ಏಷ್ಯನ್ ಚಾಂಪಿಯನ್ ಅಥ್ಲೀಟ್ ಮನ್‌ಪ್ರೀತ್ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣ

Update: 2017-07-19 06:39 GMT

ಹೊಸದಿಲ್ಲಿ, ಜು.19: ಏಷ್ಯನ್ ಚಾಂಪಿಯನ್ ಶಾಟ್‌ಪುಟ್ ತಾರೆ ಮನ್‌ಪ್ರೀತ್ ಕೌರ್ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಹೆಮ್ಮೆ ತಂದಿದ್ದ ಮನ್‌ಪ್ರೀತ್ ಇದೀಗ ಡೋಪಿಂಗ್ ಬಲೆಗೆ ಬಿದ್ದು ದೇಶಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದಾರೆ. ಮನ್‌ಪ್ರೀತ್ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾಗಿದೆ.

 ಜೂ.1 ರಿಂದ 4ರ ತನಕ ಪಟಿಯಾಲದಲ್ಲಿ ನಡೆದಿದ್ದ ಫೆಡರೇಶನ್ ಕಪ್ ನ್ಯಾಶನಲ್ ಚಾಂಪಿಯನ್‌ಶಿಪ್‌ನ ವೇಳೆ ರಾಷ್ಟ್ರೀಯ ಡೋಪಿಂಗ್ ಅಧಿಕಾರಿಗಳು ಡೋಪಿಂಗ್ ಪರೀಕ್ಷೆ ನಡೆಸಿದ್ದರು.

 ವಾಡಾ ನೀತಿ ಸಂಹಿತೆಯಲ್ಲಿ ಮನ್‌ಪ್ರೀತ್ ಕೌರ್ ಸೇವಿಸಿರುವ ನಿಷೇಧಿತ ದ್ರವ್ಯ ಡೈಮೆಲ್ಬುಟಿಲ್ಯಾಮಿನ್ ವಾಡಾ ನೀತಿ ಸಂಹಿತೆಯಲ್ಲಿ ನಿರ್ದಿಷ್ಟವಾಗಿ ನಮೂದಿಸದ ಕಾರಣ ಕೌರ್ ತಾತ್ಕಾಲಿಕ ಅಮಾನತಿನ ಶಿಕ್ಷೆಯಿಂದ ಪಾರಾಗಿದ್ದಾರೆ. ಆದರೆ, ಅವರು ಬಿ ಮಾದರಿ ಪರೀಕ್ಷೆಯಲ್ಲೂ ವಿಫಲರಾದರೆ ಭುವನೇಶ್ವರದಲ್ಲಿ ಜಯಿಸಿದ್ದ ಚಿನ್ನದ ಪದಕವನ್ನು ಭಾರತ ಕಳೆದುಕೊಳ್ಳಲಿದೆ.

ಜೂನ್‌ನಲ್ಲಿ ಫೆಡರೇಶನ್ ಕಪ್‌ನ ವೇಳೆ ನಡೆಸಲಾಗಿದ್ದ ಟೆಸ್ಟ್‌ನಲ್ಲಿ ಮನ್‌ಪ್ರೀತ್ ಅನುತ್ತೀರ್ಣರಾಗಿದ್ದಾರೆ. ಅವರ ಮೂತ್ರ ಮಾದರಿ ಪರೀಕ್ಷೆಯಲ್ಲಿ ನಿಷೇಧಿತ ದ್ರವ್ಯ ಸೇವಿಸಿರುವುದು ಸಾಬೀತಾಗಿದೆ. ಕಳೆದ ರಾತ್ರಿ ನಾಡಾ ನಮಗೆ ಈ ಕುರಿತು ಸೂಚನೆ ನೀಡಿದೆ ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮನ್‌ಪ್ರೀತ್ ಈಗಾಗಲೇ ಲಂಡನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ, ಈಗಿನ ಬೆಳವಣಿಗೆಯಿಂದ ಮೇಗಾ ಸ್ಪರ್ಧೆಯಲ್ಲಿ ಮನ್‌ಪ್ರೀತ್ ಭಾಗವಹಿಸುವ ಅವಕಾಶ ಕ್ಷೀಣಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News