ಭಾರತೀಯ ನೆಲದ ಬಹುದೊಡ್ಡ ಹೆಮ್ಮೆ ಡಾ.ಅಂಬೇಡ್ಕರ್

Update: 2017-07-20 18:50 GMT

2ಂ11ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ಜಗತ್ತಿನ 100 ಜನ ಘನವಿದ್ವಾಂಸರ ಪಟ್ಟಿಮಾಡಿ, ಈ 100 ಜನರಲ್ಲಿ ಡಾ. ಅಂಬೇಡ್ಕರ್‌ರವರನ್ನು ಜಗತ್ತಿನ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಮೊದಲಿಗರೆಂದು ಗುರುತಿಸಿತು. ಜಗತ್ತಿನ ಎಲ್ಲಾ ನಿಯತಕಾಲಿಕೆ ಹಾಗೂ ಪತ್ರಿಕೆಗಳಲ್ಲಿ ಈ ವಿಚಾರ ಬಿತ್ತರವಾದಂತೆ ಭಾರತೀಯ ಮಾಧ್ಯಮಗಳಲ್ಲಿ ಬಿತ್ತರವಾಗಲಿಲ್ಲ. ಅಂದರೆ ಜಗತ್ತಿಗೆ ಅರ್ಥವಾದ ಡಾ. ಅಂಬೇಡ್ಕರ್‌ರ ಜ್ಞಾನ, ವಿದ್ವತ್ತು, ಸಾಮಾಜಿಕ ಅಂತಃಕರಣ, ದೂರದೃಷ್ಟಿ, ಭಾರತೀಯರಿಗೆ ಅರ್ಥವಾಗಲಿಲ್ಲ. ಇದಕ್ಕೆ ಎರಡು ನಿದರ್ಶನಗಳನ್ನು ಹೇಳಬೇಕೆಂದೆನಿಸುತ್ತದೆ.

ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳ ಅಧ್ಯಯನಕ್ಕೆ ವಿಶ್ವದಲ್ಲೇ ಪ್ರಖ್ಯಾತವಾಗಿರುವ ಬ್ರಿಟನ್ನಿನ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್ ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಡಾ. ಅಂಬೇಡ್ಕರ್‌ರ ಭಾವಚಿತ್ರವನ್ನು ಅಳವಡಿಸಲಾಗಿದೆ. ಈ ಗೌರವಕ್ಕೆ ಪಾತ್ರವಾಗಿರುವ ಏಕೈಕ ಭಾರತೀಯ ಇವರು. ಹಾಗೆಯೇ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಕೊಲಂಬಿಯಾ ವಿಶ್ವವಿದ್ಯಾನಿಲಯದ ಕಾನೂನು ಮತ್ತು ಸಂವಿಧಾನ ಅಧ್ಯಯನ ವಿಭಾಗಕ್ಕೆ ಡಾ. ಅಂಬೇಡ್ಕರ್‌ರ ಹೆಸರಿಡಲಾಗಿದೆ. ಇಲ್ಲಿ ಡಾ. ಅಂಬೇಡ್ಕರ್‌ರರಿಗೂ ಇಂಗ್ಲೆಂಡ್ ಹಾಗೂ ಅಮೆರಿಕದಂತಹ ದೇಶದ ನಾಗರಿಕರಿಗೂ ಇರುವ ಸಂಬಂಧವಾದರು ಏನು ಎಂಬುದು, ಆ ದೇಶದ ನಾಗರಿಕರು ಅಂಬೇಡ್ಕರ್‌ಗೇಕೆ ಈ ಮಟ್ಟದ ಗೌರವ ಸಲ್ಲಿಸಿದ್ದಾರೆ ಎಂದು ಯೋಚಿಸಿದಾಗ ಅದು ವ್ಯಕ್ತಿಯ ಜ್ಞಾನಕ್ಕೆ ನೀಡಿದ ಗೌರವ ಎನಿಸಿತು. ಆದರೆ ಭಾರತೀಯರ ಮನಸ್ಥಿತಿಗೆ ಇದು ಒಗ್ಗದ ವಿಚಾರ. ಏಕೆಂದರೆ, ಇಲ್ಲಿ ಜ್ಞಾನಕ್ಕಿಂತ, ಜಾತಿಗೆ ಗೌರವ, ವ್ಯಕ್ತಿಗಿಂತ ಆತನ ಹಿನ್ನೆಲೆಗೆ ಗೌರವ, ಸಂಶೋಧನೆಗಿಂತ ಸಂಪ್ರದಾಯಕ್ಕೆ ಗೌರವ. ಇದಕ್ಕೆ ನಿದರ್ಶನವಾಗಿ ಅಮೆರಿಕ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಲ್ಲಿನ ವಿದ್ಯಾಕೇಂದ್ರಗಳಿಗೆ ಅಂಬೇಡ್ಕರ್ ಹೆಸರಿಡಬೇಕೆಂದು ಯಾರೂ ಒತ್ತಾಯಿಸಿರಲಿಲ್ಲ. ಆದರೆ ಭಾರತದ ಒಂದು ರಸ್ತೆಗೆ, ಕಚೇರಿಗೆ, ಸಂಸ್ಥೆಗೆ, ನಿಲ್ದಾಣಗಳಿಗೆ ಅಂಬೇಡ್ಕರ್‌ರ ಹೆಸರಿಡಬೇಕೆಂದರೆ ಅದಕ್ಕೆ ತಿಂಗಳು, ವರ್ಷಗಳಿಂದಲೇ ಮುಷ್ಕರ, ಪ್ರತಿಭಟನೆ, ಚಳವಳಿಗಳಾಗಬೇಕು. ಬೆಂಗಳೂರಿನಂತಹ ಪ್ರತಿಷ್ಠಿತ ನಗರ ಮೆಟ್ರೋ ನಿಲ್ದಾಣಕ್ಕೆ ಅಂಬೇಡ್ಕರ್‌ರ ಹೆಸರಿಡುವುದಕ್ಕೆ ತಿಂಗಳುಗಟ್ಟಲೆ ಪ್ರತಿಭಟಿಸಿದ ರೀತಿ ಇದಕ್ಕೆ ಸಾಕ್ಷಿ. ರಷ್ಯಾದ ಅಧ್ಯಕ್ಷ ವಾಲ್ದಿಮೀರ್ ಪುಟಿನ್ ತನ್ನ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರು ಅಲಂಕರಿಸುವ ಕುರ್ಚಿಯ ನೆತ್ತಿಯ ಮೇಲ್ಭಾಗದಲ್ಲಿ ಅಂಬೇಡ್ಕರ್‌ರ ಭಾವಚಿತ್ರವನ್ನು ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಅಧಿಕಾರಕ್ಕೆ ಬಂದ ಕೆಲ ಮುಖ್ಯಮಂತ್ರಿಗಳಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷರವರೆಗೂ ಕಚೇರಿಯ ಮುಖ್ಯ ಕೋಣೆಯಿಂದ ಭಾವಚಿತ್ರವನ್ನು ತೆರವುಗೊಳಿಸಿದ ನಿದರ್ಶನಗಳಿವೆ.

ಇಲ್ಲಿ ಯಾಕೆ ಇದನ್ನೆಲ್ಲಾ ಹೇಳಬೇಕಾಗಿದೆ ಎಂದರೆ ಜಗತ್ತು ಅಂಬೇಡ್ಕರ್‌ರನ್ನು ಗ್ರಹಿಸಿದಷ್ಟು ಭಾರತೀಯರು ಗ್ರಹಿಸಲಿಲ್ಲ. ಜಗತ್ತು ಅವರನ್ನು ಗೌರವಿಸಿದಷ್ಟು ಭಾರತೀಯರು ಗೌರವಿಸಲಿಲ್ಲ. ಯಾಕೆಂದರೆ ಭಾರತವನ್ನು ಭಾರತವನ್ನಾಗಿ ಕಟ್ಟಲು ಶ್ರಮಿಸಿದ ಅಂಬೇಡ್ಕರ್‌ರರಿಗೆ ಭಾರತ ರತ್ನ ನೀಡಲು 4 ದಶಕಗಳು ಹೋರಾಡಬೇಕಾಯಿತು.

ಮಹಾರಾಷ್ಟ್ರ ಸರಕಾರ 2008ರಲ್ಲಿ ‘ಡಿಪಾರ್ಟ್‌ಮೆಂಟ್ ಆಫ್ ಜನರಲ್ ಅಡ್ಮಿನಿಸ್ಟ್ರೇಷನ್’ ಅಂಬೇಡ್ಕರ್‌ರ 117 ಹುಟ್ಟುಹಬ್ಬದ ದಿನವನ್ನು ‘ಜ್ಞಾನ ದಿನ’ವನ್ನಾಗಿ ಆಚರಿಸಿದಾಗ, ಭಾರತೀಯ ವಿದ್ವಾಂಸರ ವಲಯದಲ್ಲಿ ಸರಕಾರ ಪೇಚಿಗೆ ಸಿಕ್ಕಿಕೊಂಡಿತು ಹಾಗೂ ಪ್ರತೀ ಕಚೇರಿಯಲ್ಲಿ ಆಚರಿಸಬೇಕೆಂದು ಆದೇಶ ನೀಡಿದರೂ. ಅದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಆದರೆ ಎಪ್ರಿಲ್ 13, 2016ರಂದು ವಿಶ್ವಸಂಸ್ಥೆ ಎಪ್ರಿಲ್ 14ನ್ನು ‘ವಿಶ್ವಜ್ಞಾನ ದಿನ’ ಎಂದು ಆಚರಿಸಲು ಹೊರಟಾಗ ಇಡೀ ವಿಶ್ವ ಇದನ್ನು ಗೌರವಿಸಿತು. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಈ ಸಂದರ್ಭವನ್ನು ತುಂಬು ಅಭಿಮಾನದಿಂದ ಗೌರವಿಸಿದವು. ಇದು ಭಾರತೀಯ ಬಹುದೊಡ್ಡ ಹೆಮ್ಮೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಸಲ್ಲಬೇಕಾದ ಹೆಮ್ಮೆ. ಆದರೆ ಭಾರತೀಯ ಸಾಂಪ್ರದಾಯಿಕ ಮನಸ್ಸುಗಳು ಇದನ್ನೂ ಕೂಡ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಅಂಬೇಡ್ಕರ್ ಇಂದು ಅನಿವಾರ್ಯವಾಗಿದ್ದಾರೆ. ಅಂಬೇಡ್ಕರ್ ಎಂದರೆ ಭಾರತೀಯ ಪರಿಸ್ಥಿತಿಗೆ ಅದೊಂದು ಬಲುಕಠಿಣ, ಕ್ಲಿಷ್ಟಕರವಾದ ವ್ಯಕ್ತಿತ್ವ, ಯಾರ ಜಪ್ತಿಗೂ ಸಿಲುಕದ ಪ್ರಕಾಂಡ ಜ್ಞಾನಭಂಡಾರ, ಅರಿವಿನ ಆಳಕ್ಕಿಳಿಯದೆ ಅಂಬೇಡ್ಕರ್‌ರನ್ನು ಅರ್ಥೈಸಿಕೊಳ್ಳುವುದು ಬಲುಕಷ್ಟ. ಆಳವಾಗಿ ಓದದೆ ಅವರನ್ನು ಸಮಾಜಕ್ಕೆ ಪರಿಚಯಿಸಲು ಹೊರಡುವುದು ಅತ್ಯಂತ ಅಪಾಯಕಾರಿ. ಮೀಸಲಾತಿ, ಜಾತಿ, ದಲಿತ, ಪ್ರತಿಭಟನೆ, ಹೋರಾಟಗಳಿಂದಾಚೆಗೂ ಅಂಬೇಡ್ಕರ್‌ರನ್ನು ಗ್ರಹಿಸುವ ಓದಿನ ಸಮಗ್ರತೆ ಇಂದಿನ ಸವಾಲಾಗಿದೆ. ಅಂಬೇಡ್ಕರ್‌ರನ್ನು ಓದುವುದೆಂದರೆ ಅದು ಸಮಗ್ರತೆಯ ಓದು, ಮಾನವೀಯತೆಯ ಓದು, ಮನುಷ್ಯತ್ವದ ಓದು, ಸಾಮಾಜೀಕರಣ, ಆರ್ಥಿಕರಣ, ರಾಜಕಾರಣದ ಮೇಲೆ ಸಮತ್ವವನ್ನು ಸಾಧಿಸಬಲ್ಲ ಸಮತೆಯ ಓದು. ಮಾನವೀಯ-ತತ್ವಜ್ಞಾನ, ವ್ಯಕ್ತಿಯ ಶೀಲ, ಚರಿತ್ರೆಯ ಶೀಲದ ಓದು. ಅಂಬೇಡ್ಕರ್‌ರು ಕೇವಲ ವ್ಯಕ್ತಿಗೆ, ಸಮುದಾಯಕ್ಕೆ ಸಂಬಂಧಿಸಿದವರಲ್ಲ. ಸಮಷ್ಠಿಗೆ ಸಂಬಂಧಿಸಿದವರು. ಜಾತಿಗೆ ಸಂಬಂಧವಿಲ್ಲ, ಜ್ಞಾನಕ್ಕೆ ಸಂಬಂಧಿಸಿದವರು. ಅವರು ಸಮಸ್ತ ಮಾನವೀಯ ಮೌಲ್ಯಗಳ ಅಂತಃಕರಣ.

5 ಪತ್ರಿಕೆಗಳು, 33 ಪುಸ್ತಕಗಳು-ಪ್ರಬಂಧಗಳು, 22 ಸಂಪುಟಗಳು ಸೇರಿದಂತೆ 30,000 ಪುಟಗಳಿಗೂ ಅಧಿಕ ಬರಹಗಳನ್ನು ಬರೆದ, 50 ಸಾವಿರ ವಿದ್ವತ್‌ಪೂರ್ಣ ಗ್ರಂಥಗಳನ್ನು ಸಂಗ್ರಹಿಸಿ ಓದಿದ ಜಗತ್ತಿನ ಏಕೈಕ ವಿದ್ವಾಂಸ ಭಾರತೀಯ ನೆಲದಲ್ಲಿ ಹುಟ್ಟಿದ್ದೇ ಪ್ರತಿಯೊಬ್ಬ ಭಾರತೀಯ ನಾಗರಿಕನ ಗೌರವ. ಅದಾವುದೇ ಗೌರವ ಸಲ್ಲಬೇಕಿದ್ದರೂ ಮೊದಲು ಹುಟ್ಟಿದ ನೆಲದಿಂದ ಪ್ರಾರಂಭವಾಗಬೇಕಾಗಿತ್ತು. ಆದರೆ ಅಂಬೇಡ್ಕರ್‌ರ ವಿಚಾರದಲ್ಲಿ ಮೊದಲು ವಿಶ್ವಮಟ್ಟದಲ್ಲಿ ಗೌರವ ಸಲ್ಲುತ್ತದೆ. ನಂತರ ನಾವದನ್ನು ಅನುಸರಿಸುತ್ತೇವೆ.

ಆದರೂ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಡಾ. ಅಂಬೇಡ್ಕರ್‌ರ ವಿಶ್ವ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಜುಲೈ 21, 22, 23ರಂದು ‘ಕ್ಠಿಛಿಠಿ ್ಛಟ್ಟ ಉಟ್ಠಿಜಿಠಿ’ ಸಾಮಾಜಿಕ ನ್ಯಾಯ ಮರುಸ್ಥಾಪನೆ ಹಾಗೂ ಅಂಬೇಡ್ಕರ್ ಪುನರಾವಲೋಕನ ಎಂಬ ವಿಷಯ ಕುರಿತು 3 ದಿನದಲ್ಲಿ 83 ಅಂತಾರಾಷ್ಟ್ರೀಯ ವಿದ್ವಾಂಸರು, 149 ರಾಷ್ಟ್ರೀಯ ವಿದ್ವಾಂಸರು, 80 ರಾಜ್ಯಮಟ್ಟದ ವಿದ್ವಾಂಸರು, ಒಟ್ಟು 300 ಜನ ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಇದೆಲ್ಲಕ್ಕಿಂತ ವಿಶೇಷವಾಗಿ ಅಮೆರಿಕನ್ ಅಡ್ವಕೇಟ್ ಅಂತಾರಾಷ್ಟ್ರೀಯ ಖ್ಯಾತಿಯ ಮಾನವ ಹಕ್ಕುಗಳ ವಕೀಲ, ಮಾರ್ಟಿನ್ ಲೂಥರ್ ಕಿಂಗ್-3 ಭಾಗವಹಿಸಲಿದ್ದಾರೆ.

ಇಲ್ಲಿ ಅಂಬೇಡ್ಕರ್‌ರನ್ನು ಪುನರಾವಲೋಕಿಸುವುದೆಂದರೆ, ಅಂಬೇಡ್ಕರ್ ವಿಷನ್ ಕಡೆಗೆ ಸಮಾಜವನ್ನು ಕೊಂಡೊಯ್ಯುವುದು. ಇದಕ್ಕೆ ಬಹುಮುಖ್ಯವಾಗಿ ಅಂಬೇಡ್ಕರ್‌ರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಆ ಪ್ರತಿಯೊಂದು ಕಾರ್ಯಕ್ರಮವು ಆತ್ಮಾವಲೋಕನ ಕಾರ್ಯಕ್ರಮಗಳಾಗಿ ಮಾರ್ಪಾಗಡಬೇಕು. ನಾಯಕರು, ವಿದ್ವಾಂಸರು, ಪ್ರೇಕ್ಷಕರು ಮತ್ತು ಸಮಾಜ ತಮ್ಮನ್ನು ತಾವು ಆತ್ಮಾವಲೋಕನಕ್ಕೆ ಒಳಪಡಿಸಿಕೊಳ್ಳುವ, ಅಂಬೇಡ್ಕರ್‌ರ ನೈಜ ಚಿಂತನೆಗಳೆಡೆ ಹೆಜ್ಜೆ ಇಡುವ ಬಹು ಗಂಭೀರ ಸವಾಲುಗಳು ಇಂದು ಎಲ್ಲರ ಮುಂದೆ ಇವೆ. ‘ವಿಶ್ವಜ್ಞಾನ ದಿನ’ ಸರಕಾರಿ ಕಾರ್ಯಕ್ರಮವಾಗಿ ಈ ನೆಲದಲ್ಲಿ ಬದುಕುವ ನಾಗರಿಕರಿಗೆ ಹೊಸದಾಗಿ ಅರಳುವ ಮಕ್ಕಳಿಗೆ ಇದರ ಅರಿವು ಮೂಡಲಿ.

‘ವಿಶ್ವಯೋಗ ದಿನ’ಕ್ಕೆ ಸಾಮೂಹಿಕವಾಗಿ ಒತ್ತು ನೀಡಿ ದೇಶಾದ್ಯಂತ ಆಚರಿಸಿದಂತೆ ವಿಶ್ವ ಜ್ಞಾನ ದಿನವನ್ನು ಆಚರಿಸಲಿ. ಶಾಲಾ ಪಠ್ಯಗಳಲ್ಲಿ ಜೀವನ ಚರಿತ್ರೆಗಿಂತ ಅಂಬೇಡ್ಕರರ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಲಿ. ಅಂಬೇಡ್ಕರ್ ಸಮಗ್ರ ಬರಹಗಳಿಗೆ ವಿಶ್ವದರ್ಜೆಯ ಮಾನ್ಯತೆ ಇನ್ನೂ ಹೆಚ್ಚಿನ ಪ್ರಚಾರಾಂದೋಲನಗಳ ಮೂಲಕ ಸಾಗಲಿ. 30,000 ಪುಟಗಳಿಗೂ ಅಧಿಕ ಬರಹವನ್ನು ನೀಡಿದ ವಿಶ್ವದ ಏಕೈಕ ಬಹುದೊಡ್ಡ ಬರಹಗಾರರೆಂಬ ವಾಸ್ತವ ಸತ್ಯ ಇಡೀ ಜಗತ್ತಿಗೆ ಅರ್ಥವಾಗಲಿ. ಅಂಬೇಡ್ಕರರ ಪರಿನಿಬ್ಬಾಣದ ನಂತರ ಸುದೀರ್ಘ 70 ದಶಕಗಳಲ್ಲಿ ಮೊತ್ತಮೊದಲ ಬಾರಿಗೆ ಜಗತ್ತಿನ ಮತ್ತು ಸ್ಥಳೀಯ ಘನವಿದ್ವಾಂಸರನ್ನು ಒಂದು ವೇದಿಕೆಗೆ ತಂದು ಅಂಬೇಡ್ಕರರ ಚಿಂತನೆಗಳನ್ನು ಸಮಾಜದೆಡೆಗೆ ಕೊಂಡೊಯ್ಯುತ್ತಿರುವುದು ಅತ್ಯಂತ ಅರ್ಥಗರ್ಭಿತ ವಿಚಾರ. ಈ ವೇದಿಕೆ ಅಂಬೇಡ್ಕರರ ಚಿಂತನೆಗಳ ಸಾಗುವಿಕೆಗೆ ಹೊಸ ಚೈತನ್ಯ ಹಾಗೂ ದೃಷ್ಟಿಕೋನಗಳನ್ನು ನೀಡಲಿ. ಕೊನೆಯದಾಗಿ ಅಂಬೇಡ್ಕರ್ ‘ಅನಿವಾರ್ಯಕ್ಕಾಗಿ ಅಲ್ಲ ಅನುಸರಣೆಗಾಗಿ’ ಎಂಬ ಅರಿವನ್ನು ಸಮಾಜಕ್ಕೆ ಕೊಂಡೊಯ್ಯುವಂತಾಗಲಿ. ಸಮಸಮಾಜದ ನೈಜತೆಗೆ ಅಂಬೇಡ್ಕರ್‌ರ ನೈಜ ಚಿಂತನೆಗಳಲ್ಲಿ ಮಾತ್ರ ಸತ್ವವಿದೆ ಎಂಬ ಅರಿವು ಪ್ರತಿಯೊಬ್ಬ ಭಾರತೀಯನಿಗೂ ಜಾತ್ಯತೀತವಾಗಿ ಮೂಡಲಿ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ