯಾವ ಧ್ವಜವನ್ನು ಹಾರಿಸಬೇಕು, ಹಾರಿಸಬಾರದು ಎನ್ನುವುದನ್ನು ನಿರ್ಧರಿಸುವ ಹಂತವನ್ನು ತಲುಪಿದ್ದಾರೆ. ಇದು ದೇಶವನ್ನು ಒಂದುಗೂಡಿಸುವುದು ಪಕ್ಕಕ್ಕಿರಲಿ, ಒಕ್ಕೂಟ ವ್ಯವಸ್ಥೆಯೊಳಗೆ ಅಪನಂಬಿಕೆ, ಅಭದ್ರತೆಯನ್ನು ಬಿತ್ತುತ್ತಿದೆ. ದೇಶದ ಆಂತರಿಕ ಸಂರಚನೆಯ ಮೇಲೆಯೇ ದುಷ್ಪರಿಣಾಮಗಳನ್ನು ಬೀರುತ್ತಿದೆ. ಈ ಹೇರಿಕೆ ಮುಂದುವರಿದರೆ, ಒಕ್ಕೂಟವ್ಯವಸ್ಥೆ ಕೇಂದ್ರದ ವಿರುದ್ಧ ಬಹಿರಂಗವಾಗಿ ಬಂಡೇಳುವ ಅಪಾಯವಿದೆ. ಕೇಂದ್ರದ ನೀತಿಯ ಪರಿಣಾಮವಾಗಿಯೇ ಇಂದು ಹಲವು ಈಶಾನ್ಯ ರಾಜ್ಯಗಳು ಭಾರತವನ್ನು ಅನ್ಯ ದೇಶ ವೆಂಬಂತೆ ನೋಡುತ್ತಿವೆೆ. ಇದೀಗ ಕೇಂದ್ರ ಸರಕಾರದ ಹೇರಿಕೆ ದಕ್ಷಿಣ ಭಾರತದ ಕಡೆಗೆ ತಿರುಗಿದೆ. ಸರಕಾರದ ಪ್ರಯತ್ನ ಜೇನುಗೂಡಿಗೆ ತೂರುವ ಕಲ್ಲು ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜ್ಯ ಸರಕಾರ ಕರ್ನಾಟಕಕ್ಕೆ ಅಧಿಕೃತ ನಾಡಧ್ವಜವೊಂದನ್ನು ರೂಪಿಸುವ ಕುರಿತಂತೆ ಇತ್ತೀಚೆಗೆ ಸಮಿತಿಯೊಂದನ್ನು ಮಾಡಿತ್ತು. ಕರ್ನಾಟಕ ತನ್ನದೇ ಆಗಿರುವ ನಾಡಗೀತೆಯನ್ನು ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅತಿ ಹೆಚ್ಚು ವೈವಿಧ್ಯಮಯವಾದ ಪ್ರಾದೇಶಿಕ ಭಾಷೆಗಳನ್ನು ಹೊಂದಿದ ನಾಡು ಇದಾಗಿದ್ದರೂ, ಕನ್ನಡತನದ ತಳಹದಿಯ ಮೇಲೆ ಕನ್ನಡವನ್ನು ತಮ್ಮ ಭಾಷೆಯಾಗಿ ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ. ಬ್ಯಾರಿ, ತುಳು, ಹವ್ಯಕ, ಕೊಂಕಣಿ, ಅರೆಗನ್ನಡ, ಕೊಡವ, ಕುಂದಾಪುರ ಭಾಷೆ, ಉರ್ದು ಹೀಗೆ ಈ ನಾಡಿನ ಮನೆ ಭಾಷೆಗಳೇ ಹತ್ತು ಹಲವು ವೈವಿಧ್ಯವನ್ನು ಒಳಗೊಂಡಿವೆ.

ಆದರೆ, ಕನ್ನಡಿಗನಾಗಿ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಎಲ್ಲರೂ ಕನ್ನಡವನ್ನೇ ಮಾತೃಭಾಷೆಯೆಂದು ಬಲವಾಗಿ ನಂಬಿಕೊಂಡವರು. ಅಖಂಡ ಕರ್ನಾಟಕ ನಿರ್ಮಾಣವಾಗಲು ಸಾವಿರಾರು ಸಾಹಿತಿಗಳು, ಹೋರಾಟಗಾರರು ತಮ್ಮ ಬದುಕನ್ನು ತೇಯ್ದಿದ್ದಾರೆ. ಜೊತೆಗೆ ಅನಧಿಕೃತವಾಗಿ ಕರ್ನಾಟಕ ಒಂದು ಧ್ವಜವನ್ನೂ ಹೊಂದಿದೆ. ಸಕಲ ಕನ್ನಡಿಗರು ಆ ಧ್ವಜದಡಿಯಲ್ಲಿ ಜಾತಿ, ಧರ್ಮ ಭೇದಗಳನ್ನು ಮರೆತು ಒಂದಾಗಿದ್ದಾರೆ. ಇದೀಗ ಆ ಧ್ವಜವನ್ನು ಸರಕಾರ ಅಧಿಕೃತವಾಗಿ ಮಾನ್ಯ ಮಾಡುವ ಕುರಿತಂತೆ ಯೋಚಿಸುತ್ತಿದೆ. ವಿಪರ್ಯಾಸವೆಂದರೆ, ಇಷ್ಟಕ್ಕೇ ಕೆಲವು ರಾಷ್ಟ್ರೀಯ ಟಿವಿ ಚಾನೆಲ್‌ಗಳು, ಕರ್ನಾಟಕ ದೇಶವಿರೋಧಿ ಕೆಲಸ ಮಾಡುತ್ತಿದೆ ಎಂಬರ್ಥದಲ್ಲಿ ಅರಚಾಡುವುದಕ್ಕೆ ತೊಡಗಿವೆ. ಕರ್ನಾಟಕ ‘ಪಾಕಿಸ್ತಾನ ಧ್ಜಜ’ವನ್ನು ಹಾರಿಸಲು ಹೊರಟಿದೆಯೇನೋ ಎಂಬಂತೆ ಗದ್ದಲ ಎಬ್ಬಿಸುತ್ತಿವೆ.

ಉತ್ತರ ಭಾರತೀಯರಿಗೆ ಕರ್ನಾಟಕದ ವೈವಿಧ್ಯ, ಸಂಸ್ಕೃತಿ ಮತ್ತು ಪರಂಪರೆಯ ಕುರಿತಂತೆ ಇರುವ ಅಜ್ಞಾನವೇ ಅವರನ್ನು ಇಂತಹ ಮಾತುಗಳನ್ನಾಡುವಂತೆ ಮಾಡಿದೆ. ಇದು ದಕ್ಷಿಣ ಭಾರತೀಯರ ಕುರಿತಂತೆ ಅವರ ದೊಡ್ಡಣ್ಣ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಒಂದು ದೊಡ್ಡ ಸೌಹಾರ್ದ ಪರಂಪರೆಯ ಸಂಕೇತವಾಗಿದೆ ಕನ್ನಡ ಧ್ವಜ. ಬಸವಣ್ಣಾದಿ ಶರಣರು, ಸೂಫಿ ಸಂತರು, ಪಂಪ, ರನ್ನರಿಂದ ಹಿಡಿದು ಕುವೆಂಪುವರೆಗಿನ ಮಹಾ ಕವಿಗಳು, ಕಿತ್ತೂರುಚೆನ್ನಮ್ಮ, ಅಬ್ಬಕ್ಕದೇವಿ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದ ದೊರೆಗಳು ಬಿತ್ತಿ ಹೋದ ವೌಲ್ಯಗಳನ್ನು ಈ ಧ್ವಜ ಪ್ರತಿನಿಧಿಸುತ್ತದೆ.

ಈ ಧ್ವಜವನ್ನು ನಿರಾಕರಿಸಿ ಅಲ್ಲಿ ಒಂದೇ ಒಂದು ಧ್ವಜವನ್ನು ಪ್ರತಿಷ್ಠಾಪಿಸಲು ನಡೆಸುವ ಸಂಚು, ಪರೋಕ್ಷವಾಗಿ ಕರ್ನಾಟಕದ ಇತಿಹಾಸ, ಪರಂಪರೆಯನ್ನು ನಿರಾಕರಿಸುವುದೇ ಆಗಿದೆ. ಈ ಧ್ವಜವಿಲ್ಲದೆ ಕರ್ನಾಟಕವೂ ಇಲ್ಲ. ಕನ್ನಡತನವನ್ನು ಸರ್ವನಾಶ ಮಾಡಿ ಅಲ್ಲಿ ಸ್ಥಾಪಿಸುವ ಭಾರತಕ್ಕೆ ಯಾವ ಬೆಲೆಯೂ ಇಲ್ಲ. ಅಸ್ಸಾಂ, ಮಣಿಪುರ, ಕಾಶ್ಮೀರ, ಪಂಜಾಬ್ ಈ ಭಾಗದ ದೇಶದ್ರೋಹದ ಬಗ್ಗೆ ಮೊದಲು ಟಿವಿಚಾನೆಲ್‌ಗಳು ಚರ್ಚೆ ನಡೆಸಲಿ. ಕರ್ನಾಟಕ ಸದಾ ತನ್ನ ಗುಣಲಕ್ಷಣವಾಗಿರುವ ಶಾಂತಿ ಸೌಹಾರ್ದವೌಲ್ಯಗಳ ಮೂಲಕ ಭಾರತೀಯತೆಯನ್ನು ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ.

ಇಂತಹ ವೌಲ್ಯಗಳ ತಳಹದಿಯ ಮೇಲೆ ನಿಲ್ಲುವ ಧ್ವಜದ ವಿರುದ್ಧ ಮಾತನಾಡುವುದು ಕರ್ನಾಟಕದ ಪರಂಪರೆಗೆ ಮಾತ್ರವಲ್ಲ, ಭಾರತೀಯತೆಗೂ ಮಾಡುವ ಅವಮಾನವಾಗಿದೆ. ಆದುದರಿಂದ, ಕನ್ನಡಧ್ವಜವನ್ನು ಪ್ರೀತಿಸುವ ಕನ್ನಡಿಗರನ್ನು ದೇಶದ್ರೋಹಿಗಳು ಎಂದು ಕರೆದ ಟಿವಿವಾಹಿನಿಗಳು ನಾಡಿನ ಜನರ ಕ್ಷಮೆಯಾಚಿಸುವುದು ಅಗತ್ಯವಾಗಿದೆ. ರಾಜ್ಯಗಳು ತಮ್ಮದೇ ಆದ ಧ್ವಜವನ್ನು ಹೊಂದುವುದು ಎಂದರೆ ರಾಷ್ಟ್ರಧ್ವಜವನ್ನು ನಿರಾಕರಿಸುವುದು ಎಂದರ್ಥವಲ್ಲ. ಈ ಹಿಂದೆಯೂ ಕನ್ನಡ ಧ್ವಜವನ್ನು ನಾಡಿನ ಐಡೆಂಟಿಟಿಗಾಗಿ ಬಳಸುತ್ತಲೇ ರಾಷ್ಟ್ರಧ್ಜಜಕ್ಕೆ ರಾಜ್ಯ ಗೌರವ ನೀಡುತ್ತಾ ಬಂದಿದೆ. ಇಂದು ರಾಷ್ಟ್ರಧ್ಜದ ಮಹತ್ವದ ಬಗ್ಗೆ ಟಿವಿಚಾನೆಲ್‌ಗಳು ಅಧಿಕೃತವಾಗಿ ಪಾಠ ನೀಡುವ ಉದ್ದೇಶವಿದ್ದರೆ ಆರೆಸ್ಸೆಸ್ ಮತ್ತು ಅದರ ಸಹ ಸಂಘಟನೆಗಳ ಮುಖಂಡರನ್ನು ಕರೆಸಿ ಪಾಠ ಮಾಡಲಿ. ಅದರಿಂದ ಸಂಘಪರಿವಾರಕ್ಕೂ ಒಳಿತಿದೆ. ದೇಶಕ್ಕೆ ಕೂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News