ನಿವೃತ್ತಿಯ ಬಳಿಕ ಪ್ರಣವ್ ಮುಖರ್ಜಿ ನೆಲೆಸಲಿರುವ ನಿವಾಸ ಹೇಗಿದೆ ಗೊತ್ತಾ?

Update: 2017-07-20 09:25 GMT

ನಿವೃತ್ತರಾಗಲಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಉತ್ತರಾಧಿಕಾರಿಯ ಆಯ್ಕೆಗಾಗಿ ಸೋಮವಾರ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇದೇ ವೇಳೆ ರಾಷ್ಟ್ರ ರಾಜಧಾನಿಯ 10,ರಾಜಾಜಿ ಮಾರ್ಗದ ವಿಶಾಲ ಬಂಗಲೆಯೊಂದು ನೂತನ ಒಡೆಯನನ್ನು ಸ್ವಾಗತಿಸಲು ಭರದಿಂದ ಸಜ್ಜಾಗುತ್ತಿದೆ.

ಹೌದು, ಪ್ರಣವ್ ಮುಖರ್ಜಿಯವರು ದೇಶದ ಅತ್ಯುನ್ನತ ಹುದ್ದೆಯಿಂದ ನಿವೃತ್ತಿಯ ಬಳಿಕ ಇದೇ ಬಂಗಲೆಯಲ್ಲಿ ವಾಸಿಸಲಿದ್ದಾರೆ. ಹೀಗೆಂದೇ 11,776 ಚದರಡಿ ವಿಸ್ತೀರ್ಣದ ಈ ಕಟ್ಟಡ ರೂಪಾಂತರಗೊಳ್ಳುತ್ತಿದೆ. ಮಾಜಿ ರಾಷ್ಟ್ರಪತಿಗಳ ಬಳಿಯಿರುವ ಬೃಹತ್ ಪುಸ್ತಕಗಳ ಸಂಗ್ರಹಕ್ಕಾಗಿಯೇ ಇಲ್ಲಿ ವಿಶೇಷ ಸ್ಥಳಾವಕಾಶವನ್ನು ರೂಪಿಸಲಾಗುತ್ತಿದೆ.

ಪ್ರಣವ್ ವಾಸವಾಗಲಿರುವ ಮನೆ

ಇದರೊಂದಿಗೆ ಐದು ವರ್ಷಗಳನ್ನು 350 ಕೊಠಡಿಗಳ, ಅರಮನೆಸದೃಶ ರಾಷ್ಟ್ರಪತಿ ಭವನದಲ್ಲಿ ಕಳೆದಿರುವ ಮುಖರ್ಜಿವರ ಜೀವನ ವಿಧಾನವೂ ಈ ನೂತನ ನಿವಾಸದಲ್ಲಿ ಬದಲಾಗಲಿದೆ.

ತನ್ನ ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿಯೇ 200ರಕ್ಕೂ ಅಧಿಕ ಸಿಬ್ಬಂದಿಗಳನ್ನು ಹೊಂದಿದ್ದ ಮುಖರ್ಜಿ ಈಗ ಹೆಚ್ಚಿನ ಆಳುಕಾಳುಗಳಿಲ್ಲದ, ರಾಷ್ಟ್ರಪತಿ ಭವನದ ಭವ್ಯತೆಯ ಮುಂದೆ ಏನೇನೂ ಅಲ್ಲದ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ. ಹಾಲಿ ಅವರ ಅಧಿಕೃತ ವಾಹನವಾಗಿರುವ ಗುಂಡು ನಿರೋಧಕ ಮರ್ಸಿಡಿಸ್ ಬೆಂಝ್ ಕಾರು ನೂತನ ರಾಷ್ಟ್ರಪತಿಗಾಗಿ ಕಾಯುತ್ತ ರಾಷ್ಟ್ರಪತಿ ಭವನದಲ್ಲಿಯೇ ಇರಲಿದೆ. ರಾಷ್ಟ್ರದ ಇನ್ನೋರ್ವ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು 2015ರಲ್ಲಿ ನಿಧನರಾಗುವ ವರೆಗೂ ಇಲ್ಲಿಯೇ ವಾಸವಾಗಿದ್ದರು.

ಅಂದ ಹಾಗೆ ಮಾಜಿ ರಾಷ್ಟ್ರಪತಿಗಾಗಿ ನಿವಾಸದ ಆಯ್ಕೆಗೂ ಮಾನದಂಡವವಿದೆ. ಅದು ಕೇಂದ್ರ ಸಂಪುಟ ಸಚಿವರಿಗೆ ನೀಡಲಾಗುವ ನಿವಾಸಗಳ ದರ್ಜೆಯಲ್ಲಿಯೇ ಇರಬೇಕಾ ಗುತ್ತದೆ. ಹಾಲಿ ಕೇಂದ್ರ ಸಚಿವರು 4,498 ಚದರಡಿ ಕಾರ್ಪೆಟ್ ಏರಿಯಾ ಹೊಂದಿರುವ ನಿವಾಸವನ್ನು ಪಡೆಯಲು ಅರ್ಹರಾಗಿರುತ್ತಾರೆ.

 ರಾಷ್ಟ್ರಪತಿಗಳು ಮಾಜಿಯಾದರೂ ಹಲವಾರು ಸೌಲಭ್ಯಗಳನ್ನು ಅವರು ಪಡೆಯುತ್ತಾರೆ. 1951ರ ರಾಷ್ಟ್ರಪತಿಗಳ ವೇತನ ಕಾಯ್ದೆಯು ನಿರ್ವಹಣೆ ಸೇರಿದಂತೆ ಸಂಪೂರ್ಣ ಸುಸಜ್ಜಿತ ಬಾಡಿಗೆರಹಿತ ನಿವಾಸ,ಎರಡು ಸ್ಥಿರ ದೂರವಾಣಿಗಳು(ಈ ಪೈಕಿ ಒಂದು ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕಾಗಿ), ರಾಷ್ಟ್ರವ್ಯಾಪಿ ರೋಮಿಂಗ್ ಸೌಲಭ್ಯ ಹೊಂದಿರುವ ಒಂದು ಮೊಬೈಲ್ ಫೋನ್, ಉಚಿತವಾಗಿ ಕಾರು ಅಥವಾ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ಕಾರು ಭತ್ಯೆಗಳನ್ನು ಪಡೆಯಲು ಮಾಜಿ ರಾಷ್ಟ್ರಪತಿಗಳು ಅರ್ಹರಾಗಿರುತ್ತಾರೆ.

ಇದರ ಜೊತೆಗೆ ಮಾಜಿ ರಾಷ್ಟ್ರಪತಿಗಳು ಓರ್ವ ಆಪ್ತ ಕಾರ್ಯದರ್ಶಿ, ಓರ್ವ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ಓರ್ವ ಖಾಸಗಿ ಸಹಾಯಕ ಮತ್ತು ಇಬ್ಬರು ಜವಾನರನ್ನು ನೇಮಿಸಿಕೊಳ್ಳಬಹುದಾಗಿದ್ದು, ಇವರ ವೇತನಗಳನ್ನು ಸರಕಾರವೇ ಪಾವತಿಸುತ್ತದೆ, ಜೊತೆಗೆ ವಾರ್ಷಿಕ 60,000 ರೂ.ವರೆಗೆ ಕಚೇರಿ ವೆಚ್ಚವನ್ನೂ ಭರಿಸುತ್ತದೆ. ಇದಲ್ಲದೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಪಡೆಯುವುದರೊಂದಿಗೆ ಓರ್ವ ವ್ಯಕ್ತಿಯೊಂದಿಗೆ ಭಾರತದ ಯಾವುದೇ ಭಾಗಕ್ಕೆ ವಿಮಾನ, ರೈಲು ಮತ್ತು ಸ್ಟೀಮರ್‌ಗಳಲ್ಲಿ ಅತ್ಯುನ್ನತ ವರ್ಗದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

 ಮಾಜಿ ರಾಷ್ಟ್ರಪತಿಗಳು ಹುದ್ದೆಯಲ್ಲಿದ್ದಾಗ ಪಡೆಯುತ್ತಿದ್ದ ವೇತನದ ಶೇ.50ರಷ್ಟು ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಮುಖರ್ಜಿಯವರಿಗೆ ಮಾಸಿಕ 75,000 ರೂ.ಗಳ ಪಿಂಚಣಿ ದೊರೆಯಲಿದೆ.

2008ರಲ್ಲಿ ಆಗಿನ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲರು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನಗಳನ್ನು ಪರಿಷ್ಕರಿಸಿದ್ದರು. ಹೀಗಾಗಿ ಮಾಸಿಕ 50,000 ರೂ.ಗಳಿದ್ದ ರಾಷ್ಟ್ರಪತಿಗಳ ವೇತನ 1,50,000 ರೂ.ಗಳಿಗೆ ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News